ಯುವಕರ ಸೇವಾ ಮನೋಭಾವ ಶ್ಲಾಘನೀಯ-ಆರ್.ಬೋನವೆಂಚರ್
ಮಾನ್ವಿ ಜೂ.26: ‘ಜನಪರ ಚಿಂತನೆಯುಳ್ಳ ಗ್ರಾಮೀಣ ಭಾಗದ ಯುವಕರು ಸಂಘಟಿತರಾಗಿ ಸಾಮಾಜಿಕ ಸೇವೆಗೆ ಮುಂದಾಗಿರುವುದು ಶ್ಲಾಘನೀಯ’ ಎಂದು ಜಿಲ್ಲೆಯ ಹಿರಿಯ ಹೋರಾಟಗಾರ ಆರ್.ಬೋನವೆಂಚರ್ ಹೇಳಿದರು.
ಭಾನುವಾರ ತಾಲ್ಲೂಕಿನ ಪೋತ್ನಾಳ ಗ್ರಾಮದ ವಿಮುಕ್ತಿ ಸಂಸ್ಥೆಯ ಸಭಾಂಗಣದಲ್ಲಿ ಬೆಳಗು ಸಾಮಾಜಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಟ್ರಸ್ಟ್ ಉದ್ಘಾಟಿಸಿ ಅವರು ಮಾತನಾಡಿದರು. ‘ ಪ್ರಸ್ತುತ ದಿನಗಳಲ್ಲಿ ಸಮಾಜ ಸೇವೆ ಹೆಸರಿನಲ್ಲಿ ಹಲವು ಸಂಘ ಸಂಸ್ಥೆಗಳು, ಟ್ರಸ್ಟ್ ಗಳು ಸ್ಥಾಪನೆಯಾಗುತ್ತಿವೆ. ಆದರೆ ಈ ಸಂಸ್ಥೆಗಳಿಗೆ ಜನಪರ ಕಾಳಜಿ, ನಿಸ್ವಾರ್ಥ ಮನೋಭಾವ ಹಾಗೂ ಸಾಮಾಜಿಕ ಬದ್ಧತೆ ಇದ್ದರೆ ಮಾತ್ರ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ’ ಎಂದು ಅವರು ಅಭಿಪ್ರಾಯಪಟ್ಟರು.
ಬೆಳಗು ಟ್ರಸ್ಟ್ ಅಧ್ಯಕ್ಷ ಶರಣುಕುಮಾರ ಮುದ್ದಂಗುಡ್ಡಿ ಮಾತನಾಡಿ, ಸಂಸ್ಥೆಯ ಧ್ಯೇಯೋದ್ದೇಶಗಳ ಕುರಿತು ವಿವರಿಸಿದರು. ಪರಿಸರ ಸಂರಕ್ಷಣೆ ಹಾಗೂ ಜನಜಾಗೃತಿ ಸೇವೆಗಾಗಿ ಬಹುಜನ ಸಂಘರ್ಷ ಸಮಿತಿಯ ಅಧ್ಯಕ್ಷ ಜೆ.ಶರಣಪ್ಪ ಬಲ್ಲಟಗಿ, ವನಸಿರಿ ಫೌಂಡೇಶನ್ ಅಧ್ಯಕ್ಷ ಶರಣಬಸವ ಭೋವಿ ಹಿರೇಕೊಟ್ನೇಕಲ್ ಹಾಗೂ ಪರಿಸರ ಪ್ರೇಮಿ ರವಿಗೌಡ ಖರಾಬದಿನ್ನಿ ಅವರನ್ನು ಸನ್ಮಾನಿಸಲಾಯಿತು. ವಿಮುಕ್ತಿ ಸಂಸ್ಥೆಯ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು. ವನಸಿರಿ ಫೌಂಡೇಶನ್ ವತಿಯಿಂದ ಸಾರ್ವಜನಿಕರಿಗೆ ಉಚಿತವಾಗಿ ಸಸಿಗಳನ್ನು ವಿತರಿಸಲಾಯಿತು. ಮುದ್ದಂಗುಡ್ಡಿ ಶ್ರೀಮಠದ ಪರಿರಾಜಕ ಆಚಾರ್ಯ ನಾಗಲಿಂಗಯ್ಯ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯವಹಿಸಿದ್ದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಂಗಮ್ಮ ಬಸಣ್ಣ ಗುಜ್ಜಲ್, ಬೆಳಗು ಟ್ರಸ್ಟ್ ನ ಗೌರವಾಧ್ಯಕ್ಷ ಬಸವರಾಜ ಭೋಗಾವತಿ, ಎಸ್‌ಆರ್‌ಎಸ್‌ವಿ ಕಾಲೇಜು ಪ್ರಾಂಶುಪಾಲ ಈರಣ್ಣ ಮರ್ಲಟ್ಟಿ, ಜ್ಞಾನಭಾರತಿ ವಿದ್ಯಾಮಂದಿರದ ಅಧ್ಯಕ್ಷ ಎಚ್.ಶರ್ಪುದ್ದೀನ್ ಪೋತ್ನಾಳ, ಎಂ.ಮಲ್ಲಿಕಾರ್ಜುನಗೌಡ, ಜೆಡಿಎಸ್ ತಾಲ್ಲೂಕು ಯುವ ಅಧ್ಯಕ್ಷ ಪಿ.ರವಿಕುಮಾರ ವಕೀಲ, ಬಿಜೆಪಿ ಮಂಡಲ ಯುವ ಮೋರ್ಚಾ ಅಧ್ಯಕ್ಷ ನವೀನ್ ನಾಡಗೌಡ, ರಾಜು ಮಂಜುನಾಥ ನಾಯಕ, ಮೈಕಲ್ ಪೋತ್ನಾಳ, ಜಾಗೃತ ಮಹಿಳಾ ಸಂಘಟನೆಯ ಸಂಚಾಲಕ ದೇವಪುತ್ರಪ್ಪ, ಈರಣ್ಣ ಪೋತ್ನಾಳ, ಹನುಮಂತ ಖರಾಬದಿನ್ನಿ, ಶಾಂತಕುಮಾರ ಮುದ್ದಂಗುಡ್ಡಿ ಇದ್ದರು. ಸಾಮಾಜಿಕ ಕಾರ್ಯಕರ್ತ ಬಸವರಾಜ ಹರವಿ ಸ್ವಾಗತಿಸಿದರು. ಉಪನ್ಯಾಸಕ ಬಸವರಾಜ ದೇವಿಪುರ ನಿರೂಪಿಸಿದರು.