ಬಾಗಲವಾಡ ಗ್ರಾಮದಲ್ಲಿ ಹದಗೆಟ್ಟ ರಸ್ತೆ: ರಸ್ತೆಯಲ್ಲಿ ಭತ್ತದ ಸಸಿ ನೆಟ್ಟು ಆಕ್ರೋಶ

ಸಿರವಾರ ತಾಲೂಕಿನ ಬಾಗಲವಾಡ ಗ್ರಾಮದಲ್ಲಿ ಮಂಗಳವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಸಂಘಟನೆಯ ಕಾರ್ಯಕರ್ತರು ಹದಗೆಟ್ಟ ಮುಖ್ಯ ರಸ್ತೆಯಲ್ಲಿ ಭತ್ತದ ಸಸಿ ನೆಟ್ಟು ವಿನೂತನವಾಗಿ ಪ್ರತಿಭಟನೆ ನಡೆಸಿದರು.

‘ಗ್ರಾಮದ ಪೆಟ್ರೋಲ್‍ ಬಂಕ್‍ ಹತ್ತಿರ ಮುಖ್ಯ ರಸ್ತೆಯಲ್ಲಿ ತಗ್ಗು ಬಿದ್ದು ಎರಡು ವರ್ಷ ಕಳೆದರೂ ಅಧಿಕಾರಿಗಳು ದುರಸ್ತಿಗೆ ಮುಂದಾಗಿಲ್ಲ. ಹೀಗಾಗಿ ಇಲ್ಲಿನ ಜನರು ನಿತ್ಯ ಪರದಾಡುವಂತಾಗಿದೆ. ಅಲ್ಪಸ್ವಲ್ಪ ಮಳೆಯಾದರೂ ನೀರು ನಿಂತು ವಾಹನ ಸವಾರರು ಹರಸಾಹಸ ಮಾಡಬೇಕು. ಮಹಿಳೆಯರು, ಮಕ್ಕಳು, ವೃದ್ಧರು ರಸ್ತೆಯಲ್ಲಿ ಜಾರಿ ಬಿದ್ದ ಘಟನೆಗಳೂ ನಡೆದಿವೆ. ಈ ಕುರಿತು ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಶಾಶ್ವತ ದುರಸ್ತಿಗೆ ಕ್ರಮ ಕೈಗೊಂಡಿಲ್ಲ’ ಎಂದು ಮುಖಂಡ ನಾಗರಾಜ ಹಿಂದಿನಮನಿ ದೂರಿದರು.
ಮಳೆಗಾಲದಲ್ಲಿ ತೀವ್ರ ಸಮಸ್ಯೆ ಉಂಟಾಗುತ್ತಿದೆ ಎಂದು ಸಂಘಟನೆ ಮುಖಂಡರು ಇತ್ತೀಚೆಗೆ ಮನವಿ ಮಾಡಿದ ಕಾರಣ ಅಧಿಕಾರಿಗಳು ರಸ್ತೆಯಲ್ಲಿನ ತಗ್ಗು ಮುಚ್ಚಲು ಮರಂ ಹಾಕಲಾಗಿತ್ತು. ಕಾರಣ ಇದೀಗ ಸುರಿದ ಮಳೆಯಿಂದ ರಸ್ತೆ ಸಂಪೂರ್ಣ ಕೆಸರು ಗದ್ದೆಯಂತಾಗಿದೆ. ಬೈಕ್‍ ಸವಾರರು ಜಾರಿ ಬೀಳುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಮುಖಂಡರು ಒತ್ತಾಯಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಸಂಘಟನೆಯ ಮುಖಂಡರಾದ ಗಂಗಾಧರ ಬಾಗಲವಾಡ, ಮೌನೇಶ ಕೋರಿ, ಜಗದೀಶ್, ನಾಗರಾಜ ಭೋವಿ ಹಾಗೂ ಮೌಲಾಸಾಬ್ ಮತ್ತಿತರರು ಭಾಗವಹಿಸಿದ್ದರು.