ಅನಾಥ ಮಕ್ಕಳ ಜಾತಿ ಮತ್ತು ಮೀಸಲಾತಿ ನಿಗದಿ–ಕೆಲವು ವಿಚಾರಗಳು : ಮುಕ್ಕಣ್ಣ ಕರಿಗಾರ

ಮೂರನೇ ಕಣ್ಣು

ಅನಾಥ ಮಕ್ಕಳ ಜಾತಿ ಮತ್ತು ಮೀಸಲಾತಿ ನಿಗದಿ–ಕೆಲವು ವಿಚಾರಗಳು

ಮುಕ್ಕಣ್ಣ ಕರಿಗಾರ

ರಾಜ್ಯದಲ್ಲಿ ಜಾತಿಗೊತ್ತಿಲ್ಲದೆ ಇರುವ 6300 ಅನಾಥ ಮಕ್ಕಳುಗಳಿದ್ದು ಇವರಿಗೆ ಜಾತಿ ಮೀಸಲಾತಿ ನೀಡುವುದು ಅವಶ್ಯಕವಾಗಿರುವುದರಿಂದ ಈ ಬಗ್ಗೆ ಹದಿನೈದು ದಿನಗಳ ಒಳಗಾಗಿ ಸರ್ಕಾರಕ್ಕೆ ಪೂರ್ಣಪ್ರಮಾಣದ ವರದಿಯನ್ನು ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ ಹೆಗ್ಡೆಯವರು.ಇದೊಂದು ಉತ್ತಮ ಬೆಳವಣಿಗೆಯಾಗಿದ್ದು ಅನಾಥಮಕ್ಕಳ ಬದುಕಿನಲ್ಲಿ ಭರವಸೆಯ ಬೆಳಕು ಮೂಡಬಹುದು.ಆದರೆ ಇಲ್ಲಿ ಕೆಲವು ಸಮಸ್ಯೆಗಳಿವೆ.ಅನಾಥಮಕ್ಕಳ ಜಾತಿ ಮೀಸಲಾತಿಯನ್ನು ಸೂಕ್ಷ್ಮವಾಗಿ ನಿಭಾಯಿಸಬೇಕಾಗುತ್ತದೆ.

ಜಾತಿಗೊತ್ತಿಲ್ಲದ,ಹುಟ್ಟಿದ ತಕ್ಷಣ ತಂದೆ ತಾಯಿಗಳು ಬಿಟ್ಟುಹೋಗಿರುವ ಮಕ್ಕಳುಗಳನ್ನು ಸರಕಾರಿ ಬಾಲ ಮಂದಿರಗಳಲ್ಲಿ ಪೋಷಿಸಲಾಗುತ್ತಿದ್ದು ಇಂತಹ ಮಕ್ಕಳುಗಳನ್ನು ಅನಾಥ ಮಕ್ಕಳುಗಳು ಎಂದು ಭಾವಿಸಲಾಗುತ್ತದೆ.ಯುವಕ ಯುವತಿಯರ ಹರೆಯದಾಟ,ಅನೈತಿಕ ಸಂಬಂಧದಿಂದ ಹುಟ್ಟಿದ ಮಕ್ಕಳುಗಳನ್ನು ನಿಷ್ಕರುಣೆಯಿಂದ ಬೀದಿಬದಿಯಲ್ಲಿ ಬಿಟ್ಟುಹೋಗಿರುತ್ತಾರೆ ಅವರ ಜನನಕ್ಕೆ ಕಾರಣರಾದವರು.ಇಂಥವರ ಸಂಖ್ಯೆಯೇ ಅನಾಥಮಕ್ಕಳಲ್ಲಿ ಹೆಚ್ಚು ಇರುವುದರಿಂದ ಮಕ್ಕಳ ಕೋಮಲ ಮನಸ್ಸಿನ ಮೇಲೆ ಈ ವಿಷಯವು ಪರಿಣಾಮಬೀರದಂತೆ ಎಚ್ಚರಿಕೆ ವಹಿಸಬೇಕಿದೆ.ತಂದೆ ತಾಯಿ ಯಾರೆಂದೇ ಗೊತ್ತಿರದ,ಸರಕಾರಿ ಬಾಲ ಮಂದಿರಗಳ ಸೇವಕಿಯರು,ದಾದಿಯರುಗಳ ಆಶ್ರಯದಲ್ಲಿ ಬೆಳೆಯುತ್ತಿರುವ ಇಂತಹ ಮಕ್ಕಳುಗಳಲ್ಲಿ ‘ ಅನಾಥಪ್ರಜ್ಞೆ’ ಮೂಡಬಾರದು.’ ನಮಗೆ ಯಾರೂ ಇಲ್ಲ’ ಎನ್ನುವ ಹತಾಶೆಭಾವನೆಯಾಗಲಿ ಅಥವಾ ‘ ನಮಗಾರು ದಿಕ್ಕು?’ ಎನ್ನುವ ಆತಂಕವಾಗಲಿ ಆ ಮಕ್ಕಳಿಗೆ ಕಾಡಬಾರದು.ಅದಕ್ಕಾಗಿ ‘ ಅನಾಥ ಮಕ್ಕಳು’ ಎಂದು ಕರೆಯುವ ಬದಲು ಅವರನ್ನು ಮತ್ತಾವುದೋ ಉತ್ತಮ ಹೆಸರಿನಿಂದ ಕರೆಯುವುದೊಳಿತು.ಕೊವಿಡ್ ವೈರಾಣುವಿನ ಕ್ರೌರ್ಯಕ್ಕೆ ತುತ್ತಾಗಿ ತಂದೆ ತಾಯಿಯರನ್ನು ಕಳೆದುಕೊಂಡು ದಿಕ್ಕಿಲ್ಲದವರಾದ ಮಕ್ಕಳನ್ನು ಸೇರಿಸಿದರೆ ಅನಾಥಮಕ್ಕಳ ಸಂಖ್ಯೆ ತುಸು ಹೆಚ್ಚಾಗಬಹುದು.

ಅನಾಥ ಮಕ್ಕಳಿಗೆ ಒಂದು ಜಾತಿ ನಿಗದಿ ಮಾಡುವುದು ಕಷ್ಟದ ಕೆಲಸ.ಈಗಿರುವ ಯಾವ ಜಾತಿಗಳ ಹೆಸರಿನಲ್ಲೂ ಅವರನ್ನು ಗುರುತಿಸಬಾರದು.ಅನಾಥಮಕ್ಕಳನ್ನು ‘ ವಿಶೇಷಪ್ರವರ್ಗ’ ಎಂದು ಗುರುತಿಸಬಹುದು.ಅವರನ್ನು ‘ ಶಿವಜಾತಿ’ ಯವರು ಎಂದು ಗುರುತಿಸಬಹುದು ಒಂದು ಜಾತಿ ಬೇಕೇಬೇಕು ಎಂದಿದ್ದರೆ.’ಶಿವಜಾತಿ’ ಎಂದು ಮಕ್ಕಳ ಜಾತಿ ನಿಗದಿ ಮಾಡುವುದರಿಂದ ಅವರಲ್ಲಿ ಅನಾಥ ಪ್ರಜ್ಞೆ ಮೂಡದೆ ತಾವು ಲೋಕಪ್ರಭುವಾದ ಶಿವನ ವಂಶಿಕರು ಎನ್ನುವ ಭಾವನೆ ಬೆಳೆಯುತ್ತದೆ.ಶಿವಜಾತಿಗೆ ಸೇರಿದವರು ಎಲ್ಲರೊಂದಿಗೂ ವ್ಯವಹರಿಸಲವಕಾಶವಿದೆ. ದೇವಸ್ಥಾನಗಳಲ್ಲಿ ಅರ್ಚನೆ,ವಿಶೇಷ ಪೂಜೆಯ ಸಂದರ್ಭಗಳಲ್ಲಿ ಗೋತ್ರ ಗೊತ್ತಿಲ್ಲದೆ ಇರುವವರನ್ನು ‘ ಶಿವಗೋತ್ರ’ದವರು ಎಂದು ಅರ್ಚಕರು ಗುರುತಿಸುತ್ತಾರೆ ಎನ್ನುವುದನ್ನು ಇಲ್ಲಿ ಗಮನಿಸಬಹುದು.ನಮ್ಮದು ಜಾತ್ಯಾತೀತ ರಾಷ್ಟ್ರವಾದ್ದರಿಂದ ಜಾತ್ಯಾತೀತ ಸಮಾಜ ನಿರ್ಮಾಣದ ಕೆಲಸವನ್ನು ಪ್ರಾಯೋಗಿಕವಾಗಿ ಅನಾಥ ಮಕ್ಕಳಿಂದಲೇ ಮಾಡಬಹುದು,ಅನಾಥಮಕ್ಕಳನ್ನು ‘ ನಿರ್ಜಾತಿ ( casteless ) ಎಂದು ಗುರುತಿಸುವ ಮೂಲಕ.ಇದು ಸೆಕ್ಯೂಲರ್ ಪ್ರಜ್ಞೆಯನ್ನು ಉಂಟುಮಾಡುವ ಪದವಾದ್ದರಿಂದ ಮತ್ತು ಯಾವುದೇ ಮತ,ಧರ್ಮಕ್ಕೆ ಸೇರದ ಪದವಾದ್ದರಿಂದ ‘ ನಿರ್ಜಾತಿ’ ಯನ್ನೂ ಪ್ರಯೋಗಿಸಬಹುದು.

ಅನಾಥ ಮಕ್ಕಳನ್ನು ‘ ಶಿವಜಾತಿ’ ಇಲ್ಲವೆ ‘ ನಿರ್ಜಾತಿ’ ಎಂದು ಗುರುತಿಸಿದಾಗಲೂ ಅವರಿಗೆ ಯಾವ ಜಾತಿಯ ಮೀಸಲಾತಿ ಕೊಡಬೇಕು ಎನ್ನುವ ಪ್ರಶ್ನೆ ಎದುರಾಗುತ್ತದೆ.ಆದ್ದರಿಂದ ‘ ವಿಶೇಷಪ್ರವರ್ಗ’ ( Special category )ಎಂದು ಗುರುತಿಸಿ ಅವರಿಗೆ ಪರಿಶಿಷ್ಟಜಾತಿ ಇಲ್ಲವೆ ಪರಿಶಿಷ್ಟ ಪಂಗಡ ಅಥವಾ ಪ್ರವರ್ಗ 1 A ಅಡಿಯಲ್ಲಿ ಮೀಸಲಾತಿಯನ್ನು ಕಲ್ಪಿಸಬೇಕು.ಅನಾಥ ಮಕ್ಕಳ ಸಂಖ್ಯೆ 6300 ಮಾತ್ರ ಇರುವುದರಿಂದ ಈ ಮೂರು ಪ್ರವರ್ಗಗಳಲ್ಲಿ ಯಾವುದೇ ಕೆಟಗರಿಯ ಮೀಸಲಾತಿ ನೀಡಿದರೆ ಆಯಾ ಸಮುದಾಯಗಳಿಗೆ ಅಂತಹ ಹೊರೆ ಏನೂ ಆಗದು.ಈಗಾಗಲೇ ಅನಾಥಪ್ರಜ್ಞೆಯನ್ನು ಅನುಭವಿಸುತ್ತಿರುವ ಮಕ್ಕಳ ಬದುಕುಗಳು ಕಮರದಂತೆ ನೋಡಿಕೊಳ್ಳಬೇಕಾದುದು ಸರಕಾರದ ಕರ್ತವ್ಯವಾಗಿರುವುದರಿಂದ ಅನಾಥಮಕ್ಕಳ ಹಿತದೃಷ್ಟಿಯಿಂದ ಯಾವ ಕೆಟಗರಿಯ ಮೀಸಲಾತಿ ಸೂಕ್ತವೆನ್ನಿಸುವುದೋ ಆ ಜಾತಿಯ ಮೀಸಲಾತಿ ನೀಡಬೇಕು.

‌ಇದರ ಜೊತೆಗೆ ಸರಕಾರವು ಇಂತಹ ಅನಾಥ ಮಕ್ಕಳ ಭವಿಷ್ಯ ರೂಪಿಸುವ ಹೊಣೆಹೊರಬೇಕು.ಅನಾಥ ಮಕ್ಕಳಿಗೆ ಶಿಕ್ಷಣ,ವಸತಿ ನೀಡುವುದರ ಜೊತೆಗೆ ಅವರಿಗೆ ಉದ್ಯೋಗಾವಕಾಶ ಕಲ್ಪಿಸಬೇಕು. ಸರಕಾರಿ ಉದ್ಯೋಗಗಳಲ್ಲಿ ವಿಕಲಚೇತನರಿಗೆ 3% ತೃತೀಯಲಿಂಗಿಗಳಿಗೆ 1% ಮೀಸಲಾತಿ ನೀಡಿದಂತೆ ಅನಾಥ ಮಕ್ಕಳುಗಳಿಗೂ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಬೇಕು.ಅನಾಥಮಕ್ಕಳ ಕಲ್ಯಾಣಕ್ಕಾಗಿ ಸಮಾಜ ಕಲ್ಯಾಣ ಇಲಾಖೆ ಇಲ್ಲವೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ‌ ಪ್ರತ್ಯೇಕ ಕೋಶ ಇಲ್ಲವೆ ನಿರ್ದೇಶನಾಲಯವನ್ನು ತೆರೆದು ಅನಾಥ ಮಕ್ಕಳನ್ನು ಸರಕಾರಿ ಬಾಲಮಂದಿರಗಳಿಗೆ ಸೇರಿಸುವುದರಿಂದ ಹಿಡಿದು ಅವರಿಗೆ ಉದ್ಯೋಗಾವಕಾಶ ಕಲ್ಪಿಸಿ ಕೊಡುವವರೆಗಿನ ಜವಾಬ್ದಾರಿಯನ್ನು ಈ ಕೋಶ ಇಲ್ಲವೆ ನಿರ್ದೇಶನಾಲಯಕ್ಕೆ ನೀಡಬೇಕು.ಅನಾಥಮಕ್ಕಳನ್ನು ಪೊರೆಯುವುದು ಸರ್ಕಾರದ ಆಸಕ್ತಿಯ ಮತ್ತು ಆದ್ಯತೆಯ ವಿಷಯವಾದರೆ ಕಮರಿಹೋಗುವ ಕುಸುಮಗಳು ಅರಳಿ ಸೌರಭ ಸೂಸುತ್ತವೆ.

ಮುಕ್ಕಣ್ಣ ಕರಿಗಾರ

೧೭.೧೧.೨೦೨೨