ಮಹಾತಪಸ್ವಿ ಶ್ರೀಕುಮಾರಸ್ವಾಮಿಯವರ ಮಹೋಪದೇಶಗಳು –೦೪; ಪುರುಷ ಪ್ರಯತ್ನ ಮತ್ತು ಪ್ರಭುಕಾರುಣ್ಯ ಪರಸ್ಪರ ಪೂರಕ – ಮುಕ್ಕಣ್ಣ ಕರಿಗಾರ

ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳು

ಮಹಾತಪಸ್ವಿ ಶ್ರೀಕುಮಾರಸ್ವಾಮಿಯವರ ಮಹೋಪದೇಶಗಳು –೦೪

ಪುರುಷ ಪ್ರಯತ್ನ ಮತ್ತು ಪ್ರಭುಕಾರುಣ್ಯ ಪರಸ್ಪರ ಪೂರಕ

ಮುಕ್ಕಣ್ಣ ಕರಿಗಾರ

ಗುರುದೇವ ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳವರು ಹೊಸಹೊಸ ಹೊಳಹಿನ,ದರ್ಶನ ದೃಷ್ಟಿಯ ದ್ರಷ್ಟಾರರು.ತಮ್ಮ ತಪೋಬಲದಿಂದ ಪ್ರಪಂಚದ ಭೂತ,ವರ್ತಮಾನ ಮತ್ತು ಭವಿಷ್ಯತ್ತುಗಳನ್ನು ಬಲ್ಲವರಾಗಿದ್ದ ಮಹೋಗ್ರತಪಸ್ವಿಗಳಾಗಿದ್ದ ಅವರು ಆಧುನಿಕದೃಷ್ಟಿಕೋನವನ್ನು ಹೊಂದಿದ್ದರು.ಶುಷ್ಕವಾಗಾಡಂಬರಕ್ಕಾಗಲಿ,ಸಂಪ್ರದಾಯಶರಣತೆಗಾಗಲಿ ಸಿಕ್ಕವರಲ್ಲ ಅವರು.ಅವರ ಪ್ರತಿಯೊಂದು ಮಾತು ಮಂತ್ರವೆ! ಮಾತು ಮಂತ್ರವಾದ ಮಹರ್ಷಿಯ ಮಹೋನ್ನತ ವ್ಯಕ್ತಿತ್ವ ಅವರದು.ಪೌರ್ವಾತ್ಯ ಪಾಶ್ಚಿಮಾತ್ಯ ತತ್ತ್ವಜ್ಞಾನಗಳ ತಲಸ್ಪರ್ಶಿ ಅಧ್ಯಯನ ಮಾಡಿದ್ದ ಗುರುದೇವ ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳವರು ಎಲ್ಲ ತತ್ತ್ವಸಿದ್ಧಾಂತಗಳನ್ನು ತಮ್ಮ ಅನಿಮಿಷನೇತ್ರದಿಂದ ನೋಡಿ,ಆರೈದು,ಅರ್ಥೈಸುತ್ತಿದ್ದರು.ಅವರ ಮುಖದಲ್ಲಿ ಅಪೂರ್ವತೇಜಸ್ಸು ಇರುವಂತೆ ಅವರ ಮಾತು,ಪ್ರವಚನಗಳಲ್ಲಿ ಅನನ್ಯ ನಾವಿನ್ಯತೆ ಎದ್ದು ಕಾಣುತ್ತಿತ್ತು.ಗುರುದೇವರು ತಮ್ಮ ಬಳಿಬಂದ ಆಧ್ಯಾತ್ಮಸಾಧಕರಿಗೆ ಹಾಗೂ ತಮ್ಮ ಉಪದೇಶಗಳಲ್ಲಿ ಆಧ್ಯಾತ್ಮಿಕ ಪಥದಲ್ಲಿ ಗುರಿಮುಟ್ಟಬೇಕಾದರೆ, ಬದುಕಿನಲ್ಲಿ ಸಾರ್ಥಕತೆಯನ್ನು ಕಾಣಬೇಕಾದರೆ,ಯಶಸ್ವಿ ವ್ಯಕ್ತಿಗಳಾಗಬೇಕಾದರೆ ಪುರುಷ ಪ್ರಯತ್ನ ಮತ್ತು ಪರಮಾತ್ಮನ ಅನುಗ್ರಹ ಎರಡೂ ಮುಖ್ಯ ಎಂದು ಹೇಳುತ್ತಿದ್ದರು.ಇದೋ ನೋಡಿ ಅವರ ಅಮೃತವಾಕ್ಕು ;

” ಭಕ್ತಿಯಿಲ್ಲದೆ ಕೋರಿದ ಪ್ರಭುಕಾರುಣ್ಯವೂ ಪ್ರಭುಕಾರುಣ್ಯವಿಲ್ಲದೆ ಆಚರಿಸಿದ ಭಕ್ತಿಯೂ ವ್ಯರ್ಥವಾದವುಗಳು.ಪಡುಣದವರಂತೆ ಕೇವಲ ಪುರುಷಪ್ರಯತ್ನ ಬೇಕು ಎಂದು ಹೇಳುವುದೂ ತಪ್ಪು ; ಮೂಡಣದವರಂತೆ ಕೇವಲ ಪ್ರಭುಕಾರುಣ್ಯವು ಒದಗಲಿ ಎಂದು ಹೇಳುವುದೂ ತಪ್ಪು.ಪುರುಷ ಪ್ರಯತ್ನವೂ ಪ್ರಭು ಕಾರುಣ್ಯವೂ ಪರಸ್ಪರ ಪೂರಕವಾದವುಗಳು.ಪ್ರಭುಕಾರುಣ್ಯಕ್ಕೋಸುಗ ಪ್ರಯತ್ನಪೂರ್ವಕವಾಗಿ ತೆರೆದಿಟ್ಟಷ್ಟು ಸ್ಥಳವು ತುಂಬಿಕೊಳ್ಳುವುದು ”

ಆಧ್ಯಾತ್ಮಸಾಧಕರು,ಯೋಗಸಾಧಕರುಗಳನ್ನು ಉದ್ದೇಶಿಸಿದ ಉಪದೇಶವಾಕ್ಯ ಇದಾಗಿದ್ದರೂ ಬದುಕಿನಲ್ಲಿ ಯಶಸ್ಸನ್ನು ಕಾಣಬಯಸುವ ಎಲ್ಲರಿಗೂ ಅನ್ವಯವಾಗುವ ಮಾತಿದು.ಯೋಗಸಾಧನೆಯಲ್ಲಂತೂ ಯೋಗಿಯ ಸಾಧನೆ ಎತ್ತರಕ್ಕೆ ಏರಿದಷ್ಟೂ ಪ್ರಭುಕಾರುಣ್ಯವು ಕೆಳಗಿಳಿದು ಹತ್ತಿರ ಹತ್ತಿರ ಬರುತ್ತದೆ,ಕೊನೆಗೆ ಸಾಧಕನ ಶರೀರವನ್ನು ವ್ಯಾಪಿಸಿ,ಬೆಡಗಿನ ಲೀಲೆಯನ್ನಾಡುತ್ತದೆ.’ ದೇವರನ್ನು ಕಾಣಬೇಕು’ ಎನ್ನುವ ಬಯಕೆ ಇದ್ದರಷ್ಟೇ ಸಾಲದು,ಆ ದಿಸೆಯಲ್ಲಿ‌ ಪ್ರಯತ್ನ ನಡೆಯಬೇಕು.ದೇವರನ್ನು ಕಾಣುವ ಹಂಬಲ ಅದಮ್ಯವಾಗಿದ್ದರೆ,ಗುರಿ ಅಚಲವಾಗಿದ್ದರೆ ಖಂಡಿತ ಕಾಣುತ್ತಾನೆ ದೇವರು.’ ದೇವರು ಇದ್ದಾನೆಯೆ ?’ ‘ ದೇವರು ಕಾಣುತ್ತಾನೆಯೆ ?’, ‘ ದೇವರನ್ನು ನಿಜವಾಗಿಯೂ ಕಾಣಬಹುದೆ ?’ ಎಂದು ಬರಿಯ ಪ್ರಶ್ನೆಗಳನ್ನೇ ಕಂಡವರೆದುರು ಕೇಳುತ್ತಾ ಹೋದರೆ ಕಾಣಲಾಗದು ದೇವರನ್ನು.ಅವರಿವರು ತೋರಿಸಲಾರರು ದೇವರನ್ನು; ನಾವೇ ಪ್ರಯತ್ನಪಟ್ಟು,ಸಾಧಿಸಿ ಕಾಣಬೇಕು ದೇವರನ್ನು.ಆಧ್ಯಾತ್ಮ ಸಾಧನೆಯ ಅತ್ಯುನ್ನತ ಸಿದ್ಧಿ ಎಂದರೆ ಪರಮಾತ್ಮನ ಸಾಕ್ಷಾತ್ಕಾರ.ಅದು ಖಂಡಿತ ಸಾಧ್ಯ.ನಮ್ಮ ಸಾಧನೆ ಆ ದಿಸೆಯಲ್ಲಿ ಗಟ್ಟಿಯಾಗಿರಬೇಕಷ್ಟೆ. ನರೇಂದ್ರನು ರಾಮಕೃಷ್ಣ ಪರಮಹಂಸರನ್ನು ಕಂಡು,ಕೇಳಿದ್ದು ” ನೀವು ದೇವರನ್ನು ಕಂಡಿದ್ದೀರಾ?” ಎನ್ನುವ ಸಹಜ ಕುತೂಹಲದ ಪ್ರಶ್ನೆಯನ್ನು.ರಾಮಕೃಷ್ಣ ಪರಮಹಂಸರ ಸ್ಪಷ್ಟ ಮತ್ತು ದಿಟ್ಟ ಉತ್ತರ ” ಕಂಡಿದ್ದೇನೆ ಮಾತ್ರವಲ್ಲ, ನಿನ್ನ ಜೊತೆ ಹೇಗೆ ಮಾತನಾಡುತ್ತೇನೆಯೋ ಹಾಗೆಯೇ ಜಗನ್ಮಾತೆ ಕಾಳಿಯೊಂದಿಗೆ ಮಾತನಾಡುತ್ತೇನೆ” ನರೇಂದ್ರನ ಮುಂದಿನ ಪ್ರಶ್ನೆ ” ನನಗೂ ತೋರಿಸಬಲ್ಲಿರಾ ದೇವರನ್ನು?”. ಮುಗುಳುನಗುತ್ತಾ ರಾಮಕೃಷ್ಣ ಪರಮಹಂಸರು ಹೇಳಿದ್ದು ” ಖಂಡಿತವಾಗಿ ನಿನಗೆ ದೇವರನ್ನು ತೋರಿಸುತ್ತೇನೆ.ದೇವರನ್ನು ಕಾಣಲೆಂದೇ ನೀನು ತಾಯಿಯ ಸಂಕಲ್ಪದಂತೆ ಇಲ್ಲಿಗೆ ಬಂದಿದ್ದಿ”.ನರೇಂದ್ರನೆಂಬ ಆ ತರುಣನೇ ರಾಮಕೃಷ್ಣಪರಮಹಂಸರ ಯೋಗಶಕ್ತಿಯ ಶಕ್ತಿಪಾತವನ್ನುಂಡು ವಿವೇಕಾನಂದರು ಎಂದು ಜಗತ್ಪ್ರಸಿದ್ಧರಾದರು.ರಾಮಕೃಷ್ಣ ಪರಮಹಂಸರು ಮಾತ್ರವಲ್ಲ, ಸಾಕಷ್ಟುಜನ ಯೋಗಿಗಳು ತಮ್ಮ ಶಿಷ್ಯರಿಗೆ ದೇವರನ್ನು ತೋರಿಸಿದ್ದಾರೆ.ನನ್ನ ಗುರುದೇವ ಮಹಾತಪಸ್ವಿ ಶ್ರೀ ಕುಮಾರಸ್ವಾಮಿಗಳು ನನ್ನಂತೆ ಕೆಲವರೆದುರು ಸಾಕ್ಷಾತ್ಕಾರದ ಪಥವನ್ನು ತೆರೆದಿಟ್ಟಿದ್ದಾರೆ.ನಮ್ಮ ಯೋಗಸಾಧನೆಯ ಬಲದಿಂದ ನಾವು ಖಂಡಿತವಾಗಿಯೂ ಕಾಣಬಹುದು ಪರಮಾತ್ಮನನ್ನು.

ಪರಮಾತ್ಮನನ್ನು ಕಾಣಬಹುದು ಎಂದರೆ ‘ ಎಷ್ಟುವರ್ಷಗಳು ಬೇಕಾಗಬಹುದು?’ ಎನ್ನುವ ಪ್ರಶ್ನೆಯನ್ನು ಮುಂದಿಡುತ್ತಾರೆ ಕೆಲವರು.ಹಿಂದಿನ ಋಷಿಗಳೇನೋ ಪರಮಾತ್ಮನ ಸಾಕ್ಷಾತ್ಕಾರಕ್ಕೆ ಹನ್ನೆರಡು ವರ್ಷಗಳು ಬೇಕು ಎಂದು ನಿಗದಿಪಡಿಸಿದ್ದಾರೆ.ಆದರೆ ನಾನುನಿರ್ಧಾರವಾಗಿ ಹೇಳುತ್ತೇನೆ ‘ ಹನ್ನೆರಡು ವರ್ಷಗಳು ಏಕೆ ಹನ್ನೆರಡೇ ತಿಂಗಳುಗಳಲ್ಲಿ ಕಾಣಬಹುದು ಪರಮಾತ್ಮನನ್ನು’ ಅಂತ.ಹನ್ನೆರಡು ತಿಂಗಳಲ್ಲಿ ಪರಮಾತ್ಮನನ್ನು ಕಾಣಬಹುದು ಎಂದರೆ ಅದಕ್ಕೆ ತಕ್ಕ ಉಗ್ರ ತಪಶ್ಚರ್ಯೆಯೂ ಬೇಕಲ್ಲ ! ಕಠಿಣ ಸಾಧನೆ ಮಾಡದೆ ಹನ್ನೆರಡು ತಿಂಗಳಲ್ಲಿ ದೇವರನ್ನು ಕಾಣಬೇಕು ಎಂದರೆ ಸಾಧ್ಯವೆ ? ದಿನ ಒಂದಕ್ಕೆ ಹನ್ನೆರಡು ತಾಸುಗಳಂತೆ ಹನ್ನೆರಡು ತಿಂಗಳುಗಳ ಕಾಲ ಸಾಧನೆ ಮಾಡಿದರೆ ಕಾಣಬಹುದು ಪರಮಾತ್ಮನನ್ನು,ಪರಾಶಕ್ತಿಯನ್ನು.ನಾವು ಕಾಡಿಗೆ ಹೋಗಿ ದಣಿಯಬೇಕಿಲ್ಲ, ಗಡ್ಡೆ ಗೆಣಸುಗಳನ್ನು ತಿನ್ನಬೇಕಿಲ್ಲ; ಗುಡ್ಡ- ಗುಹೆಗಳಲ್ಲಿ ನಿರಾಹಾರವ್ರತದಿಂದ ತಪಸ್ಸು ಮಾಡಬೇಕಾಗಿಯೂ ಇಲ್ಲ.ಇಲ್ಲಿಯೇ,ನಾವಿರುವ ಮನೆ,ಮಂದಿರ,ಆಶ್ರಮಗಳಲ್ಲಿಯೇ ಸಾಧನೆಗೈದು ಕಾಣಬಹುದು ಪರಮಾತ್ಮನನ್ನು.ಲೋಕಾಂತವನ್ನು‌ಒದ್ದು ಏಕಾಂತವನ್ನು ಅಪ್ಪಿ ,ನಿರಂತರ ಸಾಧನೆ ಗೈದುದಾದರೆ ನಾವು ಇದ್ದಲ್ಲಿಗೇ ಬರುತ್ತಾನೆ ಪರಮಾತ್ಮ.

ಪರಮಾತ್ಮನನ್ನು ಕಾಣುವ ಹಂಬಲ ತೀವ್ರವಾಗಬೇಕು ನಮ್ಮಲ್ಲಿ.ಪರಮಾತ್ಮನ ದರ್ಶನಕ್ಕಾಗಿ ಹಂಬಲಿಸಿ,ಅತ್ತುಕರೆಯಬೇಕು.ಆರ್ತನಾಗಿ ಪ್ರಾರ್ಥಿಸಬೇಕು ಪರಮಾತ್ಮನನ್ನು.ಬಸವಣ್ಣನವರು‌ ಪ್ರಾರ್ಥಿಸಿಲ್ಲವೆ ಕೂಡಲಸಂಗಮದೇವನನ್ನು ‘ ತಂದೆ ನೀನು,ತಾಯಿ ನೀನು,ಬಂಧು ನೀನು,ಬಳಗ ನೀನು’ ಹಾಲಲದ್ದು ನೀರಲದ್ದು’ ಅದು ನಿನಗೆ ಬಿಟ್ಟಿದ್ದು.ಇಂತಹ ಅನನ್ಯಶರಣಾಗತಿಯ ಭಾವನೆಯಿಂದಲೇ ಬಸವಣ್ಣನವರು ಕೂಡಲಸಂಗಮದೇವನೆಂಬ ನಿತ್ಯಸತ್ಯವನ್ನು ದರ್ಶಿಸಲು ಸಾಧ್ಯವಾಯಿತು.’ ಓ ತಂದೆಯೆ,ಪರಮಾತ್ಮನೆ,ನನಗೆ ನೀನಲ್ಲದೆ ಮತ್ತಾರೂ ಇಲ್ಲ.ನನ್ನನ್ನು ಉದ್ಧರಿಸು ಇಲ್ಲವೆ ಅವನತಿಗೆ ತಳ್ಳು .ಅದು ನಿನಗೆ ಬಿಟ್ಟಿದ್ದು.ನಾನು ನಿನ್ನನ್ನೇ ನಂಬಿದ್ದೇನೆ,ನಿನ್ನನ್ನಲ್ಲದೆ ಮತ್ತಾರನ್ನೂ ಆಶ್ರಯಿಸಲಾರೆ’ ಎಂದು ಸದಾ ಮೊರೆಯುತ್ತಿದ್ದರೆ ಕರಗನೆ ತಾಯ್ಗರುಳಿನ ತಂದೆ ಶಿವಪರಮೇಶ್ವರನು? ಪರಮಾತ್ಮನಿಗಾಗಿ ಅಳಬೇಕು,ಪರಮಾತ್ಮನಿಗಾಗಿ ಹುಚ್ಚರಾಗಬೇಕು.’ ಹುಚ್ಚನಾಗದೆ ಮೆಚ್ಚಲಾರ ಪರಮಾತ್ಮನು’ ಎನ್ನುವ ಮಾತು ದಿಟವಾದುದು.ಪರಮಾತ್ಮನ ಹುಚ್ಚು ಹಚ್ಚಿಸಿಕೊಳ್ಳಬೇಕು.ಆದರೆ ಮನುಷ್ಯರಾದ ನಮಗೋ ಹತ್ತಿವೆ ಯಾವ ಯಾವುದೋ ಹುಚ್ಚುಗಳು ! ಪ್ರೇಮದ ಹುಚ್ಚು ! ಕಾಮದ ಹುಚ್ಚು! ಹಣದ ಹುಚ್ಚು! ಅಧಿಕಾರದ ಹುಚ್ಚು! ಕೀರ್ತಿಯ ಹುಚ್ಚು! ದೊಡ್ಡವನಾಗುವ ಹುಚ್ಚು! ಒಂದೇ ಎರಡೇ ನೂರಾರು ಬಗೆಯ ಹುಚ್ಚುಗಳಿಗೆ ಒಳಗಾಗಿದ್ದೇವೆ ನಾವು.ಜಗತ್ತು ಎನ್ನುವುದು ಹುಚ್ಚರ ಆಸ್ಪತ್ಪ್ರೆಯೆ ! ಇಲ್ಲಿ ವೈದ್ಯರೂ ಹುಚ್ಚರೆ,ರೋಗಿಗಳೂ ಹುಚ್ಚರೆ! ಹುಚ್ಚರ ಸಂತೆ! ಆದರೆ ಲೌಕಿಕ ಹುಚ್ಚಿಗಿಂತ ಅಲೌಕಿಕ ಹುಚ್ಚು ಹತ್ತಬೇಕು ನಮಗೆ.ಪರಮಾತ್ಮನ ಹುಚ್ಚು ಹತ್ತಿಸಿಕೊಳ್ಳಬೇಕು.ಪರಮಾತ್ಮನ ಹುಚ್ಚು ಹತ್ತಿತು ಎಂದರೆ ಆತನಿಗೆ ಜನರ ,ಜಗತ್ತಿನ ಪರಿವೆ ಇರುವುದಿಲ್ಲ.ತನ್ನ ಪಾಡಿಗೆ ತಾನಿರುತ್ತಾನೆ,ತನ್ನಷ್ಟಕ್ಕೆ ತಾನು ಆಡುತ್ತಿರುತ್ತಾನೆ,ಮಾಡುತ್ತಿರುತ್ತಾನೆ.ಅಂಥವರನ್ನು ಕಂಡು ಜನ ‘ ಹುಚ್ಚ’ ಎಂದು ಗೇಲಿ ಮಾಡಿ ನಗುತ್ತಾರೆ.ತಲೆಕೆಡಿಸಿಕೊಳ್ಳಬೇಕಿಲ್ಲ ಅಂತಹ ಹುಚ್ಚರ ಮಾತುಗಳಿಗೆ.ನಿಜವಾದ ಹುಚ್ಚು ಹತ್ತಿಸಿಕೊಂಡವನು ತುಚ್ಛಹುಚ್ಚರನ್ನು ಕಂಡು ನಗಬೇಕು.

ಪರಮಾತ್ಮನಲ್ಲಿ ನಮ್ಮ ನಿಷ್ಠೆ ಗಟ್ಟಿಯಾಗಿರಬೇಕು.ನಂಬಬೇಕು,ನೆಚ್ಚಬೇಕು,ಹುಚ್ಚೆದ್ದು ಕುಣಿದು ಕರೆಯಬೇಕು.’ ನಂಬಿಕರೆದರೆ ಓ ಎನ್ನನೆ ಶಂಭು?’ ನಂಬಿ ಕರೆದರೆ ಖಂಡಿತ’ ಓ ಬಂದೆ ‘ಎಂದು ಓಗೊಡುತ್ತಾನೆ ಶಿವ.ಆದರೆ ಆ ಪರಮದಯಾಳು ಶಂಭುವನ್ನು ನಂಬುವ ಬಗೆ ಯಾವುದು? ಪರಶಿವನ ದರ್ಶನಕ್ಕೆ ಹಂಬಲಿಸುವ ಪರಿಯಾವುದು ? ತನ್ನ ಗುರು ತೋರಿದ ಪಥ ಎಂಬುದೇ ಇದಕ್ಕೆ ಉತ್ತರ.ಹರನನ್ನು ಕಂಡು ಹರಸ್ವರೂಪನಾದ ಗುರು ಶಿಷ್ಯನ ಶಿರದ ಮೇಲೆ ತನ್ನವರದ ಹಸ್ತವನ್ನಿಟ್ಟು ತನ್ನಂತೆಯೇ ಮಾಡಿಕೊಳ್ಳುತ್ತಾನೆ ಶಿಷ್ಯನನ್ನು.ಗುರುಶಿಷ್ಯನಾಗುತ್ತಾನೆ,ಶಿಷ್ಯ ಗುರುವಾಗುತ್ತಾನೆ.ಗುರುಶಿಷ್ಯನಲ್ಲಿ ಇಳಿಯುತ್ತಾನೆ; ಶಿಷ್ಯ ಗುರುವಾಗಿ ಬೆಳೆಯುತ್ತಾನೆ.ಇದೇ ‘ ಗುರುಮುಟ್ಟಿ ಗುರುವಾಗು’ ವ ರಹಸ್ಯ.

ಆಧ್ಯಾತ್ಮಿಕ ಮಾರ್ಗದಲ್ಲಷ್ಟೇ ಅಲ್ಲ ,ಲೌಕಿಕ ಬದುಕಿನ ಸಾರ್ಥಕತೆಗೆ,ಯಶಸ್ಸಿಗೂ ಸಿದ್ಧಸೂತ್ರ ಈ ಮಾತು,ಈ ಮಹೋಪದೇಶ.ನಾವು ನಮ್ಮ ಪ್ರಯತ್ನವನ್ನಷ್ಟೇ ನೆಚ್ಚಿ ಕುಳಿತರೆ ಸಾಲದು,ಪರಮಾತ್ಮನ ಅನುಗ್ರಹವೂ ಬೇಕು ಯಶಸ್ವಿಗಳಾಗಲು.ಪಶ್ಚಿಮದ ರಾಷ್ಟ್ರಗಳ ಜನರು ಕೇವಲ ಪುರುಷಪ್ರಯತ್ನ ಒಂದಿದ್ದರೆ ಸಾಕು ಎಂದು ಭಾವಿಸಿದ್ದಾರೆ.ನಾವು ಭಾರತೀಯರು ಅದಕ್ಕೆ ವಿರುದ್ಧವಾಗಿ ಎಲ್ಲದಕ್ಕೂ ಪರಮಾತ್ಮನನ್ನೇ ಆಶ್ರಯಿಸುತ್ತೇವೆ,ಹೊಣೆ ಮಾಡುತ್ತೇವೆ.ಪರಮಾತ್ಮನು ನಮಗೆ ತಲೆ,ಕೈಕಾಲುಗಳನ್ನು ಕೊಟ್ಟಿದ್ದಾನಲ್ಲ.ಶರೀರಕ್ಕೆ ಅಂಗಾಂಗಗಳನ್ನು ಕೊಟ್ಟಿದ್ದಾನಲ್ಲ.ಪರಮಾತ್ಮನು ನಮಗೆ ತಲೆ,ಕೈಕಾಲುಗಳಾದಿ ಅಂಗಾಂಗಳನ್ನು ಕೊಟ್ಟಿದ್ದು ಪ್ರಯತ್ನಶೀಲರಾಗಿ,ದುಡಿದು ಉಣ್ಣಿ ಎನ್ನುವ ಕಾರಣದಿಂದ.ಅದನ್ನು ಬಿಟ್ಟು ‘ ಹುಟ್ಟಿಸಿದ ದೇವರು ಹುಲ್ಲನ್ನು ಮೇಯಿಸಲಾರ’ ಎಂದು ಮೈಗಳ್ಳರಾಗಿ ಕುಳಿತರೆ ಹುಲ್ಲಲ್ಲ,ತಿನ್ನಲು ಮಣ್ಣೂ ಸಿಗದೆ ಸಾಯಬೇಕಾಗುತ್ತದೆ.ಪ್ರಯತ್ನಿಸಬೇಕು.ಪ್ರಯತ್ನಿಸುತ್ತಾ ಕಾರ್ಯಸಾಧನೆಯಲ್ಲಿ ಯಶಸ್ಸನ್ನು ಕರುಣಿಸು ಎಂದು ಪರಮಾತ್ಮನನ್ನು‌ ಪ್ರಾರ್ಥಿಸಬೇಕು.ಯಾರು ಪ್ರಯತ್ನವಾದಿಗಳೋ,ಯಾರು ಉತ್ಸಾಹದಿಂದ ಉದ್ಯೋಗೋನ್ಮುಖರೋ ಅಂಥವರನ್ನು ಖಂಡಿತವಾಗಿಯೂ ಒಲಿದು ಉದ್ಧರಿಸುತ್ತಾನೆ ಪರಮಾತ್ಮ.ಪಶ್ಚಿಮದ ರಾಷ್ಟ್ರಗಳ ಜನರ ಗೊಂದಲ,ದ್ವಂದ್ವ,ಹತಾಶೆಗಳಿಗೆ ಇದುವೇ ಕಾರಣ; ಪರಮಾತ್ಮನ ಅನುಗ್ರಹವನ್ನು ಆಶಿಸದೆ ಬರಿಯ ಪುರುಷಪ್ರಯತ್ನದಲ್ಲಿಯೇ ವಿಶ್ವಾಸವಿರಿಸಿ ಭ್ರಮನಿರಸನರಾಗುವುದು.ಬದುಕಿನಲ್ಲಿ ಏನನ್ನಾದರೂ ಸಾಧಿಸಬೇಕಿದ್ದರೆ ಆ ಸಾಧನೆಯ ಈಡೇರಿಕೆಗಾಗಿ ಪ್ರಯತ್ನಿಸಬೇಕು.ನನ್ನ ಆಸೆ ಈಡೇರಿಸು ಪರಮಾತ್ಮ ಅಂತ ಪ್ರಾರ್ಥಿಸಬೇಕು ಪರಮಾತ್ಮನನ್ನು.ಪುರುಷಪ್ರಯತ್ನದಲ್ಲಿ ಪ್ರಾಮಾಣಿಕತೆ ಮತ್ತು ಪರಮಾತ್ಮನ ನಂಬಿಕೆಯಲ್ಲಿ ಪರಿಶುದ್ಧತೆ ಇದ್ದರೆ ಖಂಡಿತವಾಗಿಯೂ ಸಾಧಿಸಬಹುದು ಮಹತ್ಕಾರ್ಯಗಳನ್ನು.ನಾವು ಪರಮಾತ್ಮನ ಕರುಣೆಗಾಗಿ ಪ್ರಾರ್ಥಿಸಿದಷ್ಟೂ ಪರಮಾತ್ಮನು ನಮ್ಮಲ್ಲಿ ಚೈತನ್ಯವನ್ನು ತುಂಬುತ್ತಾನೆ,ನಮಗೆ ಹತ್ತಿರ ಆಗುತ್ತಾನೆ.ಪ್ರಪಂಚವು ಪರಮಾತ್ಮನಿಗೆ ಸೇರಿದುದು.ಈ ಪ್ರಪಂಚದಲ್ಲಿ ನಾವು ಕೂಡ ಪರಮಾತ್ಮನ ಎಣಿಕೆಯ ಪಾತ್ರಗಳೆ.ಪರಮಾತ್ಮನೊಬ್ಬನೇ ನಿಜಸೂತ್ರಧಾರ.ನಮನಮಗೆ ಒದಗಿ ಬಂದ ಪಾತ್ರಗಳನ್ನು ಚೆನ್ನಾಗಿ ಅಭಿನಯಿಸುವುದಷ್ಟೇ ನಮ್ಮ ಕೆಲಸ.ನಮ್ಮಲ್ಲಿ ಕೆಲವರು ಸಂಸಾರಿಯ ಪಾತ್ರ ಮಾಡಬಹುದು,ಕೆಲವರು ಸಂನ್ಯಾಸಿಯ ಪಾತ್ರ ಮಾಡಬಹುದು.ಕೆಲವರು ವೈದ್ಯರ ಪಾತ್ರ ಮಾಡಬಹುದು,ಕೆಲವರು ವಕೀಲರ ಪಾತ್ರ ಮಾಡಬಹುದು.ಕೆಲವರು ಶಿಕ್ಷಕರ ಪಾತ್ರ ಮಾಡಬಹುದು,ಕೆಲವರು ರಕ್ಷಕರಾಧ ಯೋಧರ ಪಾತ್ರ ಮಾಡಬಹುದು.ಕೆಲವರು ರೈತರ ಪಾತ್ರ ಮಾಡಬಹುದು,ಕೆಲವರು ರಾಜಕಾರಣಿಗಳ ಪಾತ್ರ ಮಾಡಬಹುದು.ಕೆಲವರು ಅಧಿಕಾರಿಗಳ ಪಾತ್ರ ಮಾಡಬಹುದು,ಕೆಲವರು ಗುಮಾಸ್ತರ ಪಾತ್ರ ಮಾಡಬಹುದು.ಕೆಲವರು ವ್ಯಾಪಾರಿಗಳ ಪಾತ್ರ ಮಾಡಬಹುದು,ಕೆಲವರು ಲೋಕಸೇವಕರ ಪಾತ್ರ ಮಾಡಬಹುದು.ನಮ್ಮ ವೃತ್ತಿ,ಪ್ರವೃತ್ತಿಗಳೇ ನಮ್ಮ ಪಾತ್ರಗಳು.ನಾವು ಎಷ್ಟು ಚೆನ್ನಾಗಿ ನಮ್ಮ ವೃತ್ತಿ ಪ್ರವೃತ್ತಿಗಳನ್ನು ನಿರ್ವಹಿಸುತ್ತೇವೆಯೋ ಅಷ್ಟು ಪರಮಾತ್ಮನ ಮೆಚ್ಚುಗೆಗೆ ಪಾತ್ರರಾಗುತ್ತೇವೆ.ವೃತ್ತಿಯಲ್ಲಿ ಮೇಲು- ಕೀಳುಗಳಿಲ್ಲ.ಪರಿಚಾರಕನ ಹುದ್ದೆ ಕೀಳಲ್ಲ,ಪ್ರೆಸಿಡೆಂಟನ ಹುದ್ದೆ ಮೇಲಲ್ಲ.ಅಧಿಕಾರಿಯ ಹುದ್ದೆ ಶ್ರೇಷ್ಠವಲ್ಲ; ಗುಮಾಸ್ತನ ಹುದ್ದೆ ಕನಿಷ್ಟವಲ್ಲ.ಎಲ್ಲ ಹುದ್ದೆಗೂ ಅದರದ್ದೇ ಆದ ಜವಾಬ್ದಾರಿ ಇದೆ,ಘನತೆ- ಗೌರವಗಳಿವೆ.ನಾವು ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿದ್ದಾದರೆ ನಮ್ಮ ಕಾಯಕವೇ ಕೈಲಾಸದ ಸಾಧನವಾಗುತ್ತದೆ.

ಮುಕ್ಕಣ್ಣ ಕರಿಗಾರ

‌ ‌ 30.05.2022