ಕಾವ್ಯಲೋಕ: ಲಕ್ಷ್ಮೀ ಮಾನಸ ಅವರ ಕವನ ‘ಭ್ರಾಂತಿ’

*ಭ್ರಾಂತಿ*

  -ಲಕ್ಷ್ಮೀ ಮಾನಸ

ಭಾವನೆ ಹತ್ತಿಕ್ಕಿ ಬೆಂದ
ಎದೆಯಿಂದ
ಬರೆದ ಸಾಲುಗಳಲ್ಲಿ
ಭಾರವಾಗುತಿಹ ಕಾಗದವ
ಸುಟ್ಟು ಹಾಕುವ ಹುಚ್ಚು,
ಬೆಂಕಿ ಉಗುಳುವ ಕಣ್ಣೀರಿಗೆ…,

ಹೃದಯ ಕೊಲ್ಲುವವರ
ಲೆಕ್ಕಿಸದೇ…,
ದೇಹ ಕೊಲ್ಲುವವರ
ಶಿಕ್ಷಿಸುವ ಹುಚ್ಚು
ತೂಕವಿಲ್ಲದ
ತಕ್ಕಡಿಗಳಿಗೆ….,

ಕಾಂಚಾಣಕ್ಕೆ ಅಂಟಿದ
ಮೈಲಿಗೆ ತೊಳೆದು,
ಸೂರ್ಯನ ಶಾಖದಲ್ಲಿ
ಒಣಗಿಸಿ,
ಮತ್ತೇ ಬಳಸುವ
ಹುಚ್ಚು
ನಿಶೆಯೇರಿದವರಿಗೆ…,

 

ಜಗವು ನಿರ್ಮಿಸಿದ ನೀರಿನ
ತೊಟ್ಟಿಯಲ್ಲಿ ,
ತನ್ನ ಮಿಥ್ಯ ಪ್ರತಿಬಿಂಬ ಕಂಡು,
ಧೃತಿಗೆಟ್ಟು,
ತಾನರಿತ ತನ್ನನ್ನು
ಚಿತ್ರಿಸುವ ಹುಚ್ಚು
ಈ ಕಾವ್ಯ ಕನ್ನಡಿಗೆ…

ಲಕ್ಷ್ಮೀ ಮಾನಸ