ಕಾವ್ಯಲೋಕ: ದೀಪಕ್ ಶಿಂಧೆ ಅವರ ಕವನ ‘ ನೆನಪುಗಳಿಗೆ ಸಾವಿಲ್ಲ’

ನೆನಪುಗಳಿಗೆ ಸಾವಿಲ್ಲ

     -ದೀಪಕ್ ಶಿಂಧೆ

ಒಂದು ಕ್ಷಣವೂ ಯೋಚಿಸಬೇಡ ಗೆಳೆಯ
ನಿನಗೆ ಏನು ಮಾಡುವದಿದೆಯೋ ಅದನ್ನ ಈ ಕೂಡಲೇ ಮಾಡಿಬಿಡು.

ಯೋಚಿಸುತ್ತ ಕೂಡುವಷ್ಟು ಸಮಯ ಈಗ ಯಾರಿಗೂ ಇಲ್ಲ ಗೆಳೆಯ
ಎಲ್ಲಿಗೆ ತಲುಪಬೇಕೋ ಅಲ್ಲಿಗೆ ಕೂಡಲೇ ಹೊರಟು ಬಿಡು.

ಯೋಚಿಸಬೇಡ ಒಂದು ಕ್ಷಣವೂ ಮಾತನಾಡುವದಕ್ಕೆ
ಎಲ್ಲ ಮಾತುಗಳೂ ಹೃದಯದಿಂದ ಬರಬೇಕಂತೆನೂ ಇಲ್ಲ ಕೆಲವೊಮ್ಮೆ ಎನನ್ನೂ ಯೋಚಿಸದೆಯೆ ಮಾತನಾಡಿಬಿಡು.

ಒಂದು ಕ್ಷಣವೂ ಯೋಚಿಸಬೇಡ ಗೆಳೆಯ ನಾಳೆ ಏನಾಗುವದೋ ಎಂದು.
ಮಲಗಿದವರು ಎದ್ದೇಳುವ ಭರವಸೆಗಳಿಲ್ಲದ ದಿನಗಳಿವು ಸಾಧ್ಯವಾದರೆ ಈ ಸಮಯವನ್ನಷ್ಟೇ ನಿನ್ನದಾಗಿಸಿಕೊಂಡು
ಬಿಡು…

ಯೋಚಿಸಬೇಡ ಗೆಳೆಯ ಮಕ್ಕಳು ಮೊಮ್ಮಕ್ಕಳಿಗೆ
ಎನನ್ನೂ ಕೂಡಿ ಇಡಲಿಲ್ಲವೆಂದು
ಬರುವಾಗ ಖಾಲಿ ಬಂದಿದ್ದೇವೆ ನಾವುಗಳು ಹೋಗುವಾಗಲೂ ಖಾಲಿಯಷ್ಟೇ ಚಿಂತಿಸುವದನು ಬಿಟ್ಟು ಬಿಡು…ಸಾಧ್ಯವಾದರೆ ಅವರನ್ನೇ ಸುಸಂಸ್ಕೃತ ಆಸ್ತಿಯಾಗಿಸಿಬಿಡು

ಒಂದು ಕ್ಷಣವೂ ಯೋಚಿಸಬೇಡ ಗೆಳೆಯ ಈ ಹಣದ ಹಾಳೆಯ ಹಿಂದೆ ಓಡಿದವರ ಅವರ ಹಣವೂ ಉಳಿಸಲಾಗಿಲ್ಲ
ಸಾಧ್ಯವಾದರೆ ದುಡಿದು ದಣಿದ ದಿನಗಳಲ್ಲಿ ಹೊಟ್ಟೆಗೊಂದಷ್ಟು ಉಂಡು ನೆಮ್ಮದಿಯ ನಿದ್ದೆ ಮಾಡಿಬಿಡು…

ಒಂದು ಯೋಚಿಸಬೇಡ ಗೆಳೆಯ
ನಾವು ನೆಡುವ ಬೀಜದ ಫಲ ನಮ್ಮದಾಗುವದೇ ಎಂದು
ನಿನಗೆ ನಂಬಿಕೆ ಇಲ್ಲದಿದ್ದರೂ ಸಾಧ್ಯವಾದರೆ ಬೇವು ಬಿತ್ತುವದನು ಬಿಟ್ಟು
ಸಿಹಿ ಫಸಲು ಕೊಡುವ ಸಸಿಗಳನ್ನಷ್ಟೇ ನೆಟ್ಟು ಬಿಡು..

ಈ ನೋವು,ಹತಾಸೆ, ಒಂಟಿತನವಷ್ಟೇ ಅಲ್ಲ
ಸುಖ ನೆಮ್ಮದಿ ಸಿರಿ ಸಂಪತ್ತುಗಳೂ ಶಾಸ್ವತವಲ್ಲ
ಇನ್ನು ಯಾರೋ ಬರುತ್ತಾರೆ
ಜೀವ ತುಂಬುತ್ತಾರೆಂಬ
ನಂಬಿಕೆಯನ್ನೂ ಬಿಟ್ಟು ಬಿಡು….

ಒಂದು ಕ್ಷಣವೂ ಯೋಚಿಸಬೇಡ ಗೆಳೆಯ
ನಾವು ಸತ್ತಾಗ ಸುಡುವ,ಹೂಳುವ,ಹುಗಿವ ಮತ್ತು ಬಿಕ್ಕಿ ಬಿಕ್ಕಿ ಅಳುವವರೂ ಮರೆಯುತ್ತಾರೆ ನಮ್ಮನ್ನು…
ಸಾಧ್ಯವಾದರೆ ಒಳ್ಳೆಯ ನೆನಪುಗಳನ್ನ ನಿನ್ನದಾಗಿಸಿಕೊಂಡು ಬಿಡು….ನಿನ್ನ ನೆನಪುಗಳಿಗೆ ಸಾವಿಲ್ಲವೆಂದು
ಈ ಜಗಕೆ ಸಾರಿ ಬಿಡು

ದೀಪಕ್ ಶಿಂಧೆ, ಪತ್ರಕರ್ತ ಅಥಣಿ
ಮೊ:9482766018