ಚಿಂತನೆ : ಸತ್ಯಂ ಶಿವಂ ಸುಂದರಂ – ಮುಕ್ಕಣ್ಣ ಕರಿಗಾರ

ಚಿಂತನೆ

ಸತ್ಯಂ ಶಿವಂ ಸುಂದರಂ

ಮುಕ್ಕಣ್ಣ ಕರಿಗಾರ

ನನ್ನ ಹಿತೈಷಿಗಳು,ಹಿರಿಯರೂ ಮತ್ತು ಆತ್ಮೀಯರೂ ಆಗಿರುವ ಕೊಪ್ಪಳದ ಸರಕಾರಿ ಪದವಿಕಾಲೇಜಿನ ನಿವೃತ್ತ ಪ್ರಾಂಶುಪಾಲರು ಮತ್ತು ಹಿರಿಯ ಕವಿಗಳಾಗಿರುವ ಡಾಕ್ಟರ್ ಮಹಾಂತೇಶ ಮಲ್ಲನಗೌಡರ ಅವರು ಕೆಲವು ದಿನಗಳ ಹಿಂದೆ ‘ ಸತ್ಯಂ ಶಿವಂ ಸುಂದರಂ’ ಕುರಿತು ಬರೆಯಿರಿ ಎಂದು ಮೆಸೇಜ್ ಮಾಡಿದ್ದರು. ಕೆಲಸದ ಒತ್ತಡಗಳ ನಡುವೆ ಇಲ್ಲಿಯವರೆಗೆ ಬರೆಯಲು ಆಗಿರಲಿಲ್ಲ. ಈ ಬೆಳಿಗ್ಗೆ ಡಾ.ಮಹಾಂತೇಶ ಮಲ್ಲನಗೌಡರ ಅವರ ನೆನಪು ಆಗಿ,ಅವರ ಅಪೇಕ್ಷೆಯ ಬರಹ ಒಂದು ಬಾಕಿ ಇದೆಯಲ್ಲ ಎನ್ನಿಸಿ ಬರೆಯಲುಪಕ್ರಮಿಸಿದೆ.ಬಲಪಂಥ,ಎಡಪಂಥ ಎನ್ನುವ ಯಾವ ಪಂಥಗಳ ಗೊಡವೆಗೂ ಹೋಗದ ನನ್ನಂತೆಯೇ ಸಮಪಂಥಿಯಾಗುರುವ ಡಾಕ್ಟರ್ ಮಹಾಂತೇಶ ಮಲ್ಲನಗೌಡರ ಅವರು ನಿರ್ಮಲಮತಿಗಳು,ನಿಶ್ಚಿಂತ ಮತಿಗಳು.ದೇವರು -ಧರ್ಮಗಳ ಬಗ್ಗೆ ಅವರದೆ ಆದ ಅಭಿಪ್ರಾಯ ಹೊಂದಿದ ವಿಶಿಷ್ಟಪ್ರತಿಭೆಯ ಹಿರಿಯರು.ಆಗಾಗ ಪ್ರೀತಿಪೂರ್ವಕವಾಗಿ ಆಗ್ರಹಿಸುತ್ತಾರೆ ಯಾವುದಾದರೂ ಸಂದೇಹ ಕೇಳಿ ಅಥವಾ ನಿಶ್ಚಿತ ವಿಷಯ ಒಂದರ ಕುರಿತು ಲೇಖನ,ಚಿಂತನೆ ಬರೆಯಲು.ಈ ಬಾರಿ ಸತ್ಯಂ ಶಿವಂ ಸುಂದರಂ ಶಿವತತ್ತ್ವ ತಿಳಿದುಕೊಳ್ಳುವ ಹಂಬಲ ಮಹಾಂತೇಶ ಮಲ್ಲನಗೌಡರ ಅವರಿಗೆ.ಅವರಿಗಾಗಿ ಈ ಶಿವತತ್ತ್ವ ಚಿಂತನೆ.

‌ ” ಸತ್ಯಂ ಶಿವಂ ಸುಂದರಂ” ಎನ್ನುವುದು ಒಂದು ಶಿವತತ್ತ್ವ.’ಸತ್ಯವೇ ಶಿವನು,ಶಿವನೇ ಸುಂದರನು’ ಎಂದು ಅದರ ಅರ್ಥ,ಈ ಅರ್ಥವೇ ಮಹಾಶಿವತತ್ತ್ವ.’ಸತ್ಯ’ ಎಂದರೆ ಅಳಿವಿಲ್ಲದ್ದು,ಅವಿನಾಶಿಯಾದದ್ದು,ವಿಕಾರಹೊಂದದೆ ಇರುವಂತಹದ್ದು.ಯಾವುದು ಶಾಶ್ವತವೋ ಅದುವೆ ಸತ್ಯ.ಯಾವುದು ವಿಕಾರಹೊಂದುವುದಿಲ್ಲವೋ ಅದುವೇ ಸತ್ಯ.ಯಾವುದು ಎರಡಾಗಿ ತೋರದೆ ಎಲ್ಲ ಕಾಲಗಳಲ್ಲೂ,ಎಲ್ಲ ದೇಶಗಳಲ್ಲೂ ಒಂದೇ ಆಗಿ ಇರುವುದೋ ಅದುವೇ ಸತ್ಯ.ಶಿವನು ಹುಟ್ಟು ಸಾವುಗಳಿಲ್ಲದವನು,ಶಾಶ್ವತನು ಆದ್ದರಿಂದ ಶಿವನು ಸತ್ಯ.ಸತ್ಯಸ್ವರೂಪನು ಶಿವ.ಜಗತ್ತು ಹುಟ್ಟುತ್ತದೆ ,ಅಳಿಯುತ್ತದೆ; ಜೀವರುಗಳು ಹುಟ್ಟುತ್ತಾರೆ ಸಾಯುತ್ತಾರೆ.ಆದರೆ ವಿಶ್ವದ ಉತ್ಪತ್ತಿ,ಸ್ಥಿತಿ, ಲಯಗಳ ಕರ್ತಾರನಾದ ಶಿವನು ಹುಟ್ಟುವುದಿಲ್ಲ,ಸಾಯುವುದಿಲ್ಲ.ಅವನು ಎಲ್ಲದಕ್ಕೂ ಅತೀತನು,ಯಾವುದಕ್ಕೂ ನಿಲುಕದವನು,ಯಾವುದಕ್ಕೂ ಸಿಲುಕದವನು.ಸತ್ಯವು ಯಾವುದೇ ಪ್ರಸಂಗದಲ್ಲಿ,ಯಾವುದೇ ಸಂದರ್ಭದಲ್ಲಿ ಬದಲಾಗದೆ ತನ್ನ ಸತ್ಯಸ್ವಭಾವವನ್ನು ಕಾಯ್ದುಕೊಳ್ಳುತ್ತದೆ.ಸುಳ್ಳು ಕ್ಷಣಕ್ಕೊಂದು ರೂಪ ಪಡೆಯುತ್ತದೆ,ಸತ್ಯ ಸದಾ ಒಂದೇ ಆಗಿರುತ್ತದೆ.’ಸೂರ್ಯನು ಪೂರ್ವದಲ್ಲಿ ಉದಯಿಸುತ್ತಾನೆ’ ಎಂದರೆ ಪೂರ್ವದಲ್ಲಿಯೇ ಹುಟ್ಟುತ್ತಾನೆ ಯಾವುದೇ ದೇಶ,ಯಾವುದೇ ಪ್ರದೇಶಕ್ಕೆ ಹೋದರೂ.ಸೂರ್ಯ ಹುಟ್ಟುವ, ಮುಳುಗುವ ಸಮಯದಲ್ಲಿ ದೇಶ- ಕಾಲಗಳ ನಡುವಣ ಅಂತರದಲ್ಲಿ ವ್ಯತ್ಯಾಸ ಇರಬಹುದೇ ಹೊರತು ಎಲ್ಲ ದೇಶಗಳಲ್ಲಿಯೂ ಸೂರ್ಯನು ಪೂರ್ವದಲ್ಲಿ ಉದಯಿಸಿ,ಪಶ್ಚಿಮದಲ್ಲಿ ಅಸ್ತಂಗತನಾಗುವುದು ಸಹಜ ವಿದ್ಯಮಾನ,ಪ್ರಾಕೃತಿಕ ಸತ್ಯ.ಚಂದ್ರನು ಬೆಳದಿಂಗಳನ್ನು ಬೀರುತ್ತಾನೆ,ವೃದ್ಧಿ- ಕ್ಷಯಗಳನ್ನು ಹೊಂದುತ್ತಾನೆ.ಭಾರತದ ಚಂದ್ರ,ಪಾಕಿಸ್ತಾನದ ಚಂದ್ರನಿಗೆ ವ್ಯತ್ಯಾಸ ಇರುವುದಿಲ್ಲ.ಎಲ್ಲ ದೇಶಗಳಲ್ಲಿಯೂ ಬೆಳದಿಂಗಳು ಚೆಲ್ಲಿ ಆಹ್ಲಾದವನ್ನುಂಟು ಮಾಡುವುದು ಚಂದ್ರನ ಸ್ವಭಾವ.ಅಗ್ನಿಯ ಸ್ವಭಾವ ಸುಡುವುದು.ಭಾರತದಲ್ಲಿ ಸುಡುವ ಅಗ್ನಿಯು ಅಮೇರಿಕಾದಲ್ಲಿಯೂ ಸುಡುತ್ತಾನೆ.ಅಮೇರಿಕಾ ಬುದ್ಧಿವಂತರ ದೇಶ ಎಂದು ಅಗ್ನಿ ಅಲ್ಲಿ ತನ್ನ ಸುಡುವ ಸ್ವಭಾವವನ್ನು ಮಾರ್ಪಡಿಸಿಕೊಂಡು ತಣ್ಣಗೆ ಆಗುವುದಿಲ್ಲ.ಹಾಗೆಯೇ ಸೂರ್ಯ ಚಂದ್ರ ಮತ್ತು ಅಗ್ನಿಯರು ಯಾರಲ್ಲಿಯೂ ಭೇದವೆಣಿಸರು,ಯಾವುದರಲ್ಲಿಯೂ ತರತಮವೆಣಿಸದೆ ತಮ್ಮ ಸಹಜಧರ್ಮವನ್ನು ಎತ್ತಿಹಿಡಿಯುತ್ತಾರೆ.ಬ್ರಾಹ್ಮಣರ ಓಣಿಯಲ್ಲಿ ಪ್ರಕಾಶಿಸುವ ಸೂರ್ಯ ದಲಿತರ ಓಣಿಗಳಲ್ಲೂ ಬೆಳಗುತ್ತಾನೆ.ಪಾಕಿಸ್ತಾನದಲ್ಲಿ ಬೆಳದಿಂಗಳು ನೀಡುವ ಚಂದ್ರ ಆಫ್ರಿಕಾದಲ್ಲೂ ಬೆಳದಿಂಗಳನ್ನೇ ನೀಡುತ್ತಾನೆ.ಮಕ್ಕಳು ಮುದುಕರು,ಋಷಿಗಳು,ಸಂತರು ಎಂದು ಯಾರಲ್ಲಿಯೂ ಪಕ್ಷಪಾತವೆಣಿಸದ ಅಗ್ನಿಯು ತನ್ನನ್ನು ಮುಟ್ಟಬಂದ ಎಲ್ಲರನ್ನೂ ಸುಡುತ್ತಾನೆ.ಶಿವನನ್ನು ತ್ರಯಂಬಕ ಅಂದರೆ ಮುಕ್ಕಣ್ಣ ಎನ್ನುತ್ತಾರೆ.ಸೂರ್ಯ,ಚಂದ್ರ ಮತ್ತು ಅಗ್ನಿಯರೇ ಶಿವನ ಮೂರು ಕಣ್ಣುಗಳು.ಸೂರ್ಯಚಂದ್ರಾಗ್ನಿಗಳ ಮೂಲಕ ಶಿವನು ತಾನು ಸತ್ಯಸ್ವರೂಪನು ಎಂದು ನಿರೂಪಿಸಿರುವನು.ಸೂರ್ಯಚಂದ್ರರೂ ಶಾಶ್ವತವಾಗಿರುತ್ತಾರೆ ಎನ್ನುವ ನಂಬಿಕೆ ಇದೆ ಜನರಲ್ಲಿ.ನಿನ್ನ ಕೀರ್ತಿಯು ” ಆಚಂದ್ರಾರ್ಕವಾಗಿರಲಿ” ಎಂದು ಹಿರಿಯರು ಆಶೀರ್ವದಿಸುತ್ತಾರಲ್ಲ, ಅದರರ್ಥವೇ ನೀನು ಶಾಶ್ವತವಾಗಿ ಕೀರ್ತಿಶಾಲಿಯಾಗಿರು ಎಂದು.ಆಚಂದ್ರಾರ್ಕ ಎಂದರೆ ‘ ಸೂರ್ಯಚಂದ್ರರು ಇರುವವರೆಗೆ ಎಂದರ್ಥ.ಅಂದರೆ ಸೂರ್ಯಚಂದ್ರರು ಶಾಶ್ವತರು ,ಅಳಿವಿಲ್ಲದವರು ,ಹಾಗೆಯೇ ನಮ್ಮ ಕೀರ್ತಿಯೂ ಶಾಶ್ವತವಾಗಿರಬೇಕು ಎಂಬುದು ಮನುಷ್ಯರಲ್ಲಿ ಕೆಲವರ ಬಯಕೆ.ಮನುಷ್ಯನ ಆಯುಷ್ಯವು ನೂರು ವರ್ಷಗಳಾದರೂ ಅವನು ಶಾಶ್ವತವಾಗಿ ಕೀರ್ತಿಶಾಲಿಯಾಗಬಯಸುತ್ತಾನೆ! ಅದು ತಪ್ಪಲ್ಲ.ದೇಹ ಅಳಿದರೂ ಸತ್ಕಾರ್ಯಗಳ ಕೀರ್ತಿ ಉಳಿಯುತ್ತದೆ.ದೇಹ ಸ್ಥಾವರವಾದರೆ ಭಾವ ಜಂಗಮ.ದೇಹಕ್ಕೆ ಅಳಿವುಂಟು,ಭಾವಕ್ಕೆ ಅಳಿವಿಲ್ಲ.

ಇನ್ನು,ಶಿವನೇ ಸುಂದರನು ಎನ್ನುವ ಮಾತಿನ ಅರ್ಥ ಒಂದಿಷ್ಟು ನೋಡುವಾ.ಸೌಂದರ್ಯ ಎಂದರೆ ನಮಗೆ ದೇವಕನ್ಯೆಯರು,ಗಂಧರ್ವರು,ಅಪ್ಸರೆಯರು ನೆನಪಾಗುತ್ತಾರೆ.ಈಗೀಗ ನಮ್ಮ ಮನುಷ್ಯ ಪ್ರಪಂಚದಲ್ಲಿಯೂ ನಡೆಯುತ್ತಿದೆಯಲ್ಲ,ವಿಶ್ವಸುಂದರಿಯರ ಸ್ಪರ್ಧೆ.ರಂಭೆ,ಊರ್ವಸಿ,ಮೇನಕೆ,ತಿಲೋತ್ತಮೆಯರಾಗಲಿ ಅಥವಾ ನಮ್ಮ ಭುವನಸುಂದರಿಯರಾಗಲಿ ನಿಜ ಸುಂದರಿಯರಲ್ಲ! ಅವರ ಸೌಂದರ್ಯಕ್ಕೆ ಒಂದು ಮಿತಿ ಇದೆ.ವಯಸ್ಸು ಆದಂತೆ ಸೌಂದರ್ಯ ಕರಗುತ್ತದೆ.ಅನಾರೋಗ್ಯಪೀಡಿತರಾಗೆ ಮುಖದ ಸೌಂದರ್ಯ ಮಾಸುತ್ತದೆ.ಅಪಘಾತಾದಿ ಅವಘಡಗಳಲ್ಲಿ ಸೌಂದರ್ಯವು ಮರೆಯಾಗಿ ಕುರೂಪಿತನ ಉಂಟಾಗುತ್ತದೆ.ಬಿಸಿಲಿಗೆ ಮುಖದ ಬಣ್ಣ ಕಂದಿ,ಕರ್ರಗೆ ಆಗುವುದುಂಟು.ನಮ್ಮ ಸುಂದರಿಯರೂ ಸೇರಿದಂತೆ ದೇವಕನ್ಯೆಯರ ಸೌಂದರ್ಯವೂ ಶಾಶ್ವತಸೌಂದರ್ಯವಲ್ಲ.ಆದರೆ ಶಿವನ ಸೌಂದರ್ಯವು ಶಾಶ್ವತವಾದ್ದರಿಂದ ಅವನೇ ನಿಜವಾದ ಸೌಂದರ್ಯಸ್ವರೂಪನು.

ಮನುಷ್ಯರಿಗೆ ಹುಟ್ಟು ಸಾವುಗಳಿರುವಂತೆ ಬಾಲ್ಯ,ಯೌವ್ವನ,ವಾರ್ಧಕ್ಯ,ಮುಪ್ಪುಗಳೆಂಬ ಅವಸ್ಥೆಗಳಿವೆ.ಹುಟ್ಟಿದಾಗ ಮಗು ಕಪ್ಪಿದ್ದರೂ ಮುದ್ದಾಗಿ ಕಾಣಿಸುತ್ತದೆ ಆದರೆ ಬೆಳೆದಂತೆ ಅಸಹ್ಯವಾಗುತ್ತದೆ.ಕತ್ತೆಮರಿ ಬಾಲ್ಯದಲ್ಲಿ ತುಂಬ ಮುದ್ದಾಗಿ ಕಾಣಿಸುತ್ತದೆ.ಆದರೆ ಬೆಳೆಯುತ್ತಿದ್ದಂತೆ ಅದು ಕತ್ತೆಯಾಗುತ್ತದೆ!( ಕತ್ತೆ ಆಗಲೇಬೇಕಲ್ಲ, ಅದರ ಸ್ವಭಾವವೇ ಕತ್ತೆಯಾಗಿ ಬೆಳೆಯಬೇಕಿದ್ದರಿಂದ) ಮಗುವಾಗಿದ್ದಾಗ ಇರುವ ಸೌಂದರ್ಯ ಬೆಳೆದು ದೊಡ್ಡವರಾದಾಗ ಇರುವುದಿಲ್ಲ.ಆರೋಗ್ಯವಂತನ ಸೌಂದರ್ಯ ರೋಗಿಯದು ಆಗಿರುವುದಿಲ್ಲ.ಯೌವ್ವನದ ಸೌಂದರ್ಯ ಮುಪ್ಪಿನಲ್ಲಿ ಇರುವುದಿಲ್ಲ.ಮುಖದ ಮೇಲಿನ ಬಣ್ಣ ಬರುತ್ತದೆ,ಹೋಗುತ್ತದೆ; ಶಾಶ್ವತವಲ್ಲ.ಅವಸ್ಥೆಗಳಿಗೆ ಒಳಗಾಗುವ ಮನುಷ್ಯ ಶರೀರಧರ್ಮಕ್ಕನುಗುಣವಾಗಿ ಬಣ್ಣ ಮಿರುಗುತ್ತದೆ,ಕರಗುತ್ತದೆ; ಮಿಂಚುತ್ತದೆ,ಕಂದುತ್ತದೆ.ಹುಟ್ಟು- ಸಾವುಗಳಿಲ್ಲದ ಶಿವನಿಗೆ ಬಾಲ್ಯ,ಯೌವ್ವನ,ವಾರ್ಧಕ್ಯ ಮತ್ತು ಮುಪ್ಪು ಎಂಬ ಅವಸ್ಥೆಗಳೂ ಇಲ್ಲವಾದ್ದರಿಂದ ಅವನ ಸೌಂದರ್ಯಕ್ಕೆ ಭಂಗವಿಲ್ಲ,ಬಾಧಕವಿಲ್ಲ.ಸದಾ ಸುಂದರನಾಗಿಯೇ ಇರುತ್ತಾನೆ ಶಿವ.ಅಕ್ಕಮಹಾದೇವಿಯು ಚೆನ್ನಮಲ್ಲಿಕಾರ್ಜುನ ಎನ್ನುವ ಪತಿಯನ್ನು ತಾನು ಒಲಿದು,ವರಿಸಿದ್ದೇನೆ ಎನ್ನುವುದನ್ನು ‘ ರೂಹಿಲ್ಲದ,ಕೇಡಿಲ್ಲದ,ಚೆಲುವಂಗಾನು ಒಲಿದೆನವ್ವಾ’ ಎನ್ನುತ್ತಾಳೆ.ರೂಪವೇ ಇಲ್ಲದ ಚೆಲುವನಂತೆ ಆಕೆಯ ಕಂಡ ಚೆನ್ನಮಲ್ಲಿಕಾರ್ಜುನ! ರೂಪವಿಲ್ಲ ಎಂದರೆ ಅದೇತರ ಸೌಂದರ್ಯ! ಲೋಕದ ಜನತೆಗೆ ಅರ್ಥವಾಗದ ಅಪೂರ್ವಶಿವಸೌಂದರ್ಯವದು.ಅಕ್ಕಮಹಾದೇವಿಯರಂತಹ ವೀರವಿರಾಗಿಣಿಯರಿಗೆ ಮಾತ್ರ ಕಾಣಬಹುದಾದ ಶಿವಶಾಶ್ವತ ಸೌಂದರ್ಯವದು.ಆಕಾರವಿದ್ದರೆ ಮಿರುಗುವ,ಕರಗುವ ಗುಣವಿರುತ್ತದೆ.ನಿರಾಕಾರಕ್ಕೆಲ್ಲಿ ಹೊಂದುವುದು- ಅಳಿಯುವುದು ? ನಿರಾಕಾರ,ನಿರಂಜನ,ನಿಶೂನ್ಯನೆಂಬುದೇ ಶಿವನ ಮಹಾಸೌಂದರ್ಯ.ನಿರಾಕಾರದ ಸೌಂದರ್ಯವೇ ನಿಜ ಸೌಂದರ್ಯ,ಅದೇ ಬ್ರಹ್ಮ ಸೌಂದರ್ಯ,ಪರಶಿವ ಸೌಂದರ್ಯ.

ಶಿವನು ವಿಶ್ವನಿಯಾಕನಾಗಿಯೂ ವಿಶ್ವಕ್ಕತೀತನಾದ ಪರಬ್ರಹ್ಮನಿರುವನು ಮತ್ತು ಶಿವನು ಮೂಲತಃ ನಿರಾಕಾರ ಪರಬ್ರಹನಿರುವನು ಎನ್ನುವುದೇ ಸತ್ಯಂ ಶಿವಂ ಸುಂದರ ತತ್ತ್ವಾರ್ಥವು.

ಮುಕ್ಕಣ್ಣ ಕರಿಗಾರ

20.06.2022