ಡಾ.ಎಚ್ ಎಸ್ ಶಿವಪ್ರಕಾಶ ಅವರಿಗೆ ‘ ಮಹಾತಪಸ್ವಿ ಶ್ರೀಕುಮಾರಸ್ವಾಮಿ ಸಾಹಿತ್ಯ ಭೂಷಣ ಪ್ರಶಸ್ತಿ’

ಡಾ.ಎಚ್ ಎಸ್ ಶಿವಪ್ರಕಾಶ ಅವರಿಗೆ ‘ ಮಹಾತಪಸ್ವಿ ಶ್ರೀಕುಮಾರಸ್ವಾಮಿ ಸಾಹಿತ್ಯ ಭೂಷಣ ಪ್ರಶಸ್ತಿ’

ಗಬ್ಬೂರು,ಜೂನ್ ೨೬,೨೦೨೨.

ಕಲ್ಯಾಣ ಕರ್ನಾಟಕದ ‘ಸಾಹಿತ್ಯ – ಸಂಸ್ಕೃತಿಗಳ ಮಠ’ ವೆಂದೇ ಪ್ರಸಿದ್ಧವಾಗಿರುವ ಮಹಾಶೈವ ಧರ್ಮಪೀಠದ ೨೦೨೨ ನೇ ವರ್ಷದ ” ಮಹಾತಪಸ್ವಿ ಶ್ರೀಕುಮಾರಸ್ವಾಮಿ ಸಾಹಿತ್ಯ ಭೂಷಣ ಪ್ರಶಸ್ತಿ” ಗೆಕನ್ನಡದ ಮಹತ್ವದ ಕವಿ,ನಾಟಕಕಾರ ಡಾ. ಎಚ್ ಎಸ್ ಶಿವಪ್ರಕಾಶ ಅವರನ್ನು ಆಯ್ಕೆ ಮಾಡಲಾಗಿದೆ.ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದ ಮಹಾಶೈವ ಧರ್ಮಪೀಠದಲ್ಲಿ ಇಂದು (೨೬.೦೬.೨೦೨೨) ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಮುಕ್ಕಣ್ಣ ಕರಿಗಾರ ಅವರ ಅಧ್ಯಕ್ಷತೆಯಲ್ಲಿ ನಡೆದ ಧರ್ಮಪೀಠದ ಸಾಂಸ್ಕೃತಿಕ ಸಮಿತಿಯ ಸಭೆಯಲ್ಲಿ ಡಾ.ಎಚ್ ಎಸ್ ಶಿವಪ್ರಕಾಶ ಅವರನ್ನು ೨೦೨೨ ನೇ ವರ್ಷದ ಮಹಾತಪಸ್ವಿ ಶ್ರೀಕುಮಾರಸ್ವಾಮಿ ಸಾಹಿತ್ಯಭೂಷಣ ಪ್ರಶಸ್ತಿಗೆ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಮಹಾಶೈವ ಧರ್ಮಪೀಠದ ಸಾಂಸ್ಕೃತಿಕ ಸಮಿತಿಯ ಸದಸ್ಯಕಾರ್ಯದರ್ಶಿಗಳಾಗಿರುವ ಡಾ. ಎನ್ ಹೆಚ್ ಪೂಜಾರ್ ಅವರು ‘ ಈ ವರ್ಷದ ಮಹಾತಪಸ್ವಿ ಶ್ರೀಕುಮಾರಸ್ವಾಮಿ ಸಾಹಿತ್ಯಭೂಷಣ ಪ್ರಶಸ್ತಿಗೆ ಕನ್ನಡದ ಹಿರಿಯಕವಿ,ನಾಟಕಕಾರ ಡಾ.ಎಚ್ ಎಸ್ ಶಿವಪ್ರಕಾಶ ಅವರ ಹೆಸರನ್ನು ಪರಿಗಣಿಸಬಹುದಾಗಿದೆ’ ಎನ್ನುವ ಪ್ರಸ್ತಾವನೆಯನ್ನು ಮಂಡಿಸಿದರು.ಸಭೆಯಲ್ಲಿ ಉಪಸ್ಥಿತರಿದ್ದ ಸದಸ್ಯರುಗಳು ಎಚ್ ಎಸ್ ಶಿವಪ್ರಕಾಶ ಅವರು ಕನ್ನಡದ ಮಹತ್ವದ ಕವಿಗಳಲ್ಲೊಬ್ಬರಾಗಿದ್ದು ಕನ್ನಡಸಾಹಿತ್ಯಕ್ಕೆ ಅವರು ಸಲ್ಲಿಸಿದ ಅನನ್ಯಕೊಡುಗೆಯನ್ನು ಪರಿಗಣಿಸಿ,ಅವರನ್ನು ಈ ವರ್ಷದ ಪ್ರಶಸ್ತಿಗೆ ಆಯ್ಕೆ ಮಾಡಬಹುದು ಎಂದು ಶಿಫಾರಸ್ಸು ಮಾಡಿದರು.ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಮುಕ್ಕಣ್ಣ ಕರಿಗಾರ ಅವರ ಅನುಮೋದನೆಯೊಂದಿಗೆ ” ಡಾ.ಎಚ್ ಎಸ್ ಶಿವಪ್ರಕಾಶ ಅವರನ್ನು ೨೦೨೨ ನೇ ಸಾಲಿನ ಮಹಾತಪಸ್ವಿ ಶ್ರೀಕುಮಾರಸ್ವಾಮಿ ಸಾಹಿತ್ಯ ಭೂಷಣ ಪ್ರಶಸ್ತಿ” ಗೆ ಆಯ್ಕೆಯಾಗಿದ್ದಾರೆ ಎಂದು ಘೋಷಿಸಲಾಯಿತು.ಗಬ್ಬೂರಿನ ಮಹಾಶೈವ ಧರ್ಮಪೀಠದಲ್ಲಿ ಅಗಸ್ಟ್ 12,2022 ರ ನೂಲಹುಣ್ಣಿಮೆಯಂದು ನಡೆಯುವ ಮಹಾತಪಸ್ವಿ ಶ್ರೀಕುಮಾರಸ್ವಾಮಿಯವರ ಹುಟ್ಟುಹಬ್ಬ” ಮಹಾಶೈವ ಗುರುಪೂರ್ಣಿಮೆ” ಯಂದು ಎಚ್ ಎಸ್ ಶಿವಪ್ರಕಾಶ ಅವರಿಗೆ ಪ್ರಶಸ್ತಿ ನೀಡಿ,ಗೌರವಿಸಲಾಗುವುದು.ಪ್ರಶಸ್ತಿಯು ಐವತ್ತೊಂದು ಸಾವಿರ ರೂಪಾಯಿ ನಗದು,ಪ್ರಶಸ್ತಿಪತ್ರ,ಸ್ಮರಣಿಕೆಯನ್ನು ಒಳಗೊಂಡಿದೆ.

ಕನ್ನಡದ ಮಹತ್ವದ ಕವಿಗಳಲ್ಲೊಬ್ಬರಾಗಿರುವ ಎಚ್ ಎಸ್ ಶಿವಪ್ರಕಾಶ ಅವರು ಮಿಲರೆಪಾ,ಮಳೆಬಿದ್ದನೆಲದಲ್ಲಿ,ಅನುಕ್ಷಣ ಚರಿತೆ,ಸೂರ್ಯಜಲ,ಮಳೆಯ ಮಂಟಪ,ಮತ್ತೆ ಮತ್ತೆ,ಮಬ್ಬಿನ ಹಾಗೆ ಕಣಿವೆ ಹಾಸಿ ಮೊದಲಾದ ಕವನಸಂಕಲನಗಳನ್ನು ಹಾಗೂ ಮಹಾಚೈತ್ರ,ಸುಲ್ತಾನ್ ಟಿಪ್ಪು,ಷೇಕ್ಸಪಿಯರ್ ಸ್ವಪ್ನನೌಕೆ,ಮಂಟೆಸ್ವಾಮಿ ಕಥಾಪ್ರಸಂಗ,ಮಧುರೆಕಾಂಡ,ಮಾಧವಿ ಮೊದಲಾದ ನಾಟಕಗಳನ್ನು ಬರೆದಿದ್ದಾರೆ.’ ಬತ್ತೀಸ ರಾಗ’ ವು ಎಚ್ ಎಸ್ ಶಿವಪ್ರಕಾಶ ಅವರ ಆತ್ಮಕಥೆ.ಮಬ್ಬಿನ ಹಾಗೆ ಕಣಿವೆ ಹಾಸಿ ಕವನ ಸಂಕಲನಕ್ಕೆ ಕೇಂದ್ರಸಾಹಿತ್ಯ ಅಕಾಡೆಮಿ‌ ಪ್ರಶಸ್ತಿ,ಮಳೆಬಿದ್ದ ನೆಲದಲ್ಲಿ ಕೃತಿಗೆ 1983 ರಲ್ಲಿ ಹಾಗೂ ಸೂರ್ಯಜಲ ಕೃತಿಗೆ 1995 ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ಡಾ ಎಚ್ ಎಸ್ ಶಿವಪ್ರಕಾಶ ಅವರಿಗೆ ಹತ್ತುಹಲವು ರಾಜ್ಯ,ರಾಷ್ಟ್ರಮಟ್ಟದ ಪ್ರಶಸ್ತಿಗಳು ಸಂದಿವೆ.ಅವರ ಕೃತಿಗಳು ಇಂಗ್ಲಿಷ್ ಸೇರಿದಂತೆ ಪ್ರಪಂಚದ ಪ್ರಮುಖ ಭಾಷೆಗಳಿಗೆ ಅನುವಾದಗೊಂಡಿವೆ.ನವದೆಹಲಿಯ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಆರ್ಟ್ಸ ನಲ್ಲಿ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸಿದ ಶಿವಪ್ರಕಾಶ ಅವರು ಬರ್ಲಿನ್ ನ ಸಾಂಸ್ಕೃತಿಕ ಕೇಂದ್ರದ ಮುಖ್ಯಸ್ಥರಾಗಿ ಹಾಗೂ ಭಾರತೀಯ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್ ಸಂಸ್ಥೆಯ ನಿರ್ದೇಶಕರಾಗಿ ಸೇವೆಸಲ್ಲಿಸಿದ್ದಾರೆ.

ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಮುಕ್ಕಣ್ಣ ಕರಿಗಾರ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರಶಸ್ತಿ ಆಯ್ಕೆ ಸಮಿತಿ ಸಭೆಯಲ್ಲಿ ಸದಸ್ಯಕಾರ್ಯದರ್ಶಿಗಳಾದ ಡಾ. ಎನ್ ಹೆಚ್ ಪೂಜಾರ್,ಸದಸ್ಯರುಗಳಾದ ಬಸವರಾಜ ಸಿನ್ನೂರು,ಬಸವರಾಜ ಕರೆಗಾರ,ಗುರುಬಸವ ಹುರಕಡ್ಲಿ,ಬಾಬು ಯಾದವ್ ಮತ್ತು ಗೋಪಾಲ ಮಸೀದಪುರ ಉಪಸ್ಥಿತರಿದ್ದರು.ಡಾ.ಎನ್ ಎಚ್ ಪೂಜಾರ ಅವರು ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿದರು.