ಮಹಾರಾಷ್ಟ್ರದ ಬನ್ಸಿ ಗ್ರಾಮ ಪಂಚಾಯತಿಯು ಮಾದರಿಯಾಯ್ತು ದೇಶಕ್ಕೆ ! – ಮುಕ್ಕಣ್ಣ ಕರಿಗಾರ

ಮೂರನೇ ಕಣ್ಣು

ಮಹಾರಾಷ್ಟ್ರದ ಬನ್ಸಿ ಗ್ರಾಮ ಪಂಚಾಯತಿಯು ಮಾದರಿಯಾಯ್ತು ದೇಶಕ್ಕೆ !

ಮುಕ್ಕಣ್ಣ ಕರಿಗಾರ

ನಮ್ಮ ಗ್ರಾಮ ಪಂಚಾಯತಿಗಳು ಮನಸ್ಸು ಮಾಡಿದರೆ ಗ್ರಾಮಗಳನ್ನು ‘ಕಲ್ಯಾಣರಾಜ್ಯ’ ಇಲ್ಲವೆ ಸುಖೀರಾಜ್ಯಗಳನ್ನಾಗಿ ಮಾಡಬಲ್ಲವು.ಜನಪರ ಕಾಳಜಿಯ ವಿಶಿಷ್ಟ ಕೆಲಸ ಕಾರ್ಯಗಳಿಂದ ಕೆಲವೊಂದು ಗ್ರಾಮ ಪಂಚಾಯತಿಗಳು ರಾಷ್ಟ್ರದ ಗಮನಸೆಳೆಯುತ್ತಿವೆ. ಈಗ ರಾಷ್ಟ್ರದ ಗಮನವನ್ನು ತನ್ನೆಡೆಗೆ ಸೆಳೆದಿದೆ ಮಹಾರಾಷ್ಟ್ರದ ಪಶ್ಚಿಮ ವಿದರ್ಭದ ಯಾವತ್ಮಲ್ ಜಿಲ್ಲೆಯ ಬನ್ಸಿ ಗ್ರಾಮ ಪಂಚಾಯತಿ.ಬನ್ಸಿ ಗ್ರಾಮ ಪಂಚಾಯತಿಯು ಮಕ್ಕಳ ಶಿಕ್ಷಣದ ದೃಷ್ಟಿಯಿಂದ ಊರಲ್ಲಿ ಹದಿನೆಂಟು ವರ್ಷದ ಕೆಳಗಿನ ಮಕ್ಕಳ ಮೊಬೈಲ್ ಬಳಕೆ ನಿಷೇಧಿಸಿ ಆದೇಶ ಮಾಡಿದೆ.ಸಂಜೆಯಾದೊಡನೆ ಇಡೀ ಊರಿನಲ್ಲಿ ಮಕ್ಕಳು ಹಿರಿಯರು ಯಾರೂ ಮೊಬೈಲ್ ಬಳಸದಂತೆ ನಿಷೇಧಿಸಿ ಮಕ್ಕಳ ಕಲಿಕೆಗೆ ಪೂರಕವಾತಾವರಣವನ್ನುಂಟು ಮಾಡಿದೆ.ಗ್ರಾಮ ಪಂಚಾಯತಿಯ ಈ ಆದೇಶದಿಂದ ಸಂಜೆಯಾದೊಡನೆ ಮಕ್ಕಳಲ್ಲಿ ಓದಿನಲ್ಲಿ ತೊಡಗಿಕೊಳ್ಳುವ ಅನಿವಾರ್ಯತೆ ಉಂಟಾಗಿದೆ.ಗ್ರಾಮದ ಪೋಷಕರುಗಳಿಗೂ ಇದು ಉತ್ತಮ ಕಾರ್ಯವೆನ್ನಿಸಿ ಅವರೆಲ್ಲರೂ ಗ್ರಾಮ ಪಂಚಾಯತಿಯ ಆದೇಶವನ್ನು ಮುಕ್ತಮನಸ್ಸಿನಿಂದ ಸ್ವಾಗತಿಸಿ,ಪಾಲಿಸುತ್ತಿದ್ದಾರೆ.

ಇದೊಂದು ಮಹತ್ವದ ಕಾರ್ಯ.ಮಕ್ಕಳಲ್ಲಿ ಮೊಬೈಲ್ ಗೀಳು ವ್ಯಾಪಕವಾಗಿ ಅವರ ಆರೋಗ್ಯ ಮತ್ತು ಓದಿನ ಮೇಲೆ ದುಷ್ಪರಿಣಾಮ ಬೀರುತ್ತಿರುವ ದಿನಗಳಲ್ಲಿ ಮಹಾರಾಷ್ಟ್ರದ ಬನ್ಸಿ ಗ್ರಾಮ ಪಂಚಾಯತಿಯ ಈ ವಿನೂತನ ಕಾರ್ಯ ಎಲ್ಲರಿಗೂ ಅನುಕರಣೀಯ.ಬನ್ಸಿ ಗ್ರಾಮ ಪಂಚಾಯತಿಯ ಸರಪಂಚ್ ಈ ಆದೇಶವನ್ನು ಗ್ರಾಮಸ್ಥರೆಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಆದೇಶಿಸಿದ್ದಾರೆ.ತಪ್ಪಿದರೆ ಎರಡು ನೂರು ರೂಪಾಯಿಗಳ ದಂಡ ವಿಧಿಸಲಾಗುತ್ತದೆ.ಆದೇಶದ ಪಾಲನೆಯ ಬಗ್ಗೆ ಗ್ರಾಮ ಪಂಚಾಯತಿಯ ತಂಡಗಳು ಗ್ರಾಮದಲ್ಲಿ ಸಂಚರಿಸಿ ಮೊಬೈಲ್ ಬಂದ್ ಆಗಿರುವುದನ್ನು ಖಚಿತಪಡಿಸಿಕೊಳ್ಳುತ್ತಿವೆಯಂತೆ.ಗ್ರಾಮ ಪಂಚಾಯತಿಯ ಈ ನಿರ್ಣಯವನ್ನು ಗ್ರಾಮಸ್ಥರು ಸ್ವಾಗತಿಸಿ,ಸಹಕರಿಸುತ್ತಿರುವುದರಿಂದ ಸಮಸ್ಯೆಯೇನೂ ಉಂಟಾಗಿಲ್ಲ.” ಮಕ್ಕಳು ಮೊಬೈಲ್ ನಲ್ಲಿ ಗೇಮ್ಸ್ ಆಡುವುದು,ಅನಪೇಕ್ಷಿತ ವೆಬ್ ಸೈಟ್ ಗಳನ್ನು ವೀಕ್ಷಿಸುವುದು,ಜಾಲತಾಣದಲ್ಲಿ ಕಾಲಹರಣ ಮಾಡುವುದು ಇತ್ಯಾದಿ ಮಾಡುವುದಕ್ಕೆ ಸರ್ವಾನುಮತದಿಂದ ಈ ತೀರ್ಮಾನ ಮಾಡಲಾಗಿದೆ” ಎನ್ನುವ ಬನ್ಸಿ ಗ್ರಾಮ ಪಂಚಾಯತಿಯ ಕಾರ್ಯದರ್ಶಿಯವರ ಜನಪರಕಾಳಜಿ ಮತ್ತು ಗ್ರಾಮಸ್ಥರನ್ನು ಸಮಾಲೋಚಿಸಿ,ಒಪ್ಪಿಸಿದ ಕಾರ್ಯ ಶ್ಲಾಘನೀಯ.ಗ್ರಾಮ ಪಂಚಾಯತಿಯ ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿ ವರ್ಗ ಒಟ್ಟಾಗಿ ಜನಹಿತದೃಷ್ಟಿಯಿಂದ ಕೆಲಸ ಮಾಡಿದರೆ ಪವಾಡಗಳನ್ನು ಸಾಧಿಸಬಹುದು ಎನ್ನುವುದಕ್ಕೆ ಬನ್ಸಿ ಗ್ರಾಮ ಪಂಚಾಯತಿಯು ಉತ್ತಮ ಉದಾಹರಣೆ.ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಅನುಷ್ಠಾನದ ನೆಪದಲ್ಲಿ ಕೊಳ್ಳೆಯಲ್ಲಿ ಪಾಲುದಾರರಾಗುವ ಗ್ರಾಮ ಪಂಚಾಯತಿ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳಿಗೆ ಬನ್ಸಿ ಗ್ರಾಮ ಪಂಚಾಯತಿಯ ಜನಪರಕಾರ್ಯ ಆತ್ಮಾವಲೋಕನಕ್ಕೆ ಪ್ರೇರೇಪಿಸಬೇಕು.ಗ್ರಾಮ ಪಂಚಾಯತಿಗಳು ಸ್ಥಳೀಯ ಸರ್ಕಾರಗಳಾಗಿದ್ದು ತಮ್ಮೂರಿನ ಅಭಿವೃದ್ಧಿ ಮಾಡಬೇಕಾದ ಗ್ರಾಮ ಪಂಚಾಯತಿ ಸದಸ್ಯರುಗಳು ತಮ್ಮ ಊರುಗಳನ್ನೇ ಕೊಳ್ಳೆ ಹೊಡೆಯುತ್ತಿದ್ದಾರೆ.ಅಂಥವರನ್ನು ಬೆಂಬಲಿಸುವ ಜನರೂ ಇದ್ದಾರೆನ್ನಿ.ಚುನಾಯಿತ ಪ್ರತಿನಿಧಿಗಳು,ಪಂಚಾಯತಿಗಳ ಅಧಿಕಾರಿವರ್ಗ ಮತ್ತು ಅವರ ಲೂಟಿಕೋರ ದಂಧೆಯನ್ನು ಬೆಂಬಲಿಸುವ ಜನರು ಸೇರಿ ಗ್ರಾಮರಾಜ್ಯಗಳಾಗಬೇಕಿದ್ದ ನಮ್ಮ ಗ್ರಾಮಗಳನ್ನು ತಿಪ್ಪೆಗುಂಡಿಗಳನ್ನಾಗಿ ಮಾಡುತ್ತಿವೆ.ತಮ್ಮ ಊರವರಿಂದಲೇ ಆರಿಸಿ ಬರುವ,ನಿತ್ಯ ಊರಜನರ ಮುಖ ನೋಡಬೇಕಿರುವ ,ಐದು ವರ್ಷಗಳ ಅವಧಿ ಮುಗಿದ ಬಳಿಕ ಊರಲ್ಲಿಯೇ ವಾಸಿಸಬೇಕಿರುವ ಗ್ರಾಮ ಪಂಚಾಯತಿ ಸದಸ್ಯರುಗಳು ಊರನ್ನೇ ದೋಚಿ ತಿನ್ನುವ ಕಾರ್ಯಮಾಡುತ್ತಿರುವುದರಿಂದ ಗ್ರಾಮರಾಜ್ಯ ಸ್ಥಾಪನೆಯ ಕನಸು ಪೂರ್ಣವಾಗಿ ಸಾಕಾರಗೊಳ್ಳುತ್ತಿಲ್ಲ.

‌ ಭಾರತ ಸಂವಿಧಾನಕ್ಕೆ ತಂದ 73 ನೇ ತಿದ್ದುಪಡಿಯಿಂದಾಗಿ ಗ್ರಾಮ ಪಂಚಾಯತಿಗಳು ಸಬಲಗ್ರಾಮರಾಜ್ಯ ಸಂಸ್ಥೆಗಳಾಗಿವೆ.ಅನುದಾನದ ನಿಶ್ಚಿತತೆ ಇದೆ; ಅಭಿವೃದ್ಧಿ ಯೋಜನೆಗಳು ಗ್ರಾಮ ಪಂಚಾಯತಿಗಳ ಮೂಲಕವೇ ಅನುಷ್ಠಾನಗೊಳ್ಳುತ್ತಿವೆ.ಗ್ರಾಮಸಭೆಗೆ ಪರಮಾಧಿಕಾರ ಇದೆ.ಗ್ರಾಮ ಪಂಚಾಯತಿಗಳು ಮಾಡಬಹುದಾದ ಕಾರ್ಯಕ್ರಮ,ಯೋಜನೆಗಳ ಪಟ್ಟಿಯೂ ಇದೆ.ಕೇಂದ್ರ ಮತ್ತು ಆಯಾ ರಾಜ್ಯಸರ್ಕಾರಗಳು ನಿಗದಿ ಪಡಿಸಿದ ಅಭಿವೃದ್ಧಿ ಯೋಜನೆಗಳಲ್ಲದೆ ಗ್ರಾಮ ಪಂಚಾಯತಿಗಳು ತಮ್ಮ ಭೌಗೋಳಿಕ ವ್ಯಾಪ್ತಿಯಲ್ಲಿ ತಮಗಿಷ್ಟವಾದ,ಗ್ರಾಮಕ್ಕೆ ಅನುಕೂಲಕರವಾದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಶಕ್ತವಾಗಿವೆ.ಮೂರು ಹಂತದ ಪಂಚಾಯತ್ ರಾಜ್ ಸಂಸ್ಥೆಗಳಾದ ಜಿಲ್ಲಾ ಪಂಚಾಯತ್,ತಾಲೂಕಾ ಪಂಚಾಯತ್ ಮತ್ತು ಗ್ರಾಮ ಪಂಚಾಯತಿಗಳಲ್ಲಿ ತೆರಿಗೆ ವಿಧಿಸುವ ಅಧಿಕಾರ ಇರುವುದು ಗ್ರಾಮ ಪಂಚಾಯತಿಗಳಿಗೆ ಮಾತ್ರ ಎನ್ನುವುದು ಗಮನಾರ್ಹವಾದುದು.ಜಿಲ್ಲಾ ಪಂಚಾಯತಿ ಮತ್ತು ತಾಲೂಕಾ ಪಂಚಾಯತಿಗಳು ಸರಕಾರದ ಅನುದಾನವನ್ನೇ ನಂಬಿ ಕುಳಿತುಕೊಳ್ಳಬೇಕಾದ ಪರಾವಲಂಬಿ (Parasite) ಪಂಚಾಯತ್ ರಾಜ್ ಸಂಸ್ಥೆಗಳಾದರೆ ಗ್ರಾಮ ಪಂಚಾಯತಿಗಳಿಗಿರುವ ಸ್ವಂತಸಂಪನ್ಮೂಲ ಸಂಗ್ರಹಣೆಯ ಹಕ್ಕು ಮತ್ತು ಅಧಿಕಾರದಿಂದ ಅವು ನಿಜವಾದ ಅರ್ಥದಲ್ಲಿ ಸ್ಥಳೀಯ ಸರ್ಕಾರಗಳಾಗಿವೆ.ಕಾಲಕಾಲಕ್ಕೆ ತೆರಿಗೆಯ ದರ ಪರಿಷ್ಕರಣೆ ಮಾಡಿ ಪಂಚಾಯತಿಗೆ ಸಾಕಾಗುವಷ್ಟು ಸಂಪನ್ಮೂಲ ಸಂಗ್ರಹಿಸುವ ಸಾಮರ್ಥ್ಯವೂ ಗ್ರಾಮ ಪಂಚಾಯತಿಗಳಿಗಿದೆ.ಹಾಗಿದ್ದೂ ಬಹುತೇಕ ಗ್ರಾಮ ಪಂಚಾಯತಿಗಳು ಕಾಟಾಚಾರಕ್ಕೆಂಬಂತೆ ಕಾರ್ಯ ನಿರ್ವಹಿಸುತ್ತಿವೆ.ಚುನಾಯಿತ ಜನಪ್ರತಿನಿಧಿಗಳು ಮತ್ತು ಪಂಚಾಯತಿ ಸಿಬ್ಬಂದಿಯವರ ನಡುವಿನ ಅನೈತಿಕ ಒಪ್ಪಂದವು ಗ್ರಾಮಗಳ ಅಭಿವೃದ್ಧಿಯ ಮೇಲೆ ದುಷ್ಪರಿಣಾಮ ಬೀರುತ್ತಿದೆ.ಇಂತಹ ವಿಷಮ ದಿನಗಳಲ್ಲಿಯೇ ಮಹಾರಾಷ್ಟ್ರದ ಬನ್ಸಿ ಗ್ರಾಮ ಪಂಚಾಯತಿಯು ತನ್ನ ಪ್ರದೇಶದ ವ್ಯಾಪ್ತಿಯ ಮಕ್ಕಳ‌ ಶಿಕ್ಷಣದ ದೃಷ್ಟಿಯಿಂದ ಸಮಾಜ,ರಾಷ್ಟ್ರ ಕಟ್ಟುವ ಮಹತ್ವದ ನಿರ್ಧಾರ ಕೈಗೊಂಡಿರುವುದು ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟಿರುವವರೆಲ್ಲರಿಗೂ ಆಶಾದಾಯಕ ನಿದರ್ಶನವಾಗಿದೆ.

ಮುಕ್ಕಣ್ಣ ಕರಿಗಾರ

೧೮.೧೧.೨೦೨೨