ಸಂಸ್ಕೃತಿ
ಶ್ರೀಗಣೇಶ ತತ್ತ್ವ ದರ್ಶನ
ಮುಕ್ಕಣ್ಣ ಕರಿಗಾರ
ಭಾರತೀಯ ಧರ್ಮ,ಆಧ್ಯಾತ್ಮ ಮತ್ತು ಸಂಸ್ಕೃತಿಗಳಲ್ಲಿ ಗಣೇಶನಿಗೆ ಅತಿಮಹತ್ವದ ಸ್ಥಾನವಿದೆ.’ ಆದಿಪೂಜಿತ’ ನಾಗಿ ಗಣೇಶನನ್ನು ಗೌರವಿಸಲಾಗಿದೆ.’ ವಿಘ್ನಕಾರಕ’ ಮತ್ತು ‘ ವಿಘ್ನನಿವಾರಕ’ ನಾಗಿ ಗಣಪತಿ ಪೂಜೆಗೊಳ್ಳುತ್ತಿದ್ದಾನೆ.ಕೆಲವರಿಗೆ ಗಣೇಶನು ಬ್ರಹ್ಮಚಾರಿಯಾದರೆ ಮತ್ತೆ ಕೆಲವರಿಗೆ ಆತ ಸಿದ್ಧಿ ಬುದ್ಧಿ ಎಂಬ ಇಬ್ಬರು ಪತ್ನಿಯರ ವಲ್ಲಭ.ಭಾರತದಲ್ಲಿ ಮಾತ್ರವಲ್ಲದೆ ಜಾವಾ,ಸುಮಾತ್ರಾ,ಕಾಂಬೋಡಿಯಾ ಮೊದಲಾದ ಹೊರದೇಶಗಳಲ್ಲೂ ಗಣೇಶನನ್ನು ಪೂಜಿಸಲಾಗುತ್ತದೆ.ಭಾರತದಲ್ಲಂತೂ ಗಣಪತಿಯಷ್ಟು ಸರ್ವಜನಾದರಣೀಯ,ಸರ್ವಜನಪ್ರಿಯ ದೇವರು ಮತ್ತೊಬ್ಬರಿಲ್ಲ.ಶಿವ ಪಾರ್ವತಿಯರ ಮುದ್ದಿನ ಮಗನೆಂಬುದೇ ಗಣಪತಿಯ ಈ ಗೌರವ ವಿಶೇಷಗಳ ಕಾರಣ.ಶಿವಪುತ್ರನೆಂಬ ಹಿರಿಮೆಗೆ ಪಾತ್ರನಾಗಿಯೂ ಅಷ್ಟಾದಶ ಪುರಾಣಗಳಲ್ಲಿ ಒಬ್ಬಪುರಾಣ ದೇವನಾಗಿಯೂ ಸ್ಕಂದ ಅಥವಾ ಷಣ್ಮುಖನು ಗಣಪತಿಯಷ್ಟು ಮನ್ನಣೆಗೆ ಪಾತ್ರನಾಗಲಿಲ್ಲ ಎನ್ನುವುದನ್ನು ಗಮನಿಸಿದಾಗ ಗಣೇಶನ ವಿಶೇಷತೆ ಎದ್ದು ಕಾಣಿಸುತ್ತದೆ.ಗಣೇಶನು ಷಣ್ಮುಖನಂತೆ ಶಿವನ ವೀರ್ಯಸಂಜಾತನಲ್ಲವಾದರೂ ಆತನು ಷಣ್ಮುಖನಿಗಿಂತ ಮಿಗಿಲುಮಹಿಮೆಯುಳ್ಳವನು.ಪಾರ್ವತಿಯ ಶಕ್ತಿಸೃಷ್ಟಿಯಾಗಿ ಶಿವನಿಂದ ನಿಗ್ರಹಿಸಿ,ಅನುಗ್ರಹಿಸಲ್ಪಟ್ಟಿದ್ದರಿಂದಲೇ ಗಣೇಶನಿಗೆ ಪ್ರಥಮ ಪ್ರಾಶಸ್ತ್ಯವು.ಇದೇ ಗಣೇಶತತ್ತ್ವವು.
ಪುರಾಣಗಳಂತೆ ಗಣೇಶನನ್ನು ಪಾರ್ವತಿಯು ಸೃಷ್ಟಿಸುವಳು.ಶಿವನು ಲೋಕೋದ್ಧಾರಾರ್ಥವಾಗಿ ಭೂಲೋಕಕ್ಕೆ ತೆರಳಿರುವನು.ಕೈಲಾಸದಲ್ಲಿ ಒಬ್ಬಳೇ ಇದ್ದುದರಿಂದ ಬೇಸರ ಕಳೆಯಲು ತನಗೊಬ್ಬ ಪುತ್ರನಿರಬೇಕು ಎನ್ನುವ ಉದ್ದೇಶದಿಂದ ಪಾರ್ವತಿಯು ತನ್ನ ಬೆನ್ನಿನ ಮಣ್ಣಿನಿಂದ ಒಂದು ಪುಟ್ಟಬೊಂಬೆಯನ್ನು ಮಾಡಿ ಅದಕ್ಕೆ ಜೀವಕಳೆ ತುಂಬುವಳು.ಮಗು ಅಮ್ಮಾ ಎನ್ನಲು ಅಪ್ಪಿ ಮುದ್ದಾಡುವಳು ಮತ್ತು ಮುದ್ದು ಬಾಲಕನೊಂದಿಗೆ ಸಂತಸದಿಂದ ದಿನಗಳನ್ನು ಕಳೆಯುವಳು.
ಹೀಗಿರಲು ಒಂದು ದಿನ ಮಧ್ಯಾಹ್ನ ಪಾರ್ವತಿಯು ಸ್ನಾನಕ್ಕೆ ತೆರಳಲೆಳಸಿ ತನ್ನಣುಗನನ್ನು ಬಾಗಿಲು ಕಾಯಲು ಕುಳ್ಳಿರಿಸಿ ‘ ಯಾರನ್ನೂ ಒಳಬಿಡಬೇಡ’ ಎನ್ನುವ ಆಜ್ಞೆಯನ್ನು ವಿಧಿಸಿ, ಒಳಹೋಗುವಳು.ಭೂಲೋಕದ ಭಕ್ತಜನರನ್ನು ಅನುಗ್ರಹಿಸಿದ ಬಳಿಕ ಶಿವನಿಗೆ ಕೈಲಾಸ ಮತ್ತು ತನ್ನ ಮಡದಿ ಪಾರ್ವತಿಯ ನೆನಪು ಆಗಿ ಓಡೋಡಿ ಬರುವನು ಕೈಲಾಸದತ್ತ! ಭಕ್ತವತ್ಸಲನಾದ ಶಿವನಿಗೆ ತನ್ನ ಮಡದಿ ಮಕ್ಕಳಿಗಿಂತ ತನ್ನ ಭಕ್ತರೇ ಹೆಚ್ಚುಪ್ರಿಯರು.ಕೈಲಾಸದ ದ್ವಾರದಲ್ಲೊಬ್ಬ ಪುಟ್ಟ ಬಾಲಕ ಕುಳಿತಿದ್ದಾನೆ! ಆಶ್ಚರ್ಯವಾಯಿತು ಶಿವನಿಗೆ.ಒಳಹೋಗಲು ಪ್ರಯತ್ನಿಸಿದ ಶಿವನನ್ನು ತಡೆಯುವನು ಪುಟ್ಟಬಾಲಕ !” ಏಯ್,ಯಾರು ನೀನು ನನ್ನನ್ನು ತಡೆಯುತ್ತಿರುವವನು? ನಾನು ಯಾರೆಂಬುದು ತಿಳಿಯದೆ ನಿನಗೆ?” ಬಾಲಕ ಧೈರ್ಯದಿಂದ ಉತ್ತರಿಸುವನು ” ನೀನು ಯಾರಾದರೆ ನನಗೇನು ? ಅಮ್ಮ ಯಾರನ್ನೂ ಒಳಬಿಡಬೇಡ” ಎಂದು ಹೇಳಿದ್ದಾಳೆ”. ” ನಾನು ನಿನ್ನ ಅಮ್ಮನ ಗಂಡ,ಒಳಹೋಗಬೇಕು ಬಿಡು” ಆತುರಪಡುವನು ಶಿವ.” ಗಂಡನೊ ,ಗುಂಡನೊ ನನಗಿದು ತಿಳಿಯದು,ನಡೆ ಹೊರಡು” ಎಂದು ತನ್ನ ಕೈಯಲ್ಲಿದ್ದ ಕೋಲಿನಿಂದ ಶಿವನನ್ನು ಹೊಡೆಯುವನು.ಈರೇಳುಲೋಕಗಳಲ್ಲಿ ಪೂಜೆಗೊಳ್ಳುವ ಶಿವನಿಗೆ ಪುಟ್ಟಬಾಲಕನಿಂದ ‘ ಪೂಜೆ’ ಆಯಿತು ! ಸಿಟ್ಟಿಗೆದ್ದ ಶಿವನು ತನ್ನ ಎಡಗೈ ಕಿರಿಬೆರಳ ಉಗುರಿನಿಂದ ಬಾಲಕನ ಶಿರವನ್ನು ಕತ್ತರಿಸಿ ಎಸೆಯುವನು.ಮಗು ” ಅಮ್ಮಾ” ಎಂದು ಚೀರಿ,ಪ್ರಾಣ ಕಳೆದುಕೊಳ್ಳುವನು.” ಅಮ್ಮಾ” ಎಂದು ಮಗು ಅರಚಿದ್ದನ್ನು ಕೇಳಿಸಿಕೊಂಡ ಪಾರ್ವತಿಯು ಏನೋ ಅನಾಹುತವು ಘಟಿಸಿರಬೇಕು ಎಂದು ಗಡಬಡಿಸಿ ಹೊರಬರುವಳು.ಬಂದು ನೋಡುತ್ತಾಳೆ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದೆ ರುಂಡವಿಲ್ಲದ ಮುಂಡ.ಮಗನ ದುರಂತವನ್ನು ಕಂಡ ಪಾರ್ವತಿಯು ರೋಷಾವೇಶಗೊಂಡಳು.ಮೈಯೆಲ್ಲ ಕೋಪ ಉಕ್ಕಿತು.ಕಣ್ಣುಗಳು ಬೆಂಕಿಯ ಉಂಡೆಗಳಾದವು.ಕೈಯಲ್ಲಿ ತ್ರಿಶೂಲ ಹಿಡಿದು ಘರ್ಜಿಸುತ್ತ ಪ್ರಳಯ ಭಯಂಕರಳಾಗಿ ಕುಣಿಯತೊಡಗಿದಳು.ಪಾರ್ವತಿಯ ತಾಂಡವ ನೃತ್ಯಕ್ಕೆ ಲೋಕಗಳು ಕಂಪಿಸತೊಡಗಿದವು,ಅಲ್ಲೋಲಕಲ್ಲೋಕಗೊಂಡವು ಲೋಕಗಳು.ಗಿರಿಗಳುದರತೊಡಗಿದವು.ಸಮುದ್ರವು ಉಕ್ಕೇರಿತು,ನದಿಗಳು ತುಂಬಿ ಹರಿಯತೊಡಗಿದವು.ಜಗತ್ತು ಅಕಾಲದಲ್ಲಿ ಪ್ರಳಯಕ್ಕೀಡಾಗುತ್ತಿದೆಯೋ ಎಂದು ದೇವತೆಗಳು ಬ್ರಹ್ಮ ವಿಷ್ಣುಗಳ ನೇತೃತ್ವದಲ್ಲಿ ಕೈಲಾಸದತ್ತ ಧಾವಿಸುವರು.ಪಾರ್ವತಿಯ ಭೀಕರಾವತಾರವನ್ನು ಕಂಡು ಶಿವನು ಬೆರಗಾಗಿ,ಮಾತನಾಡದೆ ನಿಂತಿದ್ದಾನೆ.ಕೈಲಾಸಕ್ಕೆ ಬಂದ ಬ್ರಹ್ಮ ವಿಷ್ಣು ಮತ್ತು ದೇವತೆಗಳು ಮಗುವಿನ ಮುಂಡ ರಕ್ತದಲ್ಲಿ ಬಿದ್ದಿರುವುದು ಕಾಣುವರು.
ಬ್ರಹ್ಮನು ವಿಷಯವನ್ನರಿತು ಶಿವನನ್ನು ಉದ್ದೇಶಿಸಿ ” ಪ್ರಭು ಪರಮೇಶ್ವರನೆ,ಜಗನ್ಮಾತೆಯು ರುದ್ರಾಣಿಯಾಗಿ ಪ್ರಳಯನಾಟ್ಯಗೈಯುತ್ತಿರುವದರಿಂದ ಅಕಾಲಪ್ರಳಯ ಭೀತಿಗೊಳಗಾಗಿ ಲೋಕಗಳು ತತ್ತರಿಸುತ್ತಿವೆ.ಈ ಮಗುವನ್ನು ಬದುಕಿಸು,ವಿಶ್ವೇಶ್ವರಿಯನ್ನು ಶಾಂತಗೊಳಿಸು,ಲೋಕಗಳನ್ನು ರಕ್ಷಿಸು” ಎಂದು ಪ್ರಾರ್ಥಿಸುವನು.ಬ್ರಹ್ಮ ವಿಷ್ಣು ಇಂದ್ರಾದಿ ದೇವತೆಗಳು ಪಾರ್ವತಿಯನ್ನು ” ಶಾಂತಳಾಗು ತಾಯಿ,ಶಾಂತಳಾಗು” ಎಂದು ಬಗೆಬಗೆಯ ಸ್ತುತಿವಾಕ್ಕುಗಳಿಂದ ಪ್ರಾರ್ಥಿಸುವರು.ಶಿವನು “ಉತ್ತರಕ್ಕೆ ಮುಖಮಾಡಿ ಮಲಗಿರುವ ಜೀವಿಯ ತಲೆ ಒಂದನ್ನು ತರಿದು ತನ್ನಿ” ಎಂದು ದೇವತೆಗಳಿಗೆ ಆಜ್ಞಾಪಿಸಿವನು.ದಡಬಡಿಸಿ ನಡೆದ ದೇವತೆಗಳು ಆನೆಯ ಮರಿ ಒಂದು ಉತ್ತರಕ್ಕೆ ಮುಖಮಾಡಿ ಮಲಗಿದ್ದನ್ನು ಕಂಡರು.ಅದರ ತಲೆಕತ್ತರಿಸಿ ತರುವರು.ಶಿವನು ಆನೆಯ ಶಿರವನ್ನು ಬಾಲಕನ ಮೃತದೇಹಕ್ಕೆ ಇಟ್ಟು ಜೀವದಾನ ಮಾಡುವನು.ಮಗು ” ಅಮ್ಮಾ” ಎನ್ನುತ್ತ ಮೇಲೇಳುವುದು.ಮಗು ಬದುಕಿದ್ದನ್ನು ಕಂಡು ಪಾರ್ವತಿಯು ಸಂತಸ ಹೊಂದುವಳು,ತನ್ನ ಕೋಪಾವೇಶವನ್ನು ಅಡಗಿಸಿಕೊಂಡು ಶಾಂತಳಾಗಿ ಮಗುವನ್ನು ಅಪ್ಪಿ ಮುದ್ದಾಡುವಳು.ಬ್ರಹ್ಮ- ವಿಷ್ಣು, ದೇವತೆಗಳು ನಿರಾತಂಕಿತರಾಗಿ ನೆಮ್ಮದಿಯ ನಿಟ್ಟುಸಿರಿಡುವರು.ಆನೆಯ ಮುಖದಿಂದ ಮರುಹುಟ್ಟು ಪಡೆದ ಮಗುವನ್ನು ಬ್ರಹ್ಮನು ” ನನ್ನ ಬ್ರಹ್ಮಾಸ್ತ್ರವು ನಿನ್ನ ಮೇಲೆ ನಾಟದಿರಲಿ” ಎಂದು ವರವನ್ನಿತ್ತನು.ವಿಷ್ಣುವು ” ನನ್ನ ಸುದರ್ಶನಾಸ್ತ್ರವು ನಿನ್ನನ್ನು ತಾಕದಿರಲಿ” ಎಂದು ವರವನ್ನಿತ್ತನು.ಇಂದ್ರನು ” ನನ್ನ ವಜ್ರಾಯುಧವು ನಿನ್ನನು ಸೋಕದು” ಎಂದು ವರವಿತ್ತನು.ದೇವತೆಗಳೆಲ್ಲರೂ ಒಂದೊಂದು ವರವನ್ನಿತ್ತರು.ಕೊನೆಗೆ ಶಿವನು” ಇಂದಿನಿಂದ ನೀನು ಗಣಗಳಿಗೆ ಒಡೆಯನಾಗಿ,ಆದಿಪೂಜಿತನಾಗು” ಎಂದು ವರವಿತ್ತು,ಉದ್ಧರಿಸಿದನು ಕರಿಮುಖನನ್ನು.ಬ್ರಹ್ಮ ವಿಷ್ಣು ಮತ್ತು ಶಿವ ಹಾಗೂ ಸಮಸ್ತದೇವತೆಗಳ ವರಗಳಿಂದ ಅನುಗ್ರಹಿತನಾದ ಬಾಲಕನನ್ನು ಗಣಾಧೀಶ್ವರನನ್ನಾಗಿ ಪಟ್ಟಾಭಿಷೇಕ ಮಾಡಲಾಯಿತು.ಅಂದಿನಿಂದ ಪಾರ್ವತಿಯ ಪುತ್ರ ಗಣೇಶ್ವರನಾಗಿ,ಗಣಪತಿಯಾಗಿ ಲೋಕಪೂಜಿತನಾದನು.ಇದು ಗಣಪತಿಯ ಕಥೆ.
ಭಾರತೀಯ ಋಷಿ ಮುನಿ ಸಿದ್ಧರು -ಸಂತರುಗಳು ಆಧ್ಯಾತ್ಮಿಕ ತತ್ತ್ವವನ್ನು ಜನಸಾಮಾನ್ಯರಿಗೆ ಅರ್ಥವಾಗುವ ದೃಷ್ಟಿಯಿಂದ ವಿವರಿಸುವಾಗ ಕಥೆಯರೂಪಕವನ್ನು ಬಳಸುವರು.ತತ್ತ್ವವು ಕಥೆಯ ರೂಪವನ್ನು ತಾಳುವಾಗ ಬಳಸುವ ಶಬ್ದ,ಅರ್ಥಗಳು,ರೂಪಕ- ಪ್ರತಿಮೆಗಳು ಲೋಕಾರ್ಥದೃಷ್ಟಿಯನ್ನು ಹೊಂದುವವು.ಕೆಲವರಿಗೆ ಇದು ಸಂದೇಹವಾದರೆ ಮತ್ತೆ ಕೆಲವರಲ್ಲಿ ಗೊಂದಲ ಉಂಟಾಗುತ್ತದೆ.ಕೆಲವರು ‘ ದೇವಿ ಪಾರ್ವತಿಯ ಬೆನ್ನ ಮಣ್ಣಿನಿಂದ ಗಣಪತಿ ಹುಟ್ಟಬೇಕಾದರೆ ಪಾರ್ವತಿಯ ದೇಹದಲ್ಲಿ ಬಂಡಿಗಟ್ಟಲೆ ಮಣ್ಣು ಇತ್ತೆ? ಪಾರ್ವತಿಯು ಎಷ್ಟು ವರ್ಷಗಳಿಂದ ಸ್ನಾನ ಮಾಡಿರಲಿಲ್ಲ? ” ಎಂದು ಪ್ರಶ್ನಿಸಿ ತಮ್ಮದು ಖಾಲಿಮಂಡೆ ಎಂಬುದನ್ನೂ ನಿರೂಪಿಸಿದ್ದಾರೆ !ಮಂಡೆಖಾಲಿಯಾದವರಿಗೆ ವಿತಂಡಬುದ್ಧಿ,ವಿಪರೀತ ಬುದ್ಧಿ ಉಂಟಾಗುವುದು ಸಹಜ.ತಲೆ ಇದ್ದವರು ತತ್ತ್ವಾರ್ಥ ಏನಿರಬಹುದು ಎಂದು ಯೋಚಿಸುತ್ತಾರೆ,ತಲೆಯಲ್ಲಿ ಕಸತುಂಬಿಕೊಂಡವರು ತತ್ತ್ವ- ದರ್ಶನಗಳಲ್ಲಿ ಕಸವನ್ನೇ ಕಾಣುತ್ತಾರೆ.ಪಾರ್ವತಿಯು ಲೋಕದ ಹೆಂಗಸರಂತೆ ಸಾಮಾನ್ಯ ಹೆಣ್ಣಲ್ಲ,ಪರಾಶಕ್ತಿ,ಜಗನ್ಮಾತೆಯು.ಆಕೆಗೆ ಸೃಷ್ಟಿ ಮಾಡಲು ಬಂಡಿಗಟ್ಟಲೆ ಮಣ್ಣು ಬೇಕಿಲ್ಲ,ಮಣ್ಣಿನ ಒಂದು ಕಣವೇ ಸಾಕು.ಜಗತ್ತಿನಲ್ಲಿ ಜೀವರುಗಳು ಹುಟ್ಟುವುದು ಕೂಡ ಒಂದೇ ಹನಿ ವೀರ್ಯದಿಂದ.ಒಂದೇ ಬಿಂದುವಿನಿಂದ ಆಗುತ್ತದೆ ಜೀವಸೃಷ್ಟಿ.ಪಾರ್ವತಿಯು ತನ್ನಂತರ್ಗತ ಸೃಷ್ಟಿಸತ್ತ್ವದಿಂದ ಬಾಲಕನನ್ನು ಹುಟ್ಟಿಸುತ್ತಾಳೆ.ಇದು ತಿಳಿದುಕೊಳ್ಳಬೇಕಾದ ತತ್ತ್ವ.
ಗಣಪತಿಯ ಕಥೆಯ ಹಿಂದಣ ದರ್ಶನವನ್ನು ಒಂದಿಷ್ಟು ವಿಚಾರಿಸೋಣ.ಪಾರ್ವತಿ ಪರಮೇಶ್ವರರು ಲೋಕದ ಮಾತಾಪಿತರುಗಳು,ಲೋಕಸೃಷ್ಟಿಯ ನಿಯಾಮಕರು.ಪಾರ್ವತಿಯು ಮಗನನ್ನು ಹುಟ್ಟಿಸಿದ್ದು ಸರ್ವಜ್ಞನಾದ ಶಿವನಿಗೆ ತಿಳಿಯಲಿಲ್ಲವೆ? ತನ್ನ ಮಗನನ್ನೇ ತಾನು ಕೊಲ್ಲುವಷ್ಟು ಮುಂಗೋಪಿಯೇ ಶಿವನು ? ಎನ್ನುವ ಪ್ರಶ್ನೆಗಳಿಗೆ ಶಿವನ ಪರಮೇಶ್ವರ ತತ್ತ್ವದಲ್ಲಿ ಉತ್ತರವಿದೆ.ಶಿವನು ಜಗನ್ನಿಯಾಮಕನಾದ ವಿಶ್ವೇಶ್ವರನು.ತನ್ನ ವಿಶ್ವಲೀಲೆಗಾಗಿ ಬ್ರಹ್ಮ,ವಿಷ್ಣು ಮತ್ತು ರುದ್ರರೆಂಬ ಮೂವರು ಮೂರ್ತಿಗಳನ್ನು ಸೃಷ್ಟಿಸಿ ಅವರಿಗೆ ಸೃಷ್ಟಿ,ಸ್ಥಿತಿ ಮತ್ತು ಪ್ರಳಯಗಳ ಅಧಿಕಾರವನ್ನು ನೀಡಿರುವನು.ಶಿವನ ವಿಶ್ವನಿಯಮದಂತೆ ಸೃಷ್ಟಿಕಾರ್ಯವು ಬ್ರಹ್ಮನಿಗೆ ಸೇರಿದುದು,ಬೇರೆಯವರು ಅದನ್ನು ಮಾಡುವಂತಿಲ್ಲ.ಪಾರ್ವತಿಯು ತನ್ನ ಹೆಂಡತಿ,ತನ್ನ ಶಕ್ತಿಯೇ ಆದರೂ ಅವಳು ಮಗುವನ್ನು ಸೃಷ್ಟಿಸಿದ್ದು ತನ್ನ ವಿಶ್ವನಿಯಮಕ್ಕೆ ವಿರುದ್ಧವಾದುದು,ಬ್ರಹ್ಮನ ಸೃಷ್ಟಿಯ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಿದಂತೆ.ಆ ಕಾರಣದಿಂದ ಶಿವನು ಬಾಲಕನ ಶಿರವನ್ನು ಕತ್ತರಿಸುತ್ತಾನೆ.ಬ್ರಹ್ಮ ವಿಷ್ಣುಗಳನ್ನೊಳಗೊಂಡ ದೇವತೆಗಳ ಸಮೂಹದೆದುರು ಮತ್ತೆ ಮಗುವನ್ನು ಬದುಕಿಸುವ ಮೂಲಕ ತಾನು ನಿಗ್ರಹಾನುಗ್ರಹ ಸಮರ್ಥನಾದ ಪರಮೇಶ್ವರನು ಎನ್ನುವುದನ್ನು ನಿರೂಪಿಸುವನು.ಬ್ರಹ್ಮನಿಗೆ ತಾನಿತ್ತ ಸೃಷ್ಟಿಯ ಅಧಿಕಾರವನ್ನು ತನ್ನ ಹೆಂಡತಿಯು ಬಳಸಿದರೂ ತಾನು ಸುಮ್ಮನಿರಲಾರೆ ಎನ್ನುವುದನ್ನು ಸಾರುವ ಶಿವನು ತನ್ನ ವಿಶ್ವನಿಯಮಗಳಿಗೆ ತಾನು ಬದ್ಧನಿರುವೆನು ಎನ್ನುವುದನ್ನು ಪ್ರಕಟಪಡಿಸುವನು.ಪಾರ್ವತಿಯು ತನ್ನ ಮಗನನ್ನು ಬದುಕಿಸಿಕೊಳ್ಳಲೇಬೇಕು ಎನ್ನುವ ಹಠದಿಂದ ಪ್ರಳಯದುರ್ಗೆಯಾಗಿ ನರ್ತಿಸುವಳು.ವಿಶ್ವೇಶ್ವರನಾದ ಶಿವನ ಅಮೃತಹಸ್ತಸ್ಪರ್ಶದಿಂದಲೇ ತನ್ನ ಮಗನು ಮರುಹುಟ್ಟು ಪಡೆಯುವನು ಎಂಬುದನ್ನು ಆಕೆ ಬಲ್ಲಳು.ಇಬ್ಬರಿಗೂ ಅವರವರ ತತ್ತ್ವದಲ್ಲಿ ಬದ್ಧತೆ!ಪರಬ್ರಹ್ಮೆಯಾದ ತಾನು ತನ್ನ ಮಗನಿಗೆ ಜೀವದಾನ ಮಾಡಿದರೆ ಅದು ಶಿವನ ವಿಶ್ವನಿಯಾಮಕ ತತ್ತ್ವಕ್ಕೆ ಅಪಚಾರ ಎಂದು ಬಗೆದು ರುದ್ರಾಣಿಯ ರೂಪತಳೆದು ಪ್ರಳಯ ನಾಟ್ಯವನ್ನಾಡುವಳು.ಬ್ರಹ್ಮ ವಿಷ್ಣುಗಳನ್ನೊಳಗೊಂಡ ದೇವತಿಂಥಣಿಯೆದುರೇ ತನ್ನ ಮಗನನ್ನು ಬದುಕಿಸಿಕೊಳ್ಳುವಳು.
ಎಲ್ಲ ದೇವತೆಗಳಿಂದ ವರಗಳನ್ನು ಪಡೆದಿದ್ದರಿಂದ ಲೋಕಪೂಜ್ಯನಾದ ಕುಮಾರನು ಶಿವನ ಗಣಗಳಿಗೆ ಒಡೆಯನಾಗುವ ಮೂಲಕ ಗಣಪತಿಯಾಗಿ,ಆದಿಪೂಜಿತನಾದ.ಶಿವನ ಗಣಗಳೆಂದರೆ ಶಿವನ ವಿಶ್ವನಿಯಮಕ್ಕೆ ಸಹಕರಿಸಿ ಸೇವಿಸುವ ಕೈಲಾಸದಲ್ಲಿರುವ ಸಾವಿರ ಗಣಾಧೀಶ್ವರರುಗಳು.ಅವರುಗಳಿಗೆಲ್ಲ ಒಡೆಯನಾದ ಗಣಪತಿ.ಶಿವನು ಪುರುಷನಾಗಿ ಪಾರ್ವತಿಯು ಪ್ರಕೃತಿಯಾಗಿ ಪ್ರಕಟಗೊಂಡಿರುವರು.ಪುರುಷ ಮತ್ತು ಪ್ರಕೃತಿಗಳೆರಡರ ಸಂಗಮತತ್ತ್ವವೇ ಗಣಪತಿಯ ಪುತ್ರತತ್ತ್ವ.ಮಗನಲ್ಲಿ ತಂದೆ ತಾಯಿಗಳಿಬ್ಬರ ಗುಣ,ಸ್ವಭಾವ,ಶಕ್ತಿಗಳಿರುವಂತೆ ಗಣಪತಿಯಲ್ಲಿ ಶಿವ ಶಕ್ತಿಯರಿಬ್ಬರ ಜ್ಯೋತಿರ್ ತತ್ತ್ವವಿದೆ,ಪ್ರಕಾಶತತ್ತ್ವವಿದೆ,ಬ್ರಹ್ಮಾಂಡ ತತ್ತ್ವವಿದೆ.ಗಣಪತಿಯ ರೂಪವಿಶೇಷಗಳು ಅವನನ್ನು ಒಬ್ಬ ಅಸಾಮಾನ್ಯ ದೇವರನ್ನಾಗಿಸಿವೆ,ವಿಶಿಷ್ಟ ದೇವರನ್ನಾಗಿಸಿವೆ.ಗಣಪತಿಯ ರೂಪವೆಂದರೆ ಅದು ಬ್ರಹ್ಮಾಂಡ ತತ್ತ್ವವೆ.ಗಣಪತಿಯ ಆಕಾರವೆಂದರೆ ಜಗತ್ತಿನ ತತ್ತ್ವವೆ.ಗಣಪತಿಯು ಸೊಂಡಿಲು ಮುಖ ಉಳ್ಳವನು.ಸೊಂಡಿಲು ಓಂಕಾರವಾಚಕವಾಗಿದ್ದು ಗಣಪತಿಯು ಪ್ರಣವತತ್ತ್ವಮೂರ್ತಿ ಎಂಬುದರ ಸಂಕೇತ.ಗಣಪತಿಯು ಉದ್ದವಾದ ಕಿವಿಗಳನ್ನುಳ್ಳ ಲಂಬಕರ್ಣನಾಗಿರುವನು.ದಶವಿಧನಾದವಾದಿ ಸಕಲನಾದ ತತ್ತ್ವಕ್ಕೆ ಗಣಪತಿಯು ಅಧಿಪತಿಯಾದುದರಿಂದ ಜಗತ್ತಿನ ಸೂಕ್ಷ್ಮಾತಿಸೂಕ್ಷ್ಮಸಂಗತಿಗಳೆಲ್ಲವೂ ಗಣಪತಿಗೆ ಹೊಳೆಯುತ್ತವೆಯಾದ್ದರಿಂದ ಅವನು ಮೊರದಂತಹ ಕಿವಿಗಳುಳ್ಳ ಲಂಬಕರ್ಣನು.ಗಣಪತಿಯು ಡೊಳ್ಳು ಹೊಟ್ಟೆಯ ‘ ಲಂಬೋದರ’ ನಿರುವನು.ವಿಶ್ವನಿಯಾಮಕನಾದ ಪರಶಿವನ ಸೃಷ್ಟಿತತ್ತ್ವವನ್ನು ಅರಿತು,ಅನುಷ್ಠಾನಕ್ಕೆ ತಂದ ಮಹಾಯೋಗಿ ಗಣಪತಿಯಾದುದರಿಂದ ಬ್ರಹ್ಮಾಂಡವನ್ನೆ ತನ್ನ ಪಿಂಡವನ್ನಾಗಿಸಿಕೊಂಡ ಬ್ರಹ್ಮಜ್ಞಾನಿಯು,ಬ್ರಹ್ಮತತ್ತ್ವನು.ತನ್ನ ಡೊಳ್ಳು ಹೊಟ್ಟೆಗೆ ಹಾವನ್ನು ಸುತ್ತಿಕೊಂಡಿದ್ದಾನೆ ಗಣಪತಿ.ಹಾವು ಶಕ್ತಿಯ ಸಂಕೇತವಾಗಿದ್ದು ಶಿವ ಶಕ್ತಿಯರಿಬ್ಬರ ಪುತ್ರನಾದ ತಾನು ಶಕ್ತಿಧರನು ಎನ್ನುವುದನ್ನು ಸಾರುತ್ತಿದ್ದಾನೆ ಗಣಪತಿಯು ಹಾವನ್ನು ತನ್ನ ಹೊಟ್ಟೆಗೆ ಸುತ್ತಿಕೊಳ್ಳುವ ಮೂಲಕ.ಡೊಳ್ಳು ಹೊಟ್ಟೆಯ ಗಣಪನಿಗೆ ಪುಟ್ಟ ಇಲಿಯು ವಾಹನವಾಗಿದೆ !ಇಲಿಯು ಅಜ್ಞಾನ ಅಂಧಕಾರದ ಸಂಕೇತವಾಗಿದ್ದು ತನ್ನನ್ನು ಪೂಜಿಸಿ,ಸೇವಿಸುವವರ ಅಜ್ಞಾನ- ಅಂಧಕಾರಗಳನ್ನು ಕಳೆದು ಅವರನ್ನು ಜ್ಞಾನಮಾರ್ಗದಲ್ಲಿ ಕರೆದೊಯ್ಯುವೆನು ಎನ್ನುವ ಗಣಪತಿಯ ಅಭಯವೇ ಅವನು ಇಲಿವಾಹನನಾಗಿರುವ ಸಂಕೇತಾರ್ಥವು.ಗಣಪತಿಗೆ ಪ್ರಿಯ ಆಹಾರವು ಗರಿಕೆಯು.ಇದು ಗಣಪತಿಯು ಮಣ್ಣಿನಮಕ್ಕಳಾದ ರೈತರ ಬಂಧು,ಶ್ರಮಿಕ ವರ್ಗದ ದೇವರು ಎನ್ನುವುದರ ಸಂಕೇತ.’ ಮೋದಕಪ್ರಿಯ ಗಣಪತಿ’ ಇತ್ತೀಚಿನವರ ಕಲ್ಪನೆ,ಮೂಲಗಣಪತಿಯಲ್ಲ.
ಗಣಪತಿಯನ್ನು ಪೂಜಿಸಿ,ಪ್ರಾರಂಭಿಸುವ ಎಲ್ಲ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನೆರವೇರುತ್ತವೆ.ಜಗತ್ತು ಶಕ್ತಿಯ ಅಣು ಕಣಗಳಿಂದಾದ ಶಕ್ತಿತತ್ತ್ವಸೃಷ್ಟಿಯು.ಕಣಗಳಲ್ಲೆಲ್ಲ ಗಣಪತಿಯ ಶಕ್ತಿತತ್ತ್ವ ಅಡಗಿರುವುದರಿಂದ ಗಣಪತಿಯ ಪೂಜೆಯಿಂದ ಕಾರ್ಯಸಿದ್ಧಿಯು.ಅಣು ಕಣಗಳ ಸಂಯೋಜನೆಯನ್ನರಿತ ವಿಜ್ಞಾನಿಗಳು ಅದ್ಭುತ ಸಂಶೋಧನೆಗಳನ್ನು ಮಾಡಿದ್ದಾರೆ.ಗಣಪತಿಯ ತತ್ತ್ವವನ್ನರಿತವರು ಪ್ರಕೃತಿಯ ಮೇಲೆ ಪ್ರಭುತ್ವ ಸಾಧಿಸುತ್ತಾರೆ.ಯೌಗಿಕವಾಗಿ ಷಡ್ಚಕ್ರಗಳಲ್ಲಿ ಗಣಪತಿಯು ಮೂಲಾಧಾರಚಕ್ರದಲ್ಲಿ ಸ್ಥಿತನಾಗಿರುವನು.ಮೂಲಾಧಾರವು ಷಟ್ಚಕ್ರಗಳಲ್ಲಿ ಮೊದಲನೆಯದು ಮಾತ್ರವಲ್ಲ,ಮೂಲಾಧಾರಚಕ್ರಭೇದನದಿಂದಲೇ ಯೋಗಜೀವನದ ಪ್ರಾರಂಭ.ಆ ಕಾರಣದಿಂದ ಗಣಪತಿಯು ಆದಿಪೂಜಿತನು.ಪರಶಿವನ ಕಾರುಣ್ಯವನ್ನುಂಡವರೇ ಶರಣರು.ಗಣಪತಿಯು ಮೊದಲು ಶಿವನಿಂದ ನಿಗ್ರಹಿಸಲ್ಪಟ್ಟು ಬಳಿಕ ಅನುಗ್ರಹಿಸಲ್ಪಟ್ಟಿದ್ದರಿಂದ ಆತನು ಆದಿಶರಣನು,ಶರಣತತ್ತ್ವಕ್ಕೆ ಮೂಲನು.ಆದಿಶರಣನಾದ ಗಣಪತಿಯು ಆದಿಪೂಜಿತನಾದರದು ಸಹಜ.ಇದುವೇ ಗಣಪತಿಯ ತತ್ತ್ವ- ದರ್ಶನ.

೩೦.೦೮.೨೦೨೨