ಮಾನ್ವಿಯಲ್ಲಿ ಶ್ರೀ ಜಗನ್ನಾಥದಾಸರ ಆರಾಧನೆ ಅಂಗವಾಗಿ ರಥೋತ್ಸವ

ಮಾನ್ವಿ:
ಪಟ್ಟಣದ ಶ್ರೀಜಗನ್ನಾಥದಾಸರ ಮಂದಿರದಲ್ಲಿ  ಶ್ರೀಜಗನ್ನಾಥದಾಸರ 212 ನೇ ಆರಾಧನಾ ಮಹೋತ್ಸವದ ಅಂಗವಾಗಿ ರಥೋತ್ಸವವು ಇಂದು ವಿಜೃಂಭಣೆಯಿಂದ ನೆರವೇರಿತು. ಆರಾಧನೆ ಪ್ರಯುಕ್ತ ಸೆ.14 ರಂದು ಪೂರ್ವಾರಾಧನೆ ಮತ್ತು ಸೆ.15 ರಂದು ಮಧ್ಯಾರಾಧನೆ ನಡೆಯಿತು. ಕಾರ್ಯಕ್ರಮದ ಅಂಗವಾಗಿ  ಜಗನ್ನಾಥದಾಸರ ತಂಬೂರಿ ಹಾಗೂ ಪಲ್ಲಕ್ಕಿ ಸೇವಾ ಮರವಣಿಗೆ, ದಶಮಿ ದಿಂಡೋತ್ಸವ ಕಾರ್ಯಕ್ರಮಗಳು ನಡೆದ ವು. ಗುರುವಾರ ಉತ್ತರಾರಾಧನೆ ಪ್ರಯುಕ್ತ  ಬೆಳಿಗ್ಗೆ ಮಹಾರಥೋತ್ಸವ ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿಂದ ಜರುಗಿತು. ಆರಾಧನೆಯ ಅಂಗವಾಗಿ ಮೂರು ದಿನಗಳಕಾಲ ಶ್ರೀ ಜಗನ್ನಾಥದಾಸರ ಸ್ತಂಭಕ್ಕೆ ವಿಶೇಷ ಪೂಜೆ , ಅಲಂಕಾರ , ಪ್ರತಿದಿನ ಬೆಳಿಗ್ಗೆ ಸುಪ್ರಭಾತ, ನೈರ್ಮಲ್ಯ ವಿಸರ್ಜನೆ, ನಂತರ ಸಾಮೂಹಿಕ ಹರಿಕಥಾಮೃತಸಾರ ಪಾರಾಯಣ, ದಾಸರ ಸ್ಥಂಭಕ್ಕೆ ಪಂಚಾಮೃತ ಅಭಿಷೇಕ, ನಂತರ ವಿವಿಧ ವಿದ್ವಾಂಸರಿಂದ ಬೆಳಿಗ್ಗೆ ಹಾಗೂ ಸಾಯಂಕಾಲ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮಂತ್ರಾಲಯದ ಶ್ರೀ ಗುರುಸಾರ್ವಭೌಮ ದಾಸಸಾಹಿತ್ಯ ಪ್ರಾಜೆಕ್ಟ್‍ನ ಅಪ್ಪಣ್ಣಾಚಾರ್, ಹನುಮೇಶಾಚಾರ್ ನೇತೃತ್ವದಲ್ಲಿ ಸಾಮೂಹಿಕ ಹರಿಕಥಾಮೃತಸಾರ ಪಾರಾಯಣ ಕಾರ್ಯಕ್ರಮ ನಡೆಯಿತು.

ಪಟ್ಟಣದ ಪವನ ಭಜನಾ ಮಂಡಳಿ, ದಾಸಾರ್ಯ ಮಹಿಳಾ ಭಜನಾ ಮಂಡಳಿಗಳ ಜೊತೆಗೆ ವಿವಿಧ ತಾಲೂಕುಗಳಿಂದ ಆಗಮಿಸಿದ ಭಜನಾ ಮಂಡಳಿಗಳು ಭಾಗವಹಿಸಿದ್ದವು. ಬ್ರಾಹ್ಮಣ ಹಾಗೂ ಆರ್ಯವೈಶ್ಯ ಸಮಾಜದ ಗಣ್ಯರು, ವಿವಿಧೆಡೆಯಿಂದ ಆಗಮಿಸಿದ ಭಕ್ತರು ಇದ್ದರು.