ಆತ್ಮವಿಶ್ವಾಸದಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ: ಶ್ರೀಶೈಲಗೌಡ

ಮಾನ್ವಿ,:

ಸ್ಪರ್ಧಾರ್ಥಿಗಳು ಆತ್ಮವಿಶ್ವಾಸದಿಂದ ಪರೀಕ್ಷೆಗಳನ್ನು ಎದುರಿಸಿ ಜೀವನ ರೂಪಿಸಿಕೊಳ್ಳಿ ಎಂದು ಕರ್ನಾಟಕ ರಾಜ್ಯ ನೌಕರರ ಸಂಘದ ಮಾನ್ವಿ ತಾಲ್ಲೂಕು ಘಟಕದ  ಅಧ್ಯಕ್ಷ ಶ್ರೀಶೈಲಗೌಡ ಹೇಳಿದರು.

ಮಾನ್ವಿ ಪಟ್ಟಣದ ಕನ್ಯಾ ಸರ್ಕಾರಿ ಶಾಲೆಯಲ್ಲಿ ಏಕಲವ್ಯ ಸ್ಟಡಿ ಸರ್ಕಲ್  ವತಿಯಿಂದ ಹಮ್ಮಿಕೊಂಡಿರುವ ಉಚಿತ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿ, ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಅಗತ್ಯ ತಯಾರಿ ಅತೀ ಮುಖ್ಯ. ಆ ನಿಟ್ಟಿನಲ್ಲಿ ಮಾಹಿತಿ ಸಂಗ್ರಹಿಸಿಕೊಳ್ಳುವುದು, ಹಿಂದಿನ ಪ್ರಶ್ನೆ ಪತ್ರಿಕೆಗಳ ಅಧ್ಯಯನ ಮಾಡುವುದು ಹಾಗೂ ಪ್ರಚಲಿತ ವಿದ್ಯಾಮಾನಗಳ ಮಾಹಿತಿ ಸೇರಿದಂತೆ ವಿವಿಧ ವಿಷಯದಲ್ಲಿ ಹಿಡಿತವಿದ್ದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ ಎಂದರು.

ಕಾತರಕಿ ಶಾಲೆಯ ಮುಖ್ಯ ಶಿಕ್ಷಕ ಸಣ್ಣ ಈಶಪ್ಪ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆ ಸಂಬಂಧಿಸಿದಂತೆ ಅಗತ್ಯ ಪುಸ್ತಕಗಳನ್ನು ಸಂಗ್ರಹಿಸಿ ಓದಬೇಕು. ಇಂದು ನೌಕರಿ ಪಡೆಯುವುದು ಸುಲಭವಲ್ಲ. ಆದರೆ ಕಠಿಣ ಪರಿಶ್ರಮ ಇದ್ದರೆ ಖಂಡಿತವಾಗಿಯೂ ನೌಕರಿಯನ್ನು ಪಡೆಯಬಹುದು ಎಂದರು.  ಕಳೆದ ಬಾರಿ ನಡೆದ ಸ್ಪರ್ಧಾತ್ಮಕ ಮಾದರಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದ ಸದ್ದಾಂ ಹುಸೇನ್, ಚನ್ನಬಸವ, ತಿಮ್ಮಣ್ಣ ಇವರಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಏಕಲವ್ಯ ಸ್ಟಡಿ ಸರ್ಕಲ್ ನ ಮಾರ್ಗದರ್ಶಕರಾದ ಗೋಪಾಲ್ ನಾಯಕ ಜೂಕೂರು, ಸಹ ಶಿಕ್ಷಕ ಭೀಮಣ್ಣ, ಕರ್ನಾಟಕ ವಾಲ್ಮೀಕಿ ಮಹಾಸಭಾ ಜಿಲ್ಲಾಧ್ಯಕ್ಷ ಶರಣಬಸವ ನಾಯಕ ಜಾನೇಕಲ್, ಪುರಸಭೆ ನಾಮ ನಿರ್ಧೇಶಿತ ಸದಸ್ಯ ಗಿರಿ ನಾಯಕ, ಸಂಪಾದಕರಾದ ಲಕ್ಷ್ಮಣರಾವ್ ಕಪಗಲ್, ಆಯೋಜಕರಾದ ರವಿಚಂದ್ರ, ಈರಣ್ಣ ಸೇರಿದಂತೆ ಅನೇಕರು ಇದ್ದರು.