ಕಲ್ಯಾಣ ಕಾವ್ಯ : ಪಾಪಿ ಅರಸ ದೇವರಾದ ಪವಾಡ !- ಮುಕ್ಕಣ್ಣ ಕರಿಗಾರ

ಕಲ್ಯಾಣ ಕಾವ್ಯ

ಪಾಪಿ ಅರಸ ದೇವರಾದ ಪವಾಡ !

ಮುಕ್ಕಣ್ಣ ಕರಿಗಾರ

ಇದ್ದನೊಬ್ಬ ಅರಸ ಹಿಂದೆ
ಕಡುನಿಷ್ಕರುಣಿ,ಹೃದಯಹೀನ
ರಾಜ್ಯವಿಸ್ತರಿಸುವಾಸೆಯಲ್ಲಿ ಕೊಂದ ಜನರಸಂಖ್ಯೆಗೆ ಲೆಕ್ಕವಿಲ್ಲ
ಶತ್ರುರಾಜರುಗಳ ಶಿರಗಳ ಗಿಡಮರಗಳಲ್ಲಿ
ತೂಗುಬಿಟ್ಟು ಸಂತಸವಪಡುತ್ತಿದ್ದ
ಶತ್ರುಅರಸರ ಹೆಂಗಸರ
ಮಂಚಕ್ಕೆ ಎಳೆದುಕೊಂಡು ಸುಖಿಸುತ್ತಿದ್ದ
ರಾಜ್ಯ ಕೋಶಗಳ ದೋಚುತ್ತಿದ್ದ
ಪುರ ನಗರ ಪಟ್ಟಣಗಳ ಲೂಟಿ ಗೈಸುತ್ತಿದ್ದ ಸೈನಿಕರುಗಳಿಂದ
ರಾಜ್ಯತೆರಿಗೆಯ ಹೆಸರಲ್ಲಿ ಹಿಂಸಿಸುತ್ತಿದ್ದ
ಬಿಡದೆ ತನ್ನ ಪ್ರಜೆಗಳನ್ನು
ಹರೆಯಕ್ಕೆ ಬಂದ ಸುಂದರಿಯರೆಲ್ಲ
ಬರಲೇಬೇಕಿತ್ತು ಇವನ ಅಂತಃಪುರಕ್ಕೆ
ದಿನಕ್ಕೊಬ್ಬರಲ್ಲ ,ಘಂಟೆಗೊಬ್ಬ ಸುಂದರಿಯೊಂದಿಗೆ
ರಮಿಸುವಾಸೆಯ ಭೂಪನವನು.
ತನ್ನಿಚ್ಛೆಯನು ಅರಿತು ತಲೆಬಾಗಿ ನಡೆವ
ಪುರೋಹಿತರು,ಮಂತ್ರಿಗಳು,ಅಧಿಕಾರಿಗಳ
ತಂಡದೊಂದಿಗೆ ಸುಖಭೋಗಗಳ ಮೆರೆಯುತ್ತಿದ್ದ.
ಹೀಗಿರಲೊಂದು ದಿನ
ಬರಬಾರದ ಯಾವುದೋ ರೋಗ ಒಂದು
ಅಂಟಿಕೊಂಡಿತ್ತು ಭೋಗಿರಾಜನಿಗೆ
ತಾನಿನ್ನು ಬದುಕಿ ಉಳಿಯಲಾರೆ ಬಹುದಿನ
ಖಾತ್ರಿಯಾಗಿತ್ತು ಅರಸನಿಗೆ.
ವಿಸ್ತಾರವಾದ ರಾಜ್ಯ
ಕುಬೇರನಿಗು ಮಿಗಿಲು ಐಶ್ವರ್ಯ
ಬಿಟ್ಟು ಹೊರಡಲೇಬೇಕಲ್ಲ
ಚಿಂತಿಸಿದ,ಕಳವಳಿಸಿದ.
ಎಲ್ಲಕ್ಕಿಂತ ದೊಡ್ಡ ಚಿಂತೆ ಎಂದರೆ
ತಾನು ಸತ್ತಬಳಿಕ ಪ್ರಜೆಗಳು ತನ್ನನ್ನು ಮರೆತರೆ?
ತಾನು ಮಾಡಿದ ಘನಕಾರ್ಯಗಳ ಆಡಿಕೊಂಡರೆ?
ಬಳಿ ಕರೆದ ತನ್ನ ಆಪ್ತಪುರೋಹಿತನ,ಪುರಾಣಿಕನ
ಆಸ್ಥಾನ ಕವಿಯನ್ನು
ಇತ್ತು ಅವರ ಕೈಯ್ಗಳಲ್ಲಿ ಹೊನ್ನಿನ ಚೀಲಗಳ
‘ ಪ್ರಜೆಗಳು ನಿಂದಿಸದೆ ತನ್ನನ್ನು
ವಂದಿಸುತ್ತಿರಬೇಕು ಸದಾಕಾಲ
ಮರೆಯಬೇಕು ತನ್ನೆಲ್ಲ ವಿಕೃತಿಗಳ
ಸಾಧಿಸಿ ಅಂಥದ್ದೊಂದು ತಂತ್ರೋಪಾಯ’
ಕೈಯ್ಗಳಲ್ಲಿ ಹೊನ್ನ ಚೀಲಗಳ ಹಿಡಿದ
ಪುರೋಹಿತ,ಪುರಾಣಿಕ,ಆಸ್ಥಾನಕವಿಗಳು
‘ ಇದಾವ ಘನಕಾರ್ಯ ಪ್ರಭು?
ಚಿರಸ್ಥಾಯಿಯಾಗಿಸುವೆವು ನಿಮ್ಮ‌ಕೀರ್ತಿಯನು’
ಮತ್ತೆ ಹಲಕೆಲವು ಬೇಡಿಕೆಗಳ
ಮಂಡಿಸಿ,ಪಡೆದು ಅರಸನಿಂದ
ರಾಜಧಾನಿಯ ಹೊರವಲಯದಲ್ಲಿ
ನದಿಯ ತಟದಿ
ಕಟ್ಟಿದರೊಂದು ಭವ್ಯ ದೇವಾಲಯ
ಸತ್ತ ಅರಸನ ಹೆಣವ ಹೂತಿಟ್ಟು ದೇಗುಲದಿ
ಮೂರ್ತಿಯನು ಪ್ರತಿಷ್ಠಾಪಿಸಿ
ಷೋಡೋಶೋಪಚಾರ ಪೂಜೆಗೈಯುತ್ತ
ಮಂತ್ರಗಳ ಪಠಿಸತೊಡಗಿದ ಪುರೋಹಿತ
ಪುರಾಣಿಕ ಅರಸನ ಗುಣಮಹಿಮೆಗಳ ಹಾಡಿಹೊಗಳಿ
ಪುರಾಣಗಳ ಕಟ್ಟಿದ
ಆಸ್ಥಾನಕವಿ ಬರೆದ ಅದ್ಭುತ ಕಾವ್ಯವನು
ಸತ್ತ ಪಾಪಿ ಅರಸ
ಲೋಕೋದ್ಧಾರಕ್ಕೆ ಅವತರಿಸಿದ್ದ ದೇವರಾಗಿದ್ದ!
ದುಷ್ಟಶಿಕ್ಷಣ -ಶಿಷ್ಟರಕ್ಷಣೆಗೆ ಅವತರಿಸಿದ್ದ
ಭಗವಂತನಾಗಿದ್ದ!
ಮನುಷ್ಯನಾಗಿ ವರ್ತಿಸಿದ್ದ ಆತನ ನಡೆಗಳ
ಪಾಪಕೃತ್ಯಗಳು ಲೋಕೋದ್ಧಾರದ ದಿವ್ಯಕಾರ್ಯಗಳಾಗಿದ್ದವು!
ಅರಸನ ಸಮಾಧಿಗೆ
ವಂದಿಸಿ ನಡೆಯುವುದು ಮುಕ್ತಿಮಾರ್ಗವಾಗಿತ್ತು!
ಅರಸನ ಪೂಜೆ -ಸೇವೆಗಳು
ಭೋಗ- ಮೋಕ್ಷಗಳ ಸಿದ್ಧಿತಂತ್ರಗಳಾಗಿದ್ದವು!
ನಡೆದುಕೊಳ್ಳತೊಡಗಿದರು ಜನತೆ
ಪೂಜಿಸತೊಡಗಿದರು ಪ್ರಜೆಗಳು ಅರಸನನ್ನು
ತಮ್ಮ ದೇವರೆಂದು.
ಬದುಕಿದ್ದಾಗ ರಕ್ಕಸನಾಗಿದ್ದ ಅರಸ
ಸತ್ತಬಳಿಕ ದೇವರಾಗಿ ಪೂಜೆಗೊಳ್ಳತೊಡಗಿದ!
ಪುರೋಹಿತರು,ಪುರಾಣಿಕರು,ಆಸ್ಥಾನಕವಿಗಳು
ಬ್ರಹ್ಮ ಬರೆದ ಹಣೆಬರಹ ಸುಳ್ಳಾಗಿಸುತ್ತಾರೆ
ಎನ್ವದಕ್ಕೆ ಸಾಕ್ಷಿಯಾಗಿದ್ದ ಪಾಪಿ ಅರಸ.
ಪುರೋಹಿತರು,ಪುರಾಣಿಕರು,ಆಸ್ಥಾನಕವಿಗಳು
ಹಂಚಿಕೊಂಡಿದ್ದರು ಅರಸನ ಹೆಣದ ದೇಗುಲದ
ಫಲವತ್ತಾದ ರಾಜ್ಯಭೂಮಿಯನು
ಹಣ್ಣು- ಹೂವುಗಳ ತೋಟಗಳ
ಭತ್ತ ಜೋಳ ರಾಗಿಗಳ ಬೆಳೆವ ಭೂಮಿಯನ್ನು.
ಪ್ರಜೆಗಳು ಅರಸನ ದೇವಾಲಯಕ್ಕೆ
ಭಕ್ತಿಯಿಂದ ಸಮರ್ಪಿಸುತ್ತಿದ್ದರು ಕಾಣಿಕೆಗಳ.
ನಡೆದುಕೊಂಡು ಬಂದಿದೆ ಇದು ಅಂದಿನಿಂದಲೂ
ಈಗಲೂ ಪೂಜೆಗೊಳ್ಳುತ್ತಿದ್ದಾನೆ ಅರಸ
ಹೊಸಹೊಸ ಅವತಾರಗಳ ಧರಿಸಿ
ಸೃಷ್ಟಿಯಾಗುತ್ತಿವೆ ನಿತ್ಯವೂ ಅರಸನ ಹೆಸರಿನಲ್ಲಿ
ಹೊಸಪುರಾಣ,ಪುಣ್ಯಕಥೆಗಳು.
ಅರಸನನ್ನು ಹಾಡಿಹೊಗಳಿ
ಉಂಡುಟ್ಟು ಸುಖಿಸುವವರ ದಂಡು
ಹರಡಿದೆ ದೇಶದುದ್ದಗಲಕ್ಕೂ.
ದೇವತೆಗಳ ಒಡೆಯ ಇಂದ್ರನೂ ಬೆರಗಾಗಿದ್ದಾನೆ
ಭೂಲೋಕದಲ್ಲಿ
ಪುರೋಹಿತರು- ಪುರಾಣಿಕರುಗಳು
ಸೃಷ್ಟಿಸುವ ದೈವಗಳ ಮಹಿಮೆ ಕಂಡು!

ಮುಕ್ಕಣ್ಣ ಕರಿಗಾರ

೦೭.೦೯.೨೦೨೨