ಮಾನ್ವಿಯ ಗಣೇಶೋತ್ಸವ ಹಾಗೂ ಸೌಹಾರ್ದ ಸಂದೇಶ

ಮಾನ್ವಿ ಸೆ5: ಪಟ್ಟಣದಲ್ಲಿ ಭಾನುವಾರ ಸಂಜೆಯಿಂದ ಗಣೇಶ ಮೂರ್ತಿಗಳ ವಿಸರ್ಜನೆಯ ಮೆರವಣಿಗೆ ಶಾಂತಿಯುತವಾಗಿ ನಡೆಯಿತು. ಸೌಹಾರ್ದ ಒಕ್ಕೂಟದ ಹೆಸರಿನಲ್ಲಿ ಸ್ಥಳೀಯ ಹಿಂದೂ-ಮುಸ್ಲಿಂ ಸಮಾಜದ ಮುಖಂಡರು ಒಗ್ಗಟ್ಟಾಗಿ ಗಣೇಶ ಮೂರ್ತಿಗಳ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಯುವಕರಿಗೆ ಊಟದ ವ್ಯವಸ್ಥೆ ಕಲ್ಪಿಸುವ ಮೂಲಕ ಶಾಂತಿ, ಸೌಹಾರ್ದ ಹಾಗೂ ಭಾವೈಕ್ಯ ಮನೋಭಾವ ಮೆರೆದದ್ದು ಈ ಬಾರಿಯ ವಿಶೇಷ ಹಾಗೂ ಮಾದರಿ ಕಾರ್ಯ. ಉತ್ತಮ ಸಮಾಜ ನಿರ್ಮಾಣಕ್ಕೆ ಸಹೋದರತ್ವದ ಸಂದೇಶ ಸಾರುವ ಇಂತಹ ಬೆಳವಣಿಗೆಗಳು ಪೂರಕ. ಸೌಹಾರ್ದ ಒಕ್ಕೂಟದ ಎಲ್ಲಾ ಮುಖಂಡರಿಗೆ ಅಭಿನಂದನೆಗಳು.