ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳವರ ಮಹೋಪದೇಶಗಳು –೨೫ : “ಸರ್ವಾತ್ಮರುಗಳ ಕಲ್ಯಾಣ ಇಲ್ಲವೆ ಶ್ರೇಯಸ್ಸನ್ನು ಬಯಸುವುದೇ ಮೋಕ್ಷ”- ಮುಕ್ಕಣ್ಣ ಕರಿಗಾರ

ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳು

ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳವರ ಮಹೋಪದೇಶಗಳು –೨೫

“ಸರ್ವಾತ್ಮರುಗಳ ಕಲ್ಯಾಣ ಇಲ್ಲವೆ ಶ್ರೇಯಸ್ಸನ್ನು ಬಯಸುವುದೇ ಮೋಕ್ಷ”

ಮುಕ್ಕಣ್ಣ ಕರಿಗಾರ

ಗುರುದೇವ ಮಹಾತಪಸ್ವಿ ಶ್ರೀ ಕುಮಾರಸ್ವಾಮಿಗಳವರು ‘ ಲೋಕಕಲ್ಯಾಣವನ್ನೇ ತಮ್ಮ ಜೀವನ ಧ್ಯೇಯ’ ಎಂದು ಭಾವಿಸಿ,ಅದರಂತೆಯೇ ಬದುಕಿದ ಅಪರೂಪದ ಯೋಗಿಗಳು,ಆಧುನಿಕ ಕಾಲದ ಮಹರ್ಷಿಗಳು.ಅವರು ತಮ್ಮ ತಪಸ್ಸಾಧನೆಯ ಸಿದ್ಧಿಯನ್ನು ತಾಯಿ ಭಾರತಾಂಬೆಯ ಸೇವೆಗೆ,ಲೋಕಕಲ್ಯಾಣ ಸಿದ್ಧಿಗೆ ಬಳಸುತ್ತಿದ್ದರು.ಪ್ರತಿದಿನ ಹದಿನಾರು ತಾಸುಗಳ ಯೋಗಸಾಧನೆ ಮಾಡುತ್ತಿದ್ದ ಗುರುದೇವ ಅನುಷ್ಠಾನ ಪ್ರಿಯರು.ಪ್ರತಿವರ್ಷ ಮೂರು ತಿಂಗಳ ಅನುಷ್ಠಾನ ಅವರ ಆಧ್ಯಾತ್ಮಿಕ ಜೀವನದ ಅವಿಭಾಜ್ಯ ಅಂಗವೇ ಆಗಿತ್ತು.ಇದರ ಜೊತೆಗೆ ಆಗಾಗ ಯಾವಾಗ ವಿಶಿಷ್ಟ ಸಾಧನೆ ಒಂದನ್ನು ಮಾಡಬೇಕು ಎನ್ನಿಸುತ್ತದೆಯೋ ಆಗ ಅನುಷ್ಠಾನ ಕೈಗೊಳ್ಳುತ್ತಿದ್ದರು.ಭಾರತೀಯ ಎಲ್ಲ ಯೋಗಪರಂಪರೆಗಳ ಅನುಷ್ಠಾನಗೈದು ಸರ್ವಯೋಗಸಿದ್ಧಿಸಂಪನ್ನರಾಗಿದ್ದ ಯುಗಯೋಗಿಗಳವರು.೧೯೬೩-೬೪ ರಲ್ಲಿ ಧಾರವಾಡದ ಹೊರವಲಯದ( ಹಳಿಹಾಳ ರಸ್ತೆ) ಪ್ರಶಾಂತ ಸ್ಥಳದಲ್ಲಿ ಆಧ್ಯಾತ್ಮಿಕ ಸಾಧನೆಗಾಗಿ ತಪೋವನವನ್ನು ನಿರ್ಮಿಸಿ,ವಿದ್ವತ್ ಸಂನ್ಯಾಸ ಸ್ವೀಕರಿಸಿದರು.ತಪೋವನದ ‘ಧ್ಯಾನಮಂದಿರ’ ದಲ್ಲಿ ನಿರಂತರ ಅನುಷ್ಠಾನಗೈಯುತ್ತ,ಅನುಷ್ಠಾನದಿಂದ ಹೊರಬಂದು ಭಕ್ತರನ್ನು ಅನುಗ್ರಹಿಸುವ ಸಂದರ್ಭದಲ್ಲಿ ಅನುಷ್ಠಾನದ ಅವಧಿಯಲ್ಲಿ ತಾವು ಕಂಡ ವಿದ್ಯಮಾನಗಳನ್ನು,ಭಾರತಕ್ಕೆ, ಜಗತ್ತಿಗೆ ಬಂದೊದಗಲಿರುವ ಕುತ್ತು- ಕಂಟಕಗಳ ಬಗ್ಗೆ ವಿವರಿಸುತ್ತಿದ್ದರು.ಭಾರತಾಂಬೆಯ ಹೆಮ್ಮೆಯ ಅಪೂರ್ವಪುತ್ರರಾಗಿದ್ದ ಅವರು ೧೯೬೬ ರಲ್ಲೇ ” ಭಾರತವು ಅಣುಬಾಂಬ್ ತಯಾರಿಸಬೇಕು” ಎನ್ನುವ ದಿವ್ಯ ಸಂದೇಶ ನೀಡಿದ್ದರು.ಚೀನಾ- ಭಾರತ ಯುದ್ಧದಲ್ಲಿ ದೇಶ ಅಣುಬಾಂಬಿನ ಅವಶ್ಯಕತೆಯನ್ನು ಮನಗಂಡಿತು; ಮಹಾತಪಸ್ವಿ ಶ್ರೀ ಕುಮಾರಸ್ವಾಮಿಗಳ ಕಾರಣಿಕ ವ್ಯಕ್ತಿತ್ವದ ಮುಂಗಾಣ್ಕೆಯ ದಾರ್ಶನಿಕ ವಾಣಿಗೆ ತಲೆಬಾಗಿ ನಮಿಸಿತು.ಪ್ರತಿವರ್ಷ ಮೂರು ತಿಂಗಳ ಅನುಷ್ಠಾನ ಮುಕ್ತಾಯಗೊಂಡ ಬಳಿಕ ನೀಡುತ್ತಿದ್ದ ಅನುಗ್ರಹ ಸಂದೇಶಗಳಲ್ಲಿ ದೇಶ,ಜಗತ್ತು ಎದುರಿಸಲಿರುವ ವಿಪತ್ತು- ವಿಪ್ಲವಗಳ ಮುನ್ಸೂಚನೆ ನೀಡುತ್ತಿದ್ದರು.ಸುಮಾರು ಇಪ್ಪತ್ತೈದಕ್ಕು ಹೆಚ್ಚಿನ ಸಂಖ್ಯೆಯಲ್ಲಿವೆ ಕಾರಣಪುರುಷರ ಪ್ರಪಂಚವಿದ್ಯಮಾನದ ಕುರಿತ ಕಾಲಜ್ಞಾನ ಸಂದೇಶಗಳು.ಅವರ ಸಂದೇಶ ಎಂದೂ ಸುಳ್ಳಾಗಿಲ್ಲ ಎನ್ನುವುದು ಅವರ ತಪೋಸಿದ್ಧಿಯ ಸಾಮರ್ಥ್ಯದ ಹೆಗ್ಗುರುತು.

ಉಗ್ರ ತಪಸ್ಸನಾಚರಿಸುವ ಸಂಕಲ್ಪದಿಂದ ‘ ಧ್ಯಾನ ಮಂದಿರ’ ಕ್ಕೆ ಹೊಂದಿಕೊಂಡು ಒಂದು ಗುಹೆಯನ್ನು ನಿರ್ಮಿಸಿ ಆ ಯೋಗಗುಹೆಯಲ್ಲಿ ೧೯೬೫ ರ ಅಗಸ್ಟ್ ೨೩ ರಿಂದ ೧೯೬೬ ರ ಅಗಸ್ಟ್ ೨೨ ರ ವರೆಗೆ ಒಂದು ವರ್ಷಕಾಲ ಅಖಂಡ ತಪಸ್ಸನ್ನಾಚರಿಸಿದರು.೧೯೬೬ ರ ಅಗಸ್ಟ್ ೨೨ ರ ಸೋಮವಾರ ಬೆಳಿಗ್ಗೆ ೯ ಘಂಟೆಗೆ ತಪೋವನದಲ್ಲಿ ನೆರೆದಿದ್ದ ಇಪ್ಪತ್ತೈದು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ಭಕ್ತರಿಗೆ ‘ ಪರುಷಕಟ್ಟೆ’ ಯಲ್ಲಿ ನಿಂತು ಜಗತ್ಕಲ್ಯಾಣದ ಅದ್ಭುತ ಸಂದೇಶ ನೀಡಿದರು.( ‘ಪರುಷಕಟ್ಟೆ’ಯು ಪೂಜ್ಯರು ಅನುಷ್ಠಾನ ಮುಗಿಸಿ ಹೊರಬಂದ ಸಂದರ್ಭದಲ್ಲಿ ಭಕ್ತರಿಗೆ ಸಂದೇಶ ನೀಡುವ ಕಟ್ಟೆಯಾಗಿತ್ತು,ಅಲ್ಲಿ ಕುಳಿತು ಗುರುಗಳು ಭಕ್ತರನ್ನು ಅನುಗ್ರಹಿಸುತ್ತಿದ್ದುದರಿಂದ ‘ ಪರುಷಕಟ್ಟೆ’ ಯ ಹೆಸರು ಅನ್ವರ್ಥಸಾರ್ಥಕವಾಗಿತ್ತು.ಆದರೆ ಅವರ ಸಮಾಧಿ ನಿರ್ಮಾಣ ಸಂದರ್ಭದಲ್ಲಿ ಅದನ್ನು ಕೆಡಹಲಾಗಿದೆ.ಈಗ ಅಲ್ಲಿ ಪರುಷಕಟ್ಟೆಯ ಕುರುಹುಗಳಿಲ್ಲ,ಅದು ನೆನಪು ಮಾತ್ರ) ಆ ಸಂದೇಶದಲ್ಲಿ ಅವರು ಸಾರಿದ ಅಮೃತವಾಕ್ಕು ಜಗತ್ಪ್ರಸಿದ್ಧವಾಗಿದೆ.ಅದು ;

” ಆಲಯಂ ಲೋಕಮಖಿಲಂ
ಮೂರ್ತಿ: ಸರ್ವಾತ್ಮ ಸಂಕುಲಂ
ನಿಷ್ಕಾಮ ಸೇವಾಹಿ ಸತ್ಪೂಜಾ
ಮುಕ್ತಿ: ಸರ್ವಾತ್ಮ ಮಂಗಲಂ”

ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳವರ ಈ ಅಮೃತವಾಕ್ಕಿನಲ್ಲಿ ಪೂಜೆ,ಅರ್ಚನೆ,ಧ್ಯಾನ- ತಪಸ್ಸುಗಳ ಬಗ್ಗೆ ಅಪೂರ್ವವಾದ ದರ್ಶನವಿದೆ,ಲೋಕೋತ್ತರ ಯೋಗಿಪುಂಗವರೊಬ್ಬರ ಲೋಕದರ್ಶನವಿದೆ.ತಪಸ್ಸು ಎಂದರೆ ಏನು,ಮೋಕ್ಷ ಯಾವುದು ಎನ್ನುವುದರ ಬಗ್ಗೆ ಉದಾತ್ತದರ್ಶನವಾಣಿ ಇದು.ಯೋಗಿ- ಸಾಧಕರುಗಳು ತಮ್ಮ ಸ್ವಾರ್ಥಕ್ಕಾಗಿ ಆಧ್ಯಾತ್ಮಿಕ ಸಾಧನೆಗೈಯದೆ ಲೋಕಹಿತಕ್ಕಾಗಿಯೇ ತಪಸ್ಸನ್ನಾಚರಿಸಬೇಕು ಎನ್ನುವ ನವನೂತನ ನೋಟವಿದೆ ಈ ವಾಕ್ಸುಧೆಯಲ್ಲಿ.

” ಆಲಯಂ ಲೋಕಮಖಿಲಂ”– ಈ ಲೋಕವೇ ದೇವನದಿವ್ಯ ದೇವಾಲಯ.ಲೋಕವೆಲ್ಲವೂ ಲೋಕೇಶ್ವರನ ದೇವಾಲಯವಾಗಿರುವಾಗ ಪ್ರತ್ಯೇಕದೇವಮಂದಿರವನ್ನು ಅರಸಿಹೋಗಲೇಕೆ? ಜಗದ್ಭರಿತನಾಗಿರುವ ಪರಮಾತ್ಮನನ್ನು ತಾವಿದ್ದ ಎಡೆಗಳಲ್ಲಿಯೇ ಕಂಡರಾಗದೆ?

” ಮೂರ್ತಿಃ ಸರ್ವಾತ್ಮ ಸಂಕುಲಂ”– ಈ ವಿಶ್ವವೇ ದೇವನ ದಿವ್ಯಾಲಯವಾದರೆ ಜಗತ್ತಿನ ಜೀವರುಗಳೆಲ್ಲರೂ ಆ ದಿವ್ಯದೇವಾಲಯದಲ್ಲಿನ ಮೂರ್ತಿಗಳು,ವಿಗ್ರಹಗಳು.ಪ್ರತಿಜೀವಿಯಲ್ಲಿಯೂ ಪರಮಾತ್ಮನಿದ್ದಾನೆ ಎನ್ನುವ ಗುರುದೇವನ ವಿಶ್ವಾತ್ಮಸಿದ್ಧಿಯ ಭಾವವಿಲ್ಲಿ ಒಡಮೂಡಿದೆ.ದೇವರಿಗಾಗಿ ಪ್ರತ್ಯೇಕ ಮೂರ್ತಿಗಳನ್ನು ಮಾಡಿಸಲೇಕೆ? ಎಲ್ಲ ಜೀವರುಗಳ ಎದೆಯಲ್ಲೇ ಇರುವ ಜಗದೀಶ್ವರ,ವಿಶ್ವೇಶ್ವರ ಶಿವನನ್ನು ಕಂಡರೆ ಸಾಲದೆ ?

” ನಿಷ್ಕಾಮ ಸೇವಾಹಿ ಸತ್ಪೂಜಾ”– ನಿರೀಕ್ಷೆರಹಿತ,ನಿಸ್ವಾರ್ಥ ಸೇವೆಯೇ ಪರಮಾತ್ಮನಿಗೆ ಸಲ್ಲಿಸುವ ಮಹಾಪೂಜೆ,ಹಿರಿದಾದ ಪೂಜೆ.ಪರಮಾತ್ಮನು ಜೀವರುಗಳ ಎದೆಯಲ್ಲಿ ಒಡಮೂಡಿರುವದರಿಂದ ಜೀವರುಗಳ ಕಷ್ಟಸುಖಗಳಿಗೆ ಸ್ಪಂದಿಸುತ್ತ ಅವರಿಗೆ ನೆರವಾಗುವುದೇ ಮಹಾದೇವನಿಗೆ ಮಾಡುವ ಮಹಾಪೂಜೆ.ಜನರಿಗೆ ಆಸರೆಯಾಗಬೇಕು ಆದರೆ ಪ್ರತಿಫಲಾಪೇಕ್ಷೆ ಇರಬಾರದು.ನಾನು ಸಹಾಯ ಮಾಡುತ್ತಿರುವುದು ಪರಮಾತ್ಮನ ಸೇವೆ ಎಂಬ ದೈನ್ಯಭಾವದಿಂದ ಮನುಷ್ಯರಾದಿ ಪ್ರಾಣಿ ಪಕ್ಷಿಗಳ ಸೇವೆ ಮಾಡಬೇಕು.ಪ್ರತಿಫಲ ಬಯಸಿ ಮಾಡುವ ಸೇವೆ,ಏನನ್ನಾದರೂ ನಿರೀಕ್ಷಿಸುವ ಕೊಡುಗೆಯು ಪೂಜೆ ಎನ್ನಿಸದು.

” ಮುಕ್ತಿಃ ಸರ್ವಾತ್ಮ ಮಂಗಲಂ”– ಮುಕ್ತಿಯು ತನಗೊಬ್ಬನಿಗೆ ದಕ್ಕಲಿ ಎನ್ನುವ ಭಾವನೆಯಿಂದ ಮಾಡುವ ಆಧ್ಯಾತ್ಮಿಕ ಸಾಧನೆಯು ನಿಜ ಸಾಧನೆಯಲ್ಲ.ಅದು ಸ್ವಾರ್ಥವೆನ್ನಿಸುತ್ತದೆ.ಜೀವರುಗಳೆಲ್ಲರ ಕಲ್ಯಾಣ ಇಲ್ಲವೆ ಶ್ರೇಯಸ್ಸನ್ನು ಬಯಸುವುದೇ ಮೋಕ್ಷ.ಆಧ್ಯಾತ್ಮಸಾಧಕರು ತಮ್ಮ ಆಧ್ಯಾತ್ಮಸಿದ್ಧಿಯನ್ನು ಜನರ ಒಳಿತನ್ನು ಸಾಧಿಸಲು,ಲೋಕಕಲ್ಯಾಣಕ್ಕಾಗಿ ಬಳಸಬೇಕು.ವೈಯಕ್ತಿಕ ಮುಕ್ತಿಸಾಧನೆಗೆಂದು ಶಕ್ತಿಸಂಚಯಿಸುತ್ತ ಹೋದರೆ ಅದು ಲೋಭವಾಗುತ್ತದೆ,ಸ್ವಾರ್ಥವಾಗುತ್ತದೆ.ನಿನ್ನ ತಪೋಸಾಮರ್ಥ್ಯವನ್ನು ನೀನು ಲೋಕಕಲ್ಯಾಣಕ್ಕಾಗಿ ಬಳಸು; ಪರಮಾತ್ಮ ಮೋಕ್ಷವನ್ನು ಅನುಗ್ರಹಿಸುತ್ತಾನೆ.ಈ ಭಾವದಿಂದ ಕೈಗೊಳ್ಳಬೇಕು ಆಧ್ಯಾತ್ಮಿಕ ಸಾಧನೆಯನ್ನು.

ಆಧ್ಯಾತ್ಮಿಕ ಕ್ಷೇತ್ರದಲ್ಲಿ ಕ್ರಾಂತಿಕಾರಕವೆನ್ನಬಹುದಾದ ಇಂತಹ ಅದ್ಭುತಸಂದೇಶವನ್ನು ಕರುಣಿಸಿದ ಲೋಕಕಲ್ಯಾಣಮೂರ್ತಿ ಗುರುದೇವ ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳವರ ದಿವ್ಯವಿಶ್ವಾತ್ಮನೆದುರು ಮೈಮಣಿದು ,ಅವರ ಸತ್ ಸಂಕಲ್ಪ ಮತ್ತು ಮಹಾಪ್ರೇರಣೆಯಂತೆ ಮೂಡಿ ಬರುತ್ತಿರುವ ” ಮಹಾತಪಸ್ವಿ ಶ್ರೀ ಕುಮಾರಸ್ವಾಮಿಯವರ ಮಹೋಪದೇಶಗಳು” ಎನ್ನುವ ೧೦೮ ಲೋಕೋಪದೇಶಗಳ ಕೃತಿಮಾಲಿಕೆಯಲ್ಲಿ ೨೫ ಮಹೋಪದೇಶಗಳನ್ನುಳ್ಳ ಈ ಮೊದಲ ಕೃತಿ ಪುಷ್ಪವನ್ನು ಪರಿಸಮಾಪ್ತಿಗೊಳಿಸಿ,ಗುರುದೇವನ ದಿವ್ಯಪದತಲಗಳಲ್ಲಿ ಸಮರ್ಪಿಸಿರುವೆ.

‌ 17.06.2022