ಕಲ್ಯಾಣ ಕಾವ್ಯ : ಪೋಸುಕೊಟ್ಟರೆ ದೊಡ್ಡವರು ಆಗುವುದಿಲ್ಲ ! – ಮುಕ್ಕಣ್ಣ ಕರಿಗಾರ

ಕಲ್ಯಾಣ ಕಾವ್ಯ

ಪೋಸುಕೊಟ್ಟರೆ ದೊಡ್ಡವರು ಆಗುವುದಿಲ್ಲ !

ಮುಕ್ಕಣ್ಣ ಕರಿಗಾರ

‘ ದೊಡ್ಡವರು’ ಎಂದು ಬಿಂಬಿಸಿಕೊಂಡು
ದೊಡ್ಡಸ್ತಿಕೆಯ ಪೋಸು ಕೊಡುವವರೆಲ್ಲ
ದೊಡ್ಡವರಲ್ಲ.
‘ದೊಡ್ಡಗುಣ’ ಗಳಿಂದ ದೊಡ್ಡವರು
ಆಗುವರಲ್ಲದೆ ಹಣ,ಅಧಿಕಾರ
ಕುಲ ಗೋತ್ರ ಮತ ಧರ್ಮಗಳ
ಹಿರಿಮೆಯಿಂದ ದೊಡ್ಡವರಾಗರು.
ದಡ್ಡಜನರ ಭ್ರಮೆಯಷ್ಟೆ ಅದು.

ಜನರ ಸಂಪತ್ತುದೋಚಿ,ದುಡಿಯುವ ಶ್ರಮಜೀವಿಗಳ ವಂಚಿಸಿ,
ತೆರಿಗೆ ಕಳ್ಳರಾಗಿ ಕುಬೇರರಾದವರು
ಆಗಬಹುದು ಯಾರಿಗೆ ಆದರ್ಶ?
ಬಸವಣ್ಣನವರು ಹೇಳಿಲ್ಲವೆ
‘ ನಾಯ ಹಾಲು ನಾಯಿಮರಿಗಲ್ಲದೆ
ಪಂಚಾಮೃತಕೆ ಸಲ್ಲದೆಂ’ದು!
ಉಳ್ಳವರು,ಉದ್ಯಮಿಗಳು ದೊಡ್ಡವರಲ್ಲ !

ಪ್ರತಿಭೆ,ಪಾಂಡಿತ್ಯಗಳಿಂದಲೂ
ಆಗರು ದೊಡ್ಡವರು
ಜನಹಿತಬುದ್ಧಿ,ಜನಹಿತಕೆ ದುಡಿವವರು
ದೊಡ್ಡವರಲ್ಲದೆ
ಕೋಟಿ ಕೋಟಿಗಳ ಸಂಭಾವನೆ ಪಡೆವ
ಚಿತ್ರನಟರು,ಕ್ರಿಕೆಟ್ ತಾರೆಯರು,ಆಟಗಾರರು
ಮತ್ತೆ ರಾಯಲ್ಟಿ ಪಡೆವ ಕವಿ- ಸಾಹಿತಿಗಳು
ದೊಡ್ಡವರಲ್ಲ!

ಜನರಿಂದ ಅಧಿಕಾರಪಡೆದು
ಹಣಮಾಡುವುದನ್ನೆ ಗುರಿಮಾಡಿಕೊಂಡ,ತತ್ತ್ವಹೀನ,ಬಾಯಿಬಡುಕ,
ಜನಹಿತಕೆ ದುಡಿಯದ ರಾಜಕಾರಣಿಗಳು ದೊಡ್ಡವರಲ್ಲ !

ಆಸೇವೆ,ಈ ಸೇವೆ ಎನ್ವ ಲೇಬಲ್ಲುಗಳ
ಅಂಟಿಸಿಕೊಂಡು
ಜನಹಿತವ ಕಡೆಗಣಿಸುವ ಅಧಿಕಾರಿಗಳಂತೂ
ದೊಡ್ಡವರು ಅಲ್ಲವೇ ಅಲ್ಲ !
ದೊಡ್ಡವರು ಎಂದರಿವರು
ಜನರ ಕಷ್ಟಗಳಲ್ಲಿ ಸ್ಪಂದಿಸುವವರು
ಜನರೊಂದಿಗೆ ಸದಾ ಇರುವವರು
ಬಡವರು,ನಿರ್ಗತಿಕರು- ನಿರಾಶ್ರಿತರ
ಕಸುವುಗುಂದಿದ ಬಾಳುಗಳಿಗೆ
ಆಸರೆ ಆಗುವವರು
ಮತ್ತೆ ಅನಾಥರ ಬಾಳುಗಳಲ್ಲಿ ಭರವಸೆ
ತುಂಬುವವರು
ಜನಹಿತದ ದುಡಿಮೆಯು ದೊಡ್ಡಸ್ತಿಕೆಯ
ಸಿದ್ಧ ಸೂತ್ರವು.

ಮುಕ್ಕಣ್ಣ ಕರಿಗಾರ

೦೯.೦೯.೨೦೨೨