ಕಲ್ಯಾಣ ಕರ್ನಾಟಕ: ಸಾಂಸ್ಕೃತಿಕ ಮೀಸಲಾತಿಯ ಅವಶ್ಯಕತೆ

ಲೇಖಕ: ಬಸವರಾಜ ಭೋಗಾವತಿ

ಪ್ರಾಚೀನ ಕಾಲದಿಂದಲೂ ನಾಡಿನ ಸಾಂಸ್ಕೃತಿಕ ಪರಂಪರೆಯಲ್ಲಿ ಕಲ್ಯಾಣ ಕರ್ನಾಟಕ ಭಾಗವು ಮಹತ್ವದ ಸ್ಥಾನ ಹೊಂದಿದೆ. ದಾಸರು, ಶರಣರು, ದಾರ್ಶನಿಕರು ಜನಿಸಿದ ಪುಣ್ಯ ಭೂಮಿಯಾಗಿದೆ.
‘ಕವಿರಾಜಮಾರ್ಗ’ ದಂತಹ ಕನ್ನಡದ ಮೊದಲ ಲಕ್ಷಣ ಗ್ರಂಥವನ್ನು ನೀಡಿದ ಹೆಗ್ಗಳಿಕೆಯನ್ನು ಈ ಭಾಗ ಹೊಂದಿದೆ. ಹಲವು ಶತಮಾನಗಳ ಹಿನ್ನೆಲೆ ಹೊಂದಿರುವ ಇಲ್ಲಿನ ಸಾಹಿತ್ಯ, ಸಾಮಾಜಿಕ ಚಳವಳಿಗಳು ಜಾಗತಿಕ ಮಟ್ಟದಲ್ಲಿ ಇಂದಿಗೂ ಮನ್ನಣೆ ಪಡೆದಿವೆ. ಆದರೆ ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರದ ದಿನಗಳಲ್ಲಿ ಈ ಭಾಗ ಆಳುವ ಸರ್ಕಾರಗಳ ನಿರ್ಲಕ್ಷ್ಯ ಕ್ಕೊಳಗಾಗಿ ಎಲ್ಲಾ ರಂಗಗಳಲ್ಲಿ ಹಿನ್ನಡೆ ಅನುಭವಿಸಿದ್ದು ಈ ಭಾಗದ ಜನತೆಯ ದುರಂತದ ಸಂಗತಿಯಾಗಿದೆ. ಈ ಭಾಗದ ಸಮಗ್ರ ಅಭಿವೃದ್ಧಿ ಗಾಗಿ ಸರ್ಕಾರದಿಂದ ವಿಶೇಷ ಸ್ಥಾನಮಾನ ಪಡೆಯಲು ಹೋರಾಟ ನಡೆಸಿದ ನಂತರ ಸಂವಿಧಾನದ ಕಲಂ 371(ಜೆ) ಸವಲತ್ತು ಪಡೆಯಲಾಗಿದೆ. ಈ ಸೌಲಭ್ಯ ದಿಂದ ಈ ಭಾಗದ ಯುವಕರು ಹೆಚ್ಚಿನ ಪ್ರಮಾಣದಲ್ಲಿ ಉನ್ನತ ಶಿಕ್ಷಣದ ಕೋರ್ಸಗಳು ಹಾಗೂ ಸರ್ಕಾರಿ ಉದ್ಯೋಗಗಳಿಗೆ ಆಯ್ಕೆಯಾಗಲು ಸಹಕಾರಿಯಾಗಿದೆ. ಇದು ಶೈಕ್ಷಣಿಕವಾಗಿ ಹಿಂದುಳಿದಿದ್ದ ಈ ಭಾಗಕ್ಕೆ ಆಗುತ್ತಿದ್ದ ಅನ್ಯಾಯ ಸರಿಪಡಿಸುವ ನಿಟ್ಟಿನಲ್ಲಿ ಆಶಾದಾಯಕ ಬೆಳವಣಿಗೆಯಾಗಿದೆ. ಆದರೆ ಇದೊಂದರಿಂದ ಮಾತ್ರ ಈ ಭಾಗದ ಬಗ್ಗೆ ಸರ್ಕಾರಗಳು ಹೊಂದಿದ್ದ ತಾರತಮ್ಯ ನೀತಿ ನಿವಾರಣೆಯಾಗಿದೆ ಎಂದು ಭಾವಿಸಬೇಕಿಲ್ಲ. ಸಾಂಸ್ಕೃತಿಕ ವಾಗಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಅನ್ಯಾಯ ಈಗಲೂ ಮುಂದುವರಿದಿದೆ. ವಿಶ್ವವಿದ್ಯಾಲಯಗಳಿಗೆ ಕುಲಪತಿಗಳು ಸೇರಿದಂತೆ ಉನ್ನತ ಹುದ್ದೆಗಳಿಗೆ ನೇಮಕ, ಅಕಾಡೆಮಿಗಳಿಗೆ ಅಧ್ಯಕ್ಷ ಹಾಗೂ ಸದಸ್ಯರ ನೇಮಕ, ಸರ್ಕಾರದ ಪ್ರಶಸ್ತಿಗಳಿಗೆ ಆಯ್ಕೆ ಮಾಡುವಲ್ಲಿ ಈ ಭಾಗದವರನ್ನು ಕಡೆಗಣಿಸುವ ಸಂಪ್ರದಾಯ ಈಗಲೂ ಮುಂದುವರಿದಿದೆ. ಹಿರಿಯ ಸಾಹಿತಿ ಶಾಂತರಸರು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದು ಹೊರತುಪಡಿಸಿದರೆ ಈ ಭಾಗದವರು ರಾಜ್ಯದ ಯಾವುದೇ ಅಕಾಡೆಮಿಯ ಅಧ್ಯಕ್ಷರಾಗಿ ಇದುವರೆಗೂ ನೇಮಕಗೊಂಡಿಲ್ಲ. ಅಕಾಡೆಮಿಗಳ ಸದಸ್ಯರಾಗಿ ಸೇವೆ ಸಲ್ಲಿಸಿದವರ ಸಂಖ್ಯೆ ಕೂಡ ರಾಜ್ಯದ ಇತರ ಭಾಗಗಳಿಗೆ ಹೋಲಿಸಿದರೆ ಕಡಿಮೆಯೇ ಇದೆ. ಈ ಅನ್ಯಾಯ, ತಾರತಮ್ಯ ಧೋರಣೆಗೆ ಸರ್ಕಾರ ಹಾಗೂ ಈ ಭಾಗದಿಂದ ಆಯ್ಕೆಯಾದ ಜನಪ್ರತಿನಿಧಿಗಳ ಉದಾಸೀನ ಭಾವನೆ ಹಾಗೂ ಇಚ್ಛಾಶಕ್ತಿಯ ಕೊರತೆಯೂ ಕಾರಣವಾಗಿದೆ.
ಡಾ.ಡಿ.ಎಂ.ನಂಜುಂಡಪ್ಪನವರು ಕೂಡ ತಮ್ಮ ವರದಿಯಲ್ಲಿ ಸಾಂಸ್ಕೃತಿಕ ಕ್ಷೇತ್ರಕ್ಕೆ ಸಂಬಂಧಿಸಿದ ಸರ್ಕಾರದ ಎಲ್ಲಾ ನೇಮಕಾತಿ ಹಾಗೂ ಆಯ್ಕೆಗಳಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಶೇಕಡಾ50 ರಷ್ಟು ಅವಕಾಶ ಕಲ್ಪಿಸಬೇಕು ಎಂದು ಶಿಫಾರಸ್ಸು ಮಾಡಿದ್ದರು ಎಂದು ತಿಳಿದು ಬಂದಿದೆ.
ರಾಜ್ಯ ಸರ್ಕಾರ 371(ಜೆ) ಸೌಲಭ್ಯದ ಕರುಡು ಸಿದ್ಧಪಡಿಸುವಾಗ ಕಲ್ಯಾಣ ಕರ್ನಾಟಕ ಭಾಗಕ್ಕೆ ಸಾಂಸ್ಕೃತಿಕ ಮೀಸಲಾತಿ ಕಲ್ಪಿಸುವ ಬಗ್ಗೆ ನಮ್ಮ ಭಾಗದ ಹೋರಾಟಗಾರರಾದ ಹಿರಿಯ ಬಂಡಾಯ ಸಾಹಿತಿ ಪ್ರೊ.ಅಲ್ಲಮಪ್ರಭು ಬೆಟ್ಟದೂರು, ಡಾ.ರಝಾಕ್ ಉಸ್ತಾದ್ ಮತ್ತಿತರರು ಸಚಿವ ಸಂಪುಟ ಉಪಸಮಿತಿಯನ್ನು ಒತ್ತಾಯಿಸಿದ್ದರು ಎಂದು ಮೂಲಗಳು ತಿಳಿಸಿವೆ. ಸಚಿವ ಸಂಪುಟ ಉಪಸಮಿತಿಯು ಕೂಡ ಈ ಕುರಿತು ಮಾಡಿದ ಶಿಫಾರಸ್ಸು ಇನ್ನೂ ಜಾರಿಯಾಗದಿರುವುದು ಬೇಸರದ ಸಂಗತಿಯಾಗಿದೆ.
ಕಾರಣ ವಿಶ್ವವಿದ್ಯಾಲಯಗಳು ಸೇರಿದಂತೆ ಇತರ ಸಂಸ್ಥೆಗಳ ಉನ್ನತ ಹುದ್ದೆಗಳಿಗೆ ನೇಮಕ, ಸಾಹಿತಿಗಳು, ಪತ್ರಕರ್ತರು, ಕಲಾವಿದರಿಗೆ ಸರ್ಕಾರದ ಪ್ರಶಸ್ತಿಗಳನ್ನು ನೀಡುವಾಗ ಸರ್ಕಾರ ಅನ್ಯಾಯ ಮಾಡುತ್ತಿರುವ ಬಗ್ಗೆ ಇಲ್ಲಿನ ಜನರಲ್ಲಿ ಅಸಮಾಧಾನ ಮುಂದುವರಿದಿದೆ. ಮೇಲಿನ ಕ್ಷೇತ್ರಗಳಲ್ಲಿ ಈ ಭಾಗದವರಿಗೆ ಹೆಚ್ವಿನ ಸಂಖ್ಯೆಯಲ್ಲಿ ಆದ್ಯತೆ ಸಿಗಲು ಸರ್ಕಾರ ಕಲ್ಯಾಣ ಕರ್ನಾಟಕ ಭಾಗಕ್ಕಾಗಿ ವಿಶೇಷವಾದ ಸಾಂಸ್ಕೃತಿಕ ಮೀಸಲಾತಿಯ ಸೌಲಭ್ಯ ಕಲ್ಪಿಸುವುದು ಅಗತ್ಯವಾಗಿದೆ. ಈ ಕುರಿತು ಜನಜಾಗೃತಿ ಮೂಡಿಸುವುದರ ಜತೆಗೆ ಸ್ಥಳೀಯ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕಿದೆ.

‌‌