‘ ಮೂಲಾ ನಕ್ಷತ್ರದಲ್ಲಿ ಹುಟ್ಟಿದವರು ಮುಳುವಾಗುವುದಿಲ್ಲ,ಮಹಾನ್ ವ್ಯಕ್ತಿಗಳಾಗುತ್ತಾರೆ ! ಮುಕ್ಕಣ್ಣ ಕರಿಗಾರ

ಮೂರನೇ ಕಣ್ಣು

ಮೂಲಾ ನಕ್ಷತ್ರದಲ್ಲಿ ಹುಟ್ಟಿದವರು ಮುಳುವಾಗುವುದಿಲ್ಲ,ಮಹಾನ್ ವ್ಯಕ್ತಿಗಳಾಗುತ್ತಾರೆ !

ಮುಕ್ಕಣ್ಣ ಕರಿಗಾರ

ಮೂಲಾ ನಕ್ಷತ್ರದಲ್ಲಿ ಮಗು ಹುಟ್ಟಿದೆ ಎನ್ನುವ ಕಾರಣಕ್ಕೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಮಂಜುನಾಥ ಬಡಾವಣೆಯ ನಿವಾಸಿ ವಿನಯ್ ಎನ್ನುವವರು ತನ್ನ ಹೆಂಡತಿ ಶ್ರುತಿ ಮತ್ತು ಗಂಡು ಮಗುವನ್ನು ಮನೆಯೊಳಗೆ ಬಿಟ್ಟುಕೊಳ್ಳದೆ ಹೊರಹಾಕಿದ ಸುದ್ದಿ ‘ ಪ್ರಜಾವಾಣಿ’ಯ ಇಂದಿನ(ನವೆಂಬರ್,04,2022) ಸಂಚಿಕೆಯ ( ಬೆಂಗಳೂರು ಆವೃತ್ತಿ)ಮುಖಪುಟದಲ್ಲಿ ಪ್ರಕಟಗೊಂಡು ರಾಜ್ಯಮಟ್ಟದ ಮಹತ್ವದ ಸುದ್ದಿಯಾಗಿದೆ.ಘಟನೆಯನ್ನು ವಿರೋಧಿಸಿ ಶ್ರುತಿ ಅವರು ರಾಮನಗರ ಮಹಿಳಾ ಪೋಲೀಸ್ ಠಾಣೆಯಲ್ಲಿ ತನ್ನ ಪತಿ ವಿನಯ್ ಮಾವ ಅತ್ತೆಯರಾದ ಗಂಗಾಧರ ಆಚಾರ್,ಶಕುಂತಲಾ ಮತ್ತು ನಾಗರತ್ನ ಎನ್ನುವ ಮಹಿಳೆಯರ ವಿರುದ್ಧ ದೂರು ದಾಖಲಿಸಿದ್ದನ್ನು ‘ಪ್ರಜಾವಾಣಿ’ ಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.’ಮೂಲಾ’ ನಕ್ಷತ್ರದಲ್ಲಿ ಗಂಡು ಮಗು ಜನಿಸಿದರೆ ತಂದೆ ಮತ್ತು ವಂಶಸ್ಥರಿಗೆ ಕೇಡು ಎನ್ನುವ ಮೂಢ ನಂಬಿಕೆಯೊಂದು ಬೇರೂರಿರುವುದರಿಂದ ಇಂತಹ ಮೂಢನಂಬಿಕೆಯಲ್ಲಿ ಗಾಢನಂಬಿಕೆಯನ್ನಿಟ್ಟಿರುವ ವಿನಯ್ ಎನ್ನುವ ವ್ಯಕ್ತಿ ಹೆಂಡತಿ ಮತ್ತು ಗಂಡು ಮಗುವನ್ನು ಮನೆಯಿಂದ ಹೊರ ಅಟ್ಟುವ ಅಮಾನುಷ ಕೃತ್ಯ ಎಸಗಿದ್ದಾರೆ.

ಹೊಟ್ಟೆಪಾಡಿನ ಜ್ಯೊತಿಷಿಗಳು ಬಿತ್ತುವ ಅರ್ಥಹೀನ ಮೂಢನಂಬಿಕೆಗಳಿಂದ ಎಷ್ಟೋ ಕುಟುಂಬಗಳು ಹಾಳಾಗಿವೆ,ಹಾಳಾಗುತ್ತಲೂ ಇವೆ ಎನ್ನುವುದಕ್ಕೆ ವಿನಯ್ ಪ್ರಕರಣ ಇತ್ತೀಚಿನ ಸಾಕ್ಷಿಯಾಗಿದೆ.ಮೂಲಾ ನಕ್ಷತ್ರದಲ್ಲಿ ಹುಟ್ಟಿದ ಗಂಡುಮಗು ಕುಟುಂಬಕ್ಕೆ ಮುಳುವಾಗುತ್ತದೆ ಎನ್ನುವ ಸಂಗತಿಯು ಜ್ಯೋತಿಷ ಮತ್ತು ಪಂಚಾಂಗಗಳಲ್ಲಿ ಉಲ್ಲೇಖಿಸಲ್ಪಟ್ಟಿದ್ದು ಜಾತಕಬರೆಯುವ ಜ್ಯೋತಿಷಿಗಳು ಅದನ್ನು ದೊಡ್ಡದೋಷ,ಪರಿಹಾರವಿಲ್ಲದ ದೋಷ ಎಂಬಂತೆ ಬೊಗಳೆ ಹೊಡೆಯುವುದರಿಂದ ಮುಗ್ಧ ಜನರು ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ.ಮೂಲಾ ನಕ್ಷತ್ರದಲ್ಲಿ ಹುಟ್ಟಿದ ಮಗು ಮನೆತನಕ್ಕೆ ಮುಳುವಾಗುವುದಿಲ್ಲ ವಂಶದ ಕೀರ್ತಿಯನ್ನು ಎತ್ತಿ ಹಿಡಿಯುತ್ತಾನೆ ಎನ್ನುವುದಕ್ಕೆ ಮಹಾಕವಿ ಕುವೆಂಪು ಅವರೇ ನಿದರ್ಶನ.ಕುವೆಂಪು ಅವರು ಹುಟ್ಟಿದ್ದು ಮೂಲಾ ನಕ್ಷತ್ರದಲ್ಲಿಯೆ! ಕುವೆಂಪು ಅವರಿಂದಾಗಿ ವೆಂಕಟಪ್ಪಗೌಡರ ಮನೆತನ ವಿಶ್ವಪ್ರಸಿದ್ಧಿಯಾಯಿತು.ಮೂಲಾ ನಕ್ಷತ್ರದಲ್ಲಿ ಹುಟ್ಟಿದ್ದ ಪುಟ್ಟಪ್ಪ ಕುವೆಂಪು ಎನ್ನುವ ಮಹಾಕವಿಯಾಗಿ,ಋಷಿಯಾಗಿ,ದಾರ್ಶನಿಕರಾಗಿ ಜಗದ್ವಂದ್ಯರಾದರು.ಪುಸ್ತಕದಲ್ಲಿ ಇದ್ದುದೆಲ್ಲ ಸತ್ಯವೆಂದು ಭ್ರಮಿಸಿ,ಗಳಹುವ ಜ್ಯೋತಿಷಿಗಳು ಕುವೆಂಪು ಅವರ ಬದುಕು,ಸಾಧನೆ- ಸಿದ್ಧಿಗಳ ಬಗ್ಗೆ ತಿಳಿದುಕೊಳ್ಳಬೇಕು.

ಜನಸಾಮಾನ್ಯರಲ್ಲಿ ಜ್ಯೋತಿಷದ ಬಗ್ಗೆ ವಿಪರೀತ ಭಯದ ಭಾವನೆ ಇದೆ.ಟಿ ವಿ ವಾಹಿನಿಗಳು ತಮ್ಮ ವ್ಯಾಪಾರಿ ಹಿತಾಸಕ್ತಿಯನ್ನು ಪೊರೆಯಲು ಜನರ ಅಜ್ಞಾನ ಮತ್ತು ಮುಗ್ಧತೆಯನ್ನು ದುರ್ಬಳಕೆ ಮಾಡಿಕೊಂಡು ನಿತ್ಯ ಬೆಳಗಾದರೆ ಜ್ಯೋತಿಷವನ್ನು ಪ್ರಚಾರ ಮಾಡುತ್ತಿರುವುದರಿಂದ,ತಮ್ಮ ಬದುಕು- ಸಾವುಗಳನ್ನೇ ತಾವು ಅರಿಯದ ‘ ಗುರು’ ಶಬ್ದದ ಅರ್ಥವೂ ತಿಳಿಯದ ಆ ಈ ಹುಸಿಗುರುಗಳ ಅಬ್ಬರದ ಭವಿಷ್ಯವಾಣಿಗೆ ಬೆದರಿ,ಭ್ರಮಿತರಾಗುತ್ತಿದ್ದಾರೆ ಮುಗ್ಧ ಜನಕೋಟಿ.ಜ್ಯೋತಿಷದ ಬಗ್ಗೆ ಬಹಳ ಅದ್ಭುತವಾಗಿ ಬಣ್ಣಿಸುತ್ತಾರೆ ಶಾಸ್ತ್ರಿಗಳು.ಜ್ಯೋತಿಷವನ್ನು ನಂಬಿಯೇ ಹೊಟ್ಟೆಹೊರೆಯಬೇಕಾದ ಮಂದಿಗೆ ಇದು ಅನಿವಾರ್ಯ.ಆದರೆ ಜನರು ಜ್ಯೋತಿಷ ಒಂದು ಪರಂಪರಾಗತ ವಿದ್ಯೆ ಇಲ್ಲವೆ ಶಾಸ್ತ್ರವಾಗಿದ್ದರೂ ಅದು ಸಂಪೂರ್ಣ ಸತ್ಯವಲ್ಲ,ಜ್ಯೋತಿಷವೇ ಬದುಕಲ್ಲ,ಜ್ಯೋತಿಷವನ್ನು ನಂಬದೆ ಬದುಕಬಹುದು ಎನ್ನುವುದು ತಿಳಿದಿಲ್ಲ.ಪ್ರಪಂಚವನ್ನು ಸೃಷ್ಟಿಸಿದ್ದು ಪರಮಾತ್ಮನೇ ಹೊರತು ಜ್ಯೋತಿಷಿಗಳಲ್ಲ,ಶಾಸ್ತ್ರಿಗಳಲ್ಲ.ಪ್ರಪಂಚವು ಪರಮಾತ್ಮನ ವಿಶ್ವನಿಯಾಮಕ ನಿಯತಿ ಮತ್ತು ವಿಶ್ವಸಂಕಲ್ಪವನ್ನುನುಸರಿಸಿ ನಡೆಯುತ್ತದೆ.ಪರಮಾತ್ಮನು ಜಗತ್ತನ್ನು,ಜೀವರುಗಳನ್ನು ಹುಟ್ಟಿಸುವಾಗ ಯಾವ ಜ್ಯೋತಿಷಗಳ ಬಳಿ ಶಾಸ್ತ್ರಕೇಳುವುದಿಲ್ಲ.ಪರಮಾತ್ಮನೇ ಈ ಜ್ಯೋತಿಷಿಗಳನ್ನು ಹುಟ್ಟಿಸಿ ಅವರಿಗೂ ‘ ಹಣೆಬರಹ’ ನಿರ್ಧರಿಸಿದ್ದಾನೆ.ತಮ್ಮ ‘ ಹಣೆಬರಹವನ್ನೇ’ ತಾವು ಅರಿಯದ ಜ್ಯೋತಿಷಿಗಳು ಜನರ,ಜಗತ್ತಿನ ಭವಿಷ್ಯ ನಿರ್ಧರಿಸುತ್ತಾರೆ!

ಬದುಕುಪೂರ್ವ ನಿರ್ಧಾರಿತವಾದುದು.ಪ್ರಪಂಚದಲ್ಲಿ ಮನುಷ್ಯರ ಬದುಕು ಸೇರಿದಂತೆ ವಿಶ್ವವ್ಯವಹಾರವು ನಿಶ್ಚಿತವಾದ,ಪೂರ್ವನಿರ್ಧಾರಿತವಾದ ನಿಯತಿ ನಿಯಮಗಳಿಗೆ ಅನುಗುಣವಾಗಿ ನಡೆಯುತ್ತದೆ.ಮನುಷ್ಯರು ಸೇರಿದಂತೆ ಪ್ರಾಣಿ ಪಕ್ಷಿಗಳು ಹುಟ್ಟುವುದು,ಬೆಳೆಯುವುದು ಮತ್ತು ಸಾಯುವುದು ವಿಶ್ವನಿಯತಿನಿಯಮಕ್ಕನುಗುಣವಾಗಿ.ಮನುಷ್ಯರು ಯಾರೂ ಇಂಥಲ್ಲಿಯೇ ಹುಟ್ಟಬೇಕು,ಇಂಥ ಕುಲಗೋತ್ರಗಳಲ್ಲಿ ಹುಟ್ಟಬೇಕು,ಈ ಮುಹೂರ್ತದಲ್ಲೇ ಹುಟ್ಟಬೇಕು ಎಂದು ಅರ್ಜಿ ಹಾಕಿ ಹುಟ್ಟುವುದಿಲ್ಲ.ಹುಟ್ಟು ಸಾವುಗಳು ಮನುಷ್ಯರ ಕೈಯಲ್ಲಿ ಇಲ್ಲ.ಪರಮಾತ್ಮನು ನಿರ್ಧರಿಸಿದ ಹುಟ್ಟಿನ ಗುಟ್ಟನ್ನು ಜ್ಯೋತಿಷಿಗಳು,ಶಾಸ್ತ್ರಿಗಳು ಹೇಗೆ ಅರ್ಥೈಸಿಕೊಳ್ಳುತ್ತಾರೆ?ಜೀವರು ಹುಟ್ಟಿದ ಬಳಿಕ ಗ್ರಹಗತಿಗಳನ್ನು ನೋಡಿ ಜಾತಕ ಬರೆಯುವ ಜ್ಯೋತಿಷಿಗಳು ಮರೆತಿದ್ದಾರೆ ತಮ್ಮ ಶಾಸ್ತ್ರಕ್ಕೆ ಆಧಾರವಾದ ಗ್ರಹಗಳನ್ನು ಹುಟ್ಟಿಸಿದವನೂ ಪರಮಾತ್ಮನೆ ಎನ್ನುವ ಪರಮಸತ್ಯವನ್ನು.ಗ್ರಹಗಳು ಜಗತ್ತಿನ ಜೀವರುಗಳ ಗತಿನಿರ್ಧಾರಕ ಶಕ್ತಿಗಳು ಎಂದು ನಂಬುವ ಜ್ಯೋತಿಷಿಗಳು ವಿಶ್ವೇಶ್ವರನೂ ಸರ್ವೇಶ್ವರನೂ ಆದ ಪರಮೇಶ್ವರ ಶಿವನು ವಿಶ್ವನಿಯಾಮಕ ಎನ್ನುವ ಆತ್ಯಂತಿಕ ಸತ್ಯವನ್ನು ಅರ್ಥ ಮಾಡಿಕೊಳ್ಳುವುದಿಲ್ಲ.ಶನಿಗ್ರಹವಾಗಲಿ,ಕುಜಗ್ರಹವಾಗಲಿ ಇಲ್ಲವೆ ರಾಹು- ಕೇತುಗಳಾಗಿರಲಿ ಆ ಗ್ರಹಗಳು ಎಷ್ಟೇ ಬಲಿಷ್ಠರಿದ್ದರೂ ವಿಶ್ವೇಶ್ವರ ಶಿವನ ವಿಶ್ವನಿಯಮಕ್ಕೆ ಆಧೀನರಾಗಿಯೇ ಕರ್ತವ್ಯ ನಿರ್ವಹಿಸುತ್ತಿರುವ ಲೋಕಪ್ರಭು ಶಿವನ ಆಜ್ಞಾಧಾರಕರು ಮಾತ್ರ ಎನ್ನುವುದನ್ನು ತಿಳಿದುಕೊಳ್ಳಬೇಕು.ಪರಮಾತ್ಮನಿಗಿಂತಲೂ ಮಿಗಿಲಾದ ಮತ್ತೊಂದು ಶಕ್ತಿ ಇಲ್ಲ ಜಗತ್ತಿನಲ್ಲಿ.ಪರಮಾತ್ಮನ ಇಚ್ಛೆ ಮತ್ತು ಸಂಕಲ್ಪಕ್ಕನುಗುಣವಾಗಿ ಹುಟ್ಟುವ ಮನುಷ್ಯರು ತಮ್ಮ ಕಷ್ಟ ಸುಖಗಳಿಗಾಗಿ ಪರಮಾತ್ಮನನ್ನೇ ಪ್ರಾರ್ಥಿಸಬೇಕು,ಪೂಜಿಸಬೇಕು.ತನ್ನಿಂದ ಸೃಷ್ಟಿಗೊಂಡ ಪ್ರಪಂಚವನ್ನು ತನ್ನ ಇಷ್ಟದಂತೆ ನಡೆಸಬಲ್ಲನಾದ್ದರಿಂದ ಪರಮಾತ್ಮನು ‘ ಸರ್ವಶಕ್ತ’ ಎಂದು ಬಿರುದುಗೊಂಡಿದ್ದಾನೆ.ಸರ್ವಶಕ್ತನೂ ಸರ್ವಜ್ಞನೂ ಸರ್ವಾಂತರ್ಯಾಮಿಯೂ ಆಗಿರುವ ಪರಮಾತ್ಮನನ್ನು ಆಶ್ರಯಿಸಿದರೆ ಎಲ್ಲ ದೋಷಗಳೂ ಪರಿಹಾರವಾಗುತ್ತವೆ,ಅನಿಷ್ಟಗಳೆಲ್ಲ ಇಷ್ಟಗಳಾಗಿ ಪರಿವರ್ತನೆಯಾಗುತ್ತವೆ.ಜ್ಯೋತಿಷಿಗಳ ‘ ಶಾಸ್ತ್ರ’ ನಂಬುವುದಕ್ಕಿಂತ ಪರಮಾತ್ಮನಲ್ಲಿ ‘ ಭಕ್ತಿ’ ಯನ್ನು ಬೆಳೆಸಿಕೊಳ್ಳಬೇಕು.’ ಭಕ್ತಿಯೇ ಮುಕ್ತಿಯ ಸಾಧನ’ ಎನ್ನುತ್ತಾರಲ್ಲ; ಮುಕ್ತಿ ಎಂದರೆ ಜ್ಯೋತಿಷವಾದಿ ಮನುಷ್ಯನಿರ್ಮಿತ ಶಾಸ್ತ್ರಗಳ ಭಾಧೆಗಳಿಂದಲೂ ಬಿಡುಗಡೆ ಎಂದರ್ಥ.ದೇವರನ್ನು,ಪರಮಾತ್ಮನನ್ನು ನಂಬುವವರಿಗೆ ಜ್ಯೋತಿಷವಾದಿ ಯಾವ ಶಾಸ್ತ್ರಗಳ ಹಂಗು- ಅಳುಕುಗಳಿಲ್ಲ.ಪರಮಾತ್ಮನ ಸಂಕಲ್ಪದಂತೆ ಹುಟ್ಟಿದ ಜಗತ್ತಿನಲ್ಲಿ ಶುಭದಿನ- ಆಶುಭದಿನ,ಶುಭ ಮುಹೂರ್ತ-ಅಶುಭ ಮುಹೂರ್ತಗಳೆಂದು ಇಲ್ಲ.ಎಲ್ಲ ದಿನಗಳು ಶುಭದಿನಗಳೆ! ಎಲ್ಲ ಕ್ಷಣಗಳು ಶುಭ ಕ್ಷಣಗಳೆ! ಗ್ರಹ- ನಕ್ಷತ್ರ,ನಿಹಾರಿಕೆಗಳು ಪರಮಾತ್ಮನ ವಿಶ್ವಸೂತ್ರದಂತೆ ಕಾರ್ಯನಿರ್ವಹಿಸುವ ಖಗೋಳಕಾಯಗಳು.ಈ ಖಗೋಳ ಕಾಯಗಳ ಚಲನವಲನಗಳನ್ನೇ‌ ಅತಿಯಾಗಿ ನಂಬಿ ಬಳಲುತ್ತಿದ್ದಾನೆ ಭೂಗೋಳದ ಮನುಷ್ಯ.

ಪರಮಾತ್ಮನೂ ಜಗನ್ನಿಯಾಮಕನೂ ಆಗಿರುವ ವಿಶ್ವೇಶ್ವರ ಶಿವನನ್ನು ನಂಬಿ ನಡೆಯೆ ಯಾವ ಗ್ರಹವೂ ಏನನ್ನೂ ಮಾಡದು.ಸಕಲದೋಷನಿವಾರಕನಾದ ಭವಾನಿಪತಿಯನ್ನು ನಂಬಿ,ಪೂಜಿಸೆ ಯಾವ ನಕ್ಷತ್ರ ದೋಷವು ಏನನ್ನೂ ಮಾಡದು.ಹದಿನಾರು ವರ್ಷಗಳ ಅಲ್ಪಾಯುವಾಗಿದ್ದ ಮೃಕಂಡುಋಷಿಪುತ್ರ ಶಿವೋಪಾಸನೆಯಿಂದ ಬ್ರಹ್ಮನ ವಿಧಿಲಿಖಿತವನ್ನಳಿಸಿ ಯಮನನ್ನೇ ಗೆದ್ದು ಚಿರಂಜೀವಿಯಾದ,ಅಮರನಾದ ಎನ್ನುವುದು ವಿಶ್ವೇಶ್ವರ ಶಿವನ ಸರ್ವೇಶ್ವರತತ್ತ್ವಸೂಚಕ ಪ್ರಸಂಗ.ಶಿವೋಪಾಸನೆಯಿಂದ ಅಪಮೃತ್ಯು,ಅರಿಷ್ಟ,ದುಷ್ಟಗ್ರಹಬಾಧೆಗಳಾದಿ ಸಕಲಪೀಡಾಮುಕ್ತರಾಗಬಹುದಾದ್ದರಿಂದ ಜ್ಯೋತಿಷವಾದಿ ಶಾಸ್ತ್ರಗಳನ್ನು ನಂಬಿ ಕೆಡದೆ ಶಿವಸರ್ವೋತ್ತಮನೆಂಬ ಸೂತ್ರವನ್ನು ನಂಬಿ ನಡೆಯೆ ಉದ್ಧಾರವಿಹುದು,ಮೋಕ್ಷಸಿದ್ಧಿಯೂ ಉಂಟು

ಮುಕ್ಕಣ್ಣ ಕರಿಗಾರ

೦೪.೧೧.೨೦೨೨