ಆಧ್ಯಾತ್ಮ ಚಿಂತನೆ : ನಂಜುಂಡ ಶಿವ

 

ಲೇಖಕರು: ಮುಕ್ಕಣ್ಣ ಕರಿಗಾರ

ಶಿವನು ಲೋಕಬಂಧು.ಲೋಕನಾಥನಾದ ಶಿವನು ಲೋಕ ಜನರ ಕಷ್ಟ- ಸಂಕಷ್ಟಗಳನ್ನು ಪರಿಹರಿಸುವನು.ತನ್ನನ್ನು ನಂಬಿದ ಭಕ್ತರ ರಕ್ಷಣೆಗೋಸ್ಕರ ಎಂತಹ ತ್ಯಾಗಕ್ಕಾದರೂ ಶಿವನು ಸಿದ್ಧನಿರುವನು.ಶಿವನ ಲೋಕಾನುಗ್ರಹ ವಿಶೇಷವನ್ನು ಸಾರುವ ಪ್ರಸಂಗವೇ ‘ ಅಮೃತ ಮಥನ’ ಪ್ರಸಂಗ.

ಹಿಂದೆ ದೇವತೆಗಳು ಮತ್ತು ರಾಕ್ಷಸರ ನಡುವೆ ಮೇಲಿಂದ ಮೇಲೆ ಯುದ್ಧ ನಡೆಯುತ್ತಿತ್ತು.ಎರಡೂ ಕಡೆ ಅಪಾರ ಸಾವು- ನೋವುಗಳುಂಟಾಗುತ್ತಿದ್ದವು.ದೇವತೆಗಳು ಅಮರತ್ವವನ್ನು ಪಡೆಯಲು ಇಚ್ಛಿಸಿ, ಸಮುದ್ರದ ಒಡಲೊಳಗಿರುವ ಅಮೃತವನ್ನು ಹೊರತೆಗೆಯಬಯಸಿದರು.ವಿಷ್ಣುವಿನ ನಾಯಕತ್ವದಲ್ಲಿ ಸಮುದ್ರಮಥನ ಕಾರ್ಯ ನಡೆಯಿತು.ಮಂದರ ಗಿರಿಯನ್ನು ಕಡೆಗೋಲಾಗಿಸಿ,ವಾಸುಕಿ ಎನ್ನುವ ಮಹಾಸರ್ಪವನ್ನು ಹಗ್ಗವನ್ನು ಮಾಡಿಕೊಂಡು ಸಮುದ್ರವನ್ನು ಕಡೆಯತೊಡಗಿದರು ದೇವತೆಗಳು- ರಾಕ್ಷಸರು ಒಂದೊಂದು ಕಡೆ ನಿಂತು.ದೇವ ದಾನವರಿಬ್ಬರು ಸಮುದ್ರ ಕಡೆಯುವ ರಭಸಕ್ಕೆ ವಾಸುಕಿಯು ವಿಷಕಕ್ಕಿದ.ಆ ವಿಷವು ಸಮುದ್ರಸೇರಿ ಮತ್ತಷ್ಟು ತೀಕ್ಷ್ಣಗೊಂಡು ಹಾಲಾಹಲ ವಿಷವು ಎದ್ದಿತು.ಪ್ರಳಯಕಾರಿಯಾದ ಆ ವಿಷವನ್ನು ಕಂಡು ದೇವತೆಗಳು- ದಾನವರು ಹೌಹಾರಿ ಕಂಡಕಂಡ ಕಡೆಗೆ ಓಡತೊಡಗಿದರು.ಮೇಲೆದ್ದ ವಿಷವು ಭೂಮಿಯ ಮೇಲಿನ ಚರಾಚರಗಳನ್ನು ಸುಟ್ಟು ಬೂದಿ ಮಾಡತೊಡಗಿತು.ತಲ್ಲಣಗೊಂಡವು ಲೋಕಗಳು.

ದೇವತೆಗಳು- ದಾನವರು ಈ ಹಾಲಾಹಲ ಎನ್ನುವ ಮಹೋಗ್ರವಿಷವಿಪತ್ತನಿಂದ ಜಗತ್ತನ್ನು ರಕ್ಷಿಸಲು ವಿಷ್ಣುವನ್ನು ಕೇಳಿದರು.ವಿಷ್ಣುವು ಅವರೆಲ್ಲರಿಗೂ ‘ ಈ ಹಾಲಾಹಲ ವಿಷವನ್ನು ಶಿವನಲ್ಲದೆ ಬೇರಾರೂ ನಿಗ್ರಹಿಸಲು ಸಾಧ್ಯವಿಲ್ಲ.ಕೈಲಾಸಕ್ಕೆ ಹೋಗೋಣ ನಡೆಯಿರಿ’ ಎಂದು ದೇವದಾನವರುಗಳನ್ನು ಮುಂದು ಮಾಡಿಕೊಂಡು ಕೈಲಾಸಕ್ಕೆ ಬಂದನು.ದೇವತೆಗಳ ಮೊರೆಕೇಳಿ ಶಿವನು ಹಾಲಾಹಲ ವಿಷವನ್ನು ಬಟ್ಟಲಲ್ಲಿಟ್ಟುಕೊಂಡು ಕುಡಿದನು.ವಿಷವು ಶಿವನ ಗಂಟಲಲ್ಲಿಳಿದು ಗಂಟಲನ್ನು ಸುಟ್ಟಿದ್ದರಿಂದ ಶಿವನ ಕಂಠ ನೀಲಿಯಾಯಿತು.ಅಂದಿನಿಂದ ಶಿವನು ನೀಲಕಂಠನಾದ,ವಿಷಕಂಠನೆನ್ನಿಸಿಕೊಂಡ.ಜಗತ್ತಿನ ಕಲ್ಯಾಣಕ್ಕಾಗಿ ವಿಷವನ್ನು ಕುಡಿದು ಲೋಕಕಲ್ಯಾಣ ಸಾಧಿಸಿ ‘ಶ್ರೀಕಂಠ’ ನಾದ.ವಿಷಕ್ಕೆ ಕನ್ನಡದಲ್ಲಿ ನಂಜು ಎನ್ನುತ್ತಾರೆ.ನಂಜನ್ನು ಕುಡಿದ ಕನ್ನಡದ ಶಿವನೇ ನಂಜುಂಡ ಶಿವ! ಶಿವನು ಹಾಲಾಹಲ ವಿಷವನ್ನು ಕುಡಿದು ಅದನ್ನು ನಿಗ್ರಹಿಸಿದ್ದರಿಂದ ದೇವತೆಗಳು ಮತ್ತು ರಾಕ್ಷಸರ ಸಮುದ್ರ ಮಥನ ಕಾರ್ಯವು ನಿರ್ವಿಘ್ನವಾಗಿ ನಡೆದು ಅಮೃತವು ಲಭಿಸಿತು.ಅಮೃತವನ್ನು ಕುಡಿದವರು ದೇವತೆಗಳು.ಅವರಿಗಾಗಿ ವಿಷವನ್ನು ಕುಡಿದವನು ಶಿವ! ಶಿವನು ಪರಬ್ರಹ್ಮನಿರುವುದರಿಂದ ಅವನೊಬ್ಬನಿಂದಲೇ ಹಾಲಾಹಲವಿಷ ನಿಗ್ರಹ ಸಾಧ್ಯ ಎಂಬುದು ವಿಷ್ಣುವಿಗೆ ತಿಳಿದಿತ್ತು.ಬ್ರಹ್ಮನಾಗಲಿ,ವಿಷ್ಣುವಾಗಲಿ ಅಥವಾ ಸೂರ್ಯ ಚಂದ್ರಾದಿ ದೇವತೆಗಳಾಗಲಿ,ದೇವತೆಗಳ ಒಡೆಯ ಇಂದ್ರನಾಗಲಿ ಹಾಲಾಹಲ ವಿಷವನ್ನು ಕುಡಿದು,ದಕ್ಕಿಸಿಕೊಳ್ಳಲು ಸಮರ್ಥರಾಗಿರಲಿಲ್ಲ.ಅಂತೆಯೇ ಅವರೆಲ್ಲರೂ ದೇವಾಧಿದೇವನೂ ಪರಮೇಶ್ವರನೂ ಆದ ಪರಶಿವನನ್ನು ಮೊರೆಹೊಕ್ಕರು.ಕಾರುಣ್ಯಸಿಂಧುವಾದ ಶಿವನು ತನ್ನ ಭಕ್ತರ ರಕ್ಷಣೆಗೋಸ್ಕರ ಹಿಂದೆ ಮುಂದೆ ನೋಡದೆ ಕಾಲಕೂಟ ವಿಷವನ್ನು ಗಟಗಟನೆ ಕುಡಿದ.

ತನ್ನನ್ನು ಆಶ್ರಯಿಸಿದ ಭಕ್ತರ ಎಂತಹದೆ ಕಷ್ಟ-ಸಂಕಷ್ಟಗಳನ್ನು ಶಿವನು ಪರಿಹರಿಸುತ್ತಾನೆ ಎನ್ನುವುದೇ ‘ ಸಮುದ್ರಮಥನ ಪ್ರಸಂಗಾಖ್ಯಾನ’ ದ ಸಂದೇಶ.ತನ್ನನ್ನು ನಂಬಿ,ಆಶ್ರಯಿಸಿ ಬಂದ ದೇವತೆಗಳು- ರಾಕ್ಷಸರುಗಳಿಗೋಸ್ಕರ ವಿಷವನ್ನೇ ಕುಡಿದು ಲೋಕವನ್ನನುಗ್ರಹಿಸುವ ಮೂಲಕ ಲೋಕನಿಯಾಮಕನಾದ ತಾನು ಲೋಕೋದ್ಧಾರಬದ್ಧನೂ ಅಹುದು ಎನ್ನುವ ಲೋಕಾನುಗ್ರಹಸಂದೇಶವನ್ನು ಸಾರಿದ್ದಾನೆ ಶಿವನು.ಶಿವನನ್ನು ನಂಬಿ,ಮೊರೆಯೆ ಯಾವ ಅನಿಷ್ಟ ಕಾಡದು,ದುಷ್ಟಶಕ್ತಿಗಳು ಬಳಿ ಬಾರವು; ಅಪಮೃತ್ಯು ಶಿವಭಕ್ತರತ್ತ ಸುಳಿಯದು.ನಿಗ್ರಹಾನುಗ್ರಹ ಸಮರ್ಥನಿರುವ ಪರಮೇಶ್ವರ ಶಿವನನ್ನು ನಂಬಿ ಇಹ ಪರಗಳೆರಡರಲ್ಲಿಯೂ ಸುಖವನ್ನನುಭವಿಸಬಹುದು.ಭೋಗ- ಮೋಕ್ಷಗಳೆರಡನ್ನೂ ಶಿವನು ಕರುಣಿಸುವನಾದ್ದರಿಂದ ಇಹದಲ್ಲಿ ಭೋಗ ಪರದಲ್ಲಿ ಮೋಕ್ಷದಲ್ಲಿ ಎರಡನ್ನೂ ಶಿವಭಕ್ತರು ಪಡೆಯಬಹುದು.