ಶ್ರಾವಣ ಸಂಜೆ ಶ್ರೀ ಶಿವ ಮಹಾಪುರಾಣ– ವ್ಯಾಖ್ಯಾನ –೦೫; ಶಿವನಿಂದ ವಿಷ್ಣುವಿಗೆ ವರಪ್ರದಾನ- ಮುಕ್ಕಣ್ಣ ಕರಿಗಾರ

ಶ್ರಾವಣ ಸಂಜೆ

ಶ್ರೀ ಶಿವ ಮಹಾಪುರಾಣ– ವ್ಯಾಖ್ಯಾನ –೦೫

ಮುಕ್ಕಣ್ಣ ಕರಿಗಾರ

ಶಿವನಿಂದ ವಿಷ್ಣುವಿಗೆ ವರಪ್ರದಾನ

ಶಂಕರನ ಸನ್ನಿಧಿಯಲ್ಲಿ ಲೋಕಕಂಟಕ ಪರಿಹಾರವೆಂದು ನಂಬಿ ಬಂದಿದ್ದ ದೇವತೆಗಳತ್ತ ಕೃಪಾದೃಷ್ಟಿಯನ್ನು ಬೀರುತ್ತ ಶಿವನು ” ಮಕ್ಕಳೆ! ನೀವೆಲ್ಲರೂ ಸುಖವಾಗಿದ್ದೀರಿ ತಾನೆ ?ನನ್ನಾಜ್ಞೆಯಂತೆ ಎಲ್ಲರೂ ತಮ್ಮ ತಮ್ಮ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸುತ್ತಿರುವರಲ್ಲವೆ? ಬ್ರಹ್ಮ ವಿಷ್ಣುಗಳಿಬ್ಬರು ಮಾತ್ರ ತಮ್ಮೊಳಗೆ ಯುದ್ಧ ನಡೆಸಿದ್ದಾರೆ.ನಾನಿದನು ಬಲ್ಲೆ.ನೀವು ಆ ಉದ್ದೇಶಕ್ಕಾಗಿಯೇ ಕೈಲಾಸಕ್ಕೆ ಬಂದುದರಿಂದ ಮತ್ತೊಮ್ಮೆ ಹೇಳಬೇಕಾಯಿತು ”

ಮಂದಹಾಸದಿಂದೊಡಗೂಡಿದ ಶಿವಮುಖಕಮಲದಿಂದ ಹೊರಬಿದ್ದ ಈ ಮಂಗಳಮಯ ಮಾತುಗಳನ್ನಾಲಿಸಿದ ದೇವತೆಗಳು ಪರಮಹರ್ಷಿತರಾದರು.ದೇವತೆಗಳನ್ನು ಉದ್ದೇಶಿಸಿ ಶಿವನು ನುಡಿದನು –” ನೀವು ನಿಶ್ಚಿಂತರಾಗಿರಿ.ನಾನು ಬ್ರಹ್ಮ ವಿಷ್ಣುಗಳ ಯುದ್ಧ ನಿಲ್ಲಿಸಿ,ಲೋಕಕ್ಕೆ ಬಂದ ಆಪತ್ತನ್ನು ನಿವಾರಿಸುವೆ”.
ಶಿವನ ಅಭಯವಾಕ್ಕುಗಳಿಂದ ಸಂತುಷ್ಟರಾದ ದೇವತೆಗಳು ಪರಿಪರಿಯ ಸ್ತುತಿ ವಾಕ್ಯಗಳಿಂದ ಲೋಕಕಂಟಕನಿವಾರಕನಾದ ನೀಲಕಂಠ ಶಿವನನ್ನು ಕೊಂಡಾಡಿದರು.

ನಂತರ ಶಿವನು ತನ್ನ ಗಣಗಳಲ್ಲಿ ಮುಖ್ಯರಾದ ನೂರು ಜನರನ್ನು ಕರೆದು ಯುದ್ಧಭೂಮಿಗೆ ಹೊರಡಲು ಆಜ್ಞಾಪಿಸಿದನು.ಗಣರುಗಳು ಹೊರಟು ನಿಂತರು.ಬಗೆಬಗೆಯ ವಾಹನಗಳಲ್ಲಿ ಕುಳಿತು ಪ್ರಯಾಣ ವಾದ್ಯಗಳನ್ನು ಮೊಳಗಿಸಿದರು ಶಿವಗಣರುಗಳು.

ಶಿವನು ಪ್ರಣವಾಕಾರದ,ಇಂದು ಮಂಡಲಗಳುಳ್ಳ ದಿವ್ಯ ರಥವನ್ನೇರಿದನು.ಉಮಾದೇವಿಯು ಶಿವನೊಡನೆ ದಿವ್ಯ ರಥವನ್ನೇರಿ ಕುಳಿತಳು.ಧ್ವಜ,ಚಾಮರ,ವ್ಯಜನ,ಪುಷ್ಪವೃಷ್ಟಿ,ಸಂಗೀತ,ನೃತ್ಯ,ವಾದ್ಯಘೋಷಗಳ ವೈಭವ ನಡೆಯುತ್ತಿದ್ದಂತೆಯೇ ಶಿವನು ಶಕ್ತಿ ಸಮೇತನಾಗಿ ಯುದ್ಧಭೂಮಿಗೆ ಹೊರಟನು.

ಪರಸ್ಪರ ಯಾರು ಹಿರಿಯರು ಎಂಬುದನ್ನು ನಿರ್ಣಯಿಸಲು ಆರಂಭಿಸಿದ್ದ ಬ್ರಹ್ಮ ಮತ್ತು ವಿಷ್ಣುಗಳಿಬ್ಬರ ಯುದ್ಧವಿನ್ನೂ ನಡೆದೇ ಇತ್ತು.ಶಿವನು ಅಲ್ಲಿಯೇ ಆಕಾಶದಲ್ಲಿ ಅಡಗಿ ನಿಂತನು.ವಾದ್ಯಘೋಷಗಳು ನಿಂತವು.ಗಣರುಗಳು ನಿಶ್ಯಬ್ದರಾದರು.ಮಾಹೇಶ್ವರಾಸ್ತ್ರ,ಪಾಶುಪತಾಸ್ತ್ರಗಳು ಮೂರುಲೋಕವನ್ನೇ ದಹಿಸುತ್ತಿವೆ ಅಕಾಲ ಪ್ರಳಯೋಪಾದಿಯಲ್ಲಿ.ಆಗ

ಮಹಾನಲಸ್ತಂಭ ವಿಭೀಷಣಾಕೃತಿಃ
ಬಭೂವ ತನ್ಮಧ್ಯತಲೇ ಸ ನಿಷ್ಕಲಃ

ಬ್ರಹ್ಮ ವಿಷ್ಣುಗಳಿಬ್ಬರ ನಡುವೆ ಭಯಂಕರವಾದ ಮಹಾ ಅಗ್ನಿಸ್ತಂಭ ರೂಪದಿಂದ ಶಿವನು ಆವಿರ್ಭವಿಸಿದ.

ಮಹಾ ಅಸ್ತ್ರಗಳೆರಡು ಕೆಳಗೆ ಬಿದ್ದವು.ಲೋಕವನ್ನೇ ಸುಡುತ್ತಿದ್ದ ಅವುಗಳ ಜ್ವಾಲೆಯೂ ನಂದಿತು.ಈ ವಿಸ್ಮಯವನ್ನು ಕಂಡಬ್ರಹ್ಮ ವಿಷ್ಣುಗಳಿಬ್ಬರು ಆಶ್ಚರ್ಯಚಕಿತರಾಗಿ ತಮ್ಮೊಳಗೆ ಮಾತಾಡಿಕೊಂಡರು ” ಏನದ್ಭುತ ಸ್ತಂಭವಿದು!ಜ್ವಲಿಸುತ್ತಲೇ ಇದೆ.ಇದರ ತಲೆಯೂ ಕಾಣುತ್ತಿಲ್ಲ,ಬುಡವೂ ಕಾಣುತ್ತಿಲ್ಲ.ನಾವಿಬ್ಬರೂ ಇದನ್ನು ಶೋಧಿಸಲೇಬೇಕು”. ಮುಂದುವರೆದ ಬ್ರಹ್ಮನು ಹೇಳಿದ ” ನಮ್ಮಿಬ್ಬರ ನಡುವೆ ಹಿರಿಯರಾರು ಎಂಬುದನ್ನುಇಷ್ಟು ವರ್ಷಗಳ ಕಾಲ ಯುದ್ಧ ಮಾಡಿಯೂ ನಿರ್ಣಯಿಸದಾಗಿದ್ದೇವೆ.ಅನಿರೀಕ್ಷಿತವಾಗಿ ನಮ್ಮಿಬ್ಬರ ಮಧ್ಯೆ ಬಿದ್ದಿರುವ ಈ ಸ್ತಂಭವು ಯಾರು ಹಿರಿಯರು ಎಂಬುದನ್ನು ನಿರ್ಣಯ ಮಾಡಬಲ್ಲುದು.ಇದರ ಅಗ್ರಭಾಗವನ್ನು ಒಬ್ಬರು ನೋಡಬೇಕು,ಮೂಲವನ್ನು ಒಬ್ಬರು ನೋಡಬೇಕು.ಯಾರು ಮೊದಲು ಕಂಡು ಬರುತ್ತಾರೋ ಅವರೇ ಹಿರಿಯರು” ಎಂದನು.ವಿಷ್ಣುವು ಆಗಲಿ ಎಂದೊಪ್ಪಿದನು.ಬ್ರಹ್ಮನು ಸ್ತಂಭದ ಶಿರೋಭಾಗವನ್ನು ಕಾಣಲು ಹಂಸರೂಪ ಧರಿಸಿ ಮೇಲಕ್ಕೆ ಹಾರತೊಡಗಿದನು.ವಿಷ್ಣುವು ಸ್ತಂಭದ ಮೂಲವನ್ನು ಕಾಣಲು ವರಾಹರೂಪ ಧರಿಸಿ ಕೋರೆದಾಡೆಗಳಿಂದ ಭೂಮಿಯನ್ನು ಬಗೆಯುತ್ತ ಆಳಕ್ಕೆ ಇಳಿಯತೊಡಗಿದನು.

ಸ್ತಂಭದ ಅಗ್ರಭಾಗವನ್ನು ಕಾಣುವಾಪೇಕ್ಷೆಯಲ್ಲಿ ಹಂಸರೂಪದಲ್ಲಿ ಬ್ರಹ್ಮನು ಮೇಲಕ್ಕೆ ಹಾರುತ್ತಲೇ ಇದ್ದ.ಸ್ತಂಭದ ಮೂಲವನ್ನು ಕಾಣುವ ಉದ್ದೇಶದಿಂದ ವಿಷ್ಣುವು ವರಾಹರೂಪದಲ್ಲಿ ಭೂಮಿಯನ್ನು ಸೀಳಿ,ಬಗೆಯುತ್ತಲೇ ಸಾಗುತ್ತಿದ್ದ.ಎಷ್ಟೋ ವರ್ಷಗಳಾದವು.ಬ್ರಹ್ಮ ಸ್ತಂಭದ ಶಿರವನ್ನು ಕಾಣಲಾಗಲಿಲ್ಲ.ವಿಷ್ಣು ಸ್ತಂಭದ ಮೂಲ ಕಾಣಲಾಗಲಿಲ್ಲ.

ವರಾಹ ರೂಪದಲ್ಲಿ ತನ್ನ ಕೋರೆದಾಡೆಗಳಿಂದ ಭೂಮಿಯನ್ನು ಸೀಳಿ,ಬಗೆಯುತ್ತ ಸ್ತಂಭದ ಮೂಲವನ್ನು ಕಾಣದೆ ದಣಿದು ಬಳಲಿದ ವಿಷ್ಣುವು ‘ ಇದು ಅದ್ಭುತವಾದ ಸ್ತಂಭವು.ಇದರ ಮೂಲವನ್ನು ಕಾಣುವುದು ನನ್ನಿಂದಾಗದ ಕಾರ್ಯವು’ ಎಂದು ತಿಳಿದು ಸ್ತಂಭದ ಮೂಲಕಾಣುವ ತನ್ನ ಪ್ರಯತ್ನವನ್ನು ನಿಲ್ಲಿಸಿ ಮೇಲ್ಮುಖವಾಗಿ ಯುದ್ಧಭೂಮಿಯತ್ತ ಪ್ರಯಾಣವನ್ನಾರಂಭಿಸುವನು.

ಸ್ತಂಭದ ಅಗ್ರಭಾಗವನ್ನು ಕಾಣುವ ಉತ್ಸುಕತೆಯಿಂದ ಹಂಸ ರೂಪದಿ ಮೇಲು ಮೇಲಕ್ಕೆ ಹಾರುತ್ತಿದ್ದ ಬ್ರಹ್ಮನು ಇಷ್ಟು ವರ್ಷಗಳಾದರೂ ತನ್ನ ಪ್ರಯತ್ನದಲ್ಲಿ ಸಫಲನಾಗದೆ ನಿಸ್ತೇಜನಾದನು.ಅವನ ಪಕ್ಕಗಳ ಬಲವು ಕುಂದತೊಡಗಿತು.ಮುಂದೇನು ಮಾಡುವುದು ಎಂದು ಕಳವಳಗೊಂಡನು ಬ್ರಹ್ಮ.ಇದೇ ಸಮಯದಲ್ಲಿ ಮೇಲಿನಿಂದ ಒಂದು ಹೂವು ಅಧೋಮುಖವಾಗಿ ಬೀಳುತ್ತಿರುವುದನ್ನು ಕಂಡನು.ಬ್ರಹ್ಮನು ಕುತೂಹಲದಿಂದ ಆ ಹೂವಿನ ಬಳಿ ನಡೆದನು.ಅದು ಕೇದಗೆಯ ಹೂವಾಗಿತ್ತು.ಮೇಲಿನಿಂದ ಕೆಳಗೆ ಬೀಳುತ್ತಿತ್ತು.ಬೀಳತೊಡಗಿ ಹಲವು ವರ್ಷಗಳೇ ಕಳೆದಿದ್ದರೂ ಅದು ಸ್ವಲ್ಪವೂ ಬಾಡಿರಲಿಲ್ಲ,ಅದರ ಸುವಾಸನೆಯು ಕುಂದಿರಲಿಲ್ಲ.

ಬ್ರಹ್ಮ ವಿಷ್ಣುಗಳು ಲಿಂಗದ ತುದಿ ಮೊದಲನ್ನು ಶೋಧಿಸ ಹೊರಟಾಗ ಶಿವನೊಮ್ಮೆ ನಕ್ಕಿದ್ದ.ಆಗ ಬಿದ್ದುದೆ ಈ ಪುಷ್ಪವು.

ಪುಷ್ಪದ ಬಳಿ ಬಂದ ಬ್ರಹ್ಮನು ಕೇಳಿದ “ಎಲೈ ಪುಷ್ಪವೆ,ನೀನೆಲ್ಲಿಂದ ಬೀಳುತ್ತಿರುವಿ ? ಯಾರು ನಿನ್ನನ್ನು ಧರಿಸಿದ್ದರು?”
ಹೂವು ಹೇಳಿತು” ಈ ಸ್ತಂಭದ ನಡುವಿನ ಒಂದು ಭಾಗದಿಂದ ನಾನು ಬಿದ್ದೆನು.ನಾನು ಬೀಳತೊಡಗಿ ಲೆಕ್ಕವಿಲ್ಲದ ಎಷ್ಟೋ ವರ್ಷಗಳಾದರೂ ಇನ್ನೂ ಇದರ ಬುಡ ಸಿಕ್ಕಿಲ್ಲ.ನೀನು ಇದರ ತಲೆಯನ್ನು ನೋಡುವ ಆಶೆಯನ್ನು ಹೊಂದಿದ್ದರೆ ಬಿಟ್ಟುಬಿಡು”.

‌ಹೂವಿನ ಮಾತುಗಳನ್ನು ಕೇಳಿ ಬ್ರಹ್ಮನು ಚಿಂತೆಗೊಳಗಾದ.ಆದರೂ ಕಾರ್ಯಸಾಧನೆಯ ಹುಮ್ಮಸ್ಸಿನಿಂದ ಬ್ರಹ್ಮನು ಹೂವಿಗೆ ತಾನು ಸೃಷ್ಟಿಕರ್ತನಾದ ಬ್ರಹ್ಮನೆಂದೂ ತನ್ನ ಮತ್ತು ವಿಷ್ಣುವಿನ ನಡುವಿನ ಸಮರ ವೃತ್ತಾಂತವನ್ನೂ ಹಾಗೂ ತುದಿ ಮೊದಲುಗಳನ್ನು ಕಾಣಲು ಏರ್ಪಟ್ಟ ಒಡಂಬಡಿಕೆಯನ್ನು ವಿವರಿಸಿ ” ಇನ್ನು ಮುಂದೆ ನಾವಿಬ್ಬರು ಗೆಳೆಯರಾಗೋಣ.ನೀನು ನನಗೊಂದು ಉಪಕಾರ ಮಾಡಬೇಕು.ಹಂಸರೂಪದಿಂದ ಈ ಸ್ತಂಭದ ಶಿರೋಭಾಗವನ್ನು ಕಾಣಲು ಬಂದ ನಾನು ನಿನ್ನ ಮಾತಿನಂತೆ ಈ ಕಾರ್ಯದಲ್ಲಿ ಸಫಲನಾಗಲಾರೆ.ಈಗ ಕೆಳಗೆ ಹೋಗಿ ಈ ಸ್ತಂಭದ ಶಿರೋಭಾಗವನ್ನು ಕಂಡೆನು ಎಂದು ವಿಷ್ಣುವಿನೆದುರು ಸುಳ್ಳನ್ನು ಹೇಳುವನು.ನೀನು ಸಾಕ್ಷಿ ಹೇಳಬೇಕು”
” ಬ್ರಹ್ಮನು ಸ್ತಂಭದ ಅಗ್ರಭಾಗವನ್ನು ಕಂಡಿದ್ದಾನೆ.ಇದಕ್ಕೆ ನಾನೇ ಸಾಕ್ಷಿ ಎಂದು ನೀನು ಘೋಷಿಸಬೇಕು”
ಹೂವು ಬ್ರಹ್ಮನ ಮಾತಿಗೆ ಒಪ್ಪಿ ” ಆಗಲಿ,ಆಪತ್ತಿನಲ್ಲಿ ಸುಳ್ಳು ಹೇಳುವುದು ಶಾಸ್ತ್ರ ಸಮ್ಮತವಷ್ಟೆ”ಎಂದಿತು.

ಬ್ರಹ್ಮನು ಹರ್ಷಚಿತ್ತನಾಗಿ ಕೇದಗೆಯೊಡನೆ ಯುದ್ಧಭೂಮಿಯತ್ತ ಬಂದನು.ಅತ್ತ ವಿಷ್ಣುವು ಬಳಲಿ,ಬೆಂಡಾಗಿ ಬರುತ್ತಿರುವುದನ್ನು ಕಂಡ ಬ್ರಹ್ಮನು ವಿಷ್ಣುವು ಸ್ತಂಭದ ಮೂಲವನ್ನು ಶೋಧಿಸಿಲ್ಲ ಎಂದು ನಿಶ್ಚಯಿಸಿಕೊಂಡು ಕುಣಿದು ಕುಪ್ಪಳಿಸಿದ.ವಿಷ್ಣುವಿನ ಬಳಿ ಬಂದು ” ವಿಷ್ಣುವೇ ನಾನು ಸ್ತಂಭದ ಅಗ್ರಭಾಗವನ್ನು ಕಂಡೆನು.ಅದಕ್ಕೆ ಈ ಹೂವೇ ಸಾಕ್ಷಿ.ಸ್ತಂಭದ ಶಿರದ ಮೇಲಿದ್ದ ಇದನ್ನು ನಾನು ಸಾಕ್ಷಿಗಾಗಿ ಕರೆತಂದೆನು” ಕೇದಗೆಯ ಹೂವು ಸಾಕ್ಷಿ ನುಡಿಯಿತು ಬ್ರಹ್ಮನಾಡಿದುದು ನಿಜವೆಂದು.ಸುಳ್ಳು ಎಂದರೆ ಏನೆಂದೇ ಅರಿಯದ ವಿಷ್ಣುವು ಬ್ರಹ್ಮನ ಮಾತುಗಳನ್ನು ನಿಜವೆಂದೇ ಬಗೆದನು.ಬ್ರಹ್ಮನೇ ಹಿರಿಯನೆಂದು ತಿಳಿದು ನಮೋ ಎಂದು ಬ್ರಹ್ಮನನ್ನು ಷೋಡಶೋಪಚಾರಗಳಿಂದ ಪೂಜಿಸತೊಡಗಿದನು.

ಬ್ರಹ್ಮನ ಅಸದ್ವರ್ತನೆಯಿಂದ ರೋಷಾವೇಶಗೊಂಡ ಶಿವನು ಬ್ರಹ್ಮನನ್ನು ದಂಡಿಸಲೇಬೇಕು ಎಂದು ಸ್ತಂಭದಲ್ಲಿ ಪ್ರತ್ಯಕ್ಷನಾದನು.ಏನೂ ಅರಿಯದ ವಿಷ್ಣುವು ಭಯದಿಂದ ತತ್ತರಿಸಿ,ಗಡಗಡನೆ ನಡುಗುತ್ತ ಶಿವನ ಕಾಲುಗಳನ್ನು ಗಟ್ಟಿಯಾಗಿ ಹಿಡಿದುಕೊಂಡು ” ದೇವಾದಿದೇವನೆ,ಅಪರಾಧವನ್ನು ಕ್ಷಮಿಸಬೇಕು.ನಾವು ಮೂರ್ಖರು.ಆದ್ಯಂತರಹಿತನಾದ ನೀನೇ ಜಗದೀಶ್ವರನಿರಲು ನಾವಿಬ್ಬರು ನಾನು ಮೇಲು ,ತಾನು ಮೇಲು ಎಂದು ಕಚ್ಚಾಡಿ ಯುದ್ಧಕ್ಕೆ ತೊಡಗಿದೆವು.ಇದೂ ನಿನ್ನ ಲೀಲೆಯೆ! ನಾವೆಷ್ಟರವರು ?” ಎಂದನು.ವಿಷ್ಣುವಿನ ದೈನ್ಯಾತಿಶಯದ ಭಕ್ತಿಯ ನುಡಿಗಳನ್ನಾಲಿಸಿದ ಶಿವನು ಸಂತುಷ್ಟನಾಗಿ ” ಮಗು,ನಿನ್ನ ವಿಷಯದಲ್ಲಿ ನನಗೆ ಬಹಳ ತೃಪ್ತಿಯುಂಟಾಗಿದೆ.ದೊಡ್ಡವನಾಗಬೇಕು ಎನ್ನುವ ಆಸೆ ಇದ್ದರೂ ಅದಕ್ಕಾಗಿ ನೀನು ಸುಳ್ಳನ್ನು ಮಾತ್ರ ಆಡಲಿಲ್ಲ.ನಿನ್ನ ಸತ್ಯನಿಷ್ಠೆಗೆ ಪ್ರಸನ್ನನಾಗಿ ಸತ್ಯಸ್ವರೂಪನಾದ ನಾನು ನಿನಗೆ ನನ್ನಂತೆಯೇ ಪೂಜೆಗೊಳ್ಳುವ ವರವನ್ನು ನೀಡುತ್ತಿದ್ದೇನೆ.ಇನ್ನು ಮುಂದೆ ಲೋಕದಲ್ಲಿ ನಿನಗೆ ನನ್ನಂತೆಯೇ ಎಲ್ಲಾ ಗೌರವ,ಪೂಜೆ,ಸತ್ಕಾರಗಳು ಲಭಿಸಲಿ.ತೀರ್ಥಕ್ಷೇತ್ರಗಳಲ್ಲಿ ನಿನ್ನ ಮೂರ್ತಿಯ ಪ್ರತಿಷ್ಠೆ,ಪೂಜೋಪಚಾರಗಳು ನಡೆಯಲಿ” ಎಂದು ಶಿವನು ವಿಷ್ಣುವಿನ ಸತ್ಯನಿಷ್ಠೆಗೆ ಮೆಚ್ಚಿ ತನ್ನ ಸಮಾನತೆಯನ್ನು ಕೊಟ್ಟನು,ತನ್ನಂತೆಯೇ ಲೋಕಪೂಜಿತನಾಗಲು ಅನುಗ್ರಹಿಸಿದನು ಎಂಬಲ್ಲಿಗೆ ಶಿವನಿಂದ ವಿಷ್ಣುವಿಗೆ ವರಪ್ರದಾನ ಎನ್ನುವ ಅಧ್ಯಾಯವು ಮುಗಿದುದು.

ವ್ಯಾಖ್ಯಾನ

ವೇದವ್ಯಾಸರು ಶ್ರೀ ಶಿವಮಹಾಪುರಾಣದ ಈ ಅಧ್ಯಾಯದಲ್ಲಿ ಪರಮೇಶ್ವರನಾದ ಶಿವನೊಬ್ಬನೇ ನಿಗ್ರಹಾನುಗ್ರಹ ಸಮರ್ಥನಿರುವನು ಎನ್ನುವುದನ್ನು ನಿರೂಪಿಸಿದ್ದಾರೆ.ದೇವತೆಗಳ ಮೊರೆ ಕೇಳ್ದು ಪ್ರಸನ್ನನಾದ ಶಿವನು ಲೋಕಕ್ಕೆ ಬಂದೊದಗಿದ ಆಪತ್ತನ್ನು ನಿವಾರಿಸಲು ಯುದ್ಧಭೂಮಿಗೆ ಬರುವನು.ಲೀಲೆಯನ್ನು ಪ್ರಕಟಿಸಲು ಸ್ತಂಭ ರೂಪದಲ್ಲಿ ಆವಿರ್ಭವಿಸುವನು.ಬ್ರಹ್ಮ ವಿಷ್ಣುಗಳಿಬ್ಬರೂ ಈ ಅದ್ಭುತ ಸ್ತಂಭದ ತಲೆ ಬುಡಗಳನ್ನು ಶೋಧಿಸಲು ಹೊರಟು ವಿಫಲರಾಗುವರು.ವಿಷ್ಣುವು ಸತ್ಯನಿಷ್ಠನಾದುದರಿಂದ ತಾನು‌ ಕಿರಿಯನೆನ್ನಿಸಿಕೊಂಡರೂ ಚಿಂತೆಯಿಲ್ಲ ಎಂದು ಸತ್ಯನಿಷ್ಠೆಯನ್ನು ಮೆರೆದನು.ಬ್ರಹ್ಮನು ಸೃಷ್ಟಿಕರ್ತನಾಗಿಯೂ ಪ್ರತಿಷ್ಠೆ ಮೆರೆಯಲು ಸುಳ್ಳನ್ನು ಆಡುವನಲ್ಲದೆ ಸುಳ್ಳು ಸಾಕ್ಷಿಯನ್ನೂ ಸೃಷ್ಟಿಸುವನು.ವಿಶ್ವನಿಯಾಮಕನಾದ ಶಿವನು ಬ್ರಹ್ಮನನ್ನು ನಿಗ್ರಹಿಸಿ ವಿಷ್ಣುವನ್ನು ಅನುಗ್ರಹಿಸಲುದ್ಯಕ್ತನಾಗುವನು.

ಪರಬ್ರಹ್ಮನಾದ ಶಿವನು ಸತ್ಯಸ್ವರೂಪನಿರುವುದರಿಂದ ಸುಳ್ಳನ್ನಾಡದ ವಿಷ್ಣುವಿನ ಸತ್ಯನಿಷ್ಠೆಯನ್ನು ಮೆಚ್ಚಿ ಲೋಕದಲ್ಲಿ ತನ್ನ ಸಮಾನವಾಗಿ ಪೂಜೆಗೊಳ್ಳುವ ವರವನ್ನು ನೀಡಿದನು.ವಿಷ್ಣುವು ಶಿವಾನುಗ್ರಹವಿಶೇಷದಿಂದ ಲೋಕದಲ್ಲಿ ಶಿವನ ಸಮಾನವಾಗಿ ಪೂಜೆಗೊಳ್ಳುತ್ತಿದ್ದಾನೆ ಎನ್ನುವ ಸಂಗತಿಯು ಈ ಅಧ್ಯಾಯದಲ್ಲಿ ಪ್ರಕಟಗೊಂಡಿದೆ.ವಿಷ್ಣುವು ಮಾತ್ರವಲ್ಲ,ಶಿವಭಕ್ತರು,ಶಿವಶರಣರುಗಳು,ಶಿವಯೋಗಿಗಳು ಶಿವನಂತೆಯೇ ಪೂಜೆಗೊಳ್ಳುತ್ತಿದ್ದಾರೆ,ಆರಾಧಿಸಲ್ಪಡುತ್ತಿದ್ದಾರೆ.ಭರತಖಂಡದಾದ್ಯಂತ ಶಿವಭಕ್ತರುಗಳು ದೇವರಾಗಿ ಪೂಜೆಗೊಳ್ಳುತ್ತಿರುವುದು ಶಿವಾನುಗ್ರಹವಿಶೇಷದಿಂದ.ಭಕ್ತವತ್ಸಲನಾದ ಶಿವನು ತನ್ನ ಭಕ್ತರುಗಳಿಗೆ ತನ್ನ ಈಶ್ವರತ್ವದ ವಿಭೂತಿಯನ್ನು ಅನುಗ್ರಹಿಸುವುದರಿಂದ ಶಿವಶರಣರು ಲೋಕಪೂಜಿತರಾಗುತ್ತಾರೆ.

ವಾಮಮಾರ್ಗದಿಂದ ಉನ್ನತಿಕೆಯನ್ನು ಪಡೆಯಲು ಬಯಸುವವರು ಅಧಃಪತನವನ್ನು ಹೊಂದುತ್ತಾರೆ.ಸರಿಯಾದ ದಾರಿಯಲ್ಲಿ ನಡೆಯುವವರು,ಸತ್ಯಪಥದಲ್ಲಿ ನಡೆಯುವವರು ಪರಮಾತ್ಮನ ಅನುಗ್ರಹಕ್ಕೆ ಪಾತ್ರರಾಗುತ್ತಾರೆ ಎನ್ನುವುದಕ್ಕೆ ವಿಷ್ಣುವು ಲೋಕದಲ್ಲಿ ಶಿವನ ಸಮಾನನಾಗಿ,ಶಿವನಂತೆಯೇ ಪೂಜೆಗೊಳ್ಳಲು ವರಪಡೆದ ಈ ಪ್ರಸಂಗವೇ ಸಾಕ್ಷಿ.ಸತ್ಯಸ್ವರೂಪನಾದ ಶಿವನೊಲುಮೆಗೆ ಭಕ್ತರು ಸತ್ಯನಿಷ್ಠರಾಗಿರಬೇಕು.ಕಷ್ಟ- ನಷ್ಟಗಳೇನೇ ಬಂದರೂ ಸತ್ಯಪಥದಿಂದ ವಿಮುಖರಾಗಬಾರದು.ಸತ್ಯವೇ ಗೆಲ್ಲುತ್ತದೆ,ಸುಳ್ಳಲ್ಲ.

ಮುಕ್ಕಣ್ಣ ಕರಿಗಾರ

೦೪.೦೮.೨೦೨೨