ಅಯ್ಯೋ ಎನ್ ಸರ್ ಇದು ಗಾಯಾ?? ಎನ್ ಮಾಡ್ಕೊಂಡ್ರಿ?? ಅಜ್ಜಿ ಏನಾಯ್ತು ಕಾಲೆಲ್ಲ ಈ ಥರಾ ಗುಳ್ಳೆ ಎದ್ದು ಊದಕೊಂಡಿದೆ?? ಎನೇ ಇದು ಒಳ್ಳೆ ದೆವ್ವ ನೋಡಿದ ಥರಾ ಆಗ್ತಿದೆ.ಹಿಟ್ಟಿನ ಡಬ್ಬಾ ಮತ್ತೆ ಮೈ ಮೇಲ್ ಬಿತ್ತಾ?? ಸುಜಿ ಎಷ್ಟ ಸಾರಿ ಹೇಳಿದಿನಿ ಆ ಥರಾ ಮೇಲೆ ಇರೋ ವಸ್ತುಗಳನ್ನ ತಗೋಳೋ ಪ್ರಯತ್ನ ಮಾಡ್ಬೇಡ ಅಂತ….
ಏನಪ್ಪಾ ಸ್ವಲ್ಪ ಶೆಟ್ರ ಅಂಗಡಿಗೆ ಹೋಗಿ ಕಿರಾಣಿ ಸಾಮಾನ್ ತಂದಕೊಡ್ತೀಯಾ ಪ್ಲೀಜ್…ಹೀಗೆ ಒಂದಲ್ಲ ಒಂದು ಸಮಯದಲ್ಲಿ ಎಲ್ಲರೂ ಎನೋ ಒಂದು ಮಾಡಲು ಹೋಗಿ ಅದು ನಮ್ಮಿಂದ ಆಗೋದಿಲ್ಲ ಅಂತ ಗೊತ್ತಾಗಿ ಒಂದಷ್ಟು ಫಜೀತಿಗೆ ಒಳಗಾಗ್ತಾ ಇರ್ತೀವಿ.ದೇವರೆ ಯಾಕಪ್ಪ ನನಗೆ ಇಂಥಾ ನರಕದ ಜೀವನಾ?? ಅವರಿಗಿಂತ ಮುಂಚೆ ನನ್ನನ್ನೆ ಕರೆದುಕೊಳ್ಳಬಾರದಾಗಿತ್ತಾ??
ಥೋ….ಈ ಒಂಟಿತನ,ಈ ಹತಾಶೆ,ಈ ನೋವು ಇನ್ನೂ ಎಷ್ಟು ದಿನ ಅನುಭವಿಸಬೇಕು ಅಂತ ಒಳಗೊಳಗೆ ನಮ್ಮನ್ನ ನಾವೇ ಶಪಿಸಿಕೊಳ್ಳುತ್ತಾ ಕಣ್ಣಿಗೆ ಕಾಣದ ದೈವಕ್ಕೆ ಸಾಕಪ್ಪ ಈ ಬದುಕು ಅಂತ ಗೊಣಗಿಕೊಳ್ಳುತ್ತ ಇದ್ದರೆ ಅದರ ಹಿಂದಿನ ನಮ್ಮ ಅವಲಂಬನೆಗಳು ಒಂದೊಂದಾಗಿ ಕಣ್ಣ ಮುಂದೆ ಹರಡಿಕೊಳ್ಳುತ್ತ ಹೋಗುತ್ತವೆ.
ನನಗಾದ್ರೂ ಯಾರಿದ್ದಾರೆ ಶೃತಿ?? ಶಮಾ ಮದುವೆ ಆಗಿ ನಮ್ ಕಂಪನಿ ಬಿಟ್ಟು ಹೋದ್ಮೇಲೆ ಈ ಕಂಪನಿ ಸಹವಾಸಾನೆ ಸಾಕು ಅನ್ನಿಸ್ತಿದೆ. ಅಕೌಂಟ್ಸ ಎಲ್ಲಾ ಅವಳೇ ನೋಡಕೊಳ್ತಾ ಇದ್ಲು ಈಗ ಯಾವ್ದುಕ್ಕೆ ಎಷ್ಟು ಖರ್ಚು ಮಾಡಬೇಕು ಅಂತಾನೂ ಗೊತ್ತಾಗ್ತ ಇಲ್ಲ…ಇದ್ದಾಗ ಕೋಪ ಮಾಡ್ಕೊಂಡು ಅಮ್ಮಾ ನನಗೆ ಅಡುಗೆ ಎನೂ ಮಾಡಬೇಡ ಅಂತ ರೂಮಿನ ಬಾಗಿಲು ಹಾಕಿ ಕಂಪ್ಯೂಟರಲ್ಲಿ ಕಳ್ದೋಗ್ತಾ ಇದ್ದೋನಿಗೆ ಮಧ್ಯರಾತ್ರಿ ಒಂದು ಗಂಟೆಗೆ ಇನ್ನು ಹಸಿವು ತಡೆಯೋಕೆ ಆಗಲ್ಲ ಅಂತ ಎದ್ದು ಬಂದು ಕಿಚನ್ ಅಲ್ಲಿ ಏನಾದ್ರೂ ಇದೆಯಾ ಅಂತ ಸದ್ದಿಲ್ಲದೆ ಹುಡುಕ್ತಾ ಇದ್ರೆ ಅಷ್ಟು ಸರಹೊತ್ತಿನಲ್ಲು ಪ್ರಿಡ್ಜಲ್ಲಿ ಪುಳಿಯೊಗರೆ ಇಟ್ಟೀದಿನಿ ಬಿಸಿ ಮಾಡಿಕೊಡ್ಲಾ ಅಂತಿದ್ದ ಅಮ್ಮ ಯಾಕೋ ಇಂತಹ ಇಳಿವಯಸ್ಸಿನಲ್ಲೂ ಇದ್ದಕಿದ್ದಂತೆ ನೆನಪಾಗಿ ಬಿಡ್ತಾಳೆ.ಅದಾಗಲೇ ಮೂವತ್ತಾರು ಮುಗಿದು ಅಮ್ಮ ತೀರಿ ಹೋಗಿ ವರುಷಗಳು ಉರುಳಿದ ಮೇಲೆ ಆಗುವ ನೆನಪುಗಳಿವೆಯಲ್ಲ ಅವು ಸದ್ದಿಲ್ಲದೆ ನಮ್ಮ ಕಣ್ಣ ಕಂಬನಿಯನ್ನ ಗಲ್ಲದ ಮೇಲೆ ಇಳಿಸಿಬಿಟ್ಟಿರುತ್ತೆ.
ಹೋಗಲೋ ಗುಬಾಲ್ ಎನ್ ನೀನ್ ಇದ್ರೇ ಅಷ್ಟೇನಾ ನಮ್ ಟೀಮು?? ನೋಡ್ತಾ ಇರು ನೀನು ಟೀಮ್ ಅಲ್ಲಿ ಇಲ್ದೆ ಇರೋವಾಗ್ಲೂ ಈ ಮ್ಯಾಚ್ ಅನ್ನ ನಾವೇ ಗೆಲ್ತಿವಿ ಅಂತ ಗೆಳೆಯನೊಬ್ಬನನ್ನ ಗೇಲಿ ಮಾಡಿದ ಬಳಿಕ ಕ್ರಿಕೆಟ್ ಅಲ್ಲಿ ಸೋತು ಬರುವ ಗೆಳೆಯರಿಗೆ ಇದ್ದಕ್ಕಿದ್ದಂತೆ ನಾವು ತಪ್ಪು ಮಾಡಿದ್ವಿ ಮಗಾ ನಮ್ ಜೊತೆಗೆ ಅವಿನಾಶ್ ಇರ್ಬೇಕಾಗಿತ್ತು ಅನ್ನಿಸಿಬಿಡುತ್ತೆ.ಯಾಕೆಂದರೆ ಒಂದಲ್ಲ ಒಂದು ಕಾರಣದಿಂದ ನಮ್ಮಲ್ಲಿ ಇಲ್ಲದ ಟ್ಯಾಲೆಂಟ್ ನಿಂದ ಅಥವಾ ನಮಗೆ ಒಲಿಯದ ಅಡುಗೆಯ ವಿದ್ಯೆ,ಹಾಡುಗಾರಿಕೆ,ಒಂದಷ್ಟು ಒಳ್ಳೆಯ ಬರಹ ಕನಿಷ್ಠ ಕಪ್ ಆಫ್ ಟೀ ಕೂಡ ಮಾಡಿಕೊಳ್ಳಲಾಗದ ನಮ್ಮ ಅಸಹಾಯಕತೆಗೆ ಪ್ರಮುಖವಾಗಿ ನಾವೇ ಕಾರಣವಾಗಿ ಬಿಡ್ತೀವಿ.
ಅವರೆಲ್ಲಾ ಇದ್ದಾರೆ ಬಿಡು ಎಲ್ಲಾ ನೋಡಕೊಳ್ತಾರೆ ಅನ್ನುವ ನಂಬಿಕೆ,ಜೀವನಾ ಪೂರ್ತಿ ಜೊತೆಗೆ ಇರ್ತೀವಿ ಬಿಡು ಅನ್ನುವ ಭಯಂಕರವಾದ ಅಟ್ಯಾಚ್ ಮೆಂಟು ಮತ್ತು ಸೆಂಟಿಮೆಂಟುಗಳೇ ಒಮ್ಮೊಮ್ಮೆ ಮನುಷ್ಯ ನೆಂಬ ಅಬ್ಬೇಪಾರಿಯನ್ನ ಅಮಾನುಷವಾಗಿ ಸೋಲಿಸಿಬಿಡುತ್ತೆ.ಪರ್ಸಲ್ಲಿ ದುಡ್ಡಿದೆ ಕಣ್ರಪ್ಪಾ ನನಗೇನು ಕಮ್ಮಿ ನಾನು ಮನಸ್ ಮಾಡಿದ್ರೆ ದುನಿಯಾನೆ ಖರೀದಿಸ್ತೀನಿ ಅಂತ ಹೊರಟು ನಿಂತ ವ್ಯಕ್ತಿಯಿಂದ ಹಿಡಿದು ಜೇಬಲ್ಲಿ ಬಿಡಿಗಾಸು ಕೂಡ ಇಲ್ಲದ ಒಬ್ಬ ಫಕೀರನ ತನಕ ಎಲ್ಲರನ್ನ ಕಾಡುವದು ನಮ್ಮವರು ಯಾರೂ ಇಲ್ಲ ಅನ್ನುವ ಏಕಾಂಗಿತನ ಅನ್ನುವದು ನಿಮಗೆಲ್ಲ ನೆನಪಿರಲಿ.ತೀರ ಬಾಲ್ಯದ ಗೆಳೆಯರು ಸಿಗುವದೆ ಅಪರೂಪ ಅನ್ನುವ ದಿನಗಳಿಂದ ಆರಂಭವಾಗುವ ನಮ್ಮ ಬದುಕಿನ ಜರ್ನಿ ಕೊನೆಯ ಹಂತದಲ್ಲಿ ಏನೆಲ್ಲಾ ಮಾಡಿದೆ ಬಾಸು ಆದ್ರೆ ವಿಧಿ ಆಟಾನೆ ಬೇರೆ ಇತ್ತು ಮಗಾ ಬೆಂಗಳೂರಲ್ಲಿ ಸಾಫ್ಟವೇರ್ ಇಂಜನೀಯರು ಮಗಳು ಅಮೇರಿಕಾದಲ್ಲಿ ವೆಲ್ ಸೆಟಲ್ಡು ಅನ್ನುವ ಕಾಲಕ್ಕೆ ಹಾಗಾದ್ರೆ ನಿಮ್ಮ ಜೊತೆಗೆ ಸದ್ಯಕ್ಕೆ ಯಾರಿದ್ದಾರೆ ಅನ್ನುವ ಪ್ರಶ್ನೆಗೆ ನಮ್ಮನ್ನ ಆವರಿಸಿಕೊಳ್ಳುವ ವಿನಾಕಾರಾಣದ ಮೌನವೆ ನಮ್ಮಿಂದ ಅರಗಿಸಿಕೊಳ್ಳಲಾಗದ ಉತ್ತರವಾಗಿ ಬಿಟ್ಟಿರುತ್ತದೆ.
ಯಾವಾಗ್ಲೂ ಜೋಕ್ ಮಾಡ್ತಾ ನಗ್ ನಗ್ತಾ ಇದ್ದೋರೆ ತಮ್ಮ ಬದುಕಿನ ಅಧ್ಯಾಯದಲ್ಲಿ ಭರವಸೆ ಅನ್ನುವ ಪದವನ್ನ ಕಳೆದುಕೊಂಡು ಎಲ್ಲರಿಂದಲೂ ದೂರವಾಗಿ ಬಿಟ್ಟಿರುತ್ತಾರೆ.ನಮ್ಮ ಜೊತೆಗೆ ಇದ್ದೋರು ಎಲ್ಲರೂ ಸೆಟ್ಲ ಆದ್ರೂ ಕೂಡ ನಾವು ಮಾತ್ರ ನಮ್ಮ ಅರಿವಿಗೆ ಬರುವಷ್ಟರ ಒಳಗಾಗಿ ಈ ಬದುಕೆಂಬ ಪ್ರಯಾಣದಲ್ಲಿ ಬಹಳ ಹಿಂದೆ ಉಳಿದುಬಿಟ್ಟಿರ್ತೀವಿ.ಯಾಕಂದ್ರೆ ಉಳಿದವರ ಥರ ನಾವು ನಮಗೆ ಅಂತ ಏನನ್ನೂ ಮಾಡಿಕೊಂಡಿರೋದಿಲ್ಲ.ದುಡ್ಡು,ಆಸ್ತಿ,ಕಾರು,ಬಂಗ್ಲೇ,ತೋಟ,ಒಂದಷ್ಟು ಬ್ಯಾಂಕ್ ಬ್ಯಾಲೆನ್ಸು ಇದೆಲ್ಲ ಬೇರೆ ವಿಷಯ.ಆದರೆ ಒಂದಷ್ಟು ಏಕಾಂಗಿತನವನ್ನ, ಯಾರೂ ಇಲ್ಲದೆ ಇದ್ದರೂ ನಾವಷ್ಟೇ ಬದುಕಬಲ್ಲೆವು ಅನ್ನುವ ಛಲವನ್ನ,ಅರೇ ಏನಾಯ್ತು ಬಿಡು ಗುರು ಲಾಸ್ ಆಗಿರೋದು ದುಡ್ಡು ಅಷ್ಟೇ ಅಲ್ಲವಾ ಅಂದುಕೊಳ್ಳುವ ಮತ್ತೆ ಮುಂದಿನ ದಿನಗಳಲ್ಲಿ ಇನ್ನೂ ಸ್ವಲ್ಪ ಹಾರ್ಡ ವರ್ಕ್ ಮಾಡಿದ್ರೆ ಇದರ ಹತ್ತುಪಟ್ಟು ಗಳಿಸಬಲ್ಲೆ ಅನ್ನುವ ನಂಬಿಕೆಯನ್ನ ನಮಗೆ ನಾವೇ ಹುಟ್ಟಿಸಿಕೊಳ್ಳುವದನ್ನ ಯಾಕೋ ಮರೆತು ಬಿಟ್ಟಿರ್ತೀವಿ.
ಎಲ್ಲರ ಬದುಕಲ್ಲೂ ಒಂದಲ್ಲ ಒಂದು ದಿನ ಇಂತಹ ಸೋಲು,ಅಪಮಾನ,ನೋವು,ನಿರಾಸೆಗಳು ಇದ್ದಕ್ಕಿದ್ದಂತೆ ಕಾರ್ಮೋಡ ಆವರಸಿದಂತೆ ಜೊತೆಯಾಗಿ ಬಿಟ್ಟಿರುತ್ತೆ.ಬೇಜಾರಾದಾಗ ಹಾಡು ಕೇಳೋದು,ಒಬ್ಬರೇ ಕುಳಿತು ಒಂದಷ್ಟು ಪೆಗ್ಗು ಹಾಕೋದು,ಚಲ್ ಮೇರೆ ಸಾಥಿ ಅಂತ ಬೈಕಿನ ಪಕ್ಕೆಗೆ ಒದ್ದು ಎಕ್ಸಿಲೇಟರ್ರು ಕೊಟ್ಟು ಒಂದಷ್ಟು ದೂರ ಒಬ್ಬಂಟಿಯಾಗಿ ಹೊರಟುಬಿಡೋದು,ಇಳಿ ಸಂಜೆಯ ಹೊತ್ತಿನಲ್ಲಿ ಬೆಟ್ಟದ ತುದಿಯಲ್ಲಿ ಒಬ್ಬರೆ ನಿಂತು ಮುಳುಗುವ ಸೂರ್ಯನ ಕಿರಣಗಳ ಜೊತೆಗೆ ಮಾತಿಗೆ ಇಳಿಯೋದು ಇವೆಲ್ಲ ನಿಮಗೆ ಸಹಜವಾಗಿ ಒಂದಷ್ಟು ಹುಚ್ಚುತನಗಳ ಹಾಗೆ ಈ ಕ್ಷಣಕ್ಕೆ ಕಾಣಿಸಿ ಬಿಡಬಹುದು.ಆದರೆ ನಮ್ಮ ಬದುಕಿನ ಯಾವುದೋ ತಿರುವಿನಲ್ಲಿ ನಮ್ಮನ್ನ ಸತಾಯಿಸುವ ಮತ್ತು ತೀರಾ ಹತಾಸೆ ಮೂಡಿಸುವ ಹಾಗೂ ಜೀವನದ ಬಗ್ಗೆ ಜಿಗುಪ್ಸೆ ಹುಟ್ಟಿಸುವ ಸಮಯದಲ್ಲಿ ಸೆಲ್ಪ ಕಾನ್ಪಿಡೆನ್ಸ ಅನ್ನೋದು ಮಾತ್ರ ನಮ್ಮ ಕೈ ಹಿಡಿಯುತ್ತದೆ.
ನಾವೆಲ್ಲ ಬರುವಾಗ ಒಂಟಿಯಾಗಿ ಬಂದಿದ್ದೀವಿ ಹೋಗುವಾಗ ಕೂಡ ಒಂಟಿಯಾಗಿ ಹೋಗ್ತೀವಿ ಅನ್ನೋದನ್ನ ಹೆಳೋದು ಬಹಳ ಸುಲಭ ಅನ್ನಿಸುತ್ತೆ.ಆದ್ರೆ ನಾವುಗಳು ಮಾತ್ರ ನಮ್ಮನ್ನ ಆವರಿಸಿಕೊಳ್ಳುವ ಅನಾಥ ಪ್ರಜ್ಞೆಯಿಂದ ಹೇಗೆ ಹೊರಗೆ ಬರಬಹುದು ಅಂತ ಯೋಚಿಸದೆ ಇದ್ದರೆ ಕೊನೆಗೆ ನಮ್ಮ ಬದುಕೇ ನಮಗೆ ನರಕದಂತೆ ಕಾಣಿಸತೊಡಗುತ್ತದೆ.ಒಂದಷ್ಟು ದುಡ್ಡು ಕಾಸು ಕೈಯ್ಯಲಿದ್ದಾಗ ಮೋಜು ಮಸ್ತಿಗೆ ಅಂತ ಜೊತೆಯಾಗುತ್ತಿದ್ದ ಗೆಳೆಯರೇ ನಮಗೆ ಕಷ್ಟ ಅಂತ ಬಂದಾಗ ಸ್ವಲ್ಪ ಬ್ಯುಜಿ ಇದ್ದೀನಿ ಮಚ್ಚಾ ಆಮೇಲೆ ಕಾಲ್ ಮಾಡ್ತಿನಿ ಅನ್ನುವಷ್ಟರ ಮಟ್ಟಿಗೆ ಬದಲಾಗಿ ಬಿಡ್ತಾರೆ.
ಅಪ್ಪಾ ನಿಮಗೆ ಟೈಮ್ ಹೋಗಿಲ್ಲ ಅಂದ್ರೆ ಪಕ್ಕದಲ್ಲೇ ದೇವಸ್ಥಾನ ಇದೆ ಅಮ್ಮ ನಿಂಗೆ ನೋಡೋಕೆ ಅಂತಾನೆ ಟಿವಿ ತಂದೀದಿನಿ ಅನ್ನುವ ಮಕ್ಕಳು ತಾವು ತಮ್ಮ ಸಂಸಾರ ಅಂತ ನಿಧಾನಕ್ಕೆ ನಮ್ಮನ್ನ ಒಂಟಿಯಾಗಿಸ ತೊಡಗುತ್ತಾರೆ.ದುಡಿಯುವ ಮಗ ಸಂಬಳವನ್ನ ಅಪ್ಪನ ಕೈಗೆ ಕೊಟ್ಟು ಪಾಕೆಟ್ ಮನಿಗೆ ಅಂತ ಒಂದಷ್ಟು ದುಡ್ಡು ಕೇಳುತ್ತಿದ್ದ ಕಾಲ ಅದು ಯಾವಾಗಲೋ ಹೊರಟು ಹೋಗಿದೆ.ಅವರು ಕಾಸು ಕೇಳಿದಾಗ ನಾವು ಯಾಕಪ್ಪ ಅಂತ ಕೇಳಿರದೆ ಇದ್ದರೂ ಈಗ ಮಕ್ಕಳು ಮೊನ್ನೇನೆ ಕೊಟ್ಟಿದ್ನಲ್ಲಪ್ಪ ಇನ್ನೂರು ರೂಪಾಯಿ ಅಂತ ಲೆಕ್ಕ ಕೇಳುವ ಮಟ್ಟಿಗೆ ಬದಲಾಗಿ ಬಿಟ್ಟಿರ್ತಾರೆ.ಟೇಬಲ್ ಮೇಲೆ ಬಿಟ್ಟ ಕನ್ನಡಕಕ್ಕೆ ನಮ್ಮ ಕೈಗಳು ತಡಕಾಡುತ್ತಿದ್ದರೂ ಕೂಡ ಅಲ್ಲೆ ಇರುವ ಮೊಮ್ಮಕ್ಕಳು ಅಥವಾ ಸೊಸೆ ಎನ್ ಹುಡುಕ್ತಾ ಇದೀರಾ ಅಂತ ಕೇಳುವ ದಿನಗಳು ಕೂಡ ಈಗ ಮಾಯವಾಗಿ ಬಿಟ್ಟಿವೆ.ಸಂಜೆ ಎಂಟುವರೆ ಒಂಭತ್ತು ಗಂಟೆಯ ಹೊತ್ತಿಗೆ ದಢಾರನೇ ಮುಚ್ಚಿಕೊಳ್ಳುವ ಬೆಡ್ ರೂಮಿನ ಬಾಗಿಲುಗಳು,ಅಲ್ಲೆಲ್ಲೋ ಮಗ ಮತ್ತು ಸೊಸೆ ಅಥವಾ ಮಗಳು ಮತ್ತೆ ಅಳಿಯ ನಾಳೆ ಅನಾಥಾಶ್ರಮಕ್ಕೆ ಕಳಿಸಿಬಿಡೋಣ ಅಂತ ಪಿಸುಗುಟ್ಟಿಕೊಳ್ಳುವದು ನಮ್ಮ ಕಿವಿಗಳಿಗೆ ಸರಿಯಾಗಿ ಕೇಳಿಸದೆ ಇದ್ದರೂ ಕೂಡ ನಮಗೆ ನಿಧಾನಕ್ಕೆ ಎಲ್ಲವೂ ಅರ್ಥವಾಗುವ ದಿನಗಳಿವು.
ಆದ್ದರಿಂದ ಯಾರ ಹಂಗಿಲ್ಲದೆಯೂ ಬದುಕುವ ದಾರಿಯನ್ನ ಹುಡುಕಿಕೊಳ್ಳಬೇಕಾದ ಅನಿವಾರ್ಯತೆ ಇಂದು ನಮಗೆಲ್ಲರಿಗೂ ಇದೆ.ಆರಂಭದಲ್ಲಿ ಹೊಸದಾಗಿ ಮದುವೆಯಾಗಿ ಬಂದ ಮಡದಿ ವರ್ಷಗಳು ಉರುಳಿದ ಮೇಲೆ ಹೇಗೆ ನಮ್ಮೊಂದಿಗೆ ನಡೆದುಕೊಳ್ಳುವ ರೀತಿಗಳು ಬದಲಾಗುತ್ತವೆಯೋ,ಹಾಗೆ ಒಂದಲ್ಲ ಒಂದು ದಿನ ನಮ್ಮ ಸುತ್ತಲಿನ ಜನ,ನಮ್ಮ ಸುತ್ತಲಿನ ಸಮಾಜ,ನಮ್ಮ ಸುತ್ತಲಿನ ವಾತಾವರಣ ಖಂಡಿತವಾಗಿ ಬದಲಾಗುತ್ತೆ ಅನ್ನೋದು ನಿಮಗೆಲ್ಲ ನೆನಪಿರಲಿ.
ಸಾಧ್ಯವಾದಷ್ಟು ನಿಮ್ಮ ಕೆಲಸಗಳನ್ನ ನೀವೆ ಮಾಡಿಕೊಳ್ಳಿ,ಕುಡಿಯುವ ನೀರಿನ ಬಾಟಲಿ ತುಂಬಿಕೊಳ್ಳುವದನ್ನ ಹಿಡಿದು,ಟೀ,ಕಾಫಿ,ಜೊತೆಗೆ ಒಂದಷ್ಟು ಸಣ್ಣಪುಟ್ಟ ಅಡುಗೆ ಮಾಡಿಕೊಳ್ಳುವದನ್ನ,ನಿಮ್ಮ ಬಟ್ಟೆಗಳನ್ನ ನೀವೇ ವಾಶ್ ಮಾಡಿಕೊಳ್ಳುವದನ್ನ,ಬಿಡುವು ಸಿಕ್ಕಾಗ ತೊಳೆದಿಟ್ಟ ಬಟ್ಟೆಗಳಿಗೆ ಐರನ್ ಮಾಡಿಕೊಳ್ಳುವದನ್ನ,ಬೂಟು ಪಾಲಿಶ್ ನಿಂದ ಹಿಡಿದು ನಿಮ್ಮ ರೂಮಿನ ಕಸ ಗುಡಿಸಿಕೊಳ್ಳುವದನ್ನ ಅಷ್ಟೇ ಯಾಕೇ ಕೊನೆಗೆ ನಿಮಗೆ ನೀವೆ ಸಮಾಧಾನ ಹೇಳಿಕೊಳ್ಳುವದನ್ನ ಸಾಧ್ಯವಾದರೆ ಇಂದಿನಿಂದಲೇ ರೂಢಿಸಿಕೊಂಡು ಬಿಡಿ.
ಇದೆಲ್ಲ ನಮಗೆ ಅಗತ್ಯ ಇಲ್ಲ ಕಣ್ರೀ ನಾನೀಗ ಪರಮಸುಖಿ ಅಂತ ನಿವೇನೋ ಹೇಳಿ ಬಿಡಬಹುದು.ಅದಕ್ಕೆ ತಕ್ಕಂತೆ ಒಂದಷ್ಟು ಅಧಿಕಾರ,ಆಸ್ತಿ,ಮತ್ತು ಅಂತಸ್ತು ಕೂಡ ನಿಮ್ಮದಾಗಿರಬಹುದು.
ನಿಮ್ಮೊಂದಿಗೆ ಅಣ್ಣಾ ಅಂತ ಓಡಾಡೊದಕ್ಕೆ ಒಂದಷ್ಟು ಹುಡುಗರ ಟೀಮು,ಸಾರ್ ಅಂತ ಕೈ ಮುಗಿಯುವ ಜನ,ನೀವು ಹೊರಗೆ ಹೋಗೋದಿಕ್ಕೆ ಅಂತ ರೆಡಿಯಾದಾಗ ಎಲ್ಲವನ್ನೂ ಸಿದ್ಧ ಮಾಡಿಕೊಡುವ ಮತ್ತು ಸಮಯಕ್ಕೆ ಸರಿಯಾಗಿ ಮಾತ್ರೆ ತಗೊಂಡ್ರಾ ಅಂತ ಕೇಳುವ ….ಅಯ್ಯೋ ನಂಗೆ ಹಸಿವು ಅನ್ನುವ ಮೊದಲೇ ಊಟದ ತಟ್ಟೆಯನ್ನ ಡೈನಿಂಗ್ ಟೇಬಲ್ಲಿನ ಮೇಲೆ ಹಚ್ಚಿಡುವ ಮತ್ತು ನಿಮ್ಮನ್ನ ತಮ್ಮ ಜೀವಕ್ಕಿಂತ ಅತಿಯಾಗಿ ಪ್ರೀತಿಸುವ ಮತ್ತೊಂದು ಜೀವ ಕೂಡ ನಿಮ್ಮ ಜೊತೆಗೆ ಇರಬಹುದು ಆದರೆ ನೆನಪಿರಲಿ ಸ್ನೇಹಿತರೆ ಈ ಸಮಯ ಖಂಡಿತ ಕಳೆದುಹೋಗುತ್ತೆ.

ಪತ್ರಕರ್ತ, ಅಥಣಿ
ಮೊ:9482766018