ಶಾಲಾ ಆರಂಭೋತ್ಸವ

ಮಾನ್ವಿ:

ಮಾನ್ವಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಾನ್ವಿ ಹಾಗೂ ಸಿರವಾರ ತಾಲ್ಲೂಕಿನ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ರಿಂದ8ನೇ ತರಗತಿಗಳು ಆರಂಭಕ್ಕೆ ಸೋಮವಾರ ಚಾಲನೆ ನೀಡಲಾಯಿತು. ಶಾಲಾ ಆರಂಭೋತ್ಸವದ ನಿಮಿತ್ತ ಶಾಲೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಎರಡೂ ತಾಲ್ಲೂಕುಗಳಲ್ಲಿ ಸರಾಸರಿ ಶೇ50ರಷ್ಟು ವಿದ್ಯಾರ್ಥಿಗಳ ಹಾಜರಾತಿ ಕಂಡುಬಂದಿತು. ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಶಿಕ್ಷಕರು ಹಾಗೂ ಎಸ್‍ಡಿಎಂಸಿ ಪದಾಧಿಕಾರಿಗಳಿಂದ ಮುಖಗವುಸುಗಳು, ಪುಸ್ತಕಗಳು ಹಾಗೂ ಪುಷ್ಪಗುಚ್ಛ ನೀಡಿ ಸ್ವಾಗತಿಸಲಾಯಿತು. ಮಾನ್ವಿ ಪಟ್ಟಣದ ಕೆಲವು ಖಾಸಗಿ ಶಾಲೆಗಳಲ್ಲಿ ಥರ್ಮಲ್ ಸ್ಕ್ಯಾನಿಂಗ್ ಮೂಲಕ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ಗುಡಾಳ ಮತ್ತಿತರ ಅಧಿಕಾರಿಗಳು ತಾಲ್ಲೂಕಿನ ಸಂಗಾಪುರ, ಆಲ್ದಾಳ, ಅಮರಾವತಿ ಹಾಗೂ ಜಾನೇಕಲ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಮಾತನಾಡಿದ ಬಿಇಒ ವೆಂಕಟೇಶ ಗುಡಾಳ, ‘ ಆರೋಗ್ಯ ನಂದನ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಕಡ್ಡಾಯಗೊಳಿಸಲಾಗಿದೆ. ಶಾಲಾ ಆವರಣಗಳ ಸ್ವಚ್ಛತೆ ಹಾಗೂ ಕೋವಿಡ್ ನಿಯಂತ್ರಣ ನಿಯಮಗಳ ಕಡ್ಡಾಯ ಪಾಲನೆಗೆ ಸೂಚನೆ ನೀಡಲಾಗಿದೆ’ ಎಂದು ತಿಳಿಸಿದರು. ಶಾಲೆಗಳು ಆರಂಭಗೊಂಡಿರುವ ಬಗ್ಗೆ ವಿದ್ಯಾರ್ಥಿಗಳು ಖುಷಿ ವ್ಯಕ್ತಪಡಿಸಿದರು.