ಬೆಂಗಳೂರುಸೆ.14:
ಮಾನ್ವಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ಮಂಗಳವಾರ ವಿಧಾನ ಮಂಡಲದ ಅಧಿವೇಶನದಲ್ಲಿ ಮಾತನಾಡಿ, ಮಾನ್ವಿ ಪಟ್ಟಣದ ಬೆಳಗಿನಪೇಟೆ, ಬಾಲನಗರ, ಹುಸೇನ್ ನಗರ ಇನ್ನಿತರ ಪ್ರದೇಶಗಳನ್ನು ಕೊಳಚೆ ಪ್ರದೇಶಗಳು (ಸ್ಲಮ್ ಏರಿಯಾ) ಎಂದು ಘೋಷಣೆ ಮಾಡಿ ಅಲ್ಲಿನ ನಿವಾಸಿಗಳಿಗೆ ವಸತಿ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು ಎಂದು ರಾಜ್ಯವಸರ್ಕಾರವನ್ನು ಒತ್ತಾಯಿಸುವ ಮೂಲಕ ಸದನದ ಗಮನ ಸೆಳೆದರು.
ಶಾಸಕ ರಾಜಾ ವೆಂಕಟಪ್ಪ ನಾಯಕ ಒತ್ತಾಯಕ್ಕೆ ಉತ್ತರಿಸಿದ ವಸತಿ ಸಚಿವ ವಿ.ಸೋಮಣ್ಣ, ಮಾನ್ವಿ ಪಟ್ಟಣದ ಕೊಳಚೆ ಪ್ರದೇಶಗಳಿಗೆ 2019-20ನೇ ಸಾಲಿನ ಕ್ರಿಯಾ ಯೋಜನೆ ಅಡಿಯಲ್ಲಿ 25ಲಕ್ಷ ರೂಪಾಯಿಗಳ ಅಂದಾಜು ವೆಚ್ಚದಲ್ಲಿ 250 ಮನೆಗಳಿಗೆ ಹೆಚ್ಚುವರಿ ಮೂಲಭೂತ ಸೌಲಭ್ಯ ಒದಗಿಸಲಾಗಿದೆ. 2020-21ನೇ ಸಾಲಿನ ಕ್ರಿಯಾ ಯೋಜನೆ ಅಡಿಯಲ್ಲಿ ಜುಮ್ಮಲದೊಡ್ಡಿ ಕೊಳಚೆ ಪ್ರದೇಶಕ್ಕೆ 20ಲಕ್ಷ ರೂಪಾಯಿ ವೆಚ್ಚದಲ್ಲಿ ಸಿಸಿ ರಸ್ತೆ ಹಾಗೂ ಒಳಚರಂಡಿ ಕಾಮಗಾರಿಗಳು ಮಂಜೂರಾಗಿದ್ದು ಕಾಮಗಾರಿಗಳು ಪ್ರಗತಿಯಲ್ಲಿವೆ’ ಎಂದು ತಿಳಿಸಿದರು. ‘ಮಾನ್ವಿ ಪಟ್ಟಣದ ಘೋಷಿತ ಕೊಳಚೆ ಪ್ರದೇಶಗಳಿಗೆ ಸರ್ಕಾರದ ಆಯವ್ಯಯದಲ್ಲಿ ಒದಗಿಸುವ ಅನುದಾನಕ್ಕೆ ಅನುಗುಣವಾಗಿ ಕ್ರಿಯಾ ಯೋಜನೆ ತಯಾರಿಸಿ, ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆದು ಕುಡಿಯುವ ನೀರು, ರಸ್ತೆ, ಚರಂಡಿ ಮುಂತಾದ ಮೂಲಭೂತ ಸೌಲಭ್ಯಗಳ£. ಒದಗಿಸಲಾಗುವುದು’ ಎಂದು ವಸತಿ ಸಚಿವ ವಿ.ಸೋಮಣ್ಣ ಭರವಸೆ ನೀಡಿದರು.