# ಹೊಸ ಓದು: ನಮ್ಮೊಂದಿಗೆ ಹಳೆಮನೆ ರಾಜಶೇಖರ

ಕೃತಿ: ಗಾಂಧಿ ಸಾಗರದ ಬಿಂದುಗಳು        ಲೇಖಕರು: ಸದಾನಂದ ನಾರಾವಿ

ಉದಕದೊಳಿಗಿನ ಬೀಜಗಳು
ಸದಾನಂದ ನಾರಾವಿಯವರು ಕಾಂತಾವರ ಕನ್ನಡ ಸಂಘದ ಜೊತೆಗಿನ ಒಡನಾಟದಿಂದ ಸಾಹಿತ್ಯಾಭಿರುಚಿಯನ್ನು ಬೆಳಸಿಕೊಂಡವರು. ಅಲ್ಲಿಯ ಪ್ರತಿಯೊಂದು ಯೋಜನೆಯ, ಚಟುವಟಿಕೆಯ ಹಿಂದೆ ಡಾ. ನಾ. ಮೊಗಸಾಲೆಯವರೊಂದಿಗೆ ಇದ್ದವರು. ಅವರಿಂದ ಪ್ರಭಾವಿತರಾದವರು. ಪತ್ರಕರ್ತ ವೃತ್ತಿಯ ಮೂಲಕ ತಮ್ಮ ಬರವಣಿಗೆಯನ್ನು ಆರಂಭಿಸಿದವರು. ಸಹಜವಾದ ನಿರೂಪಣೆ ಅವರಿಗೆ ಸಿದ್ದಿಸಿದೆ. ಯಾವುದೇ ಸಂಕೀರ್ಣ ವಿಷಯವನ್ನು ಅಮೂಲಾಗ್ರವಾಗಿ ಗ್ರಹಿಸಿ ಸರಳವಾಗಿ ಓದುಗರಿಗೆ ತಲುಪಿಸುವ ಕೌಶಲದ ಓದುಗ ಕೇಂದ್ರಿತ ಬರಹ ಅವರದು. ಸಾಮಾಜಿಕ ಸ್ವಾಸ್ಥ್ಯ, ಶಾಂತಿ, ವಿಕಾಸ ಅವರಿಗೆ ಮುಖ್ಯ. ಅದರಲ್ಲೂ ಗ್ರಾಮಗಳ ಅಭಿವೃದ್ಧಿಯನ್ನು ಬಯಸುವವರು. ಈಗಾಗಲೆ ರಚನೆಯಾದ ಅವರ `ಸ್ಪಂದನ,’ `ಸಂರಚನೆಯ ಸುತ್ತ ಮುತ್ತಾ’ ಕೃತಿಗಳು ವಾಸ್ತವದ ಸಮಸ್ಯೆಗಳೊಂದಿಗೆ ಮುಖಾಮುಖಿಯಾಗುತ್ತವೆ. ಅವರ ನಿರೂಪಣಾ ಶೈಲಿಯೂ ಬಹಳ ಆಪ್ತವಾದುದು. ಗಂಭೀರವಾದ ಗಹನವಾದ ಸಂಗತಿಗಳನ್ನು ಕರಗಿಸಿ ತಮ್ಮದೇ ನಿಲುವಿನಲ್ಲಿ ಲೇಖನಗಳನ್ನು ಕಟ್ಟುವುದು ಅವರ ವಿಶೇಷ. ಸಮಾಜಮುಖಿ ಚಿಂತನೆಯೇ ಅವರ ಬರಹಗಳ ಕೇಂದ್ರ.
ಭಾರತದ ಪಾರಂಪರಿಕ ವಿದ್ಯಾಮಾನಗಳನ್ನು ಬಲ್ಲ ಅವರು ಅಲ್ಲಿಯ ಮೌಲ್ಯಗಳ ಮೇಲೆ ಅಪಾರ ನಂಬಿಕೆ. ಪಾರಂಪರಿಕ ಮೌಲ್ಯಗಳು ಪುನರುತ್ಥಾನಗೊಳ್ಳಬೇಕೆಂಬ ಆಶಯದೊಂದಿಗೆ ಭಾರತದ ಅಭಿವೃದ್ಧಿಯ ಕನಸನ್ನು ಅವರು ಕಾಣುತ್ತಾರೆ. ಇಂದಿನ ತಲೆಮಾರಿನಲ್ಲಿ ಕಳೆದು ಹೋಗುತ್ತಿರುವ ಸನಾತನ ಭಾರತದ ದರ್ಶನದ ಬಗೆಗೆ ವಿಷಾದವಿದೆ. ಆದ್ದರಿಂದ ಹೊಸ ತಲೆಮಾರಿಗೆ ನೈತಿಕವಾದ ಆದರ್ಶಗಳನ್ನು ತಲುಪಿಸುವದು ಪ್ರತಿಯೊಬ್ಬ ನಾಗರಿಕರ ಜವಬ್ದಾರಿ ಎಂದು ಅವರು ಬಲವಾಗಿ ನಂಬಿದ್ದಾರೆ. ಹಾಗೆಯ ತಮ್ಮ ವ್ಯಕ್ತಿತ್ವವನ್ನು ರೂಢಿಸಿಕೊಂಡಿದ್ದಾರೆ. ನಡೆ ನುಡಿಯಲ್ಲಿ ಸರಳವಾಗಿರುವ ಅವರು ಸಜ್ಜನ ಮೂರ್ತಿ. ಶಾಂತಿ ಅಹಿಂಸೆಯ ಬಗ್ಗೆ ತೀವ್ರತರವಾದ ಚಿಂತನೆ ಅವರದು. ಶಾಂತಿ, ಅಹಿಂಸೆಯ ಮೌಲ್ಯಗಳನ್ನು ಚರಿತ್ರೆಯಲ್ಲಿ ಬಾಳಿ ಬದುಕಿದವರನ್ನು ಈ ಕಾಲಕ್ಕೆ ಪರಿಚಯಿಸುವದು ಅವರಿಗೆ ಮುಖ್ಯ. ಇಂದಿನ ಸಮಾಜದಲ್ಲಿ ಅಶಾಂತಿ, ಹಿಂಸೆ, ಬ್ರಷ್ಟತೆ ತಾಂಡವಾಡುತ್ತಿರುವದನ್ನು ಕಂಡು ಮರುಗುವ ಅವರು ಅದರಿಂದ ಬಿಡುಗಡೆಯಾಗುವ ಬಗೆಯನ್ನು ಅವರು ಚಿಂತಿಸುತ್ತಾರೆ. ಪರ್ಯಾಯಗಳಿಲ್ಲದ ಚಿಂತನೆಯಲ್ಲಿ ಅವರಿಗೆ ನಂಬಿಕೆಯಿಲ್ಲ.
ಭಾರತಕ್ಕೆ ಪರ್ಯಾಯ ಚಿಂತನೆಗಳ ಅನುಷ್ಠಾನದ ಮೂಲಕ ಜನಸಮುದಾಯವನ್ನು ಆವರಿಸಿಕೊಂಡಿದ್ದ ಗಾಂಧೀಜಿಯನ್ನು ಕುರಿತು `ಗಾಂಧಿ ಸಾಗರದ ಬಿಂದುಗಳು’ ಕೃತಿಯಲ್ಲಿ ಚಿಂತಿಸಿದ್ದಾರೆ. ಅವರ ಜೀವನ ನಡೆಯನ್ನು ಸರಳವಾಗಿ ನಿರೂಪಿಸಿದ್ದಾರೆ. ಅವರ ಪ್ರತಿಯೊಂದು ಚಿಂತನೆಯನ್ನು ಚಿಕ್ಕದಾಗಿ ಚೊಕ್ಕದಾಗಿ ಓದುಗರಿಗೆ ದಾಟಿಸುವ ಸಾರ್ಥಕ ಪ್ರಯತ್ನ ಮಾಡಿದ್ದಾರೆ. ಸುಮಾರು ನಲವತ್ತು ವಿಷಯಗಳನ್ನು ಈ ಕೃತಿಯಲ್ಲಿ ಬಿಂಬಿಸಿದ್ದಾರೆ. ಈ ಕೃತಿಯು ಗಾಂಧೀಜಿಯ `ಜೀವನ ಸಿದ್ಧಾಂತ’ ವನ್ನು ಮಾರ್ಮಿಕವಾಗಿ ಓದುಗರಿಗೆ ದಾಟಿಸುತ್ತದೆ. ಗಾಂಧೀಜಿಯ ಬಗ್ಗೆ ಯಾವ ಗೊಂದಲಗಳು ಮೂಡದಂತೆ ಸ್ಪಷ್ಟವಾಗಿ ಅವರ ವ್ಯಕ್ತಿತ್ವವನ್ನು ಈ ಬಿಂದುಗಳು ಹಿಡಿದಿಡುತ್ತವೆ.
ಆಧುನಿಕ ಭಾರತವನ್ನು ಕಟ್ಟುವಲ್ಲಿ ಗಾಂಧೀಜಿ `ಶುದ್ಧ ರಾಜಕೀಯ’ ನೆಲೆಯಲ್ಲಿ ಪ್ರಯತ್ನಿಸಿದರು. ರಾಜಕೀಯ ವಿನ್ಯಾಸ ಪರಿಶುದ್ಧವಾಗಿರದಿದ್ದರೆ ಎಲ್ಲವೂ ಹುಳುಕು ಹಿಡಿಯುತ್ತದೆ ಎಂಬುದು ಅವರ ನಿಲುವು. ಆದರೆ ಸ್ವಾತಂತ್ರ ನಂತರ ಅದನ್ನು ನಾವು ಭಾರತದಲ್ಲಿ ಅಳವಡಿಸಲಿಲ್ಲ. ಅವರ ಸರಳ ಜೀವನದ ನೈತಿಕತೆಯನ್ನು ಸಂಪೂರ್ಣವಾಗಿ ನಿರಾಕರಿಸಿದೆವು. ಗಾಂಧೀಜಿಯನ್ನು ತಪ್ಪಾಗಿ ಅರ್ಥ ಮಾಡಿಕೊಂಡೆವು. ಗಾಂಧೀಜಿಯ ಜೀವನವನ್ನು ಕೇವಲ ಧರ್ಮದ ನೆಲೆಯಲ್ಲಿ ನೋಡಿದೆವು. ಅವರದು `ವಿಶ್ವವನ್ನು ಒಳಗೊಂಡ ಚಿಂತನೆ’ ಎಂಬುದನ್ನು ಮರೆ ಮಾಚಿದೆವು. ಅವರು `ಸನಾತನ ಧರ್ಮ ವಿರೋಧಿ’ ಎಂದು ಬಿಂಬಿಸಿದೆವು. ಗಾಧೀಜಿ ಧರ್ಮಗಳಿಗೆ ಅಂಟಿದ ಪ್ರಭುತ್ವದ ಕೊಳಕನ್ನು ತೊಳಿಯುವ ಪ್ರಯತ್ನ ಮಾಡುತ್ತಿದ್ದರು ಎಂಬುದು ಕಣ್ಣಿಗೆ ಕಾಣಲಿಲ್ಲ. ಜಗತ್ತಿನ ಯಾವದೇ ಧರ್ಮ ಪರಿಪೂರ್ಣವಾಗಿ ಜನರ ನಡುವೆ ಚಲನೆಗೊಂಡಿಲ್ಲ. ಧರ್ಮಗಳು ಅಧಿಕಾರಸ್ಥರ ದಾಳಗಳಾಗಿ ಬಳಕೆಯಾದುದ್ದರ ಬಗ್ಗೆ ಚರಿತ್ರೆಯೆ ಹೇಳುತ್ತದೆ. ಇದನ್ನು ಮನಗಂಡಿದ್ದ ಗಾಂಧೀಜಿ ಧರ್ಮದ ಅಂಶವನ್ನು ಜನರ ನಿಸ್ವಾರ್ಥ ಸೇವೆಯಲ್ಲಿ ಕಂಡರು. ಎಲ್ಲಾ ಧರ್ಮಗಳು ಮಠ, ಮಂದಿರ, ಮಸೀದಿ, ಚರ್ಚುಗಳನ್ನು ಬಿಟ್ಟು ಬೀದಿಗೆ ಬಂದು ಜನ ಸೇವೆ ಮಾಡಬೇಕು, ಅವರೊಳಗಿನ ಬದುಕಿನ ಗೊಂದಲಗಳನ್ನು ನಿವಾರಿಸಿ, ಆತ್ಮವಿಶ್ವಾಸ ತುಂಬಬೇಕೆಂಬುದು ಗಾಂಧೀಜಿಯ ನಿಲುವಾಗಿತ್ತು. ಭಾರತದ ಅಂತಃಸತ್ವದ ಪುನರ್ ನವೀಕರಣಕ್ಕೆ ವಸಾಹತು ಆಡಳಿತ ಮತ್ತು ಅದರಿಂದ ಉಂಟಾದ ಪ್ರಭಾವಗಳಿಂದ ಮುಕ್ತಗೊಳ್ಳುವುದು ಅಗತ್ಯವೆಂದು ಪ್ರತಿಪಾದಿಸಿದರು. ಈ ಸಂಕೋಲೆಯಿಂದ ಮೊದಲು ತಮ್ಮನ್ನು ಬಿಡುಗಡೆಗೊಳಿಸಿದರು. ಅಪ್ಪಟ ಭಾರತೀಯ ಸಂತನಾಗಿ ಬದುಕಿದರು.
ಗಾಂಧೀಯವರು ಆಧುನಿಕ ಅನುಭಾವಿಯಾಗಲಿಲ್ಲ. ಸನಾತನ ಧಾರ್ಮಿಕ, ಸಾಮಾಜಿಕ ನಂಬಿಕೆಗಳನ್ನೇ ತಮ್ಮ ಹೋರಾಟದ ಅಸ್ತ್ರವನ್ನಾಗಿ ಮಾಡಿಕೊಂಡರು. ಆಧುನಿಕ ಪೂರ್ವದ ಧರ್ಮಗಳು ಪ್ರತಿಪಾದಿಸುತ್ತಿದ್ದ `ಅಹಿಂಸೆ’ ಮತ್ತು `ಸತ್ಯ’ಗಳು ಮುಖ್ಯ ಮಂತ್ರಗಳಾದವು. `ರಾಮ’, `ಭಗವದ್ಗೀತೆ’, ದಾರಿ ತೋರುವ ಮುಖ್ಯ ಸಂಕೇತಗಳಾದವು. ಸನಾತನ ಹಿಂದೂವಿನಂತೆ ವೈದಿಕ ಧರ್ಮದ ಸಾಮಾಜಿಕ ಚೌಕಟ್ಟನ್ನು ಗಾಂಧೀಜಿ ಒಪ್ಪಿದರು ಮತ್ತು ಅದರಲ್ಲಿನ ಕೊಳಕನ್ನು ನಿವಾರಿಸುವದೇ ಮುಖ್ಯವೆಂದು ನಂಬಿದ್ದರು. ಅವರಿಗೆ ಚರಿತ್ರೆಯನ್ನು ಮರು ರೂಪಿಸುವದರ ಕಡೆಗೆ ಒಲವಿರಲಿಲ್ಲ. ವಾಸ್ತವವನ್ನು ಸರಿ ಮಾಡುವುದು ಮುಖ್ಯವಾಗಿತ್ತು. ಆದ್ದರಿಂದ ಚರಿತ್ರೆಯ ಗಾಯಗಳಿಗೆ ಮತ್ತೆ ಮರಳಲಿಲ್ಲ. ಬಹುತ್ವದ ವಿನ್ಯಾಸವನ್ನು ಸರಿಯಾಗಿ ಅರ್ಥಮಾಡಿಕೊಂಡಿದ್ದ ಅವರು ವಿಶ್ವದ ವಿದ್ಯಾಮಾನಗಳಿಗೆ ಸ್ಪಂದಿಸುತ್ತಿದ್ದರು. ವಿಶ್ವದ ಏಳಿಗೆಯೆ ಮುಖ್ಯಾಗಿತ್ತು. ಕೇವಲ ಭಾರತವನ್ನು ಅವರು ಪ್ರತಿನಿಧಿಸುತ್ತಿರಲಿಲ್ಲ. ಎಲ್ಲಾ ಧರ್ಮಗಳು ಮನುಷ್ಯನ ವಿಕಾಸವನ್ನೇ ಬಯಸುವದರಿಂದ ಸಂಕುಚಿತ ಭಾರತೀಯತೆಯಲ್ಲಿ ನಂಬಿಕೆ ಇರಲಿಲ್ಲ. ಭೌಗೋಳಿಕ ಸಂಕುಚಿತತೆಯನ್ನು ಪ್ರತಿಯಬ್ಬ ವಿಶ್ವದ ಪ್ರಜೆ ಮೀರಬೇಕೆಂಬುದು ಅವರ ಜೀವನ ಸಿದ್ಧಾಂತವಾಗಿತ್ತು.
ಅವರು ದಕ್ಷಿಣ ಆಫ್ರಿಕದಿಂದ ಭಾರತಕ್ಕೆ ಬಂದಾಗ ಭಾರತವು ಬ್ರಿಟಿಷ್ ವಸಾಹಾತುವನ್ನು ಒಪ್ಪಿಕೊಂಡು ಅದನ್ನು ಬದುಕುತ್ತಿತ್ತು. ಭಾರತೀಯ ಉದಾರವಾದಿ, ಮಾನವತವಾದಿ, ಅನುಭಾವಿ ಸಂವೇದನೆಗಳು ಅರ್ಥಪೂರ್ಣತೆಯನ್ನು ಕಳೆದುಕೊಳ್ಳುತ್ತಿರುವದನ್ನು ಕಂಡುಕೊಂಡರು. ಜನ ಸಮುದಾಯಗಳಿಗೆ ಇವುಗಳ ಅಗತ್ಯವಿದೆಯೆಂದು ಗಾಂಧೀಜಿ ಮನಗಂಡರು. ಬ್ರಿಟಿಷರು ಈ ಚಿಂತನೆಯನ್ನು ಕೀಳಾಗಿ ಕಾಣುತ್ತಿತ್ತು. ಅವರ ಆಡಳಿತ ಪದ್ಧತಿ, ಸುಧಾರಣೆಗಳು ಈ ತತ್ವಗಳಿಗೆ ವಿರುದ್ಧವಾಗಿದ್ದವು. ಆದ್ದರಿಂದ ಗಾಂಧೀಜಿ ಭಾರತಕ್ಕೆ ಬಂದ ಕೂಡಲೇ ಬ್ರಿಟಿಷ್ ವಸಾಹತು ಸಂಕೇತಗಳೆಲ್ಲವನ್ನು ಕಳಿಚಿದರು. ಕೋಟು, ಪ್ಯಾಂಟುಗಳಿಂದ ªÀುುಕ್ತಿ ಹೊಂದಿ ಬರಿಮೈಯ ಫಕೀರನಾಗಿ ಪರಿವರ್ತನೆ ಹೊಂದಿದರು. ಗ್ರಾಮ ಸ್ವಾರಾಜ್ಯದ ಕಲ್ಪನೆಯನ್ನು ಆಂದೋಲವನ್ನಾಗಿ ರೂಪಿಸಿದರು. ಭಾರತೀಯ ಆತ್ಮ ಗ್ರಾಮಗಳಲ್ಲಿ ಅಡಗಿದೆಂಬುದನ್ನು ಬಲವಾಗಿ ಪ್ರತಿ ಪಾದಿಸಿದರು. ಗ್ರಾಮಗಳನ್ನು ವಿಘಟನೆಗೊಳಿಸಿದ ಅಸಮಾನತೆಯನ್ನು ನಿರ್ಮಿಸಿ, ಅಸಂಘಟನೆಯನ್ನುಂಟು ಮಾಡಿದ್ದ ಜಾತೀಯತೆ, ಅಸ್ಷøಷ್ಯತೆಯನ್ನು ಹೋಗಲಾಡಿಸುವ ಪ್ರಯತ್ನ ಮಾಡಿದರು. ಇದು ಗ್ರಾಮಗಳ ಮೇಲೆ ಅಗಾಧ ಪರಿಣಾಮ ಬೀರಿತು. ದೇಶಿ ಉತ್ಪಾದನೆಯನ್ನು ಬಲವಾಗಿ ಪ್ರತಿಪಾದಿಸಿದರು. ಬ್ರಿಟಿಷರ ಬೃಹತ್ ಕೈಗಾರಿಕ ನೀತಿಗೆ ವಿರುದ್ಧವಾಗಿ ಗುಡಿಕೈಗಾರಿಕೆಗಳನ್ನು ಕಟ್ಟಿದರು.
ಸದಾನಂದ ನಾರವಿಯವರು ಈ ಮುಖೇನ ಗಾಂಧೀಜಿಯನ್ನು ಈ ಕೃತಿಯಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ವಾಸ್ತವದ ಸಮಸ್ಯೆಗಳಿಗೆ ಗಾಂಧೀಜಿಯ ವಿಚಾರಗಳು ದಾರಿ ದೀಪವಾಗಬಹುದೆಂದು ನಂಬಿದ್ದಾರೆ. ಭೋಗ ಸಂಸ್ಕøತಿಯಿಂದ ಹೊರ ಬರಲು ಗಾಂಧೀಜಿಯ ಸರಳ ಜೀವನವನ್ನು ಅನುಸರಿಸುವ ಅಗತ್ಯವಿದೆ. ನವ ಸಾಮ್ರಯಾಜ್ಯಶಾಹಿಯನ್ನು ಎದುರಿಸಲು ಹಲವು ವಿಚಾರಧಾರೆಗಳು ವಿಫಲವಾಗಿದ್ದರಿಂದ ಗಾಂಧೀಜಿಯ ಹೋರಾಟ, ಚಿಂತನೆಗಳು ಹೊಸ ಹುಮ್ಮಸ್ಸನ್ನು ಜಗತ್ತಿಗೆ ನೀಡಬಹುದು ಎಂಬುದು ಈ ಕೃತಿಯ ನಿಲುವು. ಮಾರ್ಟಿನ್ ಕಿಂಗ್ ಲೂಥರ್ ಹೇಳಿದಂತೆ `ಗಾಂಧೀಜಿ ಇಡೀ ಜಗತ್ತಿಗೆ ಅನುವಾರ್ಯ, ಅವರನ್ನು ಮರೆತರೆ ವಿಶ್ವದ ನಾಶ’ ಎಂಬ ಮಾತನ್ನು ಈ ಕೃತಿ ನೆನಪಿಸುತ್ತದೆ.
ಸರಳತೆ, ನೈತಿಕತೆ ಗಾಂಧೀಜಿಯ ಮುಖ್ಯ ಶಕ್ತಿ. `ಸರಳತೆ’ ಯು ಇಂದಿನ ಯುಗದ ಮೌಲ್ಯವಾಗುವ ಅಗತ್ಯವಿದೆ. ಅದು ಅನೇಕ ಸಮಸ್ಯೆಗಳಿಗೆ ಪರಿಹಾರವಾಗುತ್ತದೆ. ಆತ್ಮದ ಪ್ರೀತಿ ಬಹಳ ಮುಖ್ಯವೆಂದು ಗಾಂಧೀಜಿ ಪ್ರತಿಪಾದಿಸುತ್ತಿದ್ದರು. ಅಂತಹ ಪ್ರೀತಿಯನ್ನು ಪ್ರತಿಯೊಬ್ಬರು ರೂಢಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಗಾಂಧೀಜಿಯವರು ಇದನ್ನು ವಿಶ್ವಕ್ಕೆ ಧಾರೆಯೆರೆದರು. ಈ ಆತ್ಮ ಪ್ರೀತಿಯಲ್ಲಿಯೇ ದೇವರು, ರಾಮ ಅಡಗಿದ್ದಾನೆ ಎಂದು ಬಲವಾಗಿ ನಂಬಿದ್ದರು. ಜಗದ ಎಲ್ಲಾ ಜನಾಂಗ. ಧರ್ಮಗಳನ್ನು ಪ್ರೀತಿಯಿಂದ ಕಾಣಬೇಕು. ಅವು ನಮಗೆ ಹೊರೆಯಾಗಬಾರದೆಂಬ ಎಚ್ಚರವೂ ಇರಬೇಕೆಂದು ಹೇಳುತ್ತಿದ್ದರು.
ಗಾಂಧೀಜಿಯ ಪ್ರಭಾವ ಜಗತ್ತಿನಾದ್ಯಂತ ಗಾಢವಾಗಿದೆ. ಶ್ರೇಷ್ಠ ವಿಜ್ಞಾನಿ ಅಲ್ಬರ್ಟ ಐನಿಸ್ಟಿನ್ ಮಾತು ಬಹಳ ಮುಖ್ಯವಾದುದು.` ಗಾಂದೀಜಿಜಗತ್ತಿನಲ್ಲಿಯೇ ಶ್ರೇಷ್ಠ ಮಾನವತಾವಾದಿ. ಯಾವ ಹಿಂಸಾತ್ಮಕ ಅಸ್ತ್ರವೂ ಇಲ್ಲದೇ ಸಾಮಾನ್ಯ ಜನರನ್ನು ಪ್ರೇರೇಪಿಸಿ, ಅಹಿಂಸಾ ಮಾರ್ಗದಲ್ಲಿ ಅನ್ಯಾಯಗಳ ವಿರುದ್ಧ ಹೋರಾಡಲು ತಯಾರು ಮಾಡಿದರು. ಯಾರೂ ಪ್ರಶ್ನಿಸಲಾಗದ ಜನ ಸಾಮನ್ಯರ ನಾಯಕ ಗಾಂಧೀಜಿ’ ಇಂತಹ ಘನ ವ್ಯಕ್ತಿತ್ವದ ಗಾಂಧೀಜಿಯನ್ನು ಹೊಸ ತಲೆಮಾರಿಗೆ ಸರಳವಾಗಿ ತಲುಪಿಸುವ ಗಾಂಧಿ ಸಾಗರದ ಬಿಂದುಗಳು ಕೃತಿ ಈ ಸಂದರ್ಭದಲ್ಲಿ ಬಹಳ ಮುಖ್ಯವಾದುದು.

ಹಳೆಮನೆ ರಾಜಶೇಖರ,ಕನ್ನಡ ವಿಭಾಗ, ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು, ಉಜಿರೆ(ಮೊ:9008528112)