ಶ್ರಾವಣ ಸಂಜೆ: ಶ್ರೀ ಶಿವ ಮಹಾಪುರಾಣ ವ್ಯಾಖ್ಯಾನ –೧೧ ; ಶಿವನ ವಿಗ್ರಹ – ಮೂರ್ತಿ ಪ್ರತಿಷ್ಠಾಪನೆ ಮತ್ತು ಪೂಜಿಸುವ ವಿಧಾನ-ಮುಕ್ಕಣ್ಣ ಕರಿಗಾರ

ಶ್ರಾವಣ ಸಂಜೆ

ಶ್ರೀ ಶಿವ ಮಹಾಪುರಾಣ ವ್ಯಾಖ್ಯಾನ –೧೧

ಮುಕ್ಕಣ್ಣ ಕರಿಗಾರ

ಶಿವನ ವಿಗ್ರಹ – ಮೂರ್ತಿ ಪ್ರತಿಷ್ಠಾಪನೆ ಮತ್ತು ಪೂಜಿಸುವ ವಿಧಾನ

ಋಷಿಗಳು ಸೂತಮಹರ್ಷಿಯನ್ನು ಪ್ರಶ್ನಿಸುವರು–” ಸಕಲ ಇಷ್ಟಾರ್ಥಗಳನ್ನು ಈಡೇರಿಸುವಂತಹ ಶಿವನ ವಿಗ್ರಹ- ಮೂರ್ತಿಗಳನ್ನು ಪೂಜಿಸುವ ವಿಧಾನವಾವುದು ?”.

ಸೂತನು ಹೇಳುವನು– ” ನೀವು ಕೇಳಿದ ಶಿವನ ವಿಗ್ರಹ- ಮೂರ್ತಿಗಳ ಪೂಜೆಯಿಂದ ಸಕಲ ದುಃಖಗಳಳಿದು,ಸಕಲಾಭಿಷ್ಟಗಳು ಈಡೇರುತ್ತವೆ.ಶಿವನ ಮೂರ್ತಿಯನ್ನು ಪೂಜಿಸುವುದರಿಂದ ಅಪಮೃತ್ಯು,ಅಕಾಲಮೃತ್ಯುಗಳು ದೂರವಾಗುವುವಲ್ಲದೆ ಪುತ್ರ ಕಳತ್ರಾದಿಗಳು,ಧನ- ಧಾನ್ಯಗಳು ಒದಗುವವು.ಅನ್ನ – ವಸ್ತ್ರಗಳು ಯಥೇಷ್ಟವಾಗಿ ದೊರೆಯುವವು.

ಶಿವನ ಮೂರ್ತಿಯ ಪೂಜೆಯನ್ನು ಸ್ತ್ರೀ ಪುರುಷರಿಬ್ಬರೂ ಮಾಡಬಹುದು.ಸ್ತ್ರೀಯರಿಗೆ,ಶೂದ್ರರಿಗೆ ಶಿವನನ್ನು ಪೂಜಿಸುವ ಅಧಿಕಾರವಿದೆ.ಶಿವನು ತನ್ನ ಭಕ್ತರಲ್ಲಿ ಭಕ್ತಿಯನ್ನಷ್ಟೇ ನೋಡುವನಲ್ಲದೆ ಮತ್ತೇನನ್ನು ನೋಡನು.ಲಿಂಗವು ಶಿವನ ನಿರಾಕಾರ ಸ್ವರೂಪವಾದುದರಿಂದ ಲಿಂಗಪೂಜೆ ಮಾಡಲು ಗುರೂಪದೇಶ ಪಡೆದಿರಬೇಕು.ಆದರೆ ಶಿವನ ಮೂರ್ತಿಯ ಪೂಜೆಯನ್ನು ಯಾರು ಬೇಕಾದರೂ ಮಾಡಬಹುದು.

ಶಿವನ ಮೂರ್ತಿಯನ್ನು ಪ್ರತಿಷ್ಠಾಪಿಸುವ ವಿಧಾನವಾವುದೆಂದರೆ ಮೊದಲು ಯಾವುದಾದರೂ ನದಿ,ಕೆರೆ ಅಥವಾ ಬಾವಿಯ ತಳದ ಮಣ್ಣನ್ನು ತಂದು ಶೋಧಿಸಿ ಸುಗಂಧ ದ್ರವ್ಯಗಳ ಪುಡಿಯನ್ನು ಮಿಶ್ರಣಮಾಡಿ ಹಾಲನ್ನು ಸೇರಿಸಿ ಕೈಯಿಂದ ಶಿವನ ವಿಗ್ರಹ ಅಥವಾ ಮೂರ್ತಿಯನ್ನು ಮಾಡಬೇಕು.ಆ ಮೂರ್ತಿಯಲ್ಲಿ ಎಲ್ಲ ಅಂಗ,ಪ್ರತ್ಯಂಗಗಳು ಕಾಣುವಂತಿರಬೇಕು.ಶಿವನ ಮೂರ್ತಿಯನ್ನು ಪದ್ಮಾಸನದಲ್ಲಿ ಕುಳಿತಿರುವಂತೆ ನಿರ್ಮಿಸಬೇಕು.

ಶಿವನ ವಿಗ್ರಹ,ಮೂರ್ತಿಗಳನ್ನು ಷೋಡಶೋಪಚಾರಗಳಿಂದ ಪೂಜಿಸಬೇಕು.ಹೂವಿನಿಂದ ಪ್ರೋಕ್ಷಣಮಾಡಿ,ಮಂತ್ರಪೂರ್ವಕ ಅಭಿಷೇಕ ಮತ್ತು ಶಾಲ್ಯನ್ನ ನೇವೇದ್ಯ ಸಮರ್ಪಿಸಬೇಕು.

ಶಿವನ ಮೂರ್ತಿಗೆ ಸಲ್ಲಿಸುವ ಪೂಜೆ,ಸೇವೆಯಿಂದ ಪ್ರಾಪ್ರವಾಗುವ ಫಲಗಳು– ಅಭಿಷೇಕದಿಂದ ಆತ್ಮಶುದ್ಧಿ,ಗಂಧಾರ್ಚನೆಯಿಂದ ಪಾಪಕ್ಷಯವಾಗಿ ಪುಣ್ಯಪ್ರಾಪ್ತಿಯು,ನೈವೇದ್ಯದಿಂದ ಆಯುರ್ ವೃದ್ಧಿಯು,ಧೂಪದಿಂದ ಸಂಪತ್ತು,ದೀಪದಿಂದ ಜ್ಞಾನ ಮತ್ತು ತಾಂಬೂಲದಿಂದ ಭೋಗ ಇವುಗಳು ಲಭಿಸುವವು.ನಮಸ್ಕಾರ ಜಪಗಳಿಂದ ಸರ್ವೇಷ್ಟಸಿದ್ಧಿಯು.ಭೋಗ- ಮೋಕ್ಷಗಳನ್ನಪೇಕ್ಷಿಸುವವರು ಶಿವಪೂಜೆಯ ಕೊನೆಯಲ್ಲಿ ನಮಸ್ಕಾರ ಜಪಗಳನ್ನು ಮಾಡಬೇಕು.

‘ಪೂಜೆ’ ಎಂದರೆ ಸಕಲ ಭೋಗ ಸಮೃದ್ಧಿಗಳನ್ನುಂಟು ಮಾಡುವ ಶಿವಸೇವೆ ಎಂದರ್ಥ.” ಪೂ” ಎಂದರೆ ಸಕಲ ಭೋಗಗಳನ್ನು ಪೂರೈಸುವುದು,” ಜಾ” ಅಂದರೆ ಉಂಟು ಮಾಡುವುದು ಎಂದರ್ಥ.ಶಾಸ್ತ್ರಗಳು ಇದೇ ಅರ್ಥವನ್ನು ಹೇಳುತ್ತಿವೆ.

ಶಿವನ ಲಿಂಗವನ್ನರ್ಚಿಸುವ ವಿಧಾನವನ್ನು ಹೇಳುವೆನು.ಜಗತ್ತಿನ ಸ್ಥಾವರ ಜಂಗಮಗಳೆಲ್ಲವೂ ಬಿಂದು- ನಾದ ಸ್ವರೂಪಗಳಾಗಿವೆ.ಬಿಂದುವು ಶಕ್ತಿ ಸ್ವರೂಪವಾದರೆ ನಾದವು ಶಿವಸ್ವರೂಪ.ನಾದದಲ್ಲಿ ಬಿಂದು, ಬಿಂದುವಿನಲ್ಲಿ ಜಗತ್ತು.ಈ ತೆರನಾಗಿ ಬಿಂದು ನಾದಗಳೆರಡು ಜಗತ್ತಿನ ಆಧಾರಗಳು.ಬಿಂದು ನಾದಗಳೆರೆಡು ಸಮರಸವಾಗಿ ಬೆರೆತಾಗಲೇ ಪೂರ್ಣತೆಯು ಉಂಟಾಗಿ ಜಗತ್ತಿನ ಸೃಷ್ಟಿ ಆಗುವುದು.ಜೀವರುಗಳ ಜನ್ಮಕ್ಕೆ ಕಾರಣನಾದ ಬಿಂದು ನಾದಾತ್ಮಕ ಶಿವಲಿಂಗವನ್ನು ಪೂಜಿಸಿದರೆ ಮೋಕ್ಷಪ್ರಾಪ್ತಿಯಾಗುವುದು.ಜಗನ್ಮಾತೆಯಾದ ದೇವಿಯು ಬಿಂದು.ಜಗದ ತಂದೆಯಾದ ಶಿವನೇ ನಾದ.ಹೀಗಾಗಿ ಶಿವಲಿಂಗದ ಪೂಜೆ ಎಂದರೆ ಜಗನ್ಮಾತಾಪಿತರುಗಳಾದ ಶಿವ ದುರ್ಗಾದೇವಿಯರ ಪೂಜೆ,ತಾಯ್ತಂದೆಯರ ಪೂಜೆ ಎಂದೇ ಅರ್ಥ.ಶಿವಲಿಂಗಪೂಜೆಯಿಂದ ಪರಮಾನಂದವು ಉಂಟಾಗುವುದು.

ಶಿವನು ಪುರುಷ ಮತ್ತು ದೇವಿಯು ಪ್ರಕೃತಿಯು.ಅವ್ಯಕ್ತನಾಗಿ ಬೀಜರೂಪದಿಂದಿದ್ದು ಗರ್ಭಕ್ಕೆ ಆಶ್ರಯನಾದವನು ಪುರುಷನು.ವ್ಯಕ್ತಾವಸ್ಥೆಯಲ್ಲಿ ಗರ್ಭಕ್ಕೆ ಆಶ್ರಯಳಾಗುವಳೇ ಪ್ರಕೃತಿಯು.ಜೀವಿಯು ಪುರುಷನಿಂದ ಪ್ರಕೃತಿಯಲ್ಲಿ ಬಂದು ಸೇರುವುದೇ ಪ್ರಥಮ ಜನ್ಮವು.ಪ್ರಕೃತಿಯಿಂದ ವ್ಯಕ್ತವಾಗಿ ಹೊರಬರುವುದೇ ದ್ವಿತೀಯ ಜನ್ಮ.ಜನನ- ಮರಣಗಳು ಪುರುಷ ಪ್ರಕೃತಿಯರ ಆಧೀನ.

ಇನ್ನು ” ಜೀವ”ಶಬ್ದದ ಅರ್ಥ ಹೇಳುವೆ.ಹುಟ್ಟಿದ ದಿನದಿಂದ ಸದಾ ಜೀರ್ಣನಾಗುತ್ತ ಅಂದರೆ ಹಳಬನಾಗುತ್ತ ಹೋಗುವುದರಿಂದ ಜೀವನು ” ಜೀವ” ನೆನ್ನಿಸುವನು.ಜನ್ಮ ಪಡೆಯುವುದರಿಂದಲೂ ಅಂದರೆ ಹುಟ್ಟುವುದರಿಂದಲೂ ಜೀವನೆನಿಸುವನು.ಜನ್ಮವು ಒಂದು ಪಾಶ.ಶಿವನ ಲಿಂಗಪೂಜೆ ಮಾಡುವುದರಿಂದ ಜನ್ಮಪಾಶ ನಿವೃತ್ತಿಯು.

ಋಷಿಗಳು ಪ್ರಶ್ನಿಸುವರು –” ಶಿವಜ್ಞಾನಿಗಳಲ್ಲಿ ಶ್ರೇಷ್ಠರಾದ ಸೂತರೆ, ಶಿವನನ್ನು ‘ ಭಗವಾನ್’ ಎಂದು ಏಕೆ ಕರೆಯುತ್ತಾರೆ?”

ಸೂತನು ಋಷಿಗಳಿಗೆ ಉತ್ತರಿಸುವನು–“ಶಿವನು ಭಗವಾನ್ ಎಂದು ಲೋಕಪ್ರಸಿದ್ಧನು.ಭಗವಾನ್ ಗುಣ ವಿಶೇಷಣವು ಶಿವನ ಸ್ವಯಂಸಿದ್ಧಗುಣವು.” ಭ” ಎಂದರೆ ವೃದ್ಧಿ ” ಗ” ಎಂದರೆ ಹೊಂದುವಂತಹದ್ದು.ಪ್ರಕೃತಿಯು ವೃದ್ಧಿ ಹೊಂದುತ್ತಿರುವುದರಿಂದ ಅದು ಭಗವು.ಅವಳಿಗೆ ಪತಿಯಾದ,ಪ್ರಕೃತಿಪತಿಯಾದ ಶಿವನು ” ಭಗವಾನ್”.ಭಗವಾನ್ ಶಿವನೊಬ್ಬನೇ ಸರ್ವಸ್ವತಂತ್ರನಾದ ಭೋಗದಾತ.ಪ್ರಾಕೃತವಾದ ಶಬ್ದ ಸ್ಪರ್ಶಾದಿಗಳು ಪ್ರಾಕೃತ ಇಂದ್ರಿಯಗಳಿಂದ ಭೋಗಿಸುವುದೇ ಭೋಗ.ಭೋಗವನ್ನು ಭಗವಾನ್ ಶಿವನೊಬ್ಬನೇ ಅನುಗ್ರಹಿಸಬಲ್ಲ.ಶಿವನ ಲಿಂಗದಲ್ಲಿ ಭಗ ಮತ್ತು ಲಿಂಗಗಳೆರಡೂ ಒಂದನ್ನೊಂದು ಕೂಡಿಕೊಂಡು ಭೋಗಪ್ರದಗಳಾಗಿವೆ.

ಶಿವನ ಲಿಂಗವನ್ನು ಪೂಜಿಸುವುದರಿಂದ ಜೀವಿಯು ಹುಟ್ಟು ಸಾವುಗಳ ಪ್ರಪಂಚ ಚಕ್ರದಿಂದ ಬಿಡುಗಡೆ ಹೊಂದುವನು.ಜಗತ್ತಿನ ಪ್ರಸವಕ್ಕೆ ಮೂಲ ಕಾರಣನಾದ ಶಿವನ ಸ್ವರೂಪವೇ ಶಿವಲಿಂಗ.ಲಿಂಗವೆಂದರೆ ಲೀನವಾಗಿರುವ ಅಥವಾ ಇಂದ್ರಿಯಗಳಿಗೆ ನಿಲುಕದಂತೆ ಅಡಗಿರುವ ವಸ್ತುವನ್ನು ಬೋಧಿಸುವ ಚಿಹ್ನೆ.ಶಿವ- ಶಕ್ತಿಗಳಿಬ್ಬರು ಸದಾ ಒಂದಾಗಿಯೇ ಇರುವುದರಿಂದ ಅಂದರೆ ಶಿವಶಕ್ತಿಯರಿಬ್ಬರು ಸದಾ ಲೀನರಾಗಿಯೇ ಇರುವುದರಿಂದ ಅವರ ಚಿಹ್ನೆಯು ” ಲಿಂಗ” ವೆನ್ನಿಸುವುದು.ಜೀವಿಗಳಿಗೆ ಜನ್ಮ ನೀಡುವುದೇ ಲಿಂಗದ ಕಾರ್ಯವಾಗಿದೆ.ತನ್ನ ಚಿಹ್ನೆಯಾದ ಲಿಂಗವನ್ನು ಪೂಜಿಸುವುದರಿಂದ ಶಿವನು ಪ್ರಸನ್ನನಾಗಿ ಆ ಚಿಹ್ನೆಯ ಕಾರಣವಾದ ಜನ್ಮ ಕೊಡುವುದನ್ನು ನಿಲ್ಲಿಸುವನು ಅಂದರೆ ಜೀವನಿಗೆ ಮೋಕ್ಷವು ದೊರೆಯುವುದು.

‌ಪ್ರತಿ ಭಾನುವಾರದಂದು ಶಿವಲಿಂಗವನ್ನು ಪ್ರಣವ ಮಂತ್ರದಿಂದ,ಷೋಡಶೋಪಚಾರಗಳಿಂದ ಪೂಜಿಸಿದರೆ ಪುನರ್ಜನ್ಮವು ಸಂಭವಿಸದು.ಭಾನುವಾರದಂದು ಶಿವಲಿಂಗಕ್ಕೆ ಪಂಚಗವ್ಯಗಳಿಂದ ಅಂದರೆ ಗೋಮಯ,ಗೋಮೂತ್ರ,ಹಾಲು,ಮೊಸರು ಮತ್ತು ತುಪ್ಪಗಳಿಂದ ಅಭಿಷೇಕ ಮಾಡಿ,ಹಾಲು ಮೊಸರು ಮೊದಲಾದವುಗಳನ್ನೂ ಜೇನು,ಬೆಲ್ಲ,ಹಸುವಿನ ಹಾಲಿನಿಂದ ಮಾಡಿದ ಪಾಯಸವನ್ನು ಪ್ರಣವಮಂತ್ರವನ್ನುಚ್ಚರಿಸುತ್ತ ಶಿವಲಿಂಗಕ್ಕೆ ಸಮರ್ಪಿಸಬೇಕು.

ಪ್ರಣವವು ಶಿವನ ಧ್ವನಿಲಿಂಗ.ನಾದವು ಸ್ವಯಂವ್ಯಕ್ತಲಿಂಗ.ಬಿಂದುವೇ ಯಂತ್ರ.ಮಕಾರವು ಪ್ರತಿಷ್ಟಿತ ಲಿಂಗ.ಉಕಾರವು ಚರಲಿಂಗ,ಅಕಾರವು ಮೂರ್ತಿಯು.ಹೀಗೆ ಆರುಲಿಂಗಗಳನ್ನು ಷಡ್ಲಿಂಗಗಳೆಂದು ಕರೆಯುತ್ತಿದ್ದು ಈ ಷಡ್ಲಿಂಗಗಳನ್ನು ನಿತ್ಯವೂ ಪೂಜಿಸಿದರೆ ಜೀವನ್ಮುಕ್ತಿಯು ದೊರೆಯುವುದು.

ರುದ್ರಾಕ್ಷಿಯನ್ನು ಧರಿಸಿದರೆ ಕಾಲುಭಾಗ ಶಿವಭಕ್ತಿ ಉಂಟಾಗುವುದು.ಭಸ್ಮ ಧರಿಸಿದರೆ ಅರ್ಧಭಾಗ,ಮಂತ್ರ ಜಪದಿಂದ ಮುಕ್ಕಾಲು ಭಾಗ,ಶಿವನಪೂಜೆಯಿಂದ ಪೂರ್ಣವಾಗಿ ಶಿವಭಕ್ತಿಯುಂಟಾಗುವುದು.

ಶಿವಲಿಂಗವನ್ನೂ ಶಿವಭಕ್ತರನ್ನೂ ಪೂಜಿಸಿದರ ಮೋಕ್ಷ ದೊರೆಯುವುದು.

ವ್ಯಾಖ್ಯಾನ

ಶ್ರೀ ಶಿವ‌ಮಹಾಪುರಾಣದ ಈ ಅಧ್ಯಾಯದಲ್ಲಿ ಶಿವನ ಮೂರ್ತಿ,ವಿಗ್ರಹಗಳ ಪೂಜೆ ಮತ್ತು ಅವುಗಳಿಂದ ದೊರೆಯುವ ಫಲವನ್ನು ವಿವರಿಸಲಾಗಿದೆ.ಗುರೂಪದೇಶ ಪಡೆದವರಿಗೆ ಮಾತ್ರ ಶಿವನ ನಿರಾಕಾರತತ್ತ್ವ ಪ್ರತೀಕವಾದ ಶಿವಲಿಂಗ ಪೂಜೆಯಲ್ಲಿ ವಿಶೇಷ ಅಧಿಕಾರವಿದ್ದು ಶಿವನ ಮೂರ್ತಿ ಪೂಜೆಯನ್ನು ಯಾರು ಬೇಕಾದರೂ ಮಾಡಬಹುದು.ಶಿವನ ಪೂಜೆಯನ್ನು ಸ್ತ್ರೀಯರು,ಶೂದ್ರರೂ ಮಾಡಬಹುದು ಎಂದು ಮಹರ್ಷಿ ವೇದವ್ಯಾಸ ಕೃತ ಶಿವಮಹಾಪುರಾಣವು ಅವಕಾಶ ನೀಡುತ್ತದೆ ಎನ್ನುವುದು ಗಮನಿಸಬೇಕಾದ ಸಂಗತಿ.ಶಿವನ ಮೂರ್ತಿಯನ್ನು ತಯಾರಿಸುವ ವಿಧಾನವನ್ನು ಸಹ ವಿವರಿಸಲಾಗಿದೆ.

ಬಿಂದುನಾದಾತ್ಮಕವಾದ ಶಿವನ ಲಿಂಗವು ವಿಶ್ವವ್ಯಾಪಿಯಾದ ಶಿವನ ವಿಶ್ವೇಶ್ವರ ತತ್ತ್ವದ ಪ್ರತೀಕವಾಗಿದೆ.ಜಗತ್ತಿನ ಸೃಷ್ಟ್ಯಾದಿ ವ್ಯವಹಾರವನ್ನು ಶಿವನು ತನ್ನ ಶಕ್ತಿಯಜೊತೆಗೂಡಿಯೇ ಮಾಡುತ್ತಾನೆ.ಶಿವ ಶಕ್ತಿಯರಿಬ್ಬರು ಪರಸ್ಪರ ಅನೋನ್ಯ ಆಶ್ರಯರು.ಶಿವ ಶಕ್ತಿಯರ ಸಂಗಮ,ಸಮನ್ವಯ ತತ್ತ್ವವೇ ವಿಶ್ವವು.ಬಿಂದು ನಾದಾತ್ಮಕರಾದ ಪುರುಷ ಪ್ರಕೃತಿಯರು ಸೇರಿ ವಿಶ್ವವ್ಯಾಪಾರವನ್ನು ನಡೆಸುವುದೇ ಶಿವನ ವಿಶ್ವೇಶ್ವರ ಲೀಲೆಯ ಅರ್ಥ,ಶಿವ ವಿಶ್ವೇಶ್ವರ ತತ್ತ್ವದರ್ಥ.

ಮುಕ್ಕಣ್ಣ ಕರಿಗಾರ

೧೦.೦೮.೨೦೨೨