ಮಹಾತಪಸ್ವಿ ಶ್ರೀಕುಮಾರಸ್ವಾಮಿಯವರ ಮಹೋಪದೇಶಗಳು — ೦೬ : ಇಂದ್ರಿಯ ಭೋಗೋಪಭೋಗಗಳನ್ನು ಲಿಂಗರ್ಪಿಸುವುದೇ ಬ್ರಹ್ಮಸಾಕ್ಷಾತ್ಕಾರದ ರಹಸ್ಯ – ಮುಕ್ಕಣ್ಣ ಕರಿಗಾರ

ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳು

ಮಹಾತಪಸ್ವಿ ಶ್ರೀಕುಮಾರಸ್ವಾಮಿಯವರ ಮಹೋಪದೇಶಗಳು — ೦೬

ಇಂದ್ರಿಯ ಭೋಗೋಪಭೋಗಗಳನ್ನು ಲಿಂಗರ್ಪಿಸುವುದೇ ಬ್ರಹ್ಮಸಾಕ್ಷಾತ್ಕಾರದ ರಹಸ್ಯ

ಮುಕ್ಕಣ್ಣ ಕರಿಗಾರ

ಗುರುದೇವ ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳು ಮರ್ತ್ಯಲೋಕವೇ ಮಹಾದೇವನ ಮನೆ ಎಂದು ಭಾವಿಸಿದ್ದರಲ್ಲದೆ ತಮ್ಮ ಬಳಿ ಬಂದವರಿಗೆ ಮರ್ತ್ಯದ ಬದುಕನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಉಪದೇಶಿಸುತ್ತಿದ್ದರು.ಪ್ರಪಂಚದಲ್ಲಿ ಇದ್ದೇ ಪರಮಾತ್ಮನ ಅನುಗ್ರಹ ಪಡೆಯಬೇಕು ಎಂದು ಉಪದೇಶಿಸುತ್ತಿದ್ದರು.ಉಣ್ಣುವುದು,ಉಡುವುದು ಸೇರಿದಂತೆ ಇಂದ್ರಿಯಭೋಗೋಪಭೋಗಳನ್ನುಶಿವನಿಗೆ ಸಮರ್ಪಿಸಬೇಕು.ಆಗಬಾಳು ಶಿವಮಯವಾಗುತ್ತದೆ ; ಅಂಗಭೋಗವನ್ನು ಲಿಂಗಭೋಗವನ್ನಾಗಿಸುವುದೇ ಶಿವನೊಳು ಸಂಗಮಿಸಿ,ಒಂದಾಗುವ ಪರಿ ಎನ್ನುತ್ತಿದ್ದ ಗುರುದೇವರ ಉಪದೇಶವಾಕ್ಕಿದು –” ಬ್ರಹ್ಮ ಚಿಂತನೆಗೈಯ್ಯುವವರು ದೋಷದ ಸೆರಗು ತಾಕದಂತೆ ಇಂದ್ರಿಯ ಭೋಗವನ್ನೆಲ್ಲ ಲಿಂಗೋಪಭೋಗಗೊಳಿಸಿದಾಗ ಬ್ರಹ್ಮಸಾಧನೆಯಾಗುವುದು ಎಂಬುದನ್ನರಿತಿರಬೇಕು “.

ಬ್ರಹ್ಮಸಾಕ್ಷಾತ್ಕಾರಕ್ಕಾಗಿ ಕಾಡು, ಗುಡ್ಡ -ಗುಹೆಗಳಿಗೆ ಹೋಗಿ,ದೇಹದಂಡಿಸಿ ತಪಸ್ಸು ಮಾಡಬೇಕಾಗಿಲ್ಲ.ನಮ್ಮ ಬದುಕನ್ನೇ ಬ್ರಹ್ಮಮಯಮಾಡಿಕೊಳ್ಳಬೇಕು.ಮನುಷ್ಯರು ಭ್ರಮಾಧೀನರು.ಭ್ರಮಾಧೀನರಲ್ಲಿ ಬ್ರಹ್ಮಭಾವ ಮೊಳೆಯದು.ಬ್ರಹ್ಮಭಾವ ಮೊಳೆದಲ್ಲದೆ ಪರಬ್ರಹ್ಮನ ಸಾಕ್ಷಾತ್ಕಾರವಾಗದು.ಬದುಕು ಪರಮಾತ್ಮನ ಪ್ರಸಾದವೆಂದರಿತು ಪರಮಾತ್ಮನಿಂದ ಬಂದುದೆಲ್ಲವನ್ನು ಪರಮಾತ್ಮನಿಗೆ ಅರ್ಪಿಸಿ,ಪರಮಾತ್ಮನ ಅನುಗ್ರಹಕ್ಕೆ ಪಾತ್ರರಾಗಬೇಕು.ನಮಗೆ ಹಸಿವೆಯಾದಾಗ ಉಣ್ಣುತ್ತೇವೆ,ದಾಹವಾದಾಗ ನೀರು ಕುಡಿಯುತ್ತೇವೆ.ಬಟ್ಟೆ ಉಡುವುದು,ಉಡುಗೆ- ತೊಡುಗೆಗಳನ್ನು ಧರಿಸುವದನ್ನು ಮಾಡುತ್ತಿರುತ್ತೇವೆ ದಿನನಿತ್ಯದ ಬಾಳ ವ್ಯವಹಾರದಲ್ಲಿ.ಅನ್ನ,ನೀರು,ಗಾಳಿ,ಬೆಳಕು ಮತ್ತು ಆಕಾಶಗಳು ಮನುಷ್ಯರ ಬಾಳಿಗೆ ಆಸರೆಯಾದ ಭೂತಗಳೈದಾಗಿದ್ದು ಈ ಪಂಚಭೂತಗಳು ಪರಮಾತ್ಮ ನಿರ್ಮಿತ.ನಾವು ಉಣ್ಣುವ ಅನ್ನ ಪರಮಾತ್ಮನ ದಯೆ,ಕುಡಿಯುವ ನೀರು ಪರಮಾತ್ಮನ ಕೊಡುಗೆ,ಸೇವಿಸುವ ಗಾಳಿ ಪರಮಾತ್ಮನ ಅನುಗ್ರಹ,ಬೆಂಕಿ- ಬೆಳಕುಗಳು ಪರಮಾತ್ಮನ ಬಳುವಳಿ,ಮಳೆ- ಬೆಳೆಗಳು ಪರಮಾತ್ಮನ ಔದಾರ್ಯ .ನಮ್ಮ ಬದುಕು ಪರಮಾತ್ಮನ ಔದಾರ್ಯವನ್ನುಂಡು ಬೆಳೆಯುತ್ತಿದೆ.ಹಾಗಾಗಿ ಬದುಕಿನಲ್ಲಿ ಪರಮಾತ್ಮನಿಗೆ ಋಣಿಯಾಗಿರಬೇಕು.ಪರಮಾತ್ಮನಿಂದ ಬಂದುದನ್ನು ಪರಮಾತ್ಮನಿಗೆ ಅರ್ಪಿಸಿ,ಧನ್ಯರಾಗಬೇಕು.ಇದೇ ಸಮರ್ಪಣಾಭಾವ,ಸಮರ್ಪಣಾಯೋಗ.

ನಾವು ಇಂದ್ರಿಯಗಳ ಮೂಲಕ ಭೋಗೋಪಭೋಗಗಳನ್ನು ಅನುಭವಿಸುತ್ತೇವೆ.ಪಂಚಜ್ಞಾನೇಂದ್ರಿಗಳು,ಪಂಚಕರ್ಮೇಂದ್ರಿಯಗಳ ಮೂಲಕ ನಡೆಯುತ್ತದೆ ಮನುಷ್ಯರ ಬಾಳು.ಕಣ್ಣುಗಳ ಮೂಲಕ ನೋಡುತ್ತೇವೆ,ಕಿವಿಗಳ ಮೂಲಕ ಕೇಳುತ್ತೇವೆ,ನಾಲಗೆ ರುಚಿಯನ್ನು ಆಘ್ರಾಣಿಸುತ್ತದೆ,ಮೂಗು ವಾಸನೆಯನ್ನು ಗ್ರಹಿಸುತ್ತದೆ,ಚರ್ಮ ಶೀತೋಷ್ಣಗಳ ಅನುಭವವನ್ನುಂಟು ಮಾಡುತ್ತದೆ.ಈ ಇಂದ್ರಿಯಗಳ ನೋಟ ಕೂಟ ಮಾಟವನ್ನೇ ಪರಮಾತ್ಮಮಯವನ್ನಾಗಿ ಮಾಡಬೇಕು.ಕಣ್ಣುಗಳ ಮೂಲಕ ಸತ್ಯಶಿವನ ಸೃಷ್ಟಿಸೌಂದರ್ಯವನ್ನು ಕಾಣಬೇಕು.ಕಿವಿಗಳ ಮೂಲಕ ಸುಂದರಶಿವನ ಗುಣಗಾನ ಕೇಳಬೇಕು.ಊಟಮಾಡುವ ಮೊದಲು ” ಶಿವಾರ್ಪಣಂ” ಎನ್ನಬೇಕು.ನೀರು ಕುಡಿಯುವ ಮುನ್ನ ‘ ಶಿವಾರ್ಪಣಂ’ ಎನ್ನಬೇಕು.ಹೊಸಬಟ್ಟೆ,ಉಡುಗೆ- ತೊಡುಗೆಗಳನ್ನು ಧರಿಸುವಾಗ ‘ ಶಿವಾರ್ಪಣಂ’ ಎನ್ನಬೇಕು.ಇಷ್ಟಾದರೆ ಸಾಕು ಬಾಳು ಶಿವಮಯವಾಗುತ್ತದೆ.ಒಂದು ಸಂಗತಿಯನ್ನಿಲ್ಲಿ ವಿಚಾರಿಸಬೇಕು.ನಾವು ಊಟಮಾಡುವಾಗ,ತುತ್ತನ್ನು ಬಾಯಿಗೆ ಇಡುವ ಮುನ್ನ’ ಶಿವಾರ್ಪಣ’ ಎಂದರೆ ಶಿವನೇನೂ ನಮ್ಮ ತುತ್ತನ್ನು ಉಣ್ಣಲಾರ,ಕಸಿದುಕೊಳ್ಳಲಾರ.ಒಡಲಿಲ್ಲದ ಮೃಡನು ನಮ್ಮ ಭಾವನೆಯನ್ನು ಕಂಡು ಸಂತೃಪ್ತನಾಗುತ್ತಾನೆ.ನೀರುಕುಡಿಯುವ ಮುನ್ನ ಶಿವಾರ್ಪಣಂ ಎಂದರೆ ನೀರೇನೂ ಖಾಲಿ ಆಗುವುದಿಲ್ಲ,ಭಕ್ತನ ಭಾವಕಂಡು ಭಗವಂತ ಪ್ರಸನ್ನನಾಗುತ್ತಾನೆ.ಹೊಸಬಟ್ಟೆ,ಉಡುಗೆ- ತೊಡುಗೆಗಳನ್ನು ಶಿವಾರ್ಪಣಂ ಎಂದಾಗ ಅವುಗಳನ್ನು ಶಿವ ಕಸಿದುಕೊಳ್ಳಲಾರ,ನಾವೇ ಉಟ್ಟು ತೊಟ್ಟು,ಆನಂದಿಸುತ್ತೇವೆ.ಭಗವದರ್ಪಣವಾದ ನಮ್ಮ ಭಾವವನ್ನು ಕಂಡು ಪರಮಾತ್ಮನು ಸಂತೃಪ್ತನಾಗುತ್ತಾನೆ.ಇದು ಸಮರ್ಪಣೆಯ ರಹಸ್ಯ,ಸಮರ್ಪಣಾಯೋಗ.ಇದನ್ನು ಮಾಡಲು ಕಷ್ಟ ಏನಿಲ್ಲವಲ್ಲ.ಆದರೂ ಜನರು ತುತ್ತು ತಿನ್ನುವ ಮುಂಚೆ ಶಿವನನ್ನು ಸ್ಮರಿಸಿದರೆ ಶಿವನು ಎಲ್ಲಿ ಅನ್ನ ಕಸಿದುಕೊಳ್ಳುವನೋ ಎಂಬಂತೆ ವರ್ತಿಸುತ್ತಾರೆ.ಉಣ್ಣುವವರು,ಉಡುವವರು ನಾವೇ.ದೈನ್ಯಭಾವವಿರಬೇಕಷ್ಟೆ.ಪರಮಾತ್ಮನೆ ,ನನ್ನ ಅನ್ನ ಆಹಾರ,ಪದಾರ್ಥ- ಪಾನೀಯ,ಉಡುಗೆ-ತೊಡುಗೆಗಳೆಲ್ಲ ನಿನ್ನ ಕೊಡುಗೆ.ನಿನ್ನನ್ನು ಸ್ಮರಿಸಿ,ಸೇವಿಸುವೆ ಎಂದರೆ ಕಳೆದುಕೊಳ್ಳುವುದು ಏನನ್ನು? ಅಷ್ಟನ್ನು ಮಾಡಲಾಗುತ್ತಿಲ್ಲ ನಮ್ಮಿಂದ.ದೇವರಿಗೆ ನೈವೇದ್ಯ ಸಮರ್ಪಿಸುವ ರಹಸ್ಯವೇ ಇದು.ಮನೆಯಲ್ಲಿ ಮಾಡಿದ ಅಡುಗೆಯನ್ನು ಉಣ್ಣುವ ಮೊದಲು ದೇವರಿಗೆ ಸಮರ್ಪಿಸಲಾಗುತ್ತದೆ,ಲಿಂಗಕ್ಕೆ ಸಮರ್ಪಿಸಲಾಗುತ್ತದೆ.ದೇವರು ಕೊಟ್ಟುದುದನ್ನು ದೇವರಿಗೆ ಸಮರ್ಪಿಸಿ,ತಿನ್ನುತ್ತೇವೆ ಎನ್ನುವ ಕೃತಜ್ಞತಾಭಾವ ನೈವೇದ್ಯಸಮರ್ಪಣೆಯಲ್ಲಿದೆ.ನೈವೇದ್ಯ ಎಂದರೆ ನಿವೇದಿಸುವುದು ಎಂದರ್ಥ.ಏನನ್ನು ನಿವೇದಿಸುವುದು.ಅನ್ನವನ್ನಲ್ಲ ! ನಾವಿತ್ತ ಅನ್ನವನ್ನು ದೇವರು ತಿನ್ನಲಾರ.ಭಾವನೈವೇದ್ಯಮಾಡಬೇಕು.ನೀನು ಇತ್ತುದನ್ನು ನಿನಗಿತ್ತು,ನಿನ್ನ ಅನುಗ್ರಹವನ್ನುಂಡು ಬೆಳೆಯುವೆ ಎನ್ನುವ ದೈನ್ಯಭಾವ ಬೆಳೆಯುವುದೇ ನೈವೇದ್ಯ ಸಮರ್ಪಣೆಯ ರಹಸ್ಯ.ದೇವರಿಗೆ ಮೊದಲು ಸಲ್ಲಿಸಿ ನಂತರ ನಾವು ಉಣ್ಣಬೇಕು.ಇದು ಮೌಢ್ಯವೂ ಅಲ್ಲ,ಅರ್ಥಹೀನ ಆಚರಣೆಯೂ ಅಲ್ಲ.ಬದುಕನ್ನು ಬ್ರಹ್ಮಮಯಮಾಡಿಕೊಳ್ಳುವ ಸಾರ್ಥಕ ಜೀವನ ಕಲೆ.ಮೂಢಾತ್ಮರಿಗೆ ಇಂತಹ ಕ್ರಿಯೆಗಳು ಮೌಢ್ಯ ಎನ್ನಿಸುತ್ತವೆ.ಮೂಢಾತ್ಮರಾಗದೆ ನಾವು ಮೃಡಾತ್ಮರು ಆಗಬೇಕು.

ಉಣ್ಣುವುದು,ಉಡುವುದನ್ನು ಭಗವಂತನಿಗೆ ಅರ್ಪಿಸದಿದ್ದರೆ ದೋಷತಟ್ಟುತ್ತದೆ.ಅಹಂಕಾರ ಮೊಳೆಯುತ್ತದೆ,ಅಜ್ಞಾನ ಮೈದೋರುತ್ತದೆ.ವಿನಯಭಾವ ಮೈಗೂಡಿಸಿಕೊಳ್ಳಬೇಕು.ವಿನೀತರಾಗಿ ಬಾಗಿ ನಮಿಸಬೇಕು ಪರಮಾತ್ಮನನ್ನು.ನನ್ನ ದೇಹ,ಜೀವಗಳೆಲ್ಲವೂ ಪರಮಾತ್ಮನ ದಾನ.ಪರಮಾತ್ಮನ ದಾನವನ್ನು ಉಣ್ಣುವಾಗ,ಉಡುವಾಗ ಪರಮಾತ್ಮನನ್ನು ಸ್ಮರಿಸಬೇಕು ಎಂದರೆ ಅದು ಕೃತಜ್ಞತೆ.ಪರಮಾತ್ಮ ಕೊಟ್ಟುದದನ್ನು ಅನುಭವಿಸುವಾಗ ಪರಮಾತ್ಮನನ್ನು ಮರೆಯುವುದು ಕೃತಘ್ನತೆ.ಗುರುದೇವ ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳವರು ಪದಾರ್ಥವನ್ನೆಲ್ಲ ಪರಮಾರ್ಥನಿಗೆ ಅರ್ಪಿಸಿದಾಗ ಅದು ಪ್ರಸಾದವಾಗುತ್ತದೆ,ಅಂತಹವರ ಜೀವನವೇ ಪ್ರಸಾದಜೀವನವಾಗುತ್ತದೆ ಎನ್ನುತ್ತಿದ್ದರಲ್ಲದೆ ಇದನ್ನು ಹೇಳುವಾಗ ಅಲ್ಲಮ ಪ್ರಭುದೇವರ ಈ ವಚನವನ್ನು ಉದ್ಧರಿಸುತ್ತಿದ್ದರು ;

ಶಬ್ದವೆಂಬೆನೆ ? ಶ್ರೋತ್ರದೆಂಜಲು.ಸ್ಪರ್ಶವೆಂಬೆನೆ ?ತ್ವಕ್ಕಿನೆಂಜಲು.
ರೂಪವೆಂಬೆನೆ ? ನೇತ್ರದೆಂಜಲು.ರುಚಿಯೆಂಬೆನೆ ? ಜಿಹ್ವೆಯೆಂಜಲು.
ಪರಿಮಳವೆಂಬೆನೆ? ಘ್ರಾಣದೆಂಜಲು.ನಾನೆಂಬೆನೆ? ಅರಿವಿನೆಂಜಲು.
ಎಂಜಲೆಂಬ ಭಿನ್ನವಳಿದ ಬೆಳಗಿನೊಳಗಣ ಬೆಳಗು ಗುಹೇಶ್ವರ ಲಿಂಗವು.

ಇಂದ್ರಿಯಗಳ ಎಂಜಲಾದ ಭೋಗೋಪಭೋಗ ವಸ್ತು- ಒಡವೆ,ಅನ್ನ- ಪಾನೀಯಗಳನ್ನು ಪರಮಾರ್ಥನಿಗೆ ಅರ್ಪಿಸಿ,ಪರಶಿವನ ಅನುಗ್ರಹಕ್ಕೆ ಪಾತ್ರರಾಗಬೇಕು ಎನ್ನುವ ಸೂತ್ರವಡಗಿದೆ ಪ್ರಭುದೇವರ ಈ ವಚನದಲ್ಲಿ.ಪರಮಾತ್ಮ ಇತ್ತುದನ್ನು ಪರಮಾತ್ಮನಿಗೆ ಸಮರ್ಪಿಸಿ ಸೇವಿಸುವುದೇ ಬಾಳು ಬ್ರಹ್ಮಮಯವಾಗುವ,ಶಿವಮಯವಾಗುವ ಶಿವಬಾಳಿನ ರಹಸ್ಯ.

01.06.2022