ಗ್ರೀನ್ ರಾಯಚೂರು ಸಂಸ್ಥೆಗೆ ರಾಜ್ಯ ಅರಣ್ಯ ಇಲಾಖೆಯಿಂದ ‘ಪರಿಸರ ಪ್ರಶಸ್ತಿ’

ಗ್ರೀನ್ ರಾಯಚೂರು ಸಂಸ್ಥೆಗೆ ರಾಜ್ಯ ಅರಣ್ಯ ಇಲಾಖೆಯಿಂದ ‘ಪರಿಸರ ಪ್ರಶಸ್ತಿ’ 

ರಾಯಚೂರು, ಜೂ.05: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ರಾಜ್ಯ ಸರ್ಕಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗ್ರೀನ್ ರಾಯಚೂರು ಸಂಸ್ಥೆಗೆ ‘ಪರಿಸರ ಪ್ರಶಸ್ತಿ’ ಪ್ರಧಾನ ಮಾಡಲಾಯಿತು. ಗ್ರೀನ್ ರಾಯಚೂರು ಸಂಸ್ಥೆಯ ಗೌರವ ಅಧ್ಯಕ್ಷರಾದ ಕೊಂಡ ಕೃಷ್ಣಮೂರ್ತಿಯವರು ರಾಜ್ಯ‌ ಪ್ರವಾಸೋದ್ಯಮ, ಪರಿಸರ ಮತ್ತು ಅರಣ್ಯ ಸಚಿವರಾದ ಆನಂದ್ ಸಿಂಗ್ ಅವರಿಂದ ಪ್ರಶಸ್ತಿ ಹಾಗೂ ಸನ್ಮಾನ ಸ್ವೀಕರಿಸಿದರು.

ಕರ್ನಾಟಕ ರಾಜ್ಯ ಪರಿಸರ ಮತ್ತು ಅರಣ್ಯ ಇಲಾಖೆ ನೀಡುವ ರಾಜ್ಯ ಮಟ್ಟದ ಪ್ರಶಸ್ತಿ ಇದಾಗಿದ್ದು, ಒಂದು ಲಕ್ಷ ರೂಪಾಯಿ ನಗದು ಹಣ ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ. ಪ್ರತಿ ವರ್ಷ ವಿವಿಧ ಜಿಲ್ಲೆಗಳಿಂದ ಕೂಡಿದ ಒಟ್ಟು ಮೂರು ವಲಯಗಳಿಗೆ ಒಂದರಂತೆ(ಪರಿಸರ ಸಂರಕ್ಷಣೆ ಮತ್ತು ವ್ಯವಸ್ಥಾಪನೆಯಲ್ಲಿ ಅನನ್ಯ ಸೇವೆ ಮಾಡಿರುವ ವ್ಯಕ್ತಿ/ಸಂಸ್ಥೆ) ಈ ಪರಿಸರ ಪ್ರಶಸ್ತಿಯನ್ನು ನೀಡಲಾಗುತ್ತದೆ. ಬೆಳಗಾವಿ, ವಿಜಯಪುರ, ಹಾವೇರಿ, ಧಾರವಾಡ, ಗದಗ, ಬಾಗಲಕೋಟೆ ಒಳಗೊಂಡಂತೆ ಕಲ್ಯಾಣ ಕರ್ನಾಟಕದ ಏಳೂ ಜಿಲ್ಲೆಗಳನ್ನು ಒಳೊಗೊಂಡಿರುವ ವಲಯಕ್ಕೆ ರಾಯಚೂರು ಜಿಲ್ಲೆಯ ಸಂಸ್ಥೆಯೊಂದು ಆಯ್ಕೆಯಾಗಿರುವುದು ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ.

ರಾಜ್ಯ ಮಟ್ಟದಲ್ಲಿ ಆಯೋಜಿಸಿದ್ದ ಈ ವಿಶ್ವ ಪರಿಸರ ದಿನಾಚರಣೆ ಹಾಗೂ ಪ್ರಶಸ್ತಿ ವಿತರಣೆ ಕಾರ್ಯಕ್ರಮದಲ್ಲಿ ಕೇಂದ್ರ‌ ಸರ್ಕಾರದ ಪೋಸ್ಟ್ ಮಾಸ್ಟರ್ ಜನರಲ್ ಎಲ್.ಕೆ.ದಾಸ್, ಪರಿಸರ ಮತ್ತು ಅರಣ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಪ್ರಧಾನ ಕಾರ್ಯದರ್ಶಿ ವಿಜಯ ಮೋಹನ್ ರಾಜ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ ಶ್ರೀಶಾಂತ್ ಎ.ತಿಮ್ಮಯ್ಯ, ಸದಸ್ಯ ಕಾರ್ಯದರ್ಶಿ ಸೇರಿದಂತೆ ಇನ್ನಿತರರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಗ್ರೀನ್ ರಾಯಚೂರು ಸಂಸ್ಥೆಯ ಅಧ್ಯಕ್ಷೆ ಸರಸ್ವತಿ ಕಿಲಿಕಿಲೆ, ಉಪಾಧ್ಯಕ್ಷರಾದ ಡಾ. ಸಿ.ವಿ.‌ಪಾಟೀಲ್, ಕಾರ್ಯದರ್ಶಿ ರಾಜೇಂದ್ರ ಕುಮಾರ್ ಎಸ್.ಶಿವಾಳೆ, ಲಾಲಜಿ ಪಟೇಲ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ವಿಶ್ವ ಈಗಿರುವ ಪರಿಸ್ಥಿತಿಯಲ್ಲಿ ಪರಿಸರ ಸಂರಕ್ಷಣೆ ಮಾಡಬೇಕಿರುವುದು ಉಳಿದೆಲ್ಲದವುಕ್ಕಿಂತ ಹೆಚ್ಚು ಮಹತ್ವ ಪಡೆದಿರುವ ಸಂಗತಿಯಾಗಿದೆ. ಮನುಷ್ಯ ಕುಲದ ಭವಿಷ್ಯವೇ ಪರಿಸರದ ಮೇಲೆ ನಿಂತಿದೆ. ಹಾಗಾಗಿ ಈ ಪವಿತ್ರ ಕಾರ್ಯವನ್ನು ಹೆಸರು, ಹಣ, ಪ್ರತಿಷ್ಠೆ ಅಥವಾ ಇನ್ಯಾವುದೇ ಫಲಾಪೇಕ್ಷೆ ಇಲ್ಲದೇ ಕಳೆದ ಐದಾರು ವರ್ಷಗಳಿಂದ ಗ್ರೀನ್ ರಾಯಚೂರು ಮಾಡಿಕೊಂಡು ಬಂದಿದೆ. ಇತ್ತೀಚೆಗೆ ರಾಯಚೂರಿನ ಶಿಲ್ಪಾ ಫೌಂಡೇಶನ್ ಹಾಗೂ ಅದರ ಸಂಸ್ಥಾಪಕ ಅಧ್ಯಕ್ಷರಾತ ವಿಷ್ಣುಕಾಂತ.ಸಿ.ಬುತಡ ಅವರು ನಮ್ಮ ಸಂಸ್ಥೆಯೊಂದಿಗೆ ಸಮಸಮನಾಗಿ ಕೈಜೋಡಿಸಿ, ಬೆನ್ನಿಗೆ ನಿಂತಿರುವುದು ನಮ್ಮ ಸೇವೆಯನ್ನು ಇನ್ನೂ ಹೆಚ್ಚು ಭದ್ರವಾಗಿಸಿದೆ. ನಮ್ಮ ಈ ಎಲ್ಲಾ ಕಾರ್ಯವನ್ನು ಸರ್ಕಾರ ಗುರುತಿಸಿರುವುದು ಹಾಗೂ ಪರಿಸರ ಪ್ರಶಸ್ತಿ ನೀಡಿ ಸನ್ಮಾನಿಸಿರುವುದು ಅತ್ಯಂತ ಖುಷಿ ತಂದಿದೆ ಜೊತೆಗೆ ನಮ್ಮೆಲ್ಲರ ಜವಾಬ್ದಾರಿಯನ್ನು ಇನ್ನೂ ಹೆಚ್ಚಿಸಿದೆ ಎಂದು ಗ್ರೀನ್ ರಾಯಚೂರು ಸಂಸ್ಥೆಯ ಅಧ್ಯಕ್ಷೆ ಸರಸ್ವತಿ ಕಿಲಿಕಿಲೆ ಪ್ರತಿಕ್ರಿಯೆ ನೀಡಿದ್ದಾರೆ.

ಗಿಡಗಳನ್ನು ನೆಡುವುದು, ಅವುಗಳಿಗೆ ಪ್ರತಿನಿತ್ಯ ನೀರುಣಿಸುವುದು ಹಾಗೂ ಹಾನಿಯಾಗದಂತೆ ನಿರ್ವಹಿಸುವುದು ಇದೆಲ್ಲ ತುಂಬಾ ಶ್ರಮದಾಯಕ ಕೆಲಸ. ಇಂತಹ ಕೆಲಸವನ್ನು ನಮ್ಮ ಗ್ರೀನ್ ರಾಯಚೂರು ಸಂಸ್ಥೆ ಎಡಬಿಡದೇ ಪ್ರತಿನಿತ್ಯ ಮಾಡಿಕೊಂಡು ಬರುತ್ತಿದೆ.‌ ಇಂದು ರಾಯಚೂರು ನಗರ ಸೇರಿದಂತೆ ಸಿತ್ತಮುತ್ತಲ ಪ್ರದೇಶದಲ್ಲಿ ಲಕ್ಷಾಂತ ಗಿಡಗಳನ್ನು ನೆಟ್ಟು, ಒಂದಿಷ್ಟು ಹಸರೀಕರಣ ಮಾಡಲು ಸಾಧ್ಯವಾಗಿದ್ದರೆ ಅದಕ್ಕೆ ನಮ್ಮ ರಾಯಚೂರಿನ ನಾಗರೀಕರು, ಗಣ್ಯರು, ರಾಜಕಾರಣಿಗಳು ಹಾಗೂ ಅಧಿಕಾರಿಗಳ ಸಹಕಾರ ಕೂಡ ಕಾರಣ ಎಂದು ಗ್ರೀನ್ ರಾಯಚೂರು ಸಂಸ್ಥೆಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಎಸ್.ಶಿವಾಳೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಸುದ್ದಿ – ವಿಜಯ್ ಸರೋದೆ