ಕಥೆ – ಸಂತ ಮತ್ತು ಸಾಮ್ರಾಟ :ಮುಕ್ಕಣ್ಣ ಕರಿಗಾರ

ಸಂತ ಮತ್ತು ಸಾಮ್ರಾಟ

ಮುಕ್ಕಣ್ಣ ಕರಿಗಾರ

ಅದೊಂದು ಮಹಾಶಿವಕ್ಷೇತ್ರ. ಲೋಕೇಶ್ವರ,ವಿಶ್ವೇಶ್ವರ ಎನ್ನುವ ನಾಮಗಳಿಂದ ಪೂಜೆಗೊಳ್ಳುತ್ತಿದ್ದ ಶಿವ ಅಲ್ಲಿ.ಶಿವರಾತ್ರಿಯ ದಿನ.ಕ್ಷೇತ್ರದಲ್ಲಿ ವಿಶೇಷ ಪೂಜೆ,ಸೇವೆಗಳು ನಡೆಯುತ್ತಿದ್ದವು.ಅದು ಪ್ರಸಿದ್ಧ ಶಿವಕ್ಷೇತ್ರವಾಗಿದ್ದುದರಿಂದ ಮತ್ತು ಆ ದಿನವು ಶಿವರಾತ್ರಿಯ ವಿಶೇಷ ದಿನವಾಗಿದ್ದುದರಿಂದ ಲೊಕೇಶ್ವರ ಶಿವನ ದರ್ಶನಕ್ಕೆ ದೇಶದ ಉದ್ದಗಲದಿಂದಲೂ ಜನರು ಆಗಮಿಸುತ್ತಿದ್ದರು.

ದೇಶವನ್ನಾಳುತ್ತಿದ್ದ ಸಾಮ್ರಾಟರು ಅಂದು ಆ ದೇವಸ್ಥಾನಕ್ಕೆ ಬಂದು ಶಿವನ ದರ್ಶನ ಪಡೆಯಲಿದ್ದರು.ಪ್ರಭುಗಳ ಆಗಮನಕ್ಕಾಗಿ ದೇವಸ್ಥಾನದ ಅರ್ಚಕವರ್ಗ,ಸಿಬ್ಬಂದಿ ವರ್ಗ ವಿಶೇಷ ಸ್ವಾಗತಕೋರಲು ಕಾಯುತ್ತಿದ್ದರು.ಪ್ರಭುಗಳು ಆಗಮಿಸುತ್ತಾರೆ ಎಂದರೆ ಪ್ರಜೆಗಳು ಕಾಯಲೇಬೇಕಲ್ಲವೆ? ಶಿವನ ದರ್ಶನಕ್ಕಾಗಿ ದೇಶದ ಉದ್ದಗಲದಿಂದ ಬಂದಿದ್ದ ಭಕ್ತರು ಉದ್ದನೆಯ ಸರದಿಯಲ್ಲಿ ಕಾಯುತ್ತಿದ್ದರು.ಸಾಮ್ರಾಟರು ಆಗಮಿಸಿದರು.ದೇವಸ್ಥಾನ ಸಮಿತಿಯಿಂದ ಭವ್ಯವಾಗಿ ಸ್ವಾಗತಿಸಲಾಯಿತು ಸಾಮ್ರಾಟರನ್ನು.ಸಾಮ್ರಾಟರು ಗಾಂಭಿರ್ಯದಿಂದ ನಡೆದು ದೇವಸ್ಥಾನದ ಒಳಹೋದರು.

ಸಾಮ್ರಾಟರಿಂದ ಶಿವಲಿಂಗಕ್ಕೆ ವಿಶೇಷ ಪೂಜೆ ಮಾಡಿಸಲಾಯಿತು.ಅರ್ಚಕರು ಸಾಮ್ರಾಟರಿಗೆ ನೂರುವರ್ಷಗಳ ಆಯುಷ್ಯನ್ನು,ನಿರ್ವಿಘ್ನಕಾರಿಯಾದ ಆಡಳಿತನೀಡುವ ಸಾಮರ್ಥ್ಯವನ್ನು ಮತ್ತು ಸಾಮ್ರಾಟರ ಕುಟುಂಬ,ಬಂಧುವರ್ಗಕ್ಕೆ ಸಮಸ್ತಮಂಗಳಗಳನ್ನು ಆಶೀರ್ವದಿಸಿದರು.ಸಂತೃಪ್ತರಾದ ಸಾಮ್ರಾಟರು ಪುರೋಹಿತರಿಗೆ ಯಥೇಚ್ಛ ಧನಕನಕ ನೀಡಿ ಹೊರಬಂದರು.

ಸಾಮ್ರಾಟರು ದೇವಸ್ಥಾನದಿಂದ ಹೊರಬರುತ್ತಿದ್ದಂತೆಯೇ ಒಬ್ಬ ಅಪೂರ್ವ ತೇಜಸ್ಸಿನ ಸಂತರನ್ನು ಕಂಡರು.ದೇವಸ್ಥಾನದ ಹೊರಭಾಗದಲ್ಲಿ ಸಾವಿರಾರು ಜನ ಭಕ್ತರು ಸಂತರನ್ನು ಹಾಡಿ ಹೊಗಳುತ್ತಿದ್ದರು,ಬಾಗಿ ನಮಿಸುತ್ತಿದ್ದರು.ಸಾಮ್ರಾಟರು ತಮ್ಮ ಆಪ್ತಸಿಬ್ಬಂದಿಯವರನ್ನು ಕೇಳಿದರು’ ಯಾರು ಅವರು?’. ಪ್ರಭುಗಳ ಆಪ್ತರಿಗೆ,ಅಂಗರಕ್ಷಕರಿಗೆ,ಕಾವಲು ಸಿಬ್ಬಂದಿಯವರಿಗೆ ತಿಳಿಯದೆ ಇರುವ ಸಂಗತಿ ಯಾವುದು ? ಪ್ರಭುಗಳ ಆಪ್ತಸಿಬ್ಬಂದಿಯವರಿಗೆ ಅವರ ವೈಯಕ್ತಿಕ ಜೀವನ,ಕುಟುಂಬದ ಸಮಸ್ಯೆಗಳ ಬಗ್ಗೆ ಮಾಹಿತಿ ಇರದೆ ಇದ್ದರೂ ಪ್ರಭುಗಳ ಸುತ್ತಮುತ್ತ ನಡೆಯುವುದನ್ನೆಲ್ಲ ಸೂಕ್ಷ್ಮವಾಗಿ ಗ್ರಹಿಸಿ,ಪ್ರಭುಗಳಿಗೆ ವರ್ತಮಾನ ಮುಟ್ಟಿಸುವುದರಲ್ಲಿ ನಿಷ್ಣಾತರು .

‘ ಪ್ರಭು,ಅವರು ಸಂತ ನಿಶೂನ್ಯಾನಂದರು’ ಒಬ್ಬ ಆಪ್ತ ಅಧಿಕಾರಿ ಮೆಲ್ಲನೆ ಉಸುರಿದ.
‘ ನಿಶೂನ್ಯಾನಂದರು ದೇಶದ ಬಹುದೊಡ್ಡ ಸಂತರು,ಲೋಕಪ್ರಸಿದ್ಧರು’ ಮತ್ತೊಬ್ಬ ಅಧಿಕಾರಿಯಲ್ಲಿ ಪ್ರಭುಗಳ ಕಿವಿಯಲ್ಲಿ ಉಸುರಿದ.
ನಿಶೂನ್ಯಾನಂದರು! ಸಂತ ನಿಶೂನ್ಯಾನಂದರು!
ಹೆಸರು ಕೇಳಿದ ಕೂಡಲೆ ಸಾಮ್ರಾಟರಿಗೆ ಮಹದಾನಂದವಾಯಿತು.ಸಂತ ನಿಶೂನ್ಯಾನಂದರ ಹೆಸರು ದೇಶದಾದ್ಯಂತ ಮನೆಮಾತಾಗಿತ್ತು; ಅರಸರ ಕಿವಿಗೂ ಬಿದ್ದಿತ್ತು.ಅರಮನೆ,ಅಂತಃಪುರಗಳಲ್ಲಿಯೂ ನಿಶೂನ್ಯಾನಂದರ ಬಗ್ಗೆ ಗೌರವಾದರಗಳ ಭಾವನೆ ಇತ್ತು.ಆದರೆ ಸಾಮ್ರಾಟರಾಗಲಿ,ಅರಮನೆಯ ಮಂತ್ರಿ ಮಹೋದಯರುಗಳಾಗಲಿ ಅಥವಾ ಅಂತಃಪುರದ ರಾಣಿಯರಾಗಲಿ ಸಂತ ನಿಶೂನ್ಯಾನಂದರನ್ನು ಕಂಡಿರಲಿಲ್ಲ.ಸಂತ ನಿಶೂನ್ಯಾನಂದರು ಜನಸಾಮಾನ್ಯರೊಂದಿಗೆ ಬೆರೆಯುತ್ತ,ಅವರ ಕಷ್ಟಸುಖಗಳನ್ನು ಪರಿಹರಿಸುತ್ತ ಜನರ ನಡುವೆಯೇ ಬದುಕುತ್ತಿದ್ದ ಅಪರೂಪದ ಸಂತರಾಗಿದ್ದರು.ಪ್ರಭುಗಳು,ಮಂತ್ರಿಗಳು,ಪುರೋಹಿತರು,ಶ್ರೀಮಂತರುಗಳಂತಹ ಪ್ರತಿಷ್ಠಿತರನ್ನು ಅವರು ಭೇಟಿ ಮಾಡುತ್ತಿರಲಿಲ್ಲ,ಗಣ್ಯರು,ಅತಿಗಣ್ಯರ ಭೇಟಿಗೆ ಅವಕಾಶವನ್ನೂ ನೀಡುತ್ತಿರಲಿಲ್ಲ.ಯಾವುದೋ ಧಾರ್ಮಿಕ ಉತ್ಸವ ಇಲ್ಲವೆ ಯಾವುದೋ ವಿಶೇಷ ಸಂದರ್ಭಗಳಲ್ಲಿ ಮಾತ್ರ ಪ್ರತಿಷ್ಠಿತರು ಸಂತ ನಿಶೂನ್ಯಾನಂದರನ್ನು ದೂರದಿಂದಲೆ ಕಂಡು ಪುನೀತರಾಗಬೇಕಿತ್ತು.

ಸಾಮ್ರಾಟರು ಅವಸರವಸರವಾಗಿ ನಡೆದು ಬಂದು ಸಂತ ನಿಶೂನ್ಯಾನಂದರಿಗೆ ಬಾಗಿ,ನಮಿಸಿದರು.’ ಶಿವ ಒಳ್ಳೆಯನ್ನು ಮಾಡಲಿ ಪ್ರಭುಗಳೆ’ ಎಂದು ಆಶೀರ್ವದಿಸಿದರು ಪ್ರಭುಗಳು.
‘ ನನ್ನಿಂದ ತಮ್ಮ ಶಿವ ದರ್ಶನಕ್ಕೆ ತೊಂದರೆ ಆಯಿತೆ ಸಂತರೆ? ಒಂದುವೇಳೆ ತಮ್ಮ ದರ್ಶನಕ್ಕೆ ನನ್ನಿಂದ ಅಡ್ಡಿಯಾದರೆ ದಯವಿಟ್ಟು ಕ್ಷಮಿಸಬೇಕು.ತಾವು ಬರುವುದು ನನಗೆ ತಿಳಿದಿರಲಿಲ್ಲ.ತಿಳಿದಿದ್ದರೆ ತಾವು ಲೋಕೇಶ್ವರ ಶಿವನ ದರ್ಶನ ಪಡೆದ ಬಳಿಕವೇ ನಾನು ದರ್ಶನ ಪಡೆಯುತ್ತಿದೆ’ ಭಯ,ಆತಂಕ ತುಂಬಿದ ಧ್ವನಿಯಲ್ಲಿ ನಿವೇದಿಸಿಕೊಂಡರು ಸಾಮ್ರಾಟರು.

‘ ಇಲ್ಲ ಪ್ರಭುಗಳೆ,ತಾವು ದೇಶವನ್ನಾಳುವ ಪ್ರಭುಗಳು.ತಮಗೆ ಅಗ್ರಮನ್ನಣೆ ಸಲ್ಲಬೇಕು.ಅದರಿಂದ ನನಗೇನೂ ಬೇಸರವಿಲ್ಲ.ತಾವು ಲೋಕೇಶ್ವರನ ಸನ್ನಿಧಿಯಲ್ಲಿ ಇದ್ದುದಾಗಿ ತಿಳಿಯಿತು.ಹಾಗೆಯೇ ನಿಂತೆ ಇಲ್ಲಿ ನೆಮ್ಮದಿಯಿಂದ’ ಪ್ರಸನ್ನಚಿತ್ತರಾಗಿಯೇ ಉತ್ತರಿಸಿದರು ನಿಶೂನ್ಯಾನಂದರು.

ಸಾಮ್ರಾಟರ ಮನಸ್ಸಿಗೆ ಒಂದು ವಿಚಾರ ಹೊಳೆಯಿತು. ಹೇಗೋ ಸಂತರು ಅನಿರೀಕ್ಷಿತವಾಗಿ ಸಿಕ್ಕಿದ್ದಾರೆ.ಅರಮನೆಗೆ ಕರೆದುಕೊಂಡು ಹೋಗಿ,ಸತ್ಕರಿಸಬಹುದಲ್ಲ.ಅದರಿಂದ ನನ್ನ ಕೀರ್ತಿ ಮತ್ತಷ್ಟು ಹೆಚ್ಚುತ್ತದೆ.ಸಂತರೆದುರು ತಮ್ಮ ಮನದ ಬಯಕೆಯನ್ನು ಅರುಹಿದರು ಸಾಮ್ರಾಟರು
‘ ತಾವು ನಾಡಿನ ಪುಣ್ಯವು ಪುರುಷಾಕಾರ ತಳೆದ ಅಪರೂಪದ ಸಂತರು,ದೇಶ- ಲೋಕಗಳ ಕಲ್ಯಾಣಕ್ಕಾಗಿ ದುಡಿಯುತ್ತಿರುವವರು.ನಮ್ಮದು ಕೂಡ ಜನಹಿತದ ದುಡಿಮೆಯೆ,ಜನರ ಒಳಿತಿಗಾಗಿ ಆಡಳಿತ ನಡೆಸುತ್ತಿದ್ದೇವೆ.ತಾವು ನಮ್ಮ ಅರಮನೆಗೆ ಬಂದು ನಮ್ಮ ಆತಿಥ್ಯಸ್ವೀಕರಿಸಬೇಕು,ನಾವು ಕೊಡುವ ಕಾಣಿಕೆ,ಉಡುಗೊರೆಗಳನ್ನು ಸ್ವೀಕರಿಸಬೇಕು’
ಸಾಮ್ರಾಟರ ಮಾತುಗಳನ್ನು ಕೇಳಿ ಜೋರಾಗಿ ನಕ್ಕರು ನಿಶೂನ್ಯಾನಂದರು.
ಸಾಮ್ರಾಟರ ಮುಖ ಕಳಾಹೀನವಾಯಿತು.ದೇವಸ್ಥಾನದ ಅರ್ಚಕರು,ಆಡಳಿತ ಮಂಡಳಿಯವರು ಪೇಚಾಡತೊಡಗಿದರು.

” ಪ್ರಭುಗಳೆ,ತಮ್ಮ ಆಹ್ವಾನಕ್ಕೆ ಕೃತಜ್ಞತೆಗಳು.ಆದರೆ ತಾವು ನನಗೇನು ಕೊಡಬಲ್ಲಿರಿ? ತಾವೇ ದೊಡ್ಡ ಭಿಕ್ಷುಕರು! ಒಬ್ಬ ಭಿಕ್ಷುಕನಿಂದ ಮತ್ತೊಬ್ಬ ಭಿಕ್ಷುಕ ಏನನ್ನು ಪಡೆಯಬಲ್ಲ?’ ಧೀರ,ಗಂಭೀರವಾಗಿ ನುಡಿದರು ಸಂತರು.

ಸಿಡಿಲಿನಬ್ಬರಕ್ಕೆ ತತ್ತರಿಸಿದವರಂತೆ ನಿಶ್ಯಬ್ದರಾದರು ಅಲ್ಲಿದ್ದವರೆಲ್ಲ.ಎಲ್ಲರಲ್ಲೂ ಭಯ,ಆತಂಕ ಕಾಡತೊಡಗಿತು.ಸಂತರು ಸಾಮ್ರಾಟರನ್ನು ‘ ಭಿಕ್ಷುಕ’ ಎಂದು ಜರಿಯುತ್ತಿದ್ದಾರೆ.ಸಾಮ್ರಾಟರೋ ಮಹಾಮುಂಗೋಪಿಗಳು,ಯಾವುದಕ್ಕೂ ಹೇಸದ ಕಠಿಣ ಮನಸ್ಕರು.ತಮ್ಮ ಏಳಿಗೆಗೆ ಅಡ್ಡಿಬಂದ ಬಂಧು ಬಾಂಧವರನ್ನೆ ನಿರ್ದಾಕ್ಷಿಣ್ಯವಾಗಿ ಕೊಚ್ಚಿ ಕೊಂದವರು.ತಮ್ಮ ವಿರೋಧಿಗಳು,ಎದುರಾಳಿಗಳನ್ನು ಹಿಂಸಿಸುವುದರಲ್ಲಿ ನಿಷ್ಣಾತರು.ವಿರೋಧಿಗಳೇ ಇಲ್ಲದಂತೆ ಮಾಡಿದ ಅತ್ಯಪರೂಪದ ಯಶಸ್ಸಿನ ಸಾಮ್ರಾಟರವರು.ಸಂತ ನಿಶೂನ್ಯಾನಂದರೂ ಸಾಮಾನ್ಯರಲ್ಲ,ಅಪ್ರತಿಮ ಯೋಗಿಗಳು,ಪ್ರಕೃತಿಯ ಮೇಲೆ ಪೂರ್ಣಪ್ರಭುತ್ವ ಸಾಧಿಸಿದ ಸಂತರು.ಅಸಾಧ್ಯವನ್ನು ಸಾಧಿಸಬಲ್ಲ ಧೀಮಂತ ಯೋಗಿಗಳು.ನಿಗ್ರಹಾನುಗ್ರಹ ಸಮರ್ಥರಾದ ಅವರಿಗೆ ದೇಶವೇ ಬಾಗಿ,ಗೌರವಿಸುತ್ತಿದೆ.ವಿಚಿತ್ರ ಸಂದರ್ಭ! ವಿಶೇಷ ಸನ್ನಿವೇಶ ಎದುರಾಗಿತ್ತು ಅಲ್ಲಿ.ಮುಂದೇನಾಗುವದೋ ಎಂದು ಯಾರೂ ಊಹಿಸದಂತಹ ಸನ್ನಿವೇಶ,ಸಂದರ್ಭ ಅದು.

‘ ಪ್ರಭುಗಳೆ,ಈಗ್ಗೆ ಸ್ವಲ್ಪ ಹೊತ್ತಿನ ಮುಂಚೆ ತಾವು ಲೋಕೇಶ್ವರ ಶಿವನ ಸನ್ನಿಧಿಯಲ್ಲಿ ಬೇಡಿದಿರಲ್ಲ,ಕೇಳಿಸಿಕೊಂಡೆ ನಾನದನ್ನು.ನನ್ನ ಸಾಮ್ರಾಜ್ಯ ಮತ್ತಷ್ಟು ವಿಸ್ತಾರವಾಗಲಿ,ನನ್ನ ಐಶ್ವರ್ಯ ನೂರ್ಮಡಿಸಲಿ,ನನಗೆ ಶತ್ರುಗಳೇ ಇಲ್ಲದಾಗಲಿ,ನನ್ನ ಕೀರ್ತಿ ಲೋಕ ಪ್ರಸಿದ್ಧವಾಗಲಿ.ನಾನು ಹೆಂಡತಿ ಮಕ್ಕಳು ಸುಖವಾಗಿರಲು ಆಶೀರ್ವದಿಸು ಪ್ರಭು ಎಂದು ತಾವು ಶಿವನನ್ನು ಪ್ರಾರ್ಥಿಸಿದಿರಲ್ಲವೆ ? ಸಾಮ್ರಾಟರನ್ನು ಪ್ರಶ್ನಿಸಿದರು ಸಂತರು‌.
‘ ಹೌದು ಹೌದು ಸಂತರೆ,ತಾವು ಹೇಳಿದ್ದೆಲ್ಲವೂ ಸತ್ಯ.ನಾನು ಲೋಕೇಶ್ವರ ಶಿವನಲ್ಲಿ ಅದನ್ನೇ ಬೇಡಿದೆ’

ಅರಸನ ಆಪ್ತಸಿಬ್ಬಂದಿ,ಅಂಗರಕ್ಷಕರು,ಕಾವಲಿನವರು,ದೇವಸ್ಥಾನದ ಅರ್ಚಕರು,ಆಡಳಿತ ಮಂಡಳಿಯವರು,ನೆರೆದಿದ್ದ ಜನರು ಮೂಕವಿಸ್ಮಿತರಾದರು ಸಂತರು ಮತ್ತು ಸಾಮ್ರಾಟರ ಸಂಭಾಷಣೆ ಕೇಳಿ.
‘ ಈಗ ಹೇಳಿ ಪ್ರಭುಗಳೆ,ನಿಮ್ಮ ಆಸ್ತಿವರ್ಧಿಸಲು,ಸಾಮ್ರಾಜ್ಯ ವಿಸ್ತರಿಸಲು,ಕೀರ್ತಿ ನೂರ್ಮಡಿಸಲು ಶಿವನನ್ನು ಬೇಡಿದ ನೀವೂ ಭಿಕ್ಷುಕರೇ ಅಲ್ಲವೆ ? ನಿಮ್ಮಂತಹ ಭಿಕ್ಷುಕನಿಂದ ನಾನು ಏನನ್ನು ಬೇಡಲಿ? ನೀವು ದೊಡ್ಡ ಭಿಕ್ಷುಕರು,ನಾನು ಸಣ್ಣ ಭಿಕ್ಷುಕ!’

ಗಾಳಿಯ ಸದ್ದನ್ನು ಆಲಿಸಬಹುದಾದ ನಿಶಬ್ದ ಆವರಿಸಿತು ಅಲ್ಲಿ.ಯಾರೂ ಮಾತನಾಡಲಿಲ್ಲ.

ಸಾಮ್ರಾಟರು ‘ ತಾವು ದೊಡ್ಡವರು,ನನ್ನ ಅಪಚಾರ ಮನ್ನಿಸಬೇಕು’ ಎಂದು ಸಂತರ ಪಾದಗಳಿಗೆರಗಿ ಪ್ರಾರ್ಥಿಸಿದರು.ಸಂತರು ಪ್ರೀತಿಪೂರ್ವಕವಾಗಿ ಸಾಮ್ರಾಟರನ್ನು ಹಿಡಿದೆತ್ತಿ ‘ ಇರಲಿ ಏಳಿ ಪ್ರಭುಗಳೆ.ಜಗತ್ತಿನಲ್ಲಿ ಆಳು – ಅರಸ,ಸಾಧು- ಸಂತ,ಸಂನ್ಯಾಸಿ- ಸಂಸಾರಿ ಎಲ್ಲರೂ ಭಿಕ್ಷುಕರೆ! ಕೆಲವರ ಭಿಕ್ಷಾ ಪಾತ್ರೆ ಸಣ್ಣದಿರುತ್ತದೆ ಬೇಗ ತುಂಬುತ್ತದೆ,ಮತ್ತೆ ಕೆಲವರ ಭಿಕ್ಷಾಪಾತ್ರೆ ದೊಡ್ಡದು ಇರುತ್ತದೆ,ಮತ್ತಷ್ಟು ,ಮತ್ತಷ್ಟು ಬೇಕು ಎನ್ನಿಸುತ್ತದೆ.ಇನ್ನೂ ಕೆಲವರ ಭಿಕ್ಷಾಪಾತ್ರೆ ಎಂದೂ ತುಂಬದ ಅಕ್ಷಯಭಿಕ್ಷಾಪಾತ್ರೆ! ಶಿವನು ಎಷ್ಟು ಇತ್ತರೂ ತುಂಬದು ಅವರ ಭಿಕ್ಷಾಪಾತ್ರೆ! ಶಿವನು ಏನು ಕೊಟ್ಟರೂ ತಣಿಯದು ಅವರ ಆಸೆ.ತಾವು ಒಳಗೆ ಲೋಕೇಶ್ವರನ ಸನ್ನಿಧಿಯಲ್ಲಿ ತಮಗಾಗಿ,ತಮ್ಮ ಕುಟುಂಬವರ್ಗದ ಶ್ರೇಯಸ್ಸಿಗಾಗಿ ಬೇಡುತ್ತಿರುವಾಗ ನಾನು ಇಲ್ಲಿ ಉದ್ದನೆಯ ಸರತಿಯಲ್ಲಿ ನಿಂತಿರುವ ಈ ಜನರಿಗಾಗಿ,ದೇಶದ ಸಮಸ್ತ ಪ್ರಜಾವರ್ಗದ ಒಳಿತಿಗಾಗಿ ಶಿವನನ್ನು ಪ್ರಾರ್ಥಿಸುತ್ತಿದ್ದೆ.ಕಾಲಕಾಲಕ್ಕೆ ಚೆನ್ನಾಗಿ ಮಳೆಯಾಗಿ,ಉತ್ತಮ ಬೆಳೆಬಂದು ರೈತರು ಸುಖಿಸಲಿ,ದನಕರುಗಳಾದಿ ಪಶುಸಂಪತ್ತು ಸೌಖ್ಯವಾಗಿರಲಿ,ನಾಡು ಸುಭಿಕ್ಷವಾಗಿರಲಿ,ಪ್ರಜೆಗಳೆಲ್ಲರೂ ಸುಖ,ಶಾಂತಿ,ನೆಮ್ಮದಿಯಿಂದ ಬಾಳುವಂತೆ ಹರಸು ವಿಶ್ವೇಶ್ವರ ಪ್ರಭುವೆ’ ಎಂದು ಶಿವನನ್ನು ಬೇಡುತ್ತಿದ್ದೆ.

ಸಾಮ್ರಾಟರು ಮತ್ತವರ ಅಧಿಕಾರಿ ವರ್ಗ ತಲೆತಗ್ಗಿಸಿ ನಿಂತರು.ಸಂತರು ಮುಂದುವರೆಸಿದರು
‘ ಪ್ರಭುಗಳೆ, ನಾನು ಒಬ್ಬ ಸಂತ,ನನ್ನವರು ಎನ್ನುವವರು ಯಾರೂ ಇಲ್ಲದ ಸಂನ್ಯಾಸಿ.ಆದರೆ ಇಲ್ಲಿ ಸರತಿಯಲ್ಲಿ ನಿಂತಿರುವವರೂ ಸೇರಿದಂತೆ ಎಲ್ಲರನ್ನೂ ನನ್ನ ಸಹೋದರರು,ಬಂಧು ಬಾಂಧವರು ಎಂದು ತಿಳಿದಿದ್ದೇನೆ.ನಾವೆಲ್ಲರೂ ವಿಶ್ವೇಶ್ವರ ಶಿವನ ಮಕ್ಕಳು.ಶಿವ ವಿಶ್ವೇಶ್ವರನೇ ಲೋಕಸಮಸ್ತರ ತಂದೆ ಎಂಬುದು ನನ್ನ ಭಾವನೆ.ಅಲ್ಲದೆ ಪ್ರಭುಗಳೆ ,ನನ್ನಂತಹ ಸಂನ್ಯಾಸಿಗೆ ಅರಸರಾದ ತಮ್ಮಿಂದ ಬೇಡುವಂತಹದ್ದಾದರೂ ಏನಿರುತ್ತದೆ ನಾವು ಬೇಡಿದ ಎಲ್ಲವನ್ನೂ ವಿಶ್ವೇಶ್ವರ ಶಿವನು ಕರುಣಿಸುತ್ತಿರಬೇಕಾದರೆ? ಸಂತರು,ಸಂನ್ಯಾಸಿಗಳು,ಜ್ಞಾನಿಗಳು ವಿಶ್ವನಿಯಾಮಕ ಹರನನ್ನು ಬೇಡಬೇಕಲ್ಲದೆ ಧರೆಯನಾಳ್ವವರು ಹಿರಿಯರು ಎಂದು ನರರನ್ನು ಬೇಡಬಾರದು’.

‘ ಮನ್ನಿಸಬೇಕು ಎನ್ನ ಅಪರಾಧ’ ಎಂದು ಮತ್ತೆ ಸಂತರ ಪಾದಗಳಿಗೆರಗಿ ಅವರ ಆಶೀರ್ವಾದ ಪಡೆದು ಹೊರಟರು ಸಾಮ್ರಾಟರು.ಹೊರಗಿನಿಂದಲೇ ಶಿವ ವಿಶ್ವೇಶ್ವರನಿಗೆ ನಮಿಸಿ,ಜನರತ್ತ ವಾತ್ಸಲ್ಯಪೂರಿತ ನೋಟಬೀರಿ ಹೊರಟರು ಸಂತರು.

ಮುಕ್ಕಣ್ಣ ಕರಿಗಾರ

18.07.2022