ಸಾಧನೆಗೆ ಸಂಕಲ್ಪ, ಪರಿಶ್ರಮ ಅಗತ್ಯ-ಪರಶುರಾಮ ಮಲ್ಲಾಪುರ

ಮಾನ್ವಿ: ಪ್ರಗತಿ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ, ಪ್ರತಿಭಾ ಪುರಸ್ಕಾರ
ಸಾಧನೆಗೆ ಸಂಕಲ್ಪ, ಪರಿಶ್ರಮ ಅಗತ್ಯ-ಪರಶುರಾಮ ಮಲ್ಲಾಪುರ
ಮಾನ್ವಿ ಜು.16: ‘ವಿದ್ಯಾರ್ಥಿಗಳಿಗೆ ಉನ್ನತ ಸಾಧನೆಯ ಸಂಕಲ್ಪ ಹಾಗೂ ಅಧ್ಯಯನದಲ್ಲಿ ಪರಿಶ್ರಮ ಇದ್ದರೆ ಖಂಡಿತ ಯಶಸ್ಸು ಸಾಧ್ಯ’ ಎಂದು ಸಿಂಧನೂರಿನ ಎಲ್‌ಬಿಕೆ ಪಿಯು ಕಾಲೇಜಿನ ಪ್ರಾಂಶುಪಾಲ ಪರಶುರಾಮ ಮಲ್ಲಾಪುರ ಹೇಳಿದರು. ಶನಿವಾರ ಪಟ್ಟಣದ ಪ್ರಗತಿ ಪಿಯು ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು. ‘ ವಿದ್ಯಾರ್ಥಿಗಳು ಸಕಾರಾತ್ಮಕ ಚಿಂತನೆಗಳನ್ನು ರೂಢಿಸಿಕೊಳ್ಳಬೇಕು. ಬದುಕಿನ ಸಂಕಷ್ಟಗಳು ಹಾಗೂ ಅಪಮಾನಗಳನ್ನು ದಿಟ್ಟತನದಿಂದ ಎದುರಿಸಬೇಕು. ಶೈಕ್ಷಣಿಕವಾಗಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಉನ್ನತ ಸ್ಥಾನ, ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು’ ಎಂದು ಅವರು ಸಲಹೆ ನೀಡಿದರು. ಪೋತ್ನಾಳದ ಜ್ಞಾನಭಾರತಿ ವಿದ್ಯಾಮಂದಿರ ಸಂಸ್ಥೆಯ ಅಧ್ಯಕ್ಷ ಎಚ್.ಶರ್ಪುದ್ದೀನ್ ಪೋತ್ನಾಳ ಅವರು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅಗ್ರಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಾದ ದುರುಗಮ್ಮ, ಅಬ್ದುಲ್ ಕಲಾಂ ಹಾಗೂ ಲೀಲಾವಸಂತ ಅವರಿಗೆ ಬೆಳ್ಳಿ ಪದಕ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ವಿದ್ಯಾರ್ಥಿಗಳಾದ ಸೋಮಯ್ಯ ಹಾಗೂ ನಂದಿನಿ ಅನಿಸಿಕೆ ವ್ಯಕ್ತಪಡಿಸಿದರು. ಶಿಕ್ಷಕ ಮೋಹನಕುಮಾರ, ಉಪನ್ಯಾಸಕಿ ಚೆನ್ನಬಸಮ್ಮ ಹಾಗೂ ಕಾಲೇಜಿನ ಉಪ ಪ್ರಾಂಶುಪಾಲೆ ಸುಮಾ ಟಿ.ಹೊಸಮನಿ ಮಾತನಾಡಿದರು. ಬಸವರಡ್ಡಿ ಶಿಕ್ಷಣ ಸಂಸ್ಥೆಯ ಜಂಟಿ ಕಾರ್ಯದರ್ಶಿ ತಿಪ್ಪಣ್ಣ ಎಂ.ಹೊಸಮನಿ ಬಲ್ಲಟಗಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಪ್ರಾಂಶುಪಾಲ ಬಸವರಾಜ ಭೋಗಾವತಿ, ಉಪನ್ಯಾಸಕರಾದ ಜಯಲಕ್ಷ್ಮೀ ಚೀಕಲಪರ್ವಿ, ನಾಗರಾಜ ಚಿಮ್ಲಾಪುರ, ಮಲ್ಲಮ್ಮ ಪೋತ್ನಾಳ, ಸರೋಜ, ಫಿರೋಜ್ ರಾಜ್, ಪ್ರಸಾದ ಕುಮಾರ, ಶಿವಪುತ್ರ ಇದ್ದರು. ಉಪನ್ಯಾಸಕಿ ಜಯಲಕ್ಷ್ಮಿ ಚೀಕಲಪರ್ವಿ ಕಾರ್ಯಕ್ರಮ ನಿರೂಪಣೆ ಮಾಡಿದರು.