ಮಹಾತಪಸ್ವಿ ಶ್ರೀಕುಮಾರಸ್ವಾಮಿಯವರ ಮಹೋಪದೇಶಗಳು –೧೧: ಮರೆವು- ಅರಿವುಗಳಿಂದಲೇ ಭವಿ ಮತ್ತು ಭಕ್ತರು – ಮುಕ್ಕಣ್ಣ ಕರಿಗಾರ

ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳು

ಮಹಾತಪಸ್ವಿ ಶ್ರೀಕುಮಾರಸ್ವಾಮಿಯವರ ಮಹೋಪದೇಶಗಳು –೧೧

ಮರೆವು- ಅರಿವುಗಳಿಂದಲೇ ಭವಿ ಮತ್ತು ಭಕ್ತರು

ಮುಕ್ಕಣ್ಣ ಕರಿಗಾರ

ಗುರುದೇವ ಮಹಾತಪಸ್ವಿ ಶ್ರೀ ಕುಮಾರಸ್ವಾಮಿಗಳವರು ಮನುಷ್ಯ ಜೀವನದಲ್ಲಿ ಅರಿವಿನ ಮಹತ್ವದ ಬಗ್ಗೆ ವಿವರಿಸುತ್ತ ಮರೆವು ಮನುಷ್ಯರನ್ನು ಅಧಃಪತನಕ್ಕೆ ತಳ್ಳಿದರೆ ಅರಿವು ಅವನನ್ನು ಉನ್ನತಿಗೆ ಕೊಂಡೊಯ್ಯುತ್ತದೆ ಎನ್ನುತ್ತಿದ್ದರು.ಮರೆವಿನಿಂದ ಮುಕ್ತನಾಗಿ ಅರಿವಿನ ಪಥಹಿಡಿಯುವವರೇ ಶರಣರು ಎನ್ನುತ್ತಿದ್ದ ಗುರುದೇವ ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳವರು ಮರೆವು ಮತ್ತು ಅರಿವಿನ ಬಗ್ಗೆ ಹೇಳುತ್ತಿದ್ದ ಮಾತು,ಉಪದೇಶ ” ಜೀವಾತ್ಮನು ತನ್ನ ಇರುಹಿನಲ್ಲಿದ್ದು ಮರಹಿನ ಕಡೆಗೆ ಇಳಿದರೆ ಮಾನವನಾಗುವನು.ಅರುಹಿನ ಕಡೆಗೆ ಏರಿದರೆ ಶರಣನಾಗುವನು.ಮರವಿನಾಚರಣೆಯ ಮಾನವನಿಗೆ ಭವಿಯೆಂದೂ ಅರುಹಿನಾಚರಣೆಯ ಶರಣನಿಗೆ ಭಕ್ತನೆಂದೂ ಹೆಸರು “.

‘ ಅರಿತಡೆ ಶರಣ,ಮರೆತಡೆ ಮಾನವ’ ಎನ್ನುವ ಅನುಭಾವಿಗಳ ನುಡಿಯೊಂದಿದೆ.ಮನುಷ್ಯ ಜೀವನದಲ್ಲಿ ಮರೆವು- ಅರಿವುಗಳ ಮಹತ್ವವನ್ನು ಮನದುಂಬುವಂತೆ ವಿವರಿಸಿದ್ದಾರೆ ಗುರುದೇವರು.ಜೀವಾತ್ಮನು ತನ್ನ ಇರುವಿಕೆಯಲ್ಲಿ ಅಂದರೆ ಬಾಳಿನಲ್ಲಿ ಯಾವಕಡೆ ನಡೆಯುತ್ತಾನೆ ಎನ್ನುವ ಆಧಾರದಲ್ಲಿ ಅವನಗತಿ ನಿರ್ಧಾರವಾಗುತ್ತದೆ.ಬಾಳಿಗೆ’ ಸದ್ಗತಿ’ ಮತ್ತು ‘ ದುರ್ಗತಿ’ ಗಳೆಂಬ ದ್ವಿಮುಖಿ ಗತಿಸೂಚಕಪಥವಿದೆ.ಒಂದು ಆರೋಹಣವಾದರೆ ಮತ್ತೊಂದು ಅವರೋಹಣ.ಒಂದು ಏರಿದರೆ ಮತ್ತೊಂದು ಇಳಿಯುತ್ತದೆ.ಮರೆವು ಅಧಃಪತನಕ್ಕೆ ತಳ್ಳಿದರೆ ಅರಿವು ಉನ್ನತಿಗೆ ಕೊಂಡೊಯ್ಯುತ್ತದೆ.

ಮನುಷ್ಯ ಜೀವನವನ್ನು ” ಭವ” ಇಲ್ಲವೆ ” ಪ್ರಪಂಚ” ಎನ್ನಲಾಗುತ್ತದೆ.ಭವದಲ್ಲಿ ಇದ್ದವರು ಭವಿಗಳು;ಪ್ರಪಂಚದಲ್ಲಿ ಇದ್ದವರು ಪ್ರಾಪಂಚಿಕರು.ಪ್ರಪಂಚದಲ್ಲಿರುವ ಸಾಮಾನ್ಯ ಮಾನವರೆಲ್ಲರೂ ಭವಿಗಳೆ.ಪ್ರಪಂಚದಲ್ಲಿದ್ದು ಕೊಂಡು ಪರಮಾತ್ಮನ ಕಡೆ ನಡೆಯುವ ಅಪೇಕ್ಷೆ ಕೆಲವರಿಗಿದ್ದರೆ ಪರಮಾತ್ಮನಿಗೆ ವಿಮುಖರಾಗಿ ನಡೆಯುವವರು ಮತ್ತೆ ಕೆಲವರು.ಪರಮಾತ್ಮನ ಪಥದಲ್ಲಿ ನಡೆಯುವವರು ಭಕ್ತರಾದರೆ ಪರಮಾತ್ಮನ ಪಥದಿಂದ ವಿಮುಖರಾದವರೇ ಭವಿಗಳು.

ಪರಮಾರ್ಥದಕಡೆ ನಡೆಯುವವರು ಭಕ್ತರಾದರೆ ಪರಮಾರ್ಥದಿಂದ ದೂರವಾಗುವವರೇ ಭವಿಗಳು.ಮರೆವು ಮನುಷ್ಯರ ಸ್ವಭಾವವನ್ನು ಮರೆಮಾಚುತ್ತದೆ.ತಾನು ಪರಮಾತ್ಮಸ್ವರೂಪನು ಎನ್ನುವ ಅರಿವು ಮರೆಯಾಗಿ ತಾನು ಜೀವನು,ಪ್ರಪಂಚಿಕನು ಎನ್ನುವ ಅಜ್ಞಾನಕ್ಕೆ ವಶರಾಗಿ ಬಳಲುವುದೇ ಮರೆವು.ಮರೆವು ತನ್ನ ಸ್ವರೂಪಜ್ಞಾನಕ್ಕೆ ಅಡ್ಡಿಯಾಗುತ್ತದೆ.ಮರೆವಿನ ಪೊರೆಯನ್ನು ಹರಿದೊಗೆದರೆ ಅರಿವು ಕಣ್ತೆರೆಯುತ್ತದೆ.ಅರಿವಿನ ಪಥದಲ್ಲಿ ನಡೆಯುವುದರಿಂದ ಪರಮಾತ್ಮನನ್ನು ಪಡೆಯಬಹುದು.ಮರೆವಿನಿಂದ ಭವಿಯಾದರೆ ಅರಿವಿನಿಂದ ಶರಣನಾಗಿ,ಭಕ್ತನಾಗಿ ಭವಮುಕ್ತನಾಗುತ್ತಾನೆ.ಮರೆವು ಮೃತ್ಯುಪ್ರಪಂಚದ ಕಾರಣವಾದರೆ ಅರಿವು ಅಮರತ್ವದ ಹಾದಿ,ಅಮರ್ತ್ಯದ ಕಾರಣ.

‌06.06.2022