ಶಿವ ವಿಶ್ವೇಶ್ವರನೆದುರು ಮುಕ್ತರಾಗಿರುವುದೇ ಆನಂದದ ಮೂಲ – ಮುಕ್ಕಣ್ಣ ಕರಿಗಾರ

ಮಹಾಶೈವ ಮಾರ್ಗ

ಶಿವ ವಿಶ್ವೇಶ್ವರನೆದುರು ಮುಕ್ತರಾಗಿರುವುದೇ ಆನಂದದ ಮೂಲ

ಮುಕ್ಕಣ್ಣ ಕರಿಗಾರ

ಮಹಾಶೈವ ಧರ್ಮಪೀಠದ ‘ ಶ್ರೀಕ್ಷೇತ್ರ ಕೈಲಾಸ’ ದಲ್ಲಿ ಪ್ರತಿ ರವಿವಾರ ನಡೆಯುತ್ತಿರುವ ‘ ಶಿವೋಶಮನ ಕಾರ್ಯ’ ದಲ್ಲಿ ಭಕ್ತರ ಸಂಖ್ಯೆ ವಾರದಿಂದ ವಾರಕ್ಕೆ ಏರಿಕೆಯಾಗುತ್ತಿದೆ.ಭಕ್ತರ ಸಂಖ್ಯೆ ಎಷ್ಟೇ ಇರಲಿ,ಎಲ್ಲರ ಸಮಸ್ಯೆಗಳನ್ನು ಆಲಿಸಿ,ಪರಿಹರಿಸದೆ ಕಳಿಸಲಾರ ಲೋಕಪ್ರಭು ಶಿವ ವಿಶ್ವೇಶ್ವರ.ಮೊನ್ನೆ ನವೆಂಬರ್ ಹದಿಮೂರರ ‘ ಶಿವೋಪಶಮನ ಕಾರ್ಯ’ ದ ಫೋಟೋಗಳನ್ನು ವಾಟ್ಸಾಪ್ ಗುಂಪುಗಳಲ್ಲಿ ನೋಡಿದ ಮಹಾಶೈವ ಧರ್ಮಪೀಠದ ಬಗ್ಗೆ ನಿಷ್ಠೆ,ಶ್ರದ್ಧೆ,ಅಭಿಮಾನಗಳನ್ನುಳ್ಳ ಆತ್ಮೀಯರಾದ ಮಲ್ಲಿಕಾರ್ಜುನ ಬಾಗಲವಾಡ ಅವರು ‘ ಭಕ್ತರೆಲ್ಲರು ಒಟ್ಟಿಗೆ ಕುಳಿತುಕೊಳ್ಳುವುದರಿಂದ ಕೆಲವರಿಗೆ ಸಮಸ್ಯೆ ಕೇಳಲು ಮುಜುಗರವಾಗಬಹುದು.ಒಂದು ಕೋಣೆಯಲ್ಲಿ ವಿಚಾರಿಸಬಹುದಲ್ಲವೆ?’ ಎಂದು ಸಲಹೆ ನೀಡಿದ್ದಾರೆ.ಮಲ್ಲಿಕಾರ್ಜುನ ಬಾಗಲವಾಡ ಅವರಂತೆ ಕೆಲವರು ಈ ಸಲಹೆ ನೀಡಿದ್ದುಂಟು.

ಮಹಾಶೈವ ಧರ್ಮಪೀಠದಲ್ಲಿ ‘ ಶಿವೋಪಶಮನ ಕಾರ್ಯ’ ನಡೆಯುವುದು ಕ್ಷೇತ್ರೇಶ್ವರ ವಿಶ್ವೇಶ್ವರನ ಸನ್ನಿಧಿಯಲ್ಲಿ.ವಿಶ್ವೇಶ್ವರನಿಗೆ ಅಭಿಮುಖನಾಗಿ ಪೀಠಾಧ್ಯಕ್ಷನಾದ ನಾನು ಕುಳಿತು ಭಕ್ತರ ಸಮಸ್ಯೆಗಳನ್ನು ಶಿವನಿಗೆ ನಿವೇದಿಸುತ್ತೇನೆ.’ ಮಾತನಾಡುವ ಮಹಾದೇವ’ ನೆಂದೇ ಪ್ರಸಿದ್ಧನಾಗಿರುವ ವಿಶ್ವೇಶ್ವರ ಶಿವನು ಭಕ್ತರ ಸಮಸ್ಯೆಗಳಿಗೆ ಪರಿಹಾರ ಸೂಚಿಸುತ್ತಾನೆ.ಶಿವಾನುಗ್ರಹವನ್ನು ಭಕ್ತರಿಗೆ ಹಂಚುವುದಷ್ಟೇ ನನ್ನ ಕೆಲಸ,ಇದರಾಚೆಗೆ ಮತ್ತಾವ ಹಿರಿಮೆಯೂ ನನಗಿಲ್ಲ.ಬೇಡುವವರು ಭಕ್ತರು,ನೀಡುವವನು ವಿಶ್ವೇಶ್ವರ ಶಿವ.ಭಕ್ತರು ಮತ್ತು ಭಗವಂತನ ನಡುವೆ ಸಂಪರ್ಕಸೇತುವೆಯಾಗಿರುವ ನಾನು ಭಕ್ತರ ಸಮಸ್ಯೆಗಳನ್ನು ಶಿವನೆದುರು ಪ್ರಾರ್ಥಿಸಿ ಶಿವ ಸೂಚಿಸಿದ ಪರಿಹಾರ ಇಲ್ಲವೆ ಉಪಶಮನ ಕಾರ್ಯವನ್ನಷ್ಟೇ ಮಾಡುವುದು.’ಶಿವೋಪನ ಕಾರ್ಯ’ದ ಪ್ರೇರಕನು ಶಿವನು. ಇಲ್ಲಿ ಸಂಕಷ್ಟನಿವಾರಕನೂ ಶಿವನೆ; ಅಭೀಷ್ಟಪ್ರದಾಯಕನೂ ಶಿವನೆ.ಹಾಗಾಗಿ ಇಲ್ಲಿ ಎಲ್ಲವೂ ಶಿವನ ಸಮಕ್ಷಮದಲ್ಲೇ ನಡೆಯುತ್ತಿದೆ.ಕೇಳುವವರು ಶಿವನ ಸಾಕ್ಷಿಯಾಗಿ ಕೇಳುತ್ತಾರೆ; ಹೇಳುವವರು ಶಿವನ ಸಾಕ್ಷಿಯಾಗಿಯೇ ಹೇಳುತ್ತಾರೆ.ಹೀಗಿರುವಾಗ ಮುಜುಗರದ ಪ್ರಶ್ನೆ ಎಲ್ಲಿ? ಗೋಪ್ಯತೆಗೆ ಅವಕಾಶವಾದರೂ ಏಕಿರಬೇಕು? ಬಯಲಿಗೆ ಆಲಯದ ಹಂಗಿಲ್ಲ,ಮುಕ್ತತೆಗೆ ಶಂಕೆ- ಸಂದೇಹಗಳ ಅಳುಕಿಲ್ಲ.ಬಯಲಾಗದೆ ಬಯಲ ಆನಂದವನ್ನು ಸವಿಯಲಾಗದು.ಮುಚ್ಚಿಡಬಾರದು,ಬಿಚ್ಚು ಮನಸ್ಸಿನಿಂದ ನಿವೇದಿಸಿಕೊಳ್ಳಬೇಕು ಅಭವ ಶಿವನೆದುರು ಭವದ ಪರಿಭವ- ಬವಣೆಗಳನ್ನು.

ಶಿವ ವಿಶ್ವೇಶ್ವರ ಸನ್ನಿಧಿಯಲ್ಲಿ ಎಲ್ಲರೂ ಸಮಾನರೆ! ಇಲ್ಲಿ ಯಾವ ತರತಮಗಳಿಗೂ ಅವಕಾಶವಿಲ್ಲ.ಇಲ್ಲಿ ಯಾರಿಗೂ ಶ್ರೇಷ್ಠರೆಂದು ವಿಶೇಷ ಮನ್ನಣೆ ನೀಡುವುದಿಲ್ಲ; ಯಾರನ್ನೂ ಕನಿಷ್ಟರೆಂದು ಕಡೆಗಣಿಸುವುದಿಲ್ಲ.ಅವರವರ ಸರತಿ ಬಂದಾಗ ಅವರವರ ಸಮಸ್ಯೆಗೆ ಪರಿಹಾರ ನೀಡಲಾಗುತ್ತದೆ.’ ಲೋಕದ ಜೀವರುಗಳೆಲ್ಲ ಒಂದೇ,ಶಿವನೇ ಎಲ್ಲರ ತಂದೆ’ ಎನ್ನುವ ಮಹಾಶೈವ ಧರ್ಮದ ‘ ಘೋಷವಾಕ್ಯ’ ವೇ ಮಹಾಶೈವ ಧರ್ಮಪೀಠದ ಎಲ್ಲ ಕೆಲಸ- ಕಾರ್ಯಗಳ ಹಿನ್ನೆಲೆಯ ಮೂಲತತ್ತ್ವವಾಗಿರುತ್ತದೆ.ಶಿವ ವಿಶ್ವೇಶ್ವರನ ಸನ್ನಿಧಿಯನ್ನರಸಿ ಬರುವವರಿಗೆ ‘ಶಿವಸರ್ವೋತ್ತಮ,ಲೋಕಸಮಸ್ತರೆಲ್ಲರು ಸಮರು ಶಿವಸನ್ನಿಧಿಯಲ್ಲಿ’ ಎನ್ನುವ ಸಂದೇಶವನ್ನು ಮೊದಲೇ ಮನದಟ್ಟು ಮಾಡಿ ಕೊಡುತ್ತಾರೆ ಮಹಾಶೈವ ಧರ್ಮಪೀಠದ ಕಾರ್ಯಕರ್ತರು.ಕ್ಷೇತ್ರವನ್ನು ಪ್ರವೇಶಿಸುತ್ತಿದ್ದಂತೆ ಇಲ್ಲಿ ಸಮತೆಯ,ಶಿವಪೂರ್ಣತೆಯ ಆನಂದೋನ್ಮಾದ ಶಿವಶಕ್ತಿತರಂಗಗಳು ಸ್ಫೂರ್ತಿಗೊಳಿಸುತ್ತವೆ,ಶಿವಸರ್ವೋದಯ ಭಾವಪ್ರದೀಪ್ತರನ್ನಾಗಿಸುತ್ತವೆ.

ಮಹಾಶೈವ ಧರ್ಮಪೀಠವು ಜನಸಾಮಾನ್ಯರ ಮಠ,ಲೋಕಸಮಸ್ತರ ಕಲ್ಯಾಣ ಕ್ಷೇತ್ರವಾಗಿರುವುದರಿಂದ ಇಲ್ಲಿ ಬಡವರು- ಶ್ರೀಮಂತರು ಎನ್ನುವ ಭೇದವಿಲ್ಲ.ಉಚ್ಚ- ನೀಚರೆಂಬ ತರತಮಕ್ಕವಕಾಶವಿಲ್ಲ.ಶಿವನು ತನ್ನ ಸನ್ನಿಧಿಗೆ ಬರುವವರೆಲ್ಲರಿಗೂ ಉದ್ಧಾರದ,ಉನ್ನತಿಯ ಅಭಯ ನೀಡಿರುವುದರಿಂದ ಎಲ್ಲರೂ ವಿಶ್ವನಿಯಾಮಕ ವಿಶ್ವೇಶ್ವರನ ನಿಯಮಗಳಿಗೆ ತಲೆಬಾಗಲೇಬೇಕು.

‘ ಶಿವೋಪಶಮನ ಕಾರ್ಯ’ ವು ವಿಶ್ವೇಶ್ವರಶಿವನ ಲೋಕಾನುಗ್ರಹವಿಶೇಷವಾಗಿರುವುದರಿಂದ ಇಲ್ಲಿ ಯಾವುದೇ ಶುಲ್ಕ,ಪಾವತಿಗಳಿಗೆ ಅವಕಾಶವಿಲ್ಲ.ಪೀಠಾಧ್ಯಕ್ಷರಿಗೆ ಕಾಣಿಕೆ- ಕೊಡುಗೆಗಳನ್ನು ನೀಡುವಂತೆಯೂ ಇಲ್ಲ.ಶಿವ ದುರ್ಗಾದೇವಿಯರಿಗೆ ಕಾಯಿ ಒಡೆಯುವ ಕಡ್ಡಾಯನಿಯಮದ ಹೊರತು ಇಲ್ಲಿ ಯಾವ ಶುಲ್ಕವೂ ಇಲ್ಲ.ಭಕ್ತರು ಹೆಚ್ಚೆಂದರೆ ಮಠದಲ್ಲಿ‌ ಪ್ರತಿ ಭಾನುವಾರ ನಡೆಯುವ ಅನ್ನದಾಸೋಹಕ್ಕಾಗಿ ಕಾಣಿಕೆ ನೀಡಬಹುದು,ಕೊಡುಗೆಗಳನ್ನು ಸಮರ್ಪಿಸಬಹುದು.

ಒಂದು ವೇಳೆ ಒಂದು ಕೋಣೆಯಲ್ಲಿ ಭಕ್ತರನ್ನು ಪ್ರತ್ಯೇಕವಾಗಿ ವಿಚಾರಿಸತೊಡಗಿದರೆ ಏನಾಗಬಹುದು? ಶಿವವಿಶ್ವೇಶ್ವರನ ಸರ್ವೇಶ್ವರ ತತ್ತ್ವ ಮರೆಯಾಗಿ ಪೀಠಾಧ್ಯಕ್ಷರ ಪವಾಡ ತತ್ತ್ವ ಮೆರೆಯುತ್ತದೆ.ಪೀಠಾಧ್ಯಕ್ಷರ ವ್ಯಕ್ತಿತ್ವದ ಬಗ್ಗೆ ‘ ವಿಶೇಷ ಕಳೆ’ ಕಟ್ಟಲಾಗುತ್ತದೆ.ಹಾಗೆಯೇ ಸಂಶಯದ ಹುತ್ತವೂ ಬೆಳೆಯುತ್ತದೆ.ಒಳಗೆ ಪ್ರತ್ಯೇಕವಾಗಿ ಕರೆದಾಗ ಪ್ರತಿಷ್ಠಿತರಿಗೊಂದು ಸಾಮಾನ್ಯರಿಗೊಂದು ಉಪಚಾರ,ಉಪಶಮನ ಇರಬಹುದೆ ಎನ್ನುವ ಪ್ರಶ್ನೆ ಭಕ್ತ ಜನರನ್ನು ಕಾಡುತ್ತದೆ.ಕಾಣಿಕೆ- ದೇಣಿಗೆಗಳನ್ನು ನೀಡಿ ಪೀಠಾಧ್ಯಕ್ಷರನ್ನು ‘ ಖರೀದಿಸಬಹುದೆ?’ ಎನ್ನುವ ಆಲೋಚನೆಯೂ ಮೂಡಬಹುದು ಉಳ್ಳವರಲ್ಲಿ.ಒಳಗೆ ಏನು ನಡೆಯುತ್ತದೋ,ಯಾರು ಬಲ್ಲರು! ಇಂತಹ ಯಾವ ಸಂದೇಹ- ಗೊಂದಲಗಳು ಉಂಟಾಗದೆ ಇರಲಿ,ಇಲ್ಲಿ ನಡೆಯುವುದೆಲ್ಲ ಶಿವನ ಸಾಕ್ಷಿಯಾಗಿಯೇ ನಡೆಯಲಿ ಎನ್ನುವ ಕಾರಣದಿಂದ ಎಲ್ಲರನ್ನು ಒಟ್ಟಿಗಿಟ್ಟುಕೊಂಡೇ ನಡೆಸಲಾಗುತ್ತಿದೆ ‘ ಶಿವೋಪಶಮನ ಕಾರ್ಯ’ ವನ್ನು.

ಮಹಾಶೈವ ಧರ್ಮಪೀಠಕ್ಕೆ ನಾನಾ ಬಗೆಯ ಸಮಸ್ಯೆಗಳನ್ನು ಹೊತ್ತು ಬರುತ್ತಾರೆ ಭಕ್ತರು.ಬಹಳಷ್ಟು ಜನ ಭಕ್ತರು ಬರುವುದು ಸಂತಾನಾಪೇಕ್ಷೆಯಿಂದ,ಅನಾರೋಗ್ಯ- ಅನಿಷ್ಟಗಳಿಂದ ಪಾರಾಗಲು,ಕುಟುಂಬದ ಸಮಸ್ಯೆ- ಸಂಕಷ್ಟಗಳನ್ನು ಪರಿಹರಿಸಿಕೊಳ್ಳಲು,ದುಃಖ- ದಾರಿದ್ರ್ಯಗಳಿಂದ ಮುಕ್ತರಾಗಲು.ಈ ಸಮಸ್ಯೆಗಳು ಲೋಕಸಮಸ್ತರ ಸಾಮಾನ್ಯ ಸಮಸ್ಯೆಗಳೆ.ಇದರಲ್ಲಿ ರಹಸ್ಯ ಏನಿದೆ? ಮುಚ್ಚಿಟ್ಟುಕೊಳ್ಳುವುದು ಏನಿದೆ? ತೀರಖಾಸಗಿ ಸಮಸ್ಯೆಗಳಿದ್ದರೆ ನಂತರ ಹೇಳಲು ಸೂಚಿಸಲಾಗುತ್ತಿದೆ.ಶಿವನ‌ ಸನ್ನಿಧಿಯಲ್ಲಿ ಸಮಸ್ಯೆಗಳನ್ನು ನಿವೇದಿಸಿಕೊಂಡು ಹಗುರವಾಗುವುದು ನೆಮ್ಮದಿಯನ್ನುಂಟು ಮಾಡುತ್ತದೆ.ವಿಶ್ವಪತಿ ಶಿವನು ಸರ್ವಾಂತರ್ಯಾಮಿಯಾಗಿರಲು,ಸರ್ವಜ್ಞನಾಗಿರಲು ನಾವು ಪಾರದರಶಕತೆಯನ್ನು ಕಾಪಾಡಿಕೊಳ್ಳಬೇಕಲ್ಲವೆ?

ಮುಕ್ಕಣ್ಣ ಕರಿಗಾರ

‌೧೬.೧೧.೨೦೨೨