ಮಹಾತಪಸ್ವಿ ಶ್ರೀಕುಮಾರಸ್ವಾಮಿಯವರ ಮಹೋಪದೇಶಗಳು –೧೪ : “ಶಿವಶರಣರು ಮರ್ತ್ಯವನ್ನೇ ಮಹಾಮನೆಯನ್ನಾಗಿಸಿದ,ಕರ್ಮಭೂಮಿಯನ್ನೇ ಧರ್ಮಭೂಮಿಯನ್ನಾಗಿಸಿದ ಗಟ್ಟಿಗರು” – ಮುಕ್ಕಣ್ಣ ಕರಿಗಾರ

ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳು

ಮಹಾತಪಸ್ವಿ ಶ್ರೀಕುಮಾರಸ್ವಾಮಿಯವರ ಮಹೋಪದೇಶಗಳು –೧೪

“ಶಿವಶರಣರು ಮರ್ತ್ಯವನ್ನೇ ಮಹಾಮನೆಯನ್ನಾಗಿಸಿದ,ಕರ್ಮಭೂಮಿಯನ್ನೇ ಧರ್ಮಭೂಮಿಯನ್ನಾಗಿಸಿದ ಗಟ್ಟಿಗರು”

ಮುಕ್ಕಣ್ಣ ಕರಿಗಾರ

ಗುರುದೇವ ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳವರು ಕರ್ನಾಟಕದಲ್ಲಿ ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ವಚನ ಚಳುವಳಿಯ ಬಗ್ಗೆ ಗೌರವಾದರಗಳನ್ನು ಹೊಂದಿದ್ದರು.ಬಸವಣ್ಣನವರ ಅಭೂತಪೂರ್ವ ಕ್ರಾಂತದರ್ಶಿ ವ್ಯಕ್ತಿತ್ವವನ್ನು ಮನದುಂಬಿ ಹಾಡಿ,ಹೊಗಳುತ್ತಿದ್ದರು.ಬಸವಣ್ಣನವರ ಮುಂದಾಳತ್ವದಲ್ಲಿ ನಡೆದ ವಚನ ಚಳುವಳಿ ಜಗತ್ತಿಗೆ ಹೊಸದಿಕ್ಕು ತೋರಿದ ಬಗ್ಗೆ ವಿವರಿಸುತ್ತ ಗುರುದೇವ ಹೇಳಿದ ಮಾತುಗಳಿವು ; ” ಶಿವಶರಣರಿಗೆ ಪ್ರಪಂಚ ಪಾರಮಾರ್ಥ ಎಂಬ ಭೇದವಿಲ್ಲ.ಪ್ರಪಂಚವೇ ಪಾರಮಾರ್ಥವಾಗಬೇಕು.ಇಹವೇ ಪರವಾಗಬೇಕು.ಮರ್ತ್ಯಲೋಕವೇ ಮಹಾಮನೆಯಾಗಬೇಕು.ಕರ್ಮಭೂಮಿಯೇ ಧರ್ಮಭೂಮಿಯಾಗಬೇಕು ಎಂಬುದೇ ಉಚ್ಚತಮವಾದ ಬಾಳಿನಗುಟ್ಟು,ಸಾಧನೆಯ ಗುರಿ”.

ವಚನಚಳುವಳಿಯ ಸಂದರ್ಭವನ್ನು ಕುರಿತು ಆಡಿದ ಮಾತಿದು ಆದರೂ ಎಲ್ಲ ಶಿವಶರಣರ ಬದುಕು ಇಂತಹ ಉಚ್ಚಧ್ಯೇಯ ಒಂದರಿಂದ ಪ್ರೇರಣೆಗೊಂಡಿರುತ್ತದೆ.ಶಿವಶರಣರು ಮರ್ತ್ಯವನ್ನೇ ಮಹಾದೇವನ ಮಹಾಮನೆಯನ್ನಾಗಿಸುತ್ತಾರೆ; ಕರ್ಮಭೂಮಿಯನ್ನೇ ಧರ್ಮಭೂಮಿಯನ್ನಾಗಿಸುತ್ತಾರೆ.ಬಸವಣ್ಣನವರ ನೇತೃತ್ವದಲ್ಲಿ ಏಳುನೂರಾ ಎಪ್ಪತ್ತು ಜನ ಶಿವಶರಣರು ಸಾಮೂಹಿಕವಾಗಿ ಇಂತಹ ಮಹಾನ್ ಮಣಿಹದಲ್ಲಿ ತೊಡಗಿಸಿಕೊಂಡು ಜಗತ್ತಿನ ಇತಿಹಾಸಕ್ಕೆ ಅದ್ಭುತ ಕೊಡುಗೆ ನೀಡಿದರು.ಹಾಗೆಯೇ ಇತರ ಶಿವಶರಣರು ಒಬ್ಬೊಬ್ಬರಾಗಿ ತಮ್ಮ ಜೀವಿತಾವಧಿಯಲ್ಲಿ ತಮ್ಮ ವ್ಯಕ್ತಿತ್ವದ ಬೆಳಕಿನಲ್ಲಿ ಮರ್ತ್ಯವನ್ನು ಶಿವನ ಮಹಾಮನೆಯನ್ನಾಗಿ ಪರಿವರ್ತಿಸಲು ಪ್ರಯತ್ನಿಸಿದ್ದಾರೆ.

ಶಿವಶರಣರು ಪ್ರಪಂಚವನ್ನು ಪರಶಿವನ ನೆಲೆ ಎಂದೇ ಭಾವಿಸುತ್ತಾರೆಯೇ ಹೊರತು ಪ್ರಪಂಚವು ಪರಮಾತ್ಮನಿಂದ ಭಿನ್ನವಾದುದು ಎಂದು ಬಗೆಯುವುದಿಲ್ಲ.ತಮ್ಮ ನಡೆ ನುಡಿಗಳಿಂದ ಪ್ರಪಂಚವನ್ನೇ ಪಾರಮಾರ್ಥವನ್ನಾಗಿಸುವ ಅಪೂರ್ವ ಸಿದ್ಧಿಪುರುಷರು ಶಿವಶರಣರು.ಶಿವಶರಣರ ಬದುಕು ಶಿವಾರ್ಪಣವಾದ ಬದುಕು ಆದುದರಿಂದ ಒಡಲಿಲ್ಲದ ಶಿವನು ತನ್ನ ಭಕ್ತರದೇಹವನ್ನೇ ತನ್ನ ಶರೀರವೆಂದು ಬಗೆಯುತ್ತಾನೆ,ಶರಣನದೇಹದಲ್ಲಿ ಶಿವನ ದಿವ್ಯತ್ವವು ಇಳಿದು ಲೀಲೆಯಾಡುತ್ತದೆ.ಹೀಗಾಗಿ ಶಿವಶರಣರು ಮಾಡಿದುದೆಲ್ಲವೂ ಶಿವಲೀಲೆಯಾಗುತ್ತದೆ.ಶಿವಶರಣರಿಗೆ ಪ್ರಕೃತಿಯ ಮೇಲೆ ಪ್ರಭುತ್ವವು ಪ್ರಾಪ್ತವಾಗಿ ಅವರು ನುಡಿದದ್ದು ನಡೆಯುತ್ತದೆ,ಹಿಡಿದ ಕಾರ್ಯ ಸಾಧಿಸುತ್ತದೆ.ಇದೇ ಶಿವಬೆಡಗು.

ಶಿವಶರಣರು ಮರ್ತ್ಯವನ್ನು ಕರ್ಮಭೂಮಿ ಎಂದು ನೋಡುವುದಿಲ್ಲ; ಬದಲಿಗೆ ಇದುವೇ ಶಿವಧರ್ಮಭೂಮಿ ಎಂದು ಬಗೆಯುತ್ತಾರೆ.ಮರ್ತ್ಯವೇ ಮಹಾದೇವನನ್ನು ಒಲಿಸುವ ಪುಣ್ಯಭೂಮಿ ಎಂದು ತಿಳಿಯುತ್ತಾರೆ.ತಮ್ಮ ಸಾಧನೆ- ಸಿದ್ಧಿಗಳಿಂದ ಕರ್ಮಭೂಮಿಯನ್ನು ಧರ್ಮಭೂಮಿಯನ್ನಾಗಿಸುತ್ತಾರೆ.ತಮ್ಮ ಶುದ್ಧವ್ಯಕ್ತಿತ್ವದ ಪ್ರಭಾವದಿಂದ ಜಗತ್ತನ್ನು ಪ್ರೇರೇಪಿಸುತ್ತಾರೆ,ಶುದ್ಧಿಗೊಳಿಸುತ್ತಾರೆ.ಶಿವಶರಣರ ಜೀವನ ಗಂಗಾನದಿಯಂತೆ.ಗಂಗಾನದಿಯು ತನ್ನಲ್ಲಿ ಮುಳುಗಿದವರನ್ನು ಶುಚಿಗೊಳಿಸುವಂತೆ ಶಿವಶರಣರ ಸಾನ್ನಿಧ್ಯವನ್ನರಸಿ ಬಂದವರು,ಶಿವಶರಣರ ಸಂಪರ್ಕಕ್ಕೆ ಬಂದವರು ಪಾವನರಾಗುತ್ತಾರೆ,ಪರಿಶುದ್ಧರಾಗುತ್ತಾರೆ; ಸಿದ್ಧರೂ ಆಗುತ್ತಾರೆ.ಸೂರ್ಯೋದಯವಾದೊಡನೆ ಕತ್ತಲೆಯು ಕರಗುವಂತೆ ಶಿವಶರಣರು ತಾವಿದ್ದ ಪರಿಸರವನ್ನು ತಮ್ಮ ಶುದ್ಧವ್ಯಕ್ತಿತ್ವದಿಂದ ಪ್ರಭಾವಿತಗೊಳಿಸುತ್ತಾರೆ,ತಮ್ಮಶಿವಸಿದ್ಧ ವ್ಯಕ್ತಿತ್ವದಿಂದ ಬೆಳಗಿ ಮನೆಮನೆಗಳಲ್ಲಿ ಶಿವಜ್ಯೋತಿಯ ಬೆಳಕನ್ನು ಪಸರಿಸುತ್ತಾರೆ.ಶಿವಶರಣರು ಹಚ್ಚುವ ಶಿವಜ್ಯೋತಿಯ ಬೆಳಗು ತತ್ಕಾಲದಲ್ಲಿ ಆ ಪ್ರದೇಶವನ್ನು ಬೆಳಗಿದರೂ ಕಾಲಾನಂತರದಲ್ಲಿ ಕಾಲದೇಶಾತೀತವಾದ ಜಗಜ್ಜ್ಯೋತಿಯಾಗಿ ಬೆಳಗುತ್ತದೆ.ಶಿವಶರಣರ ಪ್ರಸಾದಮಯಬಾಳು ಲೋಕಕ್ಕೆ ಆದರ್ಶವಾಗುತ್ತದೆ.

‌‌07.06.2022