ಬ್ಯಾಂಕುಗಳಲ್ಲಿ ಹಿಂದಿ ಹೇರಿಕೆಗೆ ವಿರೋಧ: ಮಾನ್ವಿಯಲ್ಲಿ ಕರವೇ ಕಾರ್ಯಕರ್ತರ ಪ್ರತಿಭಟನೆ

ಮಾನ್ವಿ:
ರಾಷ್ಟ್ರೀಕೃತ ಹಾಗೂ ಗ್ರಾಮೀಣ ಬ್ಯಾಂಕುಗಳಲ್ಲಿ ಹಿಂದಿ ಭಾಷೆಯ ಬಳಕೆ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಕಾರ್ಯಕರ್ತರು ಇಂದು ಮಾನ್ವಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಕೇಂದ್ರ ಸರ್ಕಾರ ಪ್ರತಿ ವರ್ಷ ಸೆ.14ರಂದು ಹಿಂದಿ ದಿವಸ ಆಚರಣೆ ಮೂಲಕ ದೇಶದ ಇತರ ಎಲ್ಲಾ ಭಾಷೆಗಳನ್ನು ಕಡೆಗಣಸುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದ ವಿವಿಧ ರಾಷ್ಟ್ರೀಕೃತ ಬ್ಯಾಂಕುಗಳಿಗೆ ತೆರಳಿದ ಕರವೇ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು, ಕನ್ನಡದಲ್ಲಿಯೇ ಎಲ್ಲಾ ಸೇವೆಗಳನ್ನು ಒದಗಿಸುವಂತೆ ಒತ್ತಾಯಿಸಿ ವ್ಯವಸ್ಥಾಪಕರಿಗೆ ಮನವಿ ಪತ್ರ ಸಲ್ಲಿಸಿದರು.
ಬ್ಯಾಂಕಿನ ಎಲ್ಲಾ ಸೇವೆಗಳನ್ನು ಕನ್ನಡದಲ್ಲೇ ನೀಡಬೇಕು. ಕನ್ನಡದಲ್ಲಿ ಬ್ಯಾಂಕಿನಲ್ಲಿ ವ್ಯವಹಾರ ನಡೆಸಲು ಸುಲಭವಾಗುವಂತೆ ಉದ್ಯೋಗಿಗಳನ್ನು ನೇಮಿಸಬೇಕು. ಕನ್ನಡ ಬಾರದ ಸಿಬ್ಬಂದಿಗಳನ್ನು ಈ ಕೂಡಲೇ ಅವರ ಮಾತೃ ರಾಜ್ಯಗಳಿಗೆ ವರ್ಗಾವಣೆ ಮಾಡಬೇಕು. ಕರ್ನಾಟಕದ ಉದ್ಯೋಗಗಳು ಕನ್ನಡಿಗರಿಗೇ ಲಭಿಸಬೇಕು. ಬ್ಯಾಂಕಿನ ಚಲನ್‍ಗಳು, ಖಾತೆ ಪುಸ್ತಕ, ಚೆಕ್ ಮತ್ತು ಎಲ್ಲಾ ಅರ್ಜಿ ನಮೂನೆಗಳನ್ನು ಕನ್ನಡದಲ್ಲಿ ಲಭ್ಯವಿರುವಂತೆ ನೋಡಿಕೊಳ್ಳಬೇಕು. ಹಿಂದಿ ದಿವಸ, ಹಿಂದಿ ಸಪ್ತಾಹ, ಹಿಂದಿ ಪಕ್ವಾಡಾ ಇತ್ಯಾದಿ ಭಾಷಾ ಒಕ್ಕೂಟ ವಿರೋದಿ ಆಚರಣೆಗಳನ್ನು ಕೂಡಲೇ ನಿಲ್ಲಿಸಬೇಕು. ಬ್ಯಾಂಕಿನ ನಾಮಫಲಕ, ಸೂಚನಾ ಫಲಕಗಳಲ್ಲಿ ಶೇ.60 ರಷ್ಟು ಭಾಗ ಕನ್ನಡ ಭಾಷೆಯನ್ನೇ ಬಳಸಬೇಕು ಎಂದು ಒತ್ತಾಯಿಸಲಾಯಿತು. ಕರ್ನಾಟಕ ರಕ್ಷಣಾ ವೇದಿಕೆಯ ಮಾನ್ವಿ ತಾಲ್ಲೂಕು ಘಟಕದ ಅಧ್ಯಕ್ಷ ಡಿ.ಬಸನಗೌಡ, ಉಪಾಧ್ಯಕ್ಷ ಶರಣಬಸವ ಗವಿಗಟ್ಟ, ನಗರ ಘಟಕದ ಅಧ್ಯಕ್ಷ ಮೊಹ್ಮದ್ ರಹೆಮತ್ ಅಲಿ, ಇತರ ಪದಾಧಿಕಾರಿಗಳಾದ ಷಣ್ಮುಖ ಆಚಾರಿ, ಶರಣಪ್ಪ ಮುಳ್ಳೂರು, ಸಿದ್ದಪ್ಪ ನಕ್ಕುಂದಿ, ಹುಸೇನ ಬಾಷಾ ಕಪಗಲ್,ಮುಜ್ಜು ಪಟೇಲ್, ಕೆ.ಎಂ ಬಾಷಾ, ಅನ್ವರ ಪಾಷಾ, ಶರಣಪ್ಪ ನಾರಬಂಡಿ, ಹುಸೇನ್ ಬಾಷಾ, ಲಕ್ಷಣ ಕಪಗಲ್, ಶಾಂತಮೂರ್ತಿ ಹೊಸುರು, ಬಾಷಾ ಚಿಕಲಪರ್ವಿ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.