ಸೇವಾ ಭದ್ರತೆ ಘೋಷಣೆಗೆ ಸರ್ಕಾರಕ್ಕೆ ಮನವಿ: ಮಾನ್ವಿಯ ಸರ್ಕಾರಿ ಪದವಿ ಕಾಲೇಜು ಅತಿಥಿ ಉಪನ್ಯಾಸಕರ ಒತ್ತಾಯ


ಮಾನ್ವಿ:
ಸೇವಾ ಭದ್ರತೆ ಘೊಷಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿಯ ಮಾನ್ವಿ ತಾಲ್ಲೂಕು ಘಟಕದ ಪದಾಧಿಕಾರಿಗಳು ಇಂದು  ಸ್ಥಳೀಯ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ರಾಜ್ಯ ಸರ್ಕಾರದ ಪ್ರಸ್ತುತ ವಿಧಾನಮಂಡಲದ ಅಧಿವೇಶನದಲ್ಲಿಯೇ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಘೋಷಿಸಬೇಕು. ವರ್ಷದ 12ತಿಂಗಳು ವೇತನ ಪಾವತಿ ಜತೆಗೆ ಪಿಎಫ್ ಹಾಗೂ ಎಎಸ್‍ಐ ಸೌಲಭ್ಯ ಒದಗಿಸಬೇಕು. ಅತಿಥಿ ಉಪನ್ಯಾಸಕಿಯರಿಗೆ ವೇತನಸಹಿತ ಹೆರಿಗೆ ರಜೆ ನೀಡಬೇಕು. ಅತಿಥಿ ಉಪನ್ಯಾಸಕರ ಸೇವೆಯನ್ನು ಹಂತ ಹಂತವಾಗಿ ಬಲಪಡಿಸುವುದು ಸೇರಿದಂತೆ ಇತರ ಬೇಡಿಕೆಗಳ ಈಡೇರಿಕೆಗೆ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಅವರಿಗೆ ಬರೆದ ಮನವಿ ಪತ್ರದಲ್ಲಿ ಒತ್ತಾಯಿಸಲಾಯಿತು. ತಹಶೀಲ್ದಾರ್ ಅನುಪಸ್ಥಿತಿಯಲ್ಲಿ ಶಿರಸ್ತೇದಾರ ಆರ್.ನಾಗರಾಜ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿಯ ಮಾನ್ವಿ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ವಿರುಪನಗೌಡ, ಇತರ ಪದಾಧಿಕಾರಿಗಳಾದ ಡಾ.ಬಸವರಾಜ ಸುಂಕೇಶ್ವರ, ಕೆ.ಅಜೇಯಕುಮಾರ, ಶರಣಬಸವ ಮದ್ಲಾಪುರ, ಡಾ.ಹುಲಿಯಪ್ಪ, ರಾಜಶೇಖರ ಪಾಟೀಲ್, ಬಸವರಾಜ ಕರಡಿಗುಡ್ಡ, ಚಂದ್ರಶೇಖರ ಎಚ್, ಇಲಿಯಾಸ್, ಸೋಮಶೇಖರ, ದುರ್ಗಾ, ದೇವೇಂದ್ರಪ್ಪ ಕರಡಿಗುಡ್ಡ, ಇಮ್ತಿಯಾಜ್ ಮತ್ತಿತರರು ಇದ್ದರು.

ಸರ್ಕಾರಿ ಪದವಿ ಕಾಲೇಜುಗಳಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸಲು ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು.
-ಎನ್.ವಿರುಪನಗೌಡ,
ಅಧ್ಯಕ್ಷರು, ಸರ್ಕಾರಿ ಪದವಿ ಕಾಲೇಜು ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿ, ಮಾನ್ವಿ