ಮಹಾತಪಸ್ವಿ ಶ್ರೀಕುಮಾರಸ್ವಾಮಿಯವರ ಮಹೋಪದೇಶಗಳು –೧೨ : ” ಸಂಸಾರವು ಮಾಯೆಯಲ್ಲ,ಬಂಧನವಲ್ಲ; ಭಗವಂತನ ಲೀಲೆ” – ಮುಕ್ಕಣ್ಣ ಕರಿಗಾರ

ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳು

ಮಹಾತಪಸ್ವಿ ಶ್ರೀಕುಮಾರಸ್ವಾಮಿಯವರ ಮಹೋಪದೇಶಗಳು –೧೨

” ಸಂಸಾರವು ಮಾಯೆಯಲ್ಲ,ಬಂಧನವಲ್ಲ; ಭಗವಂತನ ಲೀಲೆ”

ಮುಕ್ಕಣ್ಣ ಕರಿಗಾರ

ಗುರುದೇವ ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳವರು ಉತ್ತಮಸಮಾಜ ನಿರ್ಮಾಣದಲ್ಲಿ ಸಾಹಿತ್ಯವು ಮಹತ್ವದ ಪಾತ್ರವಹಿಸುತ್ತದೆ ಎಂದು ನಂಬಿದ್ದರಲ್ಲದೆ ಲೋಕಕಲ್ಯಾಣವನ್ನೇ ಗುರಿಯಾಗಿ ಉಳ್ಳ ಸಾಹಿತ್ಯವೇ ಶ್ರೇಷ್ಠ ಸಾಹಿತ್ಯ ಎನ್ನುತ್ತಿದ್ದರು.ಸಾಹಿತ್ಯದಿಂದ ಜನಮನವನ್ನು ತಿದ್ದಿತೀಡಿ ಮುನ್ನಡೆಸಬೇಕಾದ ಹೊಣೆಗಾರಿಕೆಯುಳ್ಳ ಸಾಹಿತಿ ಸಮಾಜದಲ್ಲಿ ಸದಭಿರುಚಿಯನ್ನು ಪ್ರೇರೇಪಿಸಬೇಕು,ಸಕಾರಾತ್ಮಕ ಭಾವನೆ ಮೈಗೂಡಿಸಿಕೊಳ್ಳುವಂತೆ ಜನರಿಗೆ ಸ್ಫೂರ್ತಿಯಾಗಬೇಕು ಎನ್ನುತ್ತಿದ್ದರು.ಸಾರ್ಥಕ ಸಾಹಿತ್ಯ ಮತ್ತು ಸಾಹಿತಿಗಳ ಸಾಮಾಜಿಕ ಹೊಣೆಗಾರಿಕೆಯನ್ನು ಕುರಿತು ಗುರುದೇವ ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳವರು ಆಡಿದ ಮಾತು ಸಾಹಿತಿಗಳಿಗೆ ಮಾತ್ರವಲ್ಲದೆ ಮನುಷ್ಯ ಸಮಾಜದ ಎಲ್ಲರ ಬದುಕುಗಳನ್ನು ಅರಳಿಸಬಲ್ಲ ಮಾತು–“ಸಂಸಾರವೆಂಬುದು ಸೆರೆಮನೆಯಲ್ಲ,ಮಾಯೆಯಲ್ಲ,ಬಲೆಯಲ್ಲ,ಬಂಧನವಲ್ಲ; ಅದೊಂದು ಲೀಲೆ ಎಂದು ಭಾವನೆಗೊಂಡು ಭೋಗಹೊಂದುವ ಯೋಗಿಗಳೇ ರಸಿಕ ಶಿಖಾಮಣಿಗಳು.ಇವರೇ ಸಹೃದಯಿಗಳು”

ಸಂಸಾರದ ಬಗೆಗೆ ಜನರು ಎಂತಹ ದೃಷ್ಟಿಯುಳ್ಳವರಾಗಿರಬೇಕು ಎನ್ನುವ ಲೋಕೋಪದೇಶದ ಮಾತಿದು.ಸಂಸಾರವನ್ನು ಒದ್ದು ಹೋಗುವುದು ಬುದ್ಧಿವಂತಿಕೆಯಲ್ಲ; ಸಂಸಾರದಲ್ಲಿ ಇದ್ದು ಗೆಲ್ಲುವುದೇ ದೊಡ್ಡಸ್ತಿಕೆ.ಸಂಸಾರವನ್ನು ತೊರೆದು ಹೋಗಿ,ಸಾಧಿಸುವ ಹಿರಿಮೆಯಾದರೂ ಏನು ? ಸಂಸಾರವು ಸೆರೆಮನೆಯಲ್ಲ,ಪರಮಾತ್ಮನ ಗರಡಿ ಮನೆ.ಈ ಗರಡಿಮನೆಯಲ್ಲಿ ಕುಸ್ತಿಪಟುಗಳಾಗಿ ಗೆದ್ದವರೇ ಪ್ರಪಂಚದಲ್ಲಿ ಗೆಲ್ಲುತ್ತಾರೆ.ಸಂಸಾರವು ಮಾಯೆಯಲ್ಲ.ಸಂಸಾರದಿಂದಲೇ ಇತರ ಆಶ್ರಮಗಳು,ಜಗತ್ತಿನ ವ್ಯವಹಾರಗಳಿಗೆ ನೆಲೆ- ಬೆಲೆಗಳಿರುವುದರಿಂದ ಸಂಸಾರವು ಸಕಲಕ್ಕೂ ಆಧಾರಸ್ತಂಭ.ಸಂಸಾರವನ್ನು ಮಾಯೆಯ ಬಲೆ ಎಂದು ಭಾವಿಸುವುದಾಗಲಿ,ಬಂಧನ ಎಂದು ಭ್ರಮಿಸುವುದಾಗಲಿ ಅಲ್ಲದ ಮಾತು,ಸಲ್ಲದ ನಡೆ.ಸಂಸಾರವನ್ನು ಭಗವಂತನ ಲೀಲೆ ಎಂದೇ ತಿಳಿದುಕೊಂಡು ಅದನ್ನು ಆನಂದಿಸಬೇಕು.ಮಡದಿ- ಮಕ್ಕಳು,ಬಂಧು- ಬಾಂಧವರು,ನೆಂಟರು- ಇಷ್ಟರುಗಳೊಂದಿಗೆ ಪ್ರೀತಿ,ವಾತ್ಸಲ್ಯ,ಮಮತೆಗಳಿಂದ ವರ್ತಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಬೇಕು.ಸಂಸಾರವು ಪರಮಾತ್ಮನ ಲೀಲೆ ಎಂದು ಸಂಸಾರ ಸುಖವನ್ನು ಅನುಭವಿಸುವ ರಸಚಕ್ರವರ್ತಿಗಳೇ ಯೋಗಿಗಳು.ಸಂಸಾರ ಸುಖದ ಸಾರವನ್ನನುಭವಿಸುವರೆ ರಸಸಾಮ್ರಾಟರು,ಸಹೃದಯಿಗಳು.

ಗುರುದೇವ ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳವರು ‘ಸಂಸಾರವನ್ನು ಲೀಲೆ ಎಂದಿದ್ದಾರೆ’ ಎನ್ನುವುದು ಗಮನಿಸಬೇಕಾದ ಮಾತು.ಕಾಷಾಯಾಂಬರವನ್ನು ತೊಟ್ಟೊಡನೆ ಮುಕ್ತರಾದೆವು ಎಂದು ಭ್ರಮಿಸಿ,ಸಂಸಾರ ಮಾಯೆ,ಅದನ್ನು ತ್ಯಜಿಸಬೇಕು ಹಾಗೆ ಹೀಗೆ ಗಳಹುವ ವ್ಯರ್ಥೋಪದೇಶಕರುಗಳ ನಡುವೆ ಭಾರತೀಯ ಯೋಗಪರಂಪರೆಗಳಲ್ಲೆಲ್ಲ ಪಳಗಿ,ಹಠಯೋಗದ ತುಟ್ಟತುದಿಗೇರಿ ,ವೈರಾಗ್ಯದ ಮಹೋದಧಿ ಎನ್ನಿಸಿದ್ದ ಮಹಾತಪಸ್ವಿಯವರು ಲೋಕಜನರಿಗೆ ಪರಮಾತ್ಮನ ಪಥದಲ್ಲಿ ನಡೆದು ಮುಕ್ತರಾಗಲು ಸಂಸಾರವು ತೊಡಕಲ್ಲ ಎನ್ನುವುದನ್ನು ಸಾರಿ,ಪರಮಾತ್ಮ ಸಾಕ್ಷಾತ್ಕಾರದ ದಾರಿ ತೋರಿದ್ದಾರೆ.ಪ್ರಪಂಚವು ಪರಮಾತ್ಮನ ಲೀಲೆ.ಹಾಗೆಯೇ ಸಂಸಾರವೂ ಪರಮಾತ್ಮನದೇ ಲೀಲೆ.ತನ್ನ ಸೃಷ್ಟಿಯು ಸುಲಲಿತವಾಗಿ,ಸಂತುಲಿತವಾಗಿ ಮುಂದುವರೆಯಲು ಪರಮಾತ್ಮನೇ ಸಂಕಲ್ಪಿಸಿದ್ದಾನೆ ಗಂಡು- ಹೆಣ್ಣುಗಳ ಸಮ್ಮಿಲನದ ಸಮಾಗಮ ಯೋಗವನ್ನು! ಸಂಸಾರ ಭೋಗವೂ ಒಂದು ಯೋಗವೆ! ಕಾಮಸುಖವನ್ನನುಭವಿಸದೆ ಇಂದ್ರಿಯ ನಿಗ್ರಹಿಸಿದೆವು ಎನ್ನುವುದು ಆತ್ಮವಂಚನೆ ಇಲ್ಲವೆ ಮೋಸ.ಅತ್ಯುಗ್ರಯೋಗಸಾಧಕರುಗಳು ಮಾತ್ರ ಇಂದ್ರಿಯವನ್ನು ನಿಗ್ರಹಿಸಬಲ್ಲರಲ್ಲದೆ ಹಾದಿಬೀದಿಯ ಕೋಲೆಬಸವಗಳೆಲ್ಲ ಮಾಯೆಯ ಸೆರಗಿನ ಸೆಳೆತಕ್ಕೆ ಸಿಕ್ಕವರೆ.ಇಂದ್ರಿಯ ನಿಗ್ರಹವೆನ್ನುವುದು ಸುಲಭವಲ್ಲ,ಅದರ ಅಗತ್ಯವೂ ಇಲ್ಲ ಎನ್ನುವುದನ್ನು ಬಸವಣ್ಣನವರು ‘ ಇಂದ್ರಿಯ ನಿಗ್ರಹವ ಮಾಡಿದರೆ ಹೊಂದುವವು ದೋಷಂಗಳು,ಮುಂದೆ ಬಂದು ಕಾಡುವವು ಪಂಚಮಹಾಪಾತಕಗಳು’ ಎಂದು ಹಾಡಿ ಜಗತ್ತಿಗೆ ಪಥದೋರಿದ್ದಾರೆ.ಇಂದ್ರಿಯ ನಿಗ್ರಹ,ಕಾಮನಿಗ್ರಹ ಎನ್ನುವುದು ಬರಿ ಬಾಯಿ ಮಾತಿನ ಚಪಲವಲ್ಲದೆ ಗೆಲ್ಲಲಾಗದು ಕಾಮನನ್ನು.ಉಪ್ಪು,ಹುಳಿ,ಖಾರ ತಿಂದ ದೇಹ ಸಪ್ಪಗೆ ಕುಳಿತುಕೊಳ್ಳುವುದೆ? ಬದಾಮಿ,ಉತ್ತುತ್ತಿ,ಗೋಡಂಬಿ ಪಿಸ್ತ,ಕಜ್ಜೂರಗಳಂತಹ ಪದಾರ್ಥಗಳನ್ನು ಸೇವಿಸಿ ‘ ನಾನು ಸಂನ್ಯಾಸಿ,ಇಂದ್ರಿಯಗಳನ್ನು ನಿಗ್ರಹಿಸಿದ್ದೇನೆ’ ಎಂದರೆ ನಂಬಬಹುದೆ? ಕಂಡವರ ಮನೆಗಳ ಮದುವೆ,ಶುಭ ಶೋಭನಾದಿ ಕಾರಣಗಳೆಂದು ಕಂಡಕಡೆ ಸುತ್ತಿ, ಮನಬಂದುದ ತಿಂದು,ಮನಬಯಸಿದುದ ನೋಡಿ,ಜಿಹ್ವಾಚಾಪಲ್ಯಕ್ಕೆ ಈಡಾಗಿ ಬಿದ್ದು ಒದ್ದಾಡುವವರು ನಿಗ್ರಹಿಸಬಲ್ಲರೆ ಇಂದ್ರಿಯವನ್ನು? ಇಂದ್ರಿಯ ನಿಗ್ರಹ ಮಾಡಿದ್ದೇನೆ ಎನ್ನುವುದು ಕಪಟ,ಮೋಸ,ಹಸಿ ಸುಳ್ಳು.ಜನರನ್ನು ಸುಳ್ಳು ಹೇಳಿ ವಂಚಿಸಬಹುದಲ್ಲದೆ ಆತ್ಮಸಾಕ್ಷಿಯನ್ನು ವಂಚಿಸಲಾಗದು.ಇಂದ್ರಿಯ ನಿಗ್ರಹ,ಕಾಮನಿಗ್ರಹ ಎಂದು ಬಡಬಡಿಸಿ,ಬಿದ್ದು ಒದ್ದಾಡುವ ಬದಲು ಅನುಭವಿಸಿದರಾಯಿತಲ್ಲ ಸಂಸಾರ ಸುಖವನ್ನು.ಕಾಮನನ್ನು ಬಳಸಿ ಗೆಲ್ಲಬೇಕದೆ,ಬಳಸದೆ ಕೊಲ್ಲಲಾಗದು.

ಸಂಸಾರವನ್ನು ನೋಡುವ ದೃಷ್ಟಿ ಬದಲಾಗಬೇಕು.ಸಂಸಾರ ಕೆಟ್ಟದಲ್ಲ,ಪರಮಾತ್ಮನ ಸಂಕಲ್ಪ.ಮಡದಿ ಮಕ್ಕಳ ಮೋಹ ವ್ಯಾಮೋಹಗಳನ್ನು ಹುಟ್ಟಿಸಿದವನೂ ಪರಮಾತ್ಮನೇ ಅಲ್ಲವೆ? ಎಳೆಮಗು ತನ್ನ ತಾಯಿ ತಂದೆಯರನ್ನು ಗುರುತಿಸುತ್ತದೆ.ಹೇಗೆ? ಪರಮಾತ್ಮನು ಇತ್ತ ಕರುಳಬಳ್ಳಿಯ ಸಂಬಂಧದ ಸೊಗಸು ಅದು.ಪ್ರಪಂಚದ ಜ್ಞಾನವೇ ಇಲ್ಲದ ಮಗು ತನ್ನ ತಾಯಿ- ತಂದೆಯರನ್ನು ಕಂಡು ನಗುತ್ತದೆ,ತೆವಳುತ್ತ ಅವರ ಬಳಿ ಸಾರುತ್ತದೆ.ಆ ಎಳೆ ಮಗುವಿಗೆ ತಂದೆ- ತಾಯಿ ಎಂದು ಹೇಳಿಕೊಟ್ಟವರು ಯಾರು ? ಮಗು ದಿನಗಳೆದಂತೆ ಅಮ್ಮಾ,ಅಪ್ಪಾ,ತಾತಾ,ಅವ್ವ,ಮಾಮಾ ಮೊದಲಾದ ತೊದಲುನುಡಿಗಳನ್ನಾಡುತ್ತದೆ.ಇವುಗಳನ್ನು ಪುಟ್ಟಮಗುವಿಗೆ ಕಲಿಸಿದವರು ಯಾರು? ಇದೆಲ್ಲವೂ ಪರಮಾತ್ಮನ ಲೀಲೆ! ಪರಮಾತ್ಮನ ಈ ಲೀಲೆಯ ಆನಂದವನ್ನು ಅನುಭವಿಸದೆ ‘ಸಂಸಾರ ಮಾಯೆ, ಸಂಸಾರವನ್ನು ಒದ್ದು ಬಂದೆ’ ಎನ್ನುವ ಅಣ್ಣಗಳು ಸಾಧಿಸುವುದಾದರೂ ಏನನ್ನು?ಮಗು ತನ್ನ ಪುಟ್ಟ ಬಾಯಿಂದ ಅಪ್ಪ ಎಂದು ಕರೆದಾಗ ಉಂಟಾಗುವ ಆನಂದ ನೂರು,ಸಾವಿರ ಜನ ವಂದಿಸುವ ಗೌರವಕ್ಕೆ ಸಮನಲ್ಲ.ಪ್ರಪಂಚವನ್ನು ಪರಮಾತ್ಮನ ಲೀಲೆ ಎಂದು ಭಾವಿಸುವಂತೆ ಸಂಸಾರವೂ ನನ್ನ ಅದೃಷ್ಟವಶದಿಂದ ಒದಗಿ ಬಂದ ಪರಮಾತ್ಮನ ಲೀಲೆ,ಪರಮಾತ್ಮನ ಈ ಲೀಲೆಯನ್ನು ಅಲ್ಲಗಳೆಯದೆ ಆನಂದಿಸಿ, ಮುಕ್ತನಾಗುವೆ ಎಂಬ ನಿಜ ತಿಳಿವು ಮೂಡಬೇಕು.ಹೆಂಡಿರು ಮಕ್ಕಳ ಪಾಲನೆ- ಪೋಷಣೆಯ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಬೇಕು.ಸಂಸಾರಿಗನಾಗಿ,ಸಂಸಾರಸುಖವನ್ನು ಅನುಭವಿಸಿ ಆ ಸುಖದಿಂದ ಹೊರಗೆ ಬರಬೇಕು.ಅದುವೇ ನಿಜ ವಿರಕ್ತಿ.ಒಂದು ವಸ್ತುವನ್ನು ಬಟ್ಟೆಯಿಂದ ಮುಚ್ಚಿಟ್ಟಾಗ ‘ ಅದೇನು?’ ನೋಡಬೇಕು ಎನ್ನುವ ಕುತೂಹಲ ಉಂಟಾಗುವುದು ಸಹಜ.ಮುಚ್ಚಿದ ಬಟ್ಟೆಯನ್ನು ತೆಗೆದು ವಸ್ತುವನ್ನು ಕಾಣುವವರೆಗೆ ಆ ಕುತೂಹಲ ಇರುತ್ತದೆ.ಬಟ್ಟೆ ತೆಗೆದುನೋಡಿದಾಗ ಆ ವಸ್ತು ಅನ್ನವಾಗಿರಬಹುದು,ಹಣ್ಣುಹಂಪಲವಾಗಿರಬಹುದು ಮತ್ತೇನೇ ಆಗಿರಬಹುದು.ಓ! ಇದೇನಾ ಎನ್ನುವ ಭಾವನೆ ಬರುತ್ತದೆ.ಮುಚ್ಚಿಟ್ಟ ವಸ್ತುವನ್ನು ತೆರೆದು ನೋಡಿದಾಗ ಆ ವಸ್ತುವಿನ ಬಗೆಗೆ ಕುತೂಹಲ ಮರೆಯಾಗುತ್ತದೆ,ಆಸಕ್ತಿ ಇಲ್ಲವಾಗುತ್ತದೆ.ಹಾಗೆಯೇ ಇಂದ್ರಿಯ ನಿಗ್ರಹ,ಕಾಮನಿಗ್ರಹ ಎನ್ನುವುದು.ಅನುಭವಿಸಿ ಹೊರಬರಬೇಕಷ್ಟೆ,ಅಲ್ಲಿಯೇ ಸಿಕ್ಕು ಬೀಳಬಾರದು.ಸಂಸಾರದಲ್ಲಿದ್ದರೂ ಮನಸ್ಸು ಸದಾಶಿವನಲ್ಲಿ ನೆಲೆಗೊಂಡಿರಬೇಕು.ಹೆಂಡಿರು ಮಕ್ಕಳ ಜೊತೆ ಆಡುತ್ತ,ಮಾಡುತ್ತ ಎಲ್ಲ ಚಟುವಟಿಕೆಗಳನ್ನು ಮಾಡುತ್ತ ಇದ್ದಾಗಲೂ ಮನಸ್ಸು ಮಹಾದೇವನಲ್ಲಿ ನೆಲೆ ನಿಂತಿರಬೇಕು.ಇಷ್ಟಿದ್ದರೆ ಸಾಕಲ್ಲವೆ ? ಮತ್ತೆ ಸಂನ್ಯಾಸವೆಂಬ ಬೇರೆ ಸೋಗು ಬೇಕೆ ?ನೀನು ಸಂಸಾರಿಯೋ ಸಂನ್ಯಾಸಿಯೋ ಎಂಬುದು ಮುಖ್ಯವಲ್ಲ,ನಿನ್ನ ನಿಜಸ್ವರೂಪ ನೀನು ಅರಿತಿದ್ದಿಯಾ ಎನ್ನುವುದು ಮುಖ್ಯ.ಆಶ್ರಮವಲ್ಲ,ಆತ್ಮಶುದ್ಧಿಯಿಂದ ಪರಮಾತ್ಮನ ಸಾಕ್ಷಾತ್ಕಾರ.ಸಂಸಾರಸುಖವನ್ನನುಭವಿಸಿ ಮುಕ್ತರಾಗುವವರೇ ಮಹಾಂತರು,ಮಹಾತ್ಮರು.

ಸಂಸಾರದ ಭೋಗವನ್ನು ಅನುಭವಿಸುವ ‘ ಯೋಗಿಗಳೇ ರಸಿಕ ಶಿಖಾಮಣಿಗಳು’ ಎನ್ನುವ ಮಾತು ಮಿಗಿಲರರ್ಥ ಹೊಂದಿದೆ.ಪ್ರಪಂಚ ರಸಮಯವಾದುದು,ರಸಾತ್ಮಕವಾದುದು.ಸಂಸಾರದಲ್ಲಿ ರಸವಿದೆ.ಉಪ್ಪು,ಉಳಿ,ಒಗರು,ಖಾರವಾದಿ ರುಚಿಗಳಿವೆ.ಶೋಕ,ಆನಂದ,ಭಿಭತ್ಸವಾದಿ ನವರಸಗಳಿವೆ.ನವರಸಗಳಷ್ಟೇ ಅಲ್ಲ ಬೇಕಾದಷ್ಟು ರಸಗಳಿವೆ ಅವರವರ ಭಾವನೆಗಳಿಗೆ ತಕ್ಕಂತೆ.ಕೆಲವರಿಗೆ ಶೃಂಗಾರವು ರಸವಾದರೆ ಮತ್ತೆ ಕೆಲವರಿಗೆ ಭಕ್ತಿಯೂ ಒಂದು ರಸ.ಹಲವರು ಶಾಂತಿಯನ್ನು ರಸವೆಂದರೆ ಮತ್ತೆ ಕೆಲವರು ಕರುಣೆಯೂ ರಸವೆ ಎನ್ನುತ್ತಾರೆ.ರಸಗಳು ಒಂಬತ್ತೇ ಇರಲಿ,ನೂರೊಂಬತ್ತೇ ಇರಲಿ ಅವುಗಳನ್ನು ಅನುಭವಿಸಿ,ಆನಂದಿಸಬೇಕು.ರಸಾಸ್ವಾದನೆಯೇ ರಸಿಕಶಿಖಾಮಣಿಯ ಗುಟ್ಟು.ಪ್ರಪಂಚದಲ್ಲಿ ರಸಿಕರು ಗೆಲ್ಲುತ್ತಾರೆಯೇ ಹೊರತು ಅರಸಿಕರು ಗೆಲ್ಲಲಾರರು.

‘ ಸಹೃದಯ’ ಎನ್ನುವ ಮಾತು ಕೃತಿಯೊಂದರ ಓದುಗ ಇಲ್ಲವೆ ವಿಮರ್ಶಕನಿಗೆ ಸಂಬಂಧಿಸಿದೆ.ವಿಮರ್ಶಕನಲ್ಲಿ ಅಹಂ ಇರುತ್ತದೆಯಾದ್ದರಿಂದ ಅವನು ಶ್ರೇಷ್ಠನಲ್ಲ.ಆದರೆ ಕೃತಿಯೊಂದನ್ನು ಓದಿ,ಕವಿ- ಸಾಹಿತಿಯೊಂದಿಗೆ ಸಮರಸಹೊಂದುವ,ಸಹಮತ ವ್ಯಕ್ತಪಡಿಸುವ ಸಾಮಾನ್ಯ ಓದುಗನೇ ‘ ಸಹೃದಯ’ ನಾಗಿದ್ದು ಅವನೇ ಶ್ರೇಷ್ಠ.ಹೃದಯವು ಮಾತ್ರ ಹೃದಯವನ್ನು ಅರ್ಥಮಾಡಿಕೊಳ್ಳುತ್ತದೆ.ಹೃದಯದಿಂದ ಮೂಡಿದುದನ್ನು ಹೃದಯ ಉಳ್ಳವರೇ ಓದಿ,ಆನಂದಿಸುತ್ತಾರೆ.ಕವಿಯ ಹೃದಯದ ಭಾವನೆಗಳನ್ನು ಅರಿತು,ಆನಂದಿಸುವ ಸಹೃದಯನೇ ಹಿರಿಯ,ಬರಿಯ ವಾಗ್ವಾದ,ವಾಗಾಡಂಬರ ನಿಷ್ಠ ವಿಮರ್ಶಕ ಶ್ರೇಷ್ಠನಲ್ಲ,ಹಿರಿಯನಲ್ಲ.ಈ ಪ್ರಪಂಚವು ಪರಮಾತ್ಮನು ಬರೆದ ಪುಸ್ತಕ.ಪ್ರಪಂಚವೆಂಬ ಈ‌ ಪುಸ್ತಕದಲ್ಲಿ ಹಲವು ಹತ್ತು ಅದ್ಭುತ ರಸಗಳಿವೆ.ಆ ರಸಗಳನ್ನು ಅನುಭವಿಸಿ,ಪರಮಾತ್ಮನ ಲೀಲೆಯಾದ ಸೃಷ್ಟಿಯನ್ನು ಆನಂದಿಸುವವರೇ ಪರಮಾತ್ಮನ ಪುಸ್ತಕವನ್ನು ಓದಬಲ್ಲ ಸಹೃದಯರು.ಪರಮಾತ್ಮನ ಸೃಷ್ಟಿ ಲೀಲೆಯ ತತ್ತ್ವವನ್ನು ಬಲ್ಲವರೇ ರಸತತ್ತ್ವವಿದರು,ರಸ ತತ್ತ್ವಜ್ಞಾನಿಗಳು.ಪರಮಾತ್ಮನೆಂಬುದು ನೀರಸ ಪದಾರ್ಥವಲ್ಲ; ಮಹಾರಸಸಿದ್ಧನಿಹನು ಪರಮಾತ್ಮನು.ಪರಮಾತ್ಮನ ಸೃಷ್ಟಿಯಾದ ಪ್ರಪಂಚ ಮತ್ತು ಸಂಸಾರದ ರಸ,ರುಚಿಗಳನನ್ನುಭವಿಸಿ ಮಹದಾನಂದದ ಒಡಲಾದ ಪರಮಾತ್ಮನೊಳು ಒಡೆವರೆದು ಒಂದಾಗಬೇಕು.

06.06.2022