ಫೆ.19ಕ್ಕೆ ಮಾನ್ವಿ ತಾಲ್ಲೂಕು ಮಟ್ಟದ ಮಹಿಳಾ ಸಾಹಿತ್ಯ ಸಮ್ಮೇಳನ: ಶಾಸಕ ಆರ್ ವಿ ಎನ್

ಮಾನ್ವಿ:,ಜ.21‘ಫೆಬ್ರವರಿ 19ರಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಮಾನ್ವಿ ಪಟ್ಟಣದಲ್ಲಿ ಪ್ರಥಮ ತಾಲ್ಲೂಕು ಮಟ್ಟದ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗುವುದು’ ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು.
ಶನಿವಾರ ಮಾನ್ವಿ ಪಟ್ಟಣದ ಸಾಹಿತ್ಯ ಭವನದಲ್ಲಿ ಅವರು ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ‘ ಇದೇ ಮೊದಲ ಬಾರಿಗೆ ತಾಲ್ಲೂಕಿನಲ್ಲಿ ಮಹಿಳಾ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳುತ್ತಿರುವುದು ಹಮ್ಮೆಯ ಸಂಗತಿ. ಸಮ್ಮೇಳನದ ಯಶಸ್ಸಿಗೆ ಅಗತ್ಯ ಸಹಾಯ, ಸಹಕಾರ ನೀಡಲಾಗುವುದು. ತಾಲ್ಲೂಕಿನ ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳು ಹಾಗೂ ಸಂಘ ಸಂಸ್ಥೆಗಳ ಮುಖಂಡರು ಸಮ್ಮೇಳನದ ಯಶಸ್ಸಿಗೆ ಸಹಕರಿಸಬೇಕು’ ಎಂದು ಅವರು ಮನವಿ ಮಾಡಿದರು.
ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ರವಿಕುಮಾರ ಪಾಟೀಲ ಮಾತನಾಡಿ, ‘ ಮಹಿಳಾ ಸಾಹಿತ್ಯ ಸಮ್ಮೇಳನದ ಸಿದ್ಧತೆಗಾಗಿ ಚರ್ಚಿಸಲು ಜ.25ರಂದು ಮಾನ್ವಿ ಪಟ್ಟಣದ ತಾ.ಪಂ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಸ್ಥಳೀಯ ಗಣ್ಯರು, ಕನ್ನಡಪರ ಸಂಘಟನೆಗಳ ಮುಖಂಡರು ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿ ಸಲಹೆ ಸೂಚನೆ ನೀಡಬೇಕು’ ಎಂದು ಕೋರಿದರು.
ಕಸಾಪ ಗೌರವ ಕಾರ್ಯದರ್ಶಿ ಬಸವರಾಜ ಜಂಗರಮಹಳ್ಳಿ, ಕೋಶಾಧ್ಯಕ್ಷ ಮನ್ಸಾಲಿ ಯಂಕಯ್ಯ ಶೆಟ್ಟಿ, ಇತರ ಪದಾಧಿಕಾರಿಗಳಾದ ಸಲಾವುದ್ದೀನ್, ಲಕ್ಷ್ಮಣರಾಯ ಕಪಗಲ್, ಶರಣಯ್ಯ ಸ್ವಾಮಿ, ಗೋಪಾಲನಾಯಕ ಜೂಕೂರು, ಸಂತೋಷ ಹೂಗಾರ, ಶಿವಗೇನಿ ನಾಯಕ, ಸಂಗಮೇಶ ಮುಧೋಳ, ಬಸವರಾಜ ಕನ್ನಾರಿ ಮತ್ತಿತರರು ಇದ್ದರು.