ಶಂಕರಾಚಾರ್ಯಸ್ವಾಮಿ ಎನ್ನುವ ಮಹಾನುಭಾವನ ಮನುಷ್ಯತ್ವಹೀನ ಕೃತ್ಯ ಒಂದರ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.ಉತ್ತರ ಪ್ರದೇಶದ ಇಟಾವ ಸಂಸದ ಡಾ. ರಾಮಶಂಕರ ಕಠೇರಿಯಾ ಅವರು ಬೆಂಗಳೂರಿನಲ್ಲಿ ಶಂಕರಾಚಾರ್ಯ ಎನ್ನುವ ಸ್ವಾಮಿಯನ್ನು ಭೇಟಿಯಾಗಲು ಹೋದಾಗ ‘ ನೀನು ಅಸ್ಪೃಶ್ಯ.ನೀನೇಕೆ ಒಳಬಂದೆ?’ ಎಂದು ಎಗರಾಡಿದ ಸ್ವಾಮಿ ಸಂಸದರು ಭಕ್ತಿಯಿಂದ ಪಾದಮುಟ್ಟಿ ನಮಸ್ಕರಿಸಲು ಹೋದಾಗ ತನ್ನ ಪಾದಗಳನ್ನು ಸಹ ಮೇಲಕ್ಕೆತ್ತಿಕೊಂಡಿದ್ದಾನೆ ! ಇಂತಹ ಸ್ವಾಮಿಗಳು ಧರ್ಮ,ಆಧ್ಯಾತ್ಮಕ್ಷೇತ್ರಗಳಿಗೆ ಕಳಂಕ.ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವವನ್ನು ಆಚರಿಸಿದ ವರ್ಷದಲ್ಲಿಯೂ ಇಂತಹ ರಾಕ್ಷಸಿ ಕೃತ್ಯಗಳು ನಡೆಯುತ್ತಿರುವುದು ಶೋಚನೀಯ.ಒಬ್ಬ ಸಂಸದರನ್ನೇ ಅಸ್ಪೃಶ್ಯ ಎಂದು ಜರೆಯುವ ಈ ಸ್ವಾಮಿ ಜನಸಾಮಾನ್ಯ ದಲಿತರ ಬಗ್ಗೆ ಎಂತಹ ಅಭಿಪ್ರಾಯ ಹೊಂದಿರಬಹುದು? ಅಷ್ಟಕ್ಕೂ ಸಂಸದ ಡಾ.ರಾಮಶಂಕರ ಕಠೇರಿಯಾ ಈ ಕೊಳಕಮನಸ್ಕ ಸಂನ್ಯಾಸಿಯಲ್ಲಿ ಅದೇನು ವಿಶೇಷಕಂಡು ಈತನ ದರ್ಶನಕ್ಕೆ ಹೋಗಿದ್ದರೊ?ಪ್ರಜ್ಞಾವಂತರಾರೂ ಮನುವಾದಿ ಮಠ ಪೀಠಾಧೀಶರುಗಳ ದರ್ಶನಕ್ಕೆ ಹೋಗುವುದಿಲ್ಲ,ಹೋಗಲೂಬಾರದು.
ಮಾನವೀಯತೆಯನ್ನು ಎತ್ತಿಹಿಡಿದ ಕಾರಣದಿಂದಲೇ ನಮ್ಮ ಸಂವಿಧಾನ ಇಂದು ವಿಶ್ವಮಾನ್ಯತೆಯನ್ನು ಪಡೆದಿದೆ.ಸಂವಿಧಾನವು ಅಸ್ಪೃಶ್ಯತೆಯನ್ನು ಮೂಲೋತ್ಪಾಟನೆ ಮಾಡಿದೆಯಲ್ಲದೆ ಅಸ್ಪೃತ್ಯತೆಯ ಆಚರಣೆಯು ಶಿಕ್ಷಾರ್ಹ ಅಪರಾಧ ಎಂದೇ ಘೋಷಿಸಿದೆ,ಭಾರತೀಯ ಪ್ರಜೆಗಳೆಲ್ಲರೂ ಕಾನೂನು ಮತ್ತು ನಾಗರಿಕ ಸೌಲಭ್ಯಗಳಲ್ಲಿ ಸಮಾನರು ಎಂದು ಘೋಷಿಸಿ,ಸರ್ವರ ಉನ್ನತಿಗೆ ಅವಕಾಶನೀಡಿದ ಶ್ರೇಷ್ಠ ಸಂವಿಧಾನ ನಮ್ಮದು.ಪ್ರಪಂಚದಾದ್ಯಂತ ಪ್ರಶಂಸೆಗೆ ಪಾತ್ರವಾಗಿರುವ ಸಂವಿಧಾನವನ್ನು ಹೊಂದಿದ ದೇಶದಲ್ಲಿ ಕೊಳಕ ಮನಸ್ಕರು ಮನುಸ್ಮೃತಿಯ ಯುಗದಲ್ಲೇ ಇದ್ದಾರೆ ಎನ್ನುವುದು ಅವರ ಆಷಾಢಭೂತಿತನಕ್ಕೆ ಸಾಕ್ಷಿ.
ಇಟಾವ ಸಂಸದ ಡಾ.ರಾಮಶಂಕರ ಕಠೇರಿಯಾ ಅವರಿಗೆ ಪಾದಕೊಡಲೊಪ್ಪದ ಹುಸಿ ಶ್ರೇಷ್ಠತೆಯ ವ್ಯಾಧಿಪೀಡಿತ ಈ ಶಂಕರಾಚಾರ್ಯಸ್ವಾಮಿ ಸೇರಿದಂತೆ ಅಸ್ಪೃಶ್ಯತೆಯನ್ನು ಆಚರಿಸುವ ಶಂಕರ ಅನುಯಾಯಿ ಸ್ವಾಮಿ,ಮಠಾಧೀಶರುಗಳು ಆಚಾರ್ಯಶಂಕರರ ಬದುಕಿನ ಒಂದು ಪ್ರಸಂಗವನ್ನು ಮರೆತಂತಿದೆ.ಶಂಕರಾಚಾರ್ಯರು ಅದ್ವೈತ ಸಿದ್ಧಾಂತವನ್ನು ಬೋಧಿಸುತ್ತ ದೇಶದುದ್ದಗಲಕ್ಕೆ ಸಂಚರಿಸಿ, ವಿಶ್ವನಾಥನ ದರ್ಶನ ಪಡೆಯಲು ಕಾಶಿಕ್ಷೇತ್ರಕ್ಕೆ ಬರುತ್ತಾರೆ.ಅದ್ವೈತವನ್ನು ಬೋಧಿಸುತ್ತಲೂ ‘ ನಾನು ಬ್ರಾಹ್ಮಣ,ಶ್ರೇಷ್ಠನು’ ಎನ್ನುವ ಅಹಮಿಕೆ ಶಂಕರರಲ್ಲಿ ಉಳಿದುಕೊಂಡಿರುತ್ತದೆ.ಶಂಕರರ ಈ ಅಹಂನಿರಸನ ಮಾಡಿ ಉದ್ಧರಿಸಿದ ವಿಶ್ವೇಶ್ವರನ ಕಾರುಣ್ಯ ಪ್ರಸಂಗ ಅದು.ಗಂಗಾನದಿಯಲ್ಲಿ ಮಿಂದು ವಿಶ್ವೇಶ್ವರನ ದರ್ಶನಕ್ಕೆ ಹೋಗುತ್ತಿರುತ್ತಾರೆ ಶಂಕರರು.ಎದುರಿಗೆ ಬರುತ್ತಾನೆ ಒಬ್ಬ ಚಾಂಡಾಲ ಮಾಂಸವನ್ನು ತಿನ್ನುತ್ತ ತನ್ನ ನಾಯಿಗಳೊಂದಿಗೆ! ಮೈಯೆಲ್ಲ ಕುದಿಯಿತು ಶಂಕರಾಚಾರ್ಯರಿಗೆ.ಗಂಗೆಯಲ್ಲಿ ಮಿಂದುಮಡಿಯಾಗಿ ವಿಶ್ವನಾಥನ ದರ್ಶನಕ್ಕೆ ಹೊರಟಾಗ ಕ್ಷುದ್ರಜಂತು,ಚಾಂಡಾಲನ ದರ್ಶನವೆ? ‘ ಛೀ! ಪಾಪಾತ್ಮ.ನೀನೇಕೆ ಬಂದೆ ,ತೊಲಗಾಚೆ ಚಾಂಡಾಲ!’ ಗದರುತ್ತಾರೆ ಶಂಕರರು.ಮಾಂಸದ ತುಣುಕನ್ನು ಸವಿಯುತ್ತಲೇ ತನ್ನ ನಾಯಿಗಳಿಗೆ ಮಾಂಸದ ತುಂಡುಗಳನ್ನು ಎಸೆಯುತ್ತ ಚಾಂಡಾಲ ನಗುತ್ತ ಪ್ರಶ್ನಿಸುತ್ತಾನೆ ;’ ಪಾಪಾತ್ಮ! ಯಾರು ಪಾಪಾತ್ಮ ನಾನೋ ನೀನೋ?’ ಚಾಂಡಾಲನ ಬಾಯಿಂದ ಬಂದ ಈ ಪ್ರಶ್ನೆಯಿಂದ ತಬ್ಬಿಬ್ಬು ಆದ ಶಂಕರರು ‘ ನನಗೇ ವೇದಾಂತ ಉಪದೇಶಿಸುತ್ತಿಯಾ ಚಾಂಡಾಲ’ ಎಂದು ಮತ್ತೆ ಗದರಿಸುತ್ತಾರೆ.’ ನಿನ್ನದು ಬರಿ ಉಪದೇಶದ ಅದ್ವೈತ, ನೀನೇ ಅನುಷ್ಠಾನಕ್ಕೆ ತಂದಿಲ್ಲ ನೀನು ಬೋಧಿಸುವುದನ್ನು.ಜೀವ ಶಿವರಲ್ಲಿ ಭೇದವಿಲ್ಲವೆಂದು ಅಭೇದಾದ್ವೈತವನ್ನು ಬೋಧಿಸುವ ನಿನಗೆ ಚಾಂಡಾಲನಾದ ನಾನೂ ಬ್ರಹ್ಮನೆಂದು ಹೊಳೆಯಲಿಲ್ಲ.ಸರ್ವರಲ್ಲಿಹ ಶಿವನು ಶುದ್ಧಾತ್ಮನೆಂದು ತಿಳಿಯದ ನಿನಗೆ, ಚಾಂಡಾಲ ಕನಿಷ್ಟ,ಬ್ರಾಹ್ಮಣ ಶ್ರೇಷ್ಠ ಎನ್ನುವ ಹುಸಿ ಅಹಮಿಕೆಯ ನಿನಗೆ ಪೂರ್ಣಾದ್ವೈತ ಸಿದ್ಧಿಸದು’ ಎನ್ನುತ್ತಾನೆ.ಚಾಂಡಾಲನ ಮಾತಿನಿಂದ ಎಚ್ಚರಗೊಂಡ ಶಂಕರರು ಚಾಂಡಾಲನ ಪಾದಗಳ ಮೇಲೆ ಬಿದ್ದು ಕ್ಷಮೆ ಕೇಳುತ್ತಾರೆ.ವಿಶ್ವೇಶ್ವರ ಪ್ರತ್ಯಕ್ಷನಾಗಿರುತ್ತಾನೆ ಅಲ್ಲಿ! ಚಾಂಡಾಲನ ರೂಪದಲ್ಲಿ ವಿಶ್ವೇಶ್ವರನು ಆಗಮಿಸಿ ಶಂಕರಾಚಾರ್ಯರ ಜಾತಿಶ್ರೇಷ್ಠತೆಯ ಮೋಹವನ್ನು ತೊಡೆದುಹಾಕಿ ಸರ್ವರೂ ಶಿವಾತ್ಮರು ಎನ್ನುವ ಅಭೇದಾನೂಭೂತಿಯನ್ನು ನೀಡುತ್ತಾನೆ.ಚಾಂಡಾಲಗುರುವನ್ನು ಸ್ತುತಿಸಿ ಕೊಂಡಾಡುತ್ತಾರೆ ಶಂಕರಾಚಾರ್ಯರು.
‘ ನೀನು ಅಸ್ಪೃಶ್ಯ’ ಎಂದ ಶಂಕರಾಚಾರ್ಯಸ್ವಾಮಿಗೆ ಶಂಕರಾಚಾರ್ಯರ ಬದುಕಿನಲ್ಲಿ ನಡೆದ ಈ ಸತ್ಯಘಟನೆ ಗೊತ್ತಿದೆಯೋ ಇಲ್ಲವೋ ! ಶಂಕರಾಚಾರ್ಯರು ಹೀಗೆ ತಮ್ಮ ದೋಷ ದೌರ್ಬಲ್ಯಗಳನ್ನು ತಿದ್ದಿಕೊಳ್ಳುತ್ತ ಪ್ರಬುದ್ಧರಾದರು,ಸಂಪ್ರಬುದ್ಧರಾದರು.ಶಂಕರಾಚಾರ್ಯರ ಮೇರು ವ್ಯಕ್ತಿತ್ವವನ್ನರಿಯದ ಸಂನ್ಯಾಸಿಗಳು ತಾವು ಶಂಕರಪರಂಪರೆಯವರು ಎಂದು ಸುಮ್ಮನೆ ಗಳುಹಿದರೆ ಆಗದು,ಅನುಷ್ಠಾನಕ್ಕೆ ತರಬೇಕು ಶಂಕರರ ಆದರ್ಶವನ್ನು.ಶಂಕರರ ಬದುಕಿನಲ್ಲಿ ಅತಿರಂಜನೆಯ ಕಥೆ,ಪುರಾಣಗಳನ್ನು ಪ್ರಕ್ಷಿಪ್ತಗೊಳಿಸಿ ಸೇರಿಸಿ ಸಂತಸಪಡುವ ಬದಲು ಶಂಕರರು ಆಚಾರ್ಯರಾದದ್ದು ಮನುಷ್ಯತ್ವವನ್ನು ಎತ್ತಿಹಿಡಿಯುವ ಮೂಲಕ ಎನ್ನುವ ಸತ್ಯವನ್ನು ತಿಳಿದುಕೊಂಡು ಅದರಂತೆ ನಡೆಯಬೇಕು.ಸರ್ವರಲ್ಲಿ ಶಿವನನ್ನು ಕಾಣುವ ಶಿವಾತ್ಮರೇ ಶಂಕರಪರಂಪರೆಯವರೇ ಹೊರತು ಆತ್ಮನಲ್ಲಿ ಮೇಲು ಕೀಳು ಎಂದು ಬಗೆಯುವ ಆತ್ಮಜ್ಞಾನಶೂನ್ಯಮತಿಮೂಢರುಗಳಲ್ಲ.ಆತ್ಮನು ಬ್ರಾಹ್ಮಣನೂ ಅಲ್ಲ,ಚಾಂಡಾಲನೂ ಅಲ್ಲ.ಆತ್ಮನು ಸಂನ್ಯಾಸಿಯೂ ಅಲ್ಲ; ಸಂಸಾರಿಯೂ ಅಲ್ಲ.ಶುದ್ಧಚೈತನ್ಯನ್ಯನಾಗಿಹ ಶಿವನು ಸರ್ವಾತ್ಮರಲ್ಲಿಹನು ಎಂದು ತಿಳಿಯುವುದೇ ಅದ್ವೈತ,ಶುದ್ಧಾದ್ವೈತ.

೨೭.೦೮.೨೦೨೨