ಮಾನ್ವಿ ಆ.28: ‘ಮಾನ್ವಿ ಪಟ್ಟಣ ಸೌಹಾರ್ದ ಸಹಕಾರಿ ಬ್ಯಾಂಕ್ 2021-22ನೆ ಸಾಲಿನಲ್ಲಿ ರೂ6.42ಕೋಟಿ ನಿವ್ವಳ ಲಾಭ ಗಳಿಸಿದೆ’ ಎಂದು ಬ್ಯಾಂಕಿನ ಅಧ್ಯಕ್ಷ ಆರ್.ತಿಮ್ಮಯ್ಯ ಶೆಟ್ಟಿ ಹೇಳಿದರು.
ಭಾನುವಾರ ಪಟ್ಟಣದ ಎಸ್ಆರ್ಎಸ್ವಿ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾನ್ವಿ ಪಟ್ಟಣ ಸೌಹಾರ್ದ ಸಹಕಾರಿ ಬ್ಯಾಂಕಿನ 27ನೇ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.’ ಪಟ್ಟಣ ಸಹಕಾರಿ ಬ್ಯಾಂಕ್ ಪ್ರಧಾನ ಕಚೇರಿ ಸೇರಿ ರಾಜ್ಯದ ವಿವಿಧೆಡೆ ಇರುವ ಇತರ 10 ಇತರ ಶಾಖೆಗಳಲ್ಲಿ ಗ್ರಾಹಕರಿಗೆ ನೂತನ ತಂತ್ರಜ್ಞಾನದ ಕೋರ್ ಬ್ಯಾಂಕಿAಗ್, ಮೊಬೈಲ್ ಆ್ಯಪ್, ಯುಪಿಐ ಪಾವತಿ ಸೇರಿದಂತೆ ಇತರ ಸೌಲಭ್ಯಗಳ ಮೂಲಕ ಗುಣಮಟ್ಟದ ಸೇವೆ ಒದಗಿಸಲಾಗುತ್ತಿದೆ. ಬ್ಯಾಂಕಿನ ಬೆಳವಣಿಗೆಗೆ ಆಡಳಿತ ಮಂಡಳಿಯ ಬೆಂಬಲ, ಸಿಬ್ಬಂದಿ ಪರಿಶ್ರಮ ಹಾಗೂ ಷೇರುದಾರರ ಸಹಕಾರ ಮುಖ್ಯ ಕಾರಣ’ ಎಂದು ಅವರು ತಿಳಿಸಿದರು.
ಗಾಂಧಿ ಸ್ಮಾರಕ ಶಿಕ್ಷಣ ಸಂಸ್ಥೆಯ ಅಡಳಿತಾಧಿಕಾರಿ ರಾಮಲಿಂಗಪ್ಪ ಮಾತನಾಡಿ, ‘ಕಳೆದ ಐದು ದಶಕಗಳಲ್ಲಿ ಈ ಭಾಗದ ಶಿಕ್ಷಣ ಹಾಗೂ ಸಹಕಾರಿ ಕ್ಷೇತ್ರಗಳಲ್ಲಿ ಆರ್.ತಿಮ್ಮಯ್ಯ ಶೆಟ್ಟಿ ಅವರು ಕೊಡುಗೆ ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈಚೆಗೆ ನಡೆದ ಕರ್ನಾಟಕ ರಾಜ್ಯ ಸಂಯುಕ್ತ ಸೌಹಾರ್ದ ಸಹಕಾರ ಮಹಾಮಂಡಳಿಯ ಚುನಾವಣೆಯಲ್ಲಿ ನಿರ್ದೇಶಕರಾಗಿ ಆಯ್ಕೆಯಾದ ಆರ್.ತಿಮ್ಮಯ್ಯ ಶೆಟ್ಟಿ ಅವರನ್ನು ಬ್ಯಾಂಕಿನ ಆಡಳಿತ ಮಂಡಳಿಯ ನಿರ್ದೇಶಕರು, ಗಾಂಧಿ ಸ್ಮಾರಕ ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು.
ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಗೋಪಾಲಕೃಷ್ಣ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ನಾಗರಾಜ ಬ್ಯಾಂಕಿನ ವಾರ್ಷಿಕ ವರದಿ ಮಂಡಿಸಿದರು. ಜಿ.ಪಂ ಮಾಜಿ ಅಧ್ಯಕ್ಷ ದೊಡ್ಡಬಸಪ್ಪಗೌಡ ಭೋಗಾವತಿ,
ಬ್ಯಾಂಕಿನ ಉಪಾಧ್ಯಕ್ಷೆ ಡಾ.ರೋಹಿಣಿ ಮಾನ್ವಿಕರ್, ನಿರ್ದೇಶಕರಾದ ಡಿ.ರಾಮಚಂದ್ರ ಶೆಟ್ಟಿ, ಟಿ.ರಾಮಕೃಷ್ಣ, ಆರ್.ವೈಜನಾಥ ಶೆಟ್ಟಿ, ಆರ್.ಶ್ರೀನಾಥ ಶೆಟ್ಟಿ, ಜಿ.ರಮೇಶಬಾಬು, ಎ.ಭಾಸ್ಕರ್, ಬಿ.ಚಂದ್ರಕಲಾ, ಎಂ.ಮಲ್ಲಿಕಾರ್ಜುನ ನಾಯಕ, ಗೋಪಿಕೃಷ್ಣ , ಬಿ.ಶ್ರೀನಿವಾಸಕುಮಾರ, ಜಗನ್ನಾಥ ಇದ್ದರು. ಬ್ಯಾಂಕಿನ ಅಧಿಕಾರಿ ದೇವಪ್ರಸಾದ್ ನಿರೂಪಿಸಿದರು.