ಕಲ್ಯಾಣ ಕಾವ್ಯ : ದಾಟಿ ನಡೆಯಬೇಕು ಹೊಸ್ತಿಲ ಆಚೆ….. ಮುಕ್ಕಣ್ಣ ಕರಿಗಾರ

ಕಲ್ಯಾಣ ಕಾವ್ಯ

ದಾಟಿ ನಡೆಯಬೇಕು ಹೊಸ್ತಿಲ ಆಚೆ…..

ಮುಕ್ಕಣ್ಣ ಕರಿಗಾರ

ಅಡಿಯ ಮುಂದಿಟ್ಟು ಹೊರನಡೆಯದ ಹೊರತು
ನಡೆದು ಬಾರನು ದೇವನು ನಿನ್ನೆಡೆಗೆ
ಅಡಿ ಇಡಬೇಕು ಹೊರಗೆ
ದಾಟಬೇಕು ಹೊಸ್ತಿಲು
ಹೊಸ್ತಿಲು ದಾಟಿ ಹೊರನಡೆದೆಯಾದರೆ ನೀನು
ಹುಡುಕಿ ಬರುವನು ದೇವ ನಿನ್ನೆಡೆಗೆ.
ಮನೆ ಇಲ್ಲದ ದೇವರು
ಬರಲೊಲ್ಲ ಮನೆಯೊಳಗೆ!
ಇರಬಹುದು ನೀನು ಮನೆಯಲ್ಲಿ
ಮಡದಿ ಮಕ್ಕಳು
ಬಂಧು ಸಂಬಂಧಿಕರ ಜೊತೆ ಹಾಯಾಗಿ
ಆದರೆ ದೇವರನ್ನು ಕಾಣಬೇಕು ಎಂದರೆ
ದಾಟಲೇಬೇಕು ಮನೆಯ ಹೊಸ್ತಿಲು
ಮನಮುರಿದುಕೊಂಡು
ಭಾವ ಉರಿಸಿಕೊಂಡು
ಮನೆಯ ಹಂಗು ಅಭಿಮಾನಗಳ
ತೊರೆದು ಬಾರದ ಹೊರತು
ಬಾರನು ದೇವನು ನಿನ್ನೆಡೆಗೆ.
ಬರುವಾಗ ಒಂಟಿಯಾಗಿದ್ದೆ ನೀನು
ಹೋಗುವಾಗಲೂ ಒಂಟಿಯಾಗಿರುವೆ
ಅಂಟಿಸಿಕೊಂಡು ಸಂಬಂಧಗಳ
ನೆಂಟರು ಇಷ್ಟರು ಬಂಧು ಮಿತ್ರರೆಂಬ
ಭಾವಬಂಧನದಿ ಸಿಲುಕಿ ಬಳಲುವೆ
ಒಂಟೆಯು ಭಾರಹೊತ್ತು ಬಳಲುವಂತೆ
ಪ್ರಪಂಚ ನಿರ್ಮಿಸಿಹ ಪರಮಾತ್ಮನು
ಪ್ರಪಂಚಕ್ಕೆ ಸಿಲುಕದಂತಿಹನು
ಅಂತಿರೆ ನೀನು ಮುಕ್ತನಹುದು
ಇರಬೇಕು ಸಂಸಾರದಲ್ಲಿ ಇಲ್ಲದಂತೆ
ಇರು ಮಡದಿಮಕ್ಕಳ ಜೊತೆ
ನಿನ್ನೊಂದಿಗೆ ಬಾರರವರು ನೀನು ಹೊರಟಾಗ
ಎಂಬುದನ್ನರಿತು ಬಾಳು ಅವರೊಡನೆ.
ಜೀವದ ಗೆಳೆಯರು
ನಿಷ್ಠೆಯುಳ್ಳವರು
ನಂಬಿಕಸ್ಥರು
ಯಾರೇ ಆಗಿರಲವರು ನೀನು
ನನ್ನವರು ಎಂದು ಹಚ್ಚಿಕೊಂಡವರು
ಹೊರುವರಲ್ಲದೆ ನಿನ್ನ ಹೆಣವ
ಬಾರರು ನಿನ್ನೊಡನೆ!
ಈ ಕಾರಣಕೆ ಹೊಸ್ತಿಲ ದಾಟುವುದನು
ಕಲಿಯಬೇಕು ನೀನು
ಎಂದಿದ್ದರೂ ಒಂದು ದಿನ
ದಾಟಿಯೇ ಹೋಗಬೇಕು ನೀನದನು
ಹೊಸ್ತಿಲ ದಾಟಿದರೆ ದೇವರಲೋಕ
ಹೊಸ್ತಿಲ ಒಳಗಿದ್ದರೆ ಸಂಸಾರ
ಇಷ್ಟೇ ಅರ್ಥ ಜೀವನಕೆ,ಪರಮಾರ್ಥಕ್ಕೆ.

ಮುಕ್ಕಣ್ಣ ಕರಿಗಾರ

೦೭.೦೯.೨೦೨೨