ಮಹಾತಪಸ್ವಿ ಶ್ರೀಕುಮಾರಸ್ವಾಮಿಯವರ ಮಹೋಪದೇಶಗಳು –೨೩ : ಶಿವನಂತೆಯೇ ಶಿವಶರಣರು ಲೋಕಕಲ್ಯಾಣವನ್ನು ಸಾಧಿಸಬೇಕು – ಮುಕ್ಕಣ್ಣ ಕರಿಗಾರ

ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳು

ಮಹಾತಪಸ್ವಿ ಶ್ರೀಕುಮಾರಸ್ವಾಮಿಯವರ ಮಹೋಪದೇಶಗಳು –೨೩

ಶಿವನಂತೆಯೇ ಶಿವಶರಣರು ಲೋಕಕಲ್ಯಾಣವನ್ನು ಸಾಧಿಸಬೇಕು

ಮುಕ್ಕಣ್ಣ ಕರಿಗಾರ

ಗುರುದೇವ ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳವರು ಶಿವಶರಣರು ಶಿವನಂತೆಯೇ ಲೋಕೋಪಕಾರಿಗಳಾಗಿರಬೇಕು,ಲೋಕಕಲ್ಯಾಣವನ್ನು ಸಾಧಿಸಬೇಕು ಎನ್ನುತ್ತಿದ್ದರು.ಬಾಯಿಂದ ಶಿವಶರಣರು,ಶರಣರು ಎಂದು ಹೇಳಿಕೊಂಡರೆ ಸಾಲದು,ಮೈಗೂಡಿಸಿಕೊಳ್ಳಬೇಕು ಶರಣತ್ವವನ್ನು.ಶಿವಶರಣರ ಲಕ್ಷಣವೇನು ಎನ್ನುವುದನ್ನು ಬಹುಸೊಗಸಾಗಿ ವಿವರಿಸಿದ್ದಾರೆ ಗುರುದೇವ –” ‘ ಶಿವ’ ಎಂದರೆ ಕಲ್ಯಾಣ.ತಾನು ಒಳ್ಳೆಯವನಾಗಿ,ಇತರರಿಗೆ ಒಳಿತನ್ನು ಮಾಡುವಾತನು ಶಿವಭಾವಿ; ಶಿವೋಪಾಸಕ; ಶಿವಶರಣ”.

‘ ಶಿವ’ ಎಂದರೆ ಕಲ್ಯಾಣ ಎಂದು ಕಿರಿದರಲ್ಲಿ ಪಿರಿದಪ್ಪ ಶಿವತತ್ತ್ವವನ್ನು ಹಿಡಿದಿಟ್ಟು ವ್ಯಾಖ್ಯಾನಿಸಿದ್ದಾರೆ ಮಹಾತಪಸ್ವಿಗಳು.’ಶಿವ ‘ಎಂದರೆ ಕಲ್ಯಾಣ,ಮಂಗಳ,ಶುಭ ಎಂದೆಲ್ಲ ಅರ್ಥವಾಗುತ್ತದೆ.ಜಗತ್ತಿನ ಕಲ್ಯಾಣ ಬಯಸುವವನೇ ಶಿವನಾದ್ದರಿಂದ ಶಿವ ಶಬ್ದದ ಅರ್ಥವೇ ಕಲ್ಯಾಣ.ಜಗತ್ಕಲ್ಯಾಣವನ್ನೇ ಲಕ್ಷ್ಯದಲ್ಲಿರಿಸಿಕೊಂಡು ಲೀಲೆಯಾಡುತ್ತಿದ್ದಾನೆ ಶಿವ.ಹಾಗೆಯೇ ಶಿವಭಕ್ತರಾದವರು ಸಹ ಕಲ್ಯಾಣಮೂರ್ತಿಗಳಾಗಿರಬೇಕು.ಶಿವಾನುಭಾವ ಮಾಡುತ್ತೇವೆ,ನಾವು ಶಿವಭಾವಿಗಳು ಎಂದರೆ ಆಗಲಿಲ್ಲ,ಶಿವನ ಕಲ್ಯಾಣಭಾವವನ್ನು ತಮ್ಮ ಭಾವವನ್ನಾಗಿಸಿಕೊಳ್ಳಬೇಕು.ಶಿವಪೂಜೆ ಮಾಡುತ್ತೇನೆ,ನಾನು ಶಿವೋಪಾಸಕ ಎಂದರೆ ಆಗದು ಭಾವವು ಶಿವಭಾವವಾಗಬೇಕು.ಶಿವನಲ್ಲಿ ನಿಷ್ಠೆಯಿಟ್ಟು ಪೂಜಿಸಿ,ಧ್ಯಾನಿಸುವುದರಿಂದ ನಾನು ಶಿವಶರಣ ಎಂದುಕೊಂಡರೆ ಸಾಲದು ಲೋಕಜನರ ಬಗ್ಗೆ ನಿಜಾಂತಃಕರಣ ಉಳ್ಳವರಾಗಿರಬೇಕು.

ಗುರುದೇವ ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳವರು ಈ ಉಪದೇಶವಾಕ್ಕಿನಲ್ಲಿ ಶಿವಾನುಭಾವಿ ಇಲ್ಲವೆ ಶಿವಶರಣರು ಎಂದು ಕರೆದುಕೊಳ್ಳುವವರು ಎರಡು ಷರತ್ತುಗಳನ್ನು ಪೂರೈಸಬೇಕು ಎಂದಿದ್ದಾರೆ.ತಾನು ಒಳ್ಳೆಯವನಾಗಿರುವುದು ಮತ್ತು ಇತರರಿಗೆ ಒಳ್ಳೆಯದನ್ನು ಬಯಸುವುದೇ ಇವೇ ಶರಣರಾಗುವವರ ಲಕ್ಷಣದ್ವಯಗಳು.ತಾನು ಒಳ್ಳೆಯವನಾಗದೆ ಇತರರಿಗೆ ಒಳಿತನ್ನು ಬಯಸಲು ಸಾಧ್ಯವಿಲ್ಲ.ನಾನು ಹೇಗಿದ್ದರೇನು ಇತರರಿಗೆ ಒಳಿತನ್ನು ಬಯಸುತ್ತೇನೆ ಎಂದರೆ ಆ ಒಳಿತು ಫಲಕಾರಿಯಾಗುವುದಿಲ್ಲ ಸ್ವಯಂ ಅನುಷ್ಠಾನ ಮಾಡದೆ ಇರುವುದರಿಂದ.ಮೊದಲು ತನ್ನನ್ನು ತಾನು ಸರಿಪಡಿಸಿಕೊಂಡು ಇತರರನ್ನು ಸರಿಪಡಿಸಬೇಕು.ಮೊದಲು ತಾನು ಶುದ್ಧನಾಗಿ ನಂತರ ಇತರರಿಂದ ಶುದ್ಧಿಯನ್ನು ಅಪೇಕ್ಷಿಸಬೇಕು.”Do as I say but don’t do as I do” ಎಂದರೆ ಅದು ಫಲಕಾರಿ ಆಗದು.’ನಾನು ಉಪದೇಶಿಸಿದಂತೆ ಮಾಡು,ನಾನು ಮಾಡುವಂತೆ ಮಾಡಬೇಡ’ ಎಂದು ತಂದೆಯೋ,ಶಿಕ್ಷಕನೋ ಮಗುವಿಗೆ ಉಪದೇಶಿಸಿದರೆ ಅದು ಮಗುವಿನ ಮನಸ್ಸನ್ನು ತಟ್ಟದು.ತಾನು ಸಿಗರೇಟು ಸೇದುತ್ತ ನೀನು ಸೇದಬೇಡ ಎಂದರೆ ಹೇಗೆ ?ನಾನು ಹೇಳುತ್ತೇನೆ,ಸಿಗರೇಟು ಸೇದುವುದು ಕೆಟ್ಟದು ಆದ್ದರಿಂದ ನೀನು ಸೇದಬೇಡ ಎಂದ ತಂದೆ ಮಗನೆದುರೇ ಸಿಗರೇಟು ಸೇದಿದರೆ?ಸ್ವಯಂ ದೌರ್ಬಲ್ಯವನ್ನು ಮೆಟ್ಟಿನಿಲ್ಲದವರ ಉಪದೇಶ ನಾಟದು.ರಾಮಕೃಷ್ಣ ಪರಮಹಂಸರ ಬದುಕಿನ ಒಂದು ಪ್ರಸಂಗ ಉಲ್ಲೇಖನಾರ್ಹ.ಒಬ್ಬ ತಾಯಿ ತನ್ನ ಮಗುವನ್ನು ಕರೆದುಕೊಂಡು ರಾಮಕೃಷ್ಣ ಪರಮಹಂಸರ ಬಳಿ ಬರುತ್ತಾಳೆ.’ ಪೂಜ್ಯರೆ,ಈ ನನ್ನ ಮಗ ವಿಪರೀತ ಬೆಲ್ಲ ತಿನ್ನುತ್ತಿದ್ದಾನೆ.ಇವನು ಬೆಲ್ಲ ತಿನ್ನದ ಹಾಗೆ ಮಾಡಿ’ ಎಂದು ಪ್ರಾರ್ಥಿಸುತ್ತಾಳೆ.ಪರಮಹಂಸರು ಭಕ್ತರಪಾಲಿನ ಭಗವಂತನೆಂದೇ ಹೆಸರಾಗಿದ್ದರು,ಬೇಡಿದವರಿಗೆ ಬೇಡಿದ್ದನ್ನು ಕರುಣಿಸುವ ಕಲ್ಪವೃಕ್ಷ ವ್ಯಕ್ತಿತ್ವದವರು ಎಂದು ಖ್ಯಾತರಾಗಿದ್ದರಿಂದ ದೊಡ್ಡದೊಡ್ಡ ವ್ಯಕ್ತಿಗಳು ಅವರ ದರ್ಶನಾಶೀರ್ವಾದವನ್ನರಸಿ ಬರುವಂತೆಯೇ ಜನಸಾಮಾನ್ಯರು ತಮ್ಮ ಕಷ್ಟ- ಸುಖ ಹೇಳಿಕೊಂಡು,ಪರಿಹಾರ ಕಾಣಲು ಬರುತ್ತಿದ್ದರು ರಾಮಕೃಷ್ಣರ ಸಾನ್ನಿಧ್ಯವನ್ನರಸಿ.ಪಾಪ! ಈ ತಾಯಿ ಪರಮಹಂಸರ ಆಶೀರ್ವಾದದಿಂದ ತನ್ನ ಮಗ ಬೆಲ್ಲ ತಿನ್ನುವುದನ್ನು ಬಿಡಬಲ್ಲ ಎನ್ನುವ ಭರವಸೆಯಿಂದ ಬಂದಿದ್ದಳು.ಜನಸಾಮಾನ್ಯರು ಮಹಾತ್ಮರ ಬದುಕನ್ನು ಪವಾಡ ಎಂದು ಬಗೆಯುತ್ತಾರೆ,ಅವರು ಮಾಡುವುದೆಲ್ಲ ಪವಾಡ ಎಂದು ನಂಬುತ್ತಾರೆ.ಆ ಮಗುವಿನ ತಾಯಿಯನ್ನು ಕುರಿತು ರಾಮಕೃಷ್ಣ ಪರಮಹಂಸರು ‘ ಮುಂದಿನವಾರ ಬಾ ತಾಯಿ’ ಎನ್ನುತ್ತಾರೆ.ಆಗಲಿ ಎಂದು ಹಿಂದಿರುಗಿದ ಆ ತಾಯಿ ಒಂದು ವಾರ ಗತಿಸಿದ ಬಳಿಕ ಮತ್ತೆ ಮಗನನ್ನು ಕರೆದುಕೊಂಡು ಬರುತ್ತಾಳೆ.ಪರಮಹಂಸರು ಆ ಮಗುವನ್ನು ಹತ್ತಿರ ಕರೆದು ‘ ಪುಟ್ಟ,ಬೆಲ್ಲ ತಿನ್ನಬಾರದಪ್ಪ.ಅದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.ಹೊಟ್ಟೆಯಲ್ಲಿ ಜಂತುಗಳು ಹುಟ್ಟುತ್ತವೆ.ಬೆಲ್ಲ ತಿನ್ನುವುದನ್ನು ಬಿಡು’ ಎನ್ನುತ್ತಾರೆ.ಆ ತಾಯಿಗೆ ಆಶ್ಚರ್ಯ.ಪರಮಹಂಸರು ಏನೋ ಪವಾಡಮಾಡಿ ಮಗನ ಬೆಲ್ಲ ತಿನ್ನುವ ಚಟ ಬಿಡಿಸುತ್ತಾರೆ ಎಂದುಕೊಂಡಿದ್ದಳೋ ಏನೋ.ಕುತೂಹಲ ತಡೆಯದೆ ರಾಮಕೃಷ್ಣ ಪರಮಹಂಸರನ್ನು ಪ್ರಶ್ನಿಸುತ್ತಾಳೆ –‘ ತಾತ,ಇದೇ ಮಾತನ್ನು ಹೋದ ವಾರವೇ ಹೇಳಬಹುದಿತ್ತಲ್ಲ!’.ಆಕೆಯು ಪರಮಹಂಸರು ಏನೋ ಪವಾಡಮಾಡುತ್ತಾರೆ ಎಂದುಕೊಂಡಿದ್ದಳು; ಆದರೀಗ ಪರಮಹಂಸರು ಮಗುವಿಗೆ ಬೆಲ್ಲ ತಿನ್ನಬೇಡ,ಅದು ಒಳ್ಳೆಯದಲ್ಲ ಎನ್ನುತ್ತಿದ್ದಾರೆ.ಈ ಮಾತು ಹೇಳಲು ಒಂದು ವಾರ ಕಾಯಬೇಕಿತ್ತೆ? ನಾನೇನೋ ಪವಾಡ ಮಾಡಲು ಒಂದು ವಾರ ಸಮಯ ಕೇಳಿದ್ದಾರೆ ಎಂದುಕೊಂಡಿದ್ದೆ ಎಂಬಿತ್ಯಾದಿ ಆಲೋಚಿಸುತ್ತಿದ್ದಳು ಆ ಮಗುವಿನ ತಾಯಿ.ರಾಮಕೃಷ್ಣ ಪರಮಹಂಸರು ಆ ಮಹಿಳೆಗೆ ನಗುತ್ತ ಉತ್ತರಿಸಿದರು ” ಅಮ್ಮಾ,ನೀನು ನಿನ್ನ ಮಗನನ್ನು ಬೆಲ್ಲ ತಿನ್ನುವುದನ್ನು ಬಿಡಿಸುವಂತೆ ನನ್ನಲ್ಲಿಗೆ ಕರೆದುಕೊಂಡು ಬಂದಾಗ ನಾನೇ ಬೆಲ್ಲ ತಿನ್ನುತ್ತಿದ್ದೆ.ನಾನು ಬೆಲ್ಲ ತಿನ್ನುವ ಚಟವನ್ನು ಬಿಡದೆ ಈ ಮಗುವಿಗೆ ಬೆಲ್ಲ ತಿನ್ನಬೇಡ ಎಂದರೆ ಹೇಗೆ ? ನಾನೀಗ ಬೆಲ್ಲ ತಿನ್ನುವುದನ್ನು ಬಿಟ್ಟಿದ್ದೇನೆ,ಆದ್ದರಿಂದ ಮಗುವಿಗೆ ಬೆಲ್ಲ ತಿನ್ನಬೇಡ ಎಂದು ಹೇಳುವ ಅಧಿಕಾರ ಪಡೆದೆ’.ಇದು ದೊಡ್ಡವರ ದೊಡ್ಡ ನಡೆ ! ರಾಮಕೃಷ್ಣ ಪರಮಹಂಸರು ‘ ನಾನು ಹೇಳಿದಂತೆ ಮಾಡು,ನಾನು ಮಾಡಿದಂತೆ ಮಾಡಬೇಡ’ ಎನ್ನಲಿಲ್ಲ.ಮಗುವಿನ ಬೆಲ್ಲ ತಿನ್ನುವ ಚಟ ಬಿಡಿಸಲು ಸ್ವತಃ ಅವರೇ ಬೆಲ್ಲ ತಿನ್ನುವುದನ್ನು ಬಿಟ್ಟರು.ಮಹಾತ್ಮರು ಉಪದೇಶಿಸುವ ಪೂರ್ವ ಅದನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿರುತ್ತಾರೆ.ನಡೆ ನುಡಿ ಒಂದಾಗಿರುವುದರಿಂದಲೇ ಅವರು ಮಹಾತ್ಮರು ಆಗುತ್ತಾರೆ,ಅವರ ಉಪದೇಶ ಎಲ್ಲರ ಮೇಲೆ ಪರಿಣಾಮ ಬೀರುತ್ತದೆ.ನಡೆ- ನುಡಿಗಳೆರಡೂ ಒಂದಾಗಿರುವವರೇ ಹಿರಿಯರು,ಪೂಜ್ಯರು; ಬರಿ ಮಾತಿನ ಹಿರಿಯರು ಹಿರಿಯರಲ್ಲ.It is easy to preach , but difficult to practice.ಉಪದೇಶಿಸುವುದು ಸುಲಭ,ಆದರೆ ಆಚರಿಸುವುದು ಕಷ್ಟ.ಉಪದೇಶವನ್ನು ಜನರು ಧಾರಾಳವಾಗಿ ಕೊಡಬಲ್ಲರು,ಆದರೆ ಸ್ವಯಂ ಪಾಲಿಸಲರಿಯರು!ಸ್ವಯಂ ಅನುಷ್ಠಾನ ಮಾಡದೆ ಉಪದೇಶಿಸುವ ಮಾತು ನಾಟದು.ಮೊದಲು ತಾನು ಒಳ್ಳೆಯವನಾಗಬೇಕು ನಂತರ ಇತರರಿಗೆ ಒಳಿತನ್ನು ಬಯಸಬೇಕು.

ಶಿವನನ್ನು ಕುರಿತ ಗ್ರಂಥಗಳನ್ನು,ಪುರಾಣಗಳನ್ನು ಓದುವುದರಿಂದಾಗಲಿ,ಶಿವಾನುಭವಗೋಷ್ಠಿಗಳನ್ನು ಏರ್ಪಡಿಸುವುದರಿಂದಾಗಲಿ ‘ ಶಿವಭಾವಿ’ ಇಲ್ಲವೆ ‘ ಶಿವಾನುಭಾವಿ’ ಆಗಲು ಸಾಧ್ಯವಿಲ್ಲ.ಶಿವನ ಭಾವವನ್ನು ಹೊಂದಬೇಕು.ಅಂದರೆ ಶಿವನಂತೆಯೇ ಸದಾ ಲೋಕಹಿತವನ್ನೇ ಬಯಸುತ್ತಿರಬೇಕು.ತನಗೆ ಕೆಡುಕಾದರೂ ಸರಿ ಇತರರಿಗೆ ಒಳಿತಾಗಲಿ ಎನ್ನುವ ಸದ್ಭಾವವೇ ಶಿವಭಾವ.ಸಮುದ್ರಮಥನ ಕಾಲದಲ್ಲಿ ಕಾಲಕೂಟಸರ್ಪದ ವಿಷದಿಂದ ಎದ್ದ ಹಾಲಾಹಲವು ಜಗತ್ತನ್ನೇ ಆಪೋಶನ ತೆಗೆದುಕೊಳ್ಳುವಂತೆ ಧಾವಿಸಿ ಬರುತ್ತಿರಲು ಹೆದರಿದ ದೇವದಾನವರುಗಳು ವಿಷ್ಣುವಿನ ನೇತೃತ್ವದಲ್ಲಿ ಶಿವನಲ್ಲಿ ರಕ್ಷಿಸು,ರಕ್ಷಿಸು ಮಹಾದೇವ ಎಂದು ಮೊರೆಹೋಗಲು ಶಿವನು ಪ್ರಪಂಚವಿನಾಶಕಾರಿ ಹಾಲಾಹಲ ವಿಷವನ್ನು ಕೈಯಲ್ಲಿ ತೆಗೆದುಕೊಂಡು ಗಟಗಟನೆ ಕುಡಿದ! ಶಿವನಾದರೇನು ತನ್ನ ಪರಿಣಾಮ ಬೀರದೆ ಇದ್ದೀತೆ ಕಾಲಕೂಟ ವಿಷ ? ಪ್ರಳಯಭಯಂಕರ ವಿಷ ಸೇವನೆಯ ಪರಿಣಾಮ ಶಿವನ ಕಂಠ ಸುಟ್ಟು ಅವನು ನೀಲಕಂಠನಾದ,ವಿಷಕಂಠನೆನಿಸಿಕೊಂಡ.ಲೋಕಕಲ್ಯಾಣಕ್ಕಾಗಿ ತನ್ನ ಬದುಕನ್ನು ಲೆಕ್ಕಿಸಿದೆ ವಿಷವನ್ನು ಕುಡಿದದ್ದು ಶಿವನ ಉದಾರವಿಶೇಷ,ಮಹೌದಾರ್ಯ! ಲೋಕವನ್ನು ಉಳಿಸಲು ತಾನು ಕಂಠಸುಟ್ಟುಕೊಂಡಿದ್ದರಿಂದಲೇ ಶಿವನು ಶ್ರೀಕಂಠನಾದ.ಶ್ರೀಕಂಠ ಎಂದರೆ ಸಂಪತ್ತಿನ ಕಂಠ ಉಳ್ಳವನು ಎಂದರ್ಥ.ಶಿವನು ಕಾಲಕೂಟವಿಷವನ್ನು ತನ್ನ ಕಂಠದಲ್ಲಿಟ್ಟುಕೊಂಡಿದ್ದರಿಂದಲೇ ದೇವ ದಾನವರು ಪುನಃ ಸಮುದ್ರಮಥನ ಮಾಡಿ,ಅಮೃತವನ್ನು ಪಡೆಯಲು ಸಾಧ್ಯವಾಯಿತು.ಲೋಕಕಲ್ಯಾಣಸಿದ್ಧಿಗಾಗಿ ಸ್ವಯಂ ಕಷ್ಟಕ್ಕೆ ಗುರಿಯಾದ ಶಿವನ ಕಂಠವೇ ಶ್ರೀಕಂಠ.ಶಿವನು ಲೋಕಕಲ್ಯಾಣಕ್ಕಾಗಿ ವಿಷವನ್ನು ಕುಡಿದಂತೆ ಶಿವಭಕ್ತರು,ಶಿವಭಾವಿಗಳು ಪರರ ಒಳಿತಿಗಾಗಿ ಸ್ವಯಂ ಕಷ್ಟಗಳನ್ನೆದುರಿಸಲು ಸಿದ್ಧರಿರಬೇಕು.

ಶಿವೋಪಾಸಕರು ಶಿವನಂತೆಯೇ ಇತರರು ಬೇಡಿದುದನ್ನು ಎರಡೆಣಿಸದೆ ಕೊಡಬೇಕು.ರಾವಣನ ತಪಸ್ಸಿಗೆ ಮೆಚ್ಚಿದ ಶಿವನು ತನ್ನ ಸರ್ವಸ್ವವಾಗಿದ್ದ ಆತ್ಮಲಿಂಗವನ್ನೇ ನೀಡಿದ ರಾವಣನು ಆತ್ಮಲಿಂಗವನ್ನು ಬೇಡಲು.ಶಿವನ ಶಕ್ತಿಸ್ವರೂಪವೇ ಆತ್ಮಲಿಂಗ.ಅಂತಹ ಮಹಿಮಾನ್ವಿತ ಆತ್ಮಲಿಂಗವನ್ನೇ ನೀಡುತ್ತಾನೆ ಶಿವ.ಅಂದರೆ ಶಿವನಿಗೆ ತನ್ನ ಭಕ್ತ ರಾವಣನಿಗಿಂತ ಆತ್ಮಲಿಂಗ ದೊಡ್ಡದಲ್ಲ.ಇಂತಹ ಉದಾತ್ತ ಭಾವನೆಯಿಂದ ತಮ್ಮನ್ನರಸಿ ಬರುವವರು ಬೇಡಿದುದನ್ನು ನೀಡುವುದೇ ಶಿವಸೇವೆ,ಶಿವಪೂಜೆ ಎಂದು ಬಗೆಯುವವರೇ ಶಿವೋಪಾಸಕರು.

ಶಿವನು ತನ್ನ ಭಕ್ತರು ಏನನ್ನೇ ಬೇಡಿದರೂ ನೀಡುವ ಪರಮೋದಾರಿ ಆಗಿರುವುದರಿಂದ ಅವನನ್ನು ಮಹಾದೇವ ಎನ್ನುತ್ತಾರೆ.ಭಕ್ತರು ಬೇಡಿದುದೆಲ್ಲವನ್ನು ನೀಡುವ ಈ ಗುಣದಿಂದಾಗಿ ಶಿವನನ್ನು ದಡ್ಡಶಿವ ಎನ್ನಲು ‘ ಮರುಳ ಶಂಕರ’ ಎನ್ನುತ್ತಾರೆ.ಮರುಳ ಶಂಕರ ಎನ್ನುವುದು ಶಿವನೊಬ್ಬನಿಗೇ ಸಾಧ್ಯವಾಗಬಹುದಾದ ದೊಡ್ಡಸ್ತಿಕೆ.ಭಸ್ಮಾಸುರನಿಗೆ ತನ್ನ ಹಣೆಗಣ್ಣು,ಉರಿನೇತ್ರವನ್ನೇ ನೀಡಿದ ಶಿವ ಮುಂದೆ ರಾಕ್ಷಸನ ದುಷ್ಟಬುದ್ಧಿಯಿಂದ ತನಗೂ ತೊಂದರೆ ಒದಗಬಹುದು ಎಂಬುದನ್ನು ಲೆಕ್ಕಿಸದೆ.ಭಸ್ಮಾಸುರ ತ್ರಿಲೋಕವಂದ್ಯನಾಗಲು,ತನಗೆ ಪ್ರತಿಸ್ಪರ್ಧಿ ಇರಬಾರದು ಎಂದು ಶಿವನನ್ನೇ ಸುಡಲು ಬರುತ್ತಾನೆ,ಶಿವನ ತಲೆಯ ಮೇಲೆಯೇ ಕೈ ಇಡ ಬಯಸುತ್ತಾನೆ ! ಭಸ್ಮಾಸುರನ ರಾಕ್ಷಸಿಬುದ್ಧಿ ಶಿವನಿಗೆ ತಿಳಿಯಲಿಲ್ಲ ಎಂದಲ್ಲ,ಏನಾದರಾಗಲಿ ಅವನು ನನ್ನ ಭಕ್ತ,ಅವನು ಬೇಡಿದುದನ್ನು ನೀಡಬೇಕಾದುದು ಭಗವಂತನಾದ ನನ್ನ ಕರ್ತವ್ಯ ಎನ್ನುವ ಭಾವದಿಂದ ಶಿವ ಭಸ್ಮಾಸುರನಿಗೆ ತನ್ನ ಹಣೆಗಣ್ಣನ್ನೇ ನೀಡಿದ.ತನ್ನಲ್ಲಿ ಶರಣು ಬಂದವರಿಗೆ ನೀಡದೆ ಇರುವಂತಹದ್ದು ಯಾವುದೂ ಇಲ್ಲ ಎಂದು ನಿರೂಪಿಸಿದ ಶಿವ.ಶಿವಶರಣರಾದವರು ಹೀಗೆ ಮಹೋದಾರಿಗಳಾಗಿರಬೇಕು.ಇಂತಹ ಮಹೋದಾತ್ತ ಗುಣ ಉಳ್ಳವರೇ ಶಿವಶರಣರು.ಲೋಕಹಿತಕ್ಕಾಗಿ ತಮ್ಮ ಸ್ವಹಿತವನ್ನು ಬಲಿಕೊಡುವವರೇ ಶಿವಶರಣರು.

‌ 15.06.2022