# ಗಜಲ್ ಘಮಲು

*ಗಜಲ್*

ಎಷ್ಟೊಂದು ಹೂವುಗಳು ಒಂದರಂತೆ ಮತ್ತೊಂದಿಲ್ಲ
ಮತ್ತೆಷ್ಟೋ ಮುಖಗಳು ಒಂದರಂತೆ ಮತ್ತೊಂದಿಲ್ಲ

ಚೈತ್ರಾಗಮನದ ಕ್ಷಣಕೂ ಬದಲಾವಣೆ ಕುದಿತವಿದೆ
ಅಳುನಗುವಿನ ಮನಗಳು ಒಂದರಂತೆ ಮತ್ತೊಂದಿಲ್ಲ

ಕೋಗಿಲೆಯಂತೆ ಉಲಿಯದ ಕಾಗೆ ಮಿಡಿತ ಬೇರೆ
ಎಲ್ಲರೆದೆಯ ಹಾಡುಗಳು ಒಂದರಂತೆ ಮತ್ತೊಂದಿಲ್ಲ

ಕಲ್ಪನೆಯ ಚಿತ್ರದಲೂ ಅಂಕುಡೊಂಕು ರೇಖೆಗಳಿವೆ
ದಿನದ ಪ್ರತಿ ನೋಟಗಳು ಒಂದರಂತೆ ಮತ್ತೊಂದಿಲ್ಲ

ಅಳೆಯಲಾಗದು ನೋವ ಹುದುಲಿನ ಮಡು ‘ಗಿರಿ’
ಜಗದೆಲ್ಲರ ಪಾಡುಗಳು ಒಂದರಂತೆ ಮತ್ತೊಂದಿಲ್ಲ

ಮಂಡಲಗಿರಿ ಪ್ರಸನ್ನ