ಬೈಲ್ ಮರ್ಚೇಡ್ ಹಳ್ಳಕ್ಕೆ ರೂ3.80ಕೋಟಿ ವೆಚ್ಚದಲ್ಲಿ ಬೃಹತ್ ಸೇತುವೆ ನಿರ್ಮಾಣ: ದಶಕದ ಬೇಡಿಕೆಗೆ ದೊರೆತ ಮುಕ್ತಿ

ಮಾನ್ವಿ:
ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಮಾನ್ವಿ ತಾಲ್ಲೂಕಿನ ಬೈಲ್ ಮರ್ಚೆಡ್ ಗ್ರಾಮದ ಸಮೀಪ ಹಳ್ಳಕ್ಕೆ ಬೃಹತ್ ಸೇತುವೆ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ.
ರಾಜಲಬಂಡಾ ಅಣೆಕಟ್ಟು ಹಾಗೂ ಮಂತ್ರಾಲಯಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗ ಮಧ್ಯೆ ಬರುವ ಈ ಹಳ್ಳವು ಪ್ರತಿ ಬಾರಿ ಮಳೆ ಹಾಗೂ ಪ್ರವಾಹ ಬಂದಾಗ ಸೇತುವೆ ಮುಳುಗಡೆಯಾಗಿ ವಾರಗಟ್ಟಲೆ ವಾಹನ ಸಂಚಾರ ಸ್ಥಗಿತಗೊಳ್ಳುವ ಪರಿಸ್ಥಿತಿ ಇತ್ತು. ಹಳ್ಳದ ಸೇತುವೆಯನ್ನು ಮೇಲ್ದರ್ಜೆಗೇರಿಸುವುದು ಈ ಭಾಗದ ಜನರ ದಶಕಗಳ ಬೇಡಿಕೆಯಾಗಿತ್ತು. ಜನರ ಆಶಯಕ್ಕೆ ಸ್ಪಂದಿಸಿರುವ ಶಾಸಕ ಬಸನಗೌಡ ದದ್ದಲ ಸದರಿ ಹಳ್ಳಕ್ಕೆ ಬೃಹತ್ ಸೇತುವೆ ನಿರ್ಮಾಣ ಕಾಮಗಾರಿಗೆ ಕ್ರಮ ಕೈಗೊಂಡಿದ್ದಾರೆ. ಲೋಕೋಪಯೋಗಿ ಇಲಾಖೆಯ ವತಿಯಿಂದ ರೂ3.80ಕೋಟಿ ವೆಚ್ಚದಲ್ಲಿ ಒಟ್ಟು 87ಮೀ ಉದ್ದದ ಬೃಹತ್ ಸೇತುವೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು ಮುಕ್ತಾಯದ ಹಂತದಲ್ಲಿದೆ. ಗ್ರಾಮಸ್ಥರ ಪ್ರಕಾರ ಕಪಗಲ್, ಬೊಮ್ಮನಾಳ ಹಾಗೂ ಕುರ್ಡಿ ಗ್ರಾಮಗ ಳಹಳ್ಳಗಳು ಸೇರಿ ಒಟ್ಟು 7 ಗ್ರಾಮಗಳ ಹಳ್ಳಗಳ ನೀರು ಈ ಹಳ್ಳದ ಮೂಲಕ ಹರಿಯುತ್ತದೆ. ಈ ಹಳ್ಳದ ನೀರು ಪೂರ್ವದಿಂದ ಪಶ್ಚಿಮ ದಿಕ್ಕಿಗೆ ಹರಿದು ಮುಂದೆ ರಾಜಲಬಂಡಾ ಸಮೀಪ ತುಂಗಭದ್ರಾ ನದಿ ಸೇರುವುದು ಇಲ್ಲಿನ ವಿಶೇಷ. ಹಳ್ಳಕ್ಕೆ ಹೊಂದಿಕೊಂಡು ಪುರಾತನ ಈಶ್ವರ ದೇವಸ್ಥಾನ ಇದ್ದು, ಹಳ್ಳದ ಈಶ್ವರ ದೇವಸ್ಥಾನ ಎಂದು ಖ್ಯಾತಿ ಪಡೆದಿದೆ. ಹಳ್ಳಕ್ಕೆ ಸುಸಜ್ಜಿತ ಬೃಹತ್ ಸೇತುವೆ ನಿರ್ಮಾಣದಿಂದ ಪ್ರವಾಸಿಗರಿಗೆ ಹಾಗೂ ಈ ಭಾಗದ ಜನರಿಗೆ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ ಎಂಬುದು ಸ್ಥಳೀಯರ ಅಭಿಪ್ರಾಯ.

ಈ ಭಾಗದ ಜನರ ಬಹದಿನಗಳ ಬೇಡಿಕೆಯಂತೆ ಸುಸಜ್ಜಿತ ಸೇತುವೆ ನಿರ್ಮಾಣಕ್ಕೆ ಗುಣಮಟ್ಟದ ಕಾಮಗಾರಿ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಬಸನಗೌಡ ದದ್ದಲ, ಶಾಸಕ, ರಾಯಚೂರು ಗ್ರಾಮೀಣ

ಹಲವು ವರ್ಷಗಳ ಬೇಡಿಕೆಯಾಗಿದ್ದ ಬೈಲ್ ಮರ್ಚೇಡ್ ಗ್ರಾಮದ ಸಮೀಪ ಇರುವ ಹಳ್ಳಕ್ಕೆ ಬೃಹತ್ ಸೇತುವೆ ನಿರ್ಮಿಸುತ್ತಿರುವುದು ಶ್ಲಾಘನೀಯ
ವಿಜಯಮಹಾಂತೇಶ, ಸುಂಕೇಶ್ವರ