ನೆನಪಿರಲಿ ಡಿಯರ್ ನಮಗೆ ಇರುವದೊಂದೇ ಜೀವನ: ದೀಪಕ್ ಶಿಂಧೆ

ಪ್ರೀತಿ ಮಾಯೆ ಹುಷಾರು ಬದುಕು ಮಾರೋ ಬಜಾರು ಅಂತಾರೆ ಮತ್ತದು ಹಂಡ್ರೆಡ್ ಯಾಂಡ್ ಒನ್ ಪರ್ಸೆಂಟ್ ನಿಜಾ ಕಣ್ರೀ ಆದರೆ ಉರಿಯುವ ದೀಪವೊಂದು ಬೆಳಕು ನೀಡುವ ನಂದಾದೀಪವಾಗಬೇಕೆ ಹೊರತು ಮನೆಯನ್ನೆ ಹೊತ್ತಿ ಉರಿಸುವ ಬೆಂಕಿಯಾಗಬಾರದು ಅಲ್ಲವಾ??

ಇವತ್ತಷ್ಟೇ ಒಂದು ಹೃದಯ ವಿದ್ರಾವಕ ಘಟನೆ ನಡೆದು ಹೋಗಿದೆ.ತಾನು ಜೀವಕ್ಕಿಂತ ಜಾಸ್ತಿಯಾಗಿ ಪ್ರೀತಿಸಿದ್ದ ಮಡದಿ ಅನಾರೋಗ್ಯದಿಂದ ತೀರಿ ಹೋಗಿದ್ದರಿಂದ ಮನನೊಂದ ಪತಿರಾಯ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.ದೇಹದ ಶೇಕಡಾ ಎಂಭತ್ತರಷ್ಟು ಭಾಗ ಸುಟ್ಟುಹೋಗಿದ್ದರಿಂದ ಆತನನ್ನ ಉಳಿಸಿಕೊಳ್ಳಲು ವೈದ್ಯರ ಶತಪ್ರಯತ್ನಗಳಾಗಲಿ ಅವನ ಮನೆಯವರು ದೇವರಿಗೆ ಇಟ್ಟ ಮೊರೆಯಾಗಲಿ ಯಾವುದು ಫಲಿಸದೇ ಆತ ಸಾವನ್ನಪ್ಪಿದ್ದಾನೆ.ಇನ್ನೊಂದು ಕಡೆ ಮತ್ತೂ ಆಘಾತಕ್ಕೆ ಈಡು ಮಾಡುವಂತ ವಿಷಯವೆಂದರೆ ತಮ್ಮ ಪ್ರೀತಿಗೆ ಪೋಷಕರು ಅಡ್ಡಿಪಡಿಸಿದ್ದರಿಂದ ಇನ್ನೂ ಇಪ್ಪತ್ತರ ಆಸು ಪಾಸಿನ ಹುಡುಗ ಮತ್ತು ಹುಡುಗಿ ವಿಷ ಕುಡಿದಿದ್ದು ಹುಡುಗ ಸ್ಥಳದಲ್ಲೇ ಸಾವನ್ನಪ್ಪಿದರೆ ಹುಡುಗಿ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾಳೆ.ನಿನ್ನೆಯಷ್ಟೇ ತನ್ನ ಪ್ರಿಯಕರನ ಮದುವೆಯಾದ ಸುದ್ದಿ ಕೇಳಿದ್ದ ಮತ್ತೊಬ್ಬ ಯುವತಿ ಇಂದು ಎಕ್ಸಪ್ರೆಸ್ ಟ್ರೈನಿಗೆ ತಲೆ ಕೊಟ್ಟ ಪರಿಣಾಮ ಛಿದ್ರಗೊಂಡ ದೇಹದ ಭಾಗಗಳನ್ನು ಹೆಕ್ಕಿ ಮೂಟೆ ತುಂಬುವ ಪರಿಸ್ಥಿತಿ ಎದುರಾಗಿದ್ದರೆ ಇದ್ದ ಒಬ್ಬಳೆ ಮಗಳ ಮುಖ ಕೂಡ ನೋಡುವ ಪರಿಸ್ಥಿತಿಯಲ್ಲಿ ಇಲ್ಲದ ಹೆತ್ತ ಜೀವಗಳ ಆರ್ತನಾದ ಮುಗಿಲು ಮುಟ್ಟಿದೆ.ಹೌದು‌ ಡಿಯರ್ ಐ ಯಾಮ್ ಹೀಯರ್ ವೈ ಯೂ ಫಿಯರ್ ಅನ್ನುತ್ತಿದ್ದ ಹುಡುಗ,ಹುಡುಗಿಯರ ಕತೆ ಇದಾದರೆ ಮೈ ಲಾರ್ಡ ಐ ನೀಡ್ ಡೈವರ್ಸ ಅಂತ ಅಪೀಲು ಹೋಗಿದ್ದ ಹೆಣ್ಣುಮಗಳೊಬ್ಬಳು ವಿಚ್ಛೇದನ ಸಿಕ್ಕ ಮರುದಿನವೇ ಹಗ್ಗಕ್ಕೆ ನೇತು ಬಿದ್ದು ಹೆಣವಾಗುತ್ತಾಳೆ.ಇವೆಲ್ಲದಕ್ಕೂ ಕಾರಣ ನಮ್ಮ ಪ್ರೀತಿ ಮತ್ತು ಅದು ಹುಟ್ಟಿಸಿದ ಭಾವೋನ್ಮಾದಗಳಷ್ಟೇ…ಹಳೆಯ ಗೆಳೆಯನೊಬ್ಬ ಹೆಂಡತಿ ಸರಿ ಇಲ್ಲ ಅವಳಿಗೆ ಬೇರೆ ಅಪೇರ್ ಇದೆ ಅನ್ನುವ ಕಾರಣಕ್ಕೆ ಕುಡಿತದ ದಾಸನಾಗಿ ಬೀದಿ ಬೀದಿ ಅಲೆಯುತ್ತಿದ್ದರೆ ಇತ್ತ ಮಧ್ಯಮವರ್ಗದ ಹೆಣ್ಣುಮಗಳೊಬ್ಬಳು ಗಂಡನಿಗೆ ಸ್ವಲ್ಪನೂ ಜವಾಬ್ದಾರಿ ಇಲ್ಲ ಸರ್ ಅವನಂತು ಮನೆ ಖರ್ಚು ನೋಡ್ಕೋಳಲ್ಲ ನಾನು ದುಡಿಯದೆ ಮನೆ ನಡೆಯುವದಿಲ್ಲ ಆದರೆ ಅಕ್ಕ ಪಕ್ಕದವರು ಕಂಡೋರ ಜೊತೆಗೆ ನನ್ನ ಸಂಭಂಧ ಕಲ್ಪಿಸಿ ಮಾತಾಡೋದನ್ನ ನನ್ನಿಂದ ತಡಕೋಳೋಕೆ ಆಗ್ತಾ ಇಲ್ಲ ಅಂತ ತನ್ನ ಮೂರು ತಿಂಗಳ ಮಗುವಿನ ಜೊತೆ ಕೆರೆಗೆ ಹಾರಿದ್ದಾಳೆ ಹೀಗೆ ಸಾಲು ಸಾಲು ಸಾವಿನ ಸುದ್ದಿಗಳನ್ನ ಆಗಾಗ ಅಲ್ಲಲ್ಲಿ ಕೇಳಿದಾಗೆಲ್ಲ ನನ್ನ ಮನಸ್ಸು ತಲ್ಲಣಿಸಿಬಿಡುತ್ತದೆ.ಎನೇ ಆದರೂ ಜೀವ ಮತ್ತು ಜೀವನ ಅತ್ಯಮೂಲ್ಯ ಅನ್ನುವದು ನಿಮಗೆಲ್ಲ ತಿಳಿದಿರಲಿ ಅನ್ನುವ ಕಾರಣಕ್ಕೆ ಒಂದಷ್ಟು ವಿಷಯಗಳನ್ನ ಎತ್ತಿಕೊಂಡು ಹೊತ್ತಲ್ಲದ ಹೊತ್ತಿನಲ್ಲಿ ಬರೆಯುತ್ತ ಕೂಡುವ ಚಾಳಿ ನನಗೆ ಅದ್ಯಾವಾಗ ಅಂಟಿಕೊಂಡಿದೆಯೋ ಗೊತ್ತಿಲ್ಲ ಆದರೆ ಎಲ್ಲೋ ಒಂದು ಅಪರಿಚಿತ ಮತ್ತು ಅಮಾಯಕ ಜೀವವೊಂದು ಕ್ಷುಲ್ಲಕ ಕಾರಣಕ್ಕೆ ಬಾರದ ಲೋಕಕ್ಕೆ ಹೊರಟು ನಿಂತಾಗ ನನ್ನ ಮನಸ್ಸು ಆರ್ದ್ರಗೊಳ್ಳುತ್ತದೆ.ತಮ್ಮದಲ್ಲದ ತಪ್ಪಿಗೆ ಪುಟಾಣಿ ಕಂದಮ್ಮಗಳಿಂದ ಹಿಡಿದು ಅಬಾಲ ವೃದ್ದರವರೆಗೆ ಯಾರೋ ಒಬ್ಬರು ಬಲಿಪಶುವಾದಾಗ ನನ್ನ ಶೋಕಸಾಗರದ ಕಟ್ಟೆಯೊಡೆಯುತ್ತದೆ.ಈ ಜಗತ್ತಿನಲ್ಲಿ ಎಷ್ಟೋ ಜನರಿಗೆ ಮಕ್ಕಳಿಲ್ಲದೆ ದೇವಸ್ಥಾನ, ಪುಷ್ಕರರಣಿಯ ಪುಣ್ಯ ಸ್ನಾನ ಮತ್ತಾವುದೋ ಹೋಮ ಹವನ ಕೊನೆಗೆ ವೈದ್ಯರ ಸಲಹೆ ಅಂತ ಲಕ್ಷಗಟ್ಟಲೆ ಖರ್ಚು ಮಾಡುವ ದಂಪತಿಗಳನ್ನ ನೋಡಿದಾಗ, ಮತ್ತು ಕೊನೆಗೆ ತಮ್ಮದೇ ಚಿತೆಗೆ ಬೆಂಕಿ ಇಡುವದಕ್ಕಾದರೂ ತಮ್ಮದೊಂದು ಜೀವದ ಕುಡಿ ಅರಳುವ ಆಸೆ ಹೊತ್ತ ಮಧ್ಯವಯಸ್ಕ ಜೋಡಿಗಳ ಬಗ್ಗೆ ನನಗೆ ಇಲ್ಲದ ಅನುಕಂಪ ಹುಟ್ಟಿಬಿಡುತ್ತದೆ.ಆದರೆ ಸ್ನೇಹಿತರೆ ನಿಮಗೆಲ್ಲ ನೆನಪಿರಲಿ ಯಾರೋ ನಮ್ಮನ್ನ ಬಿಟ್ಟು ಹೋದರು ಅಂತ,ಪ್ರೇಯಸಿ ಅಥವಾ ಪ್ರಿಯಕರ ಕೈ ಕೊಟ್ಟ ಅಂತ,ತೀರಾ ಆಪ್ತರೊಬ್ಬರು ತೀರಿಕೊಂಡರು ಅಂತ ನಾವೂ ಕೂಡ ಸಾವಿನ ಬೆನ್ನತ್ತಿಬಿಡುವದಿದೆಯಲ ಇಟ್ಸ ನಾಟ್ ಎ ಪೇರ್….ಈ ಜಗತ್ತಿನಲ್ಲಿ ಕೈ ಕಾಲುಗಳು ಸ್ವಾಧೀನದಲ್ಲಿ ಇಲ್ಲದ ಹುಟ್ಟಿನಿಂದಲೇ ಕಿವಿ ಕೇಳಿಸದ,ಕಣ್ಣುಗಳು ಕಾಣಿಸದ,ಮತ್ತು ತಮ್ಮ ಇರುವಿಕೆಯ ಅರಿವೇ ತಮಗಿಲ್ಲದ ಎಷ್ಟೋ ಜನ ನಿತ್ಯವೂ ಉಸಿರಾಡುತ್ತಿದ್ದಾರೆ.ಕೋಣೆಯೊಂದರ ನಾಲ್ಕು ಗೋಡೆಯ ನಡುವೆಯೋ ಅಥವಾ ಅನಾಥಾಶ್ರಮ ಮತ್ತು ವೃದ್ದಾಶ್ರಮದಂತಹ ಒಂದು ಬಿಲ್ಡಿಂಗಿನ ದೊಡ್ಡ ಗೇಟು ಅಳವಡಿಸಿದ ಕಂಪೌಂಡಿನ ಒಳಗಡೆಯೋ ಅಂತಹವರ ಜೀವನ ಮುಗಿದುಹೋಗುತ್ತದೆ.ಅದರಲ್ಲೇ ಕೆಲವರು ಅಸಾಧಾರಣವಾದ ಎನೋ ಒಂದನ್ನ ಸಾಧಿಸಿ ನಾವು ಕೂಡ ಯಾರಿಗೂ ಕಮ್ಮಿ ಇಲ್ಲ ಅಂತ ಸಾಬೀತು ಪಡಿಸಿಬಿಡುತ್ತಾರೆ.ಅಂತಹದ್ದರಲ್ಲಿ
ಜಗತ್ತಿನಲ್ಲಿ ಅತಿಯಾಗಿ ನೊಂದವರಿಗಿಂತ ಭವಿಷ್ಯದ ಬಗ್ಗೆ ಭಯಗೊಂಡವರಷ್ಟೇ ಆತ್ಮಹತ್ಯೆ ಅಂತಹ ಹಾದಿಗಳನ್ನ ತುಳಿದುಬಿಡುತ್ತಾರೆ.
ಇನ್ನೊಂದು ವಿಷಯ ನನಗೆ ಪುನರ್ಜನ್ಮದಲ್ಲಿ ನಂಬಿಕೆ ಇಲ್ಲವಾದ್ದರಿಂದ ಮತ್ತು ಇಂದಿನ ಘಟನೆಯನ್ನ ನಾನು ನಾಳೆಗೆ ಮರೆಯುತ್ತೇನೆ ಎಂಬ ಕಾರಣದಿಂದ ಒಂದು ವೇಳೆ ಪುನರ್ಜನ್ಮ ಅನ್ನುವದು ಇದ್ದರೂ ಹಳೆಯದು ಯಾವುದೂ ನಮಗೆ ನೆನಪಿರುವದಿಲ್ಲ ಅನ್ನುವ ಕಹಿಸತ್ಯವನ್ನೊಂದಿಷ್ಟು ನನಗೆ ನಾನೇ ತಿಳಿದು ಕೊಂಡಿರುವದರಿಂದ ನಿಮಗೆಲ್ಲ ಹೇಳುವದಿಷ್ಟೇ…
ನಮಗೆಲ್ಲ ಇರುವದೊಂದೆ ಜೀವನ ಅಂದಮೇಲೆ ಇದ್ದಷ್ಟು ದಿನ ಎಲ್ಲರೊಂದಿಗೆ ನಗುತ್ತ,ಎಲ್ಲರನ್ನ ನಗಿಸುತ್ತ ನಮ್ಮ ಜೀವನದ ಪಯಣ ಮುಗಿಸೋಣ.ಕೆಟ್ಟದ್ದನ್ನ ಮರೆಯುತ್ತ ಒಳ್ಳೆಯದನ್ನ ನೆನಪಿನಲ್ಲಿ ಇಟ್ಟುಕೊಳ್ಳುತ್ತ ನಮ್ಮೊಂದಿಗೆ ಇಲ್ಲವಾದವರ ಹೆಸರಿನಲ್ಲಿ ಸಾಧ್ಯವಾದಷ್ಟು ಒಳ್ಳೆಯ ಕೆಲಸಗಳನ್ನ ಮಾಡುತ್ತ ಹಾಯಾಗಿ ಇದ್ದುಬಿಡೋಣ.ಇನ್ನು ಅರ್ಧ ದಾರಿಯಲ್ಲಿ ಕೈ ಕೊಟ್ಟು ಹೋದವರು ಕೂಡ ನಮ್ಮನ್ನು ತಿರುಗಿ ನೋಡುವಂತೆ ಮತ್ತು ನಮಗೆ ಮೋಸ ಮಾಡಿದವರು ನಾಚಿಕೆಯಿಂದ ತಲೆ ತಗ್ಗಿಸುವಂತೆ ನಮ್ಮದೇ ಆದ ಗುರಿಗಳನ್ನ ಇಟ್ಟುಕೊಂಡು ಅವುಗಳನ್ನ ತಲುಪುವತ್ತ ಪರಿಶ್ರಮ ಪಡುತ್ತ ಬದುಕಿನ ಒಂದೊಂದೆ ಮೆಟ್ಟಿಲುಗಳನ್ನ ನಿಧಾನಕ್ಕೆ ಹತ್ತುತ್ತ ನಾವೇಲ್ಲ ಬದುಕಿ ತೋರಿಸೋಣ ಏನಂತೀರಿ??

ದೀಪಕ್ ಶಿಂಧೆ, ಪತ್ರಕರ್ತ
ಅಥಣಿ ಮೊ:9482766018