ಮಹಾತಪಸ್ವಿಯವರ ಮಹೋಪದೇಶಗಳು –೦೨ ” ಸೃಷ್ಟಿಯನ್ನು ಮಾರ್ಪಡಿಸಬೇಕು ಎಂಬುದಕ್ಕಿಂತ ದೃಷ್ಟಿಯನ್ನು ಬದಲಿಸುವುದು ಮೇಲಾದುದು ” ಮುಕ್ಕಣ್ಣ ಕರಿಗಾರ

ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳು

ಮಹಾತಪಸ್ವಿಯವರ ಮಹೋಪದೇಶಗಳು –೦೨

” ಸೃಷ್ಟಿಯನ್ನು ಮಾರ್ಪಡಿಸಬೇಕು ಎಂಬುದಕ್ಕಿಂತ ದೃಷ್ಟಿಯನ್ನು ಬದಲಿಸುವುದು ಮೇಲಾದುದು “

ಮುಕ್ಕಣ್ಣ ಕರಿಗಾರ

ಗುರುದೇವ ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳವರು ಈ ಮಾತಿನಲ್ಲಿ ನಮ್ಮ ದೃಷ್ಟಿ ಏನಾಗಿರಬೇಕು ಎನ್ನುವುದನ್ನು ಉಪದೇಶಿಸಿದ್ದಾರೆ.ನಮ್ಮಲ್ಲಿ ಬಹಳಷ್ಟು ಜನರಿಗೆ ಸೃಷ್ಟಿ ಸರಿಯಾಗಿಲ್ಲ,ಅದು ಹೀಗಿರಬೇಕಿತ್ತು,ಹಾಗಿರಬೇಕಿತ್ತು ಎನ್ನುವ ಭಾವನೆ ಇದೆ.ಆದರೆ ಸೃಷ್ಟಿ ನಾವು ಬಯಸಿದಂತೆ ಇರಲು ಅದು ನಮ್ಮ ಕೈಯೊಳು ಇರಬೇಕಲ್ಲ! ನಾವೇ ಸೃಷ್ಟಿಯಲ್ಲಿ ಒಂದು ಪಾತ್ರ,ಸೂತ್ರಧಾರರಲ್ಲ.ಹಾಗಿದ್ದೂ ಸೃಷ್ಟಿಯನ್ನು ನಮ್ಮ ದೃಷ್ಟಿಯ ಮಿತಿಯಲ್ಲಿ ಅಳೆಯಬಯಸುತ್ತೇವೆ.

ನಾವು ಜಗತ್ತನ್ನು ಹೇಗೆ ನೋಡುತ್ತೇವೋ ಅದು ಹಾಗೆ ಕಾಣಿಸುತ್ತದೆ.ಸೃಷ್ಟಿಯ ಬಗೆಗಿನ ನಮ್ಮ ದೃಷ್ಟಿಗನುಗುಣವಾದ ಸೃಷ್ಟಿ ನಮ್ಮೆದುರು ತೆರೆದುಕೊಳ್ಳುತ್ತದೆ.’ ದೃಷ್ಟಿಯಂತೆ ಸೃಷ್ಟಿ’. ಎಂಥಹ ದೃಷ್ಟಿಯಿಂದ ನಾವು ಸೃಷ್ಟಿಯನ್ನು ನೋಡುತ್ತೇವೆಯೋ ಅಂತಹ ಸೃಷ್ಟಿಯನ್ನು ಕಾಣುತ್ತೇವೆ ನಾವು.ಸೃಷ್ಟಿಯಲ್ಲಿ ವೈರುಧ್ಯವಿದೆ,ಅಸಮಾನತೆ ಇದೆ,ಅಪೂರ್ಣತೆ ಇದೆ ಎನ್ನಿಸುತ್ತದೆ ನಮಗೆ.ಅದೇ ಆಗ ತಾನೆ ಹುಟ್ಟಿದ ಮಗು ಒಂದು ಸತ್ತರೆ ಸೃಷ್ಟಿ ಸರಿಯಿಲ್ಲ ಎನ್ನುವ ಭಾವನೆ ಬರುವುದು ಸಹಜ.ಒಬ್ಬನು ತುತ್ತು ಅನ್ನಕ್ಕೂ ಗತಿಯಿಲ್ಲದೆ ಒದ್ದಾಡುತ್ತಿದ್ದರೆ ಮತ್ತೊಬ್ಬನು ತಿಂದ ಅನ್ನವನ್ನು ಜೀರ್ಣಿಸಿಕೊಳ್ಳಲಾಗದೆ ಮಾತ್ರೆ,ಔಷಧಗಳನ್ನು ತಿನ್ನುವಷ್ಟು ಶ್ರೀಮಂತನಿರುವುದನ್ನು ಕಂಡಾಗ ಸೃಷ್ಟಿ ಸರಿಯಿಲ್ಲ ಎನ್ನಿಸುತ್ತದೆ.ಬಡವರು ಬಡವರಾಗುತ್ತಲೇ ಹೋಗುವುದು ಶ್ರೀಮಂತರು ಶ್ರೀಮಂತರಾಗುತ್ತಲೇ ಹೋಗುವುದನ್ನು ಕಂಡಾಗ ಸೃಷ್ಟಿ ಪೂರ್ಣ ಎಂದು ಹೇಗೆ ಸಮರ್ಥಿಸಿಕೊಳ್ಳಲಾದೀತು? ಮನುಷ್ಯರಲ್ಲಿ ಕೆಲವರು ಮೇಲು ಮತ್ತೆ ಕೆಲವರು ಕೀಳು,ಕೆಲವರ ಪಾದಪೂಜೆ ಮಾಡಬೇಕು ಎನ್ನುವುದು ಮತ್ತೆ ಕೆಲವರನ್ನು ಮುಟ್ಟಿಸಿಕೊಳ್ಳಲೇಬಾರದು ಎನ್ನುವಂತಹ ವಿಪರೀತ ಪ್ರಸಂಗಗಳನ್ನು ಕಂಡು,ಕೇಳಿಯೂ ಸೃಷ್ಟಿಯು ಪರಿಪೂರ್ಣ ಎನ್ನಲಾದೀತೆ ? ಕೈಕಾಲುಗಳಿಲ್ಲದ ಅಂಗವಿಕಲರ ಬವಣೆಯನ್ನು ಕಂಡು ಸೃಷ್ಟಿಯನ್ನು ಸಮರ್ಥಿಸಲಾದೀತೆ! ಇಂತಹ ಸಂಗತಿಗಳು ನಮ್ಮಲ್ಲಿ ಸೃಷ್ಟಿಯಲ್ಲಿ ದೋಷವಿದೆ ಎನ್ನುವ ಭಾವನೆಯನ್ನುಂಟು ಮಾಡುತ್ತವೆ.ಇಂತಹ ಕಾರಣದಿಂದ ನಾವು ಸೃಷ್ಟಿಯ ಬಗ್ಗೆ ಉದ್ವೇಗಕ್ಕೆ ಒಳಗಾಗುತ್ತೇವೆ.

ಸೃಷ್ಟಿಯ ಬಗೆಗಿನ ಅಪೂರ್ಣತೆಯ ಭಾವ ಮತ್ತು ಉದ್ವೇಗಳು ನಮ್ಮ ತಪ್ಪು ತಿಳಿವಳಿಕೆಯ ಫಲ ಎನ್ನುವುದು ನಮಗೆ ಅರ್ಥವಾಗುವುದಿಲ್ಲ ! ಸೃಷ್ಟಿಯು ಅಪೂರ್ಣವಾಗಿಲ್ಲ,ಪರಿಪೂರ್ಣವಾಗಿದೆ.ಆದರೆ ಅದನ್ನು ನೋಡುವ ನಮ್ಮದೃಷ್ಟಿಯಲ್ಲಿ ದೋಷವಿದೆ!ನಾವು ಹುಟ್ಟಿ ಐವತ್ತು ಅರವತ್ತು,ಎಪ್ಪತ್ತು,ನೂರುವರ್ಷಗಳಾಗಿರಬಹುದು.ಆದರೆ ಸೃಷ್ಟಿಯ ಆರಂಭ ಎಂದು ಆಯಿತು ಎಂದು ನಾವು ಬಲ್ಲೆವೆ? ಎಂದೋ ಆರಂಭವಾದ ಸೃಷ್ಟಿಯನ್ನು ಇಂದಿನ ನಾವು ನಮ್ಮ ದೃಷ್ಟಿಯಿಂದ ಅಳೆಯುತ್ತೇವೆ.ನಮ್ಮ ದೃಷ್ಟಿಯೂ ವಿಶಾಲವಾದುದೇನಲ್ಲ,ತನ್ನ ಹರಿವಿನ ಮಿತಿ ದಾಟಿ ಹರಿಯದು ನಮ್ಮ ದೃಷ್ಟಿ.ಬಹಳ ಹೆಚ್ಚೆಂದರೆ ಅರ್ಧಕಿಲೋಮೀಟರ್ ವರೆಗೆ ಮಾತ್ರ ಹರಿಯಬಲ್ಲದು ನಮ್ಮ ದೃಷ್ಟಿ.ಸೃಷ್ಟಿ ಇಷ್ಟೇ ಇದೆಯೆ? ಸೃಷ್ಟಿಯು ಅಗಾಧವಾಗಿದೆ,ಸೀಮಾತೀತವಾಗಿದೆ,ಅಗಾಧವಾಗಿದೆ.

ಸೃಷ್ಟಿಯಲ್ಲಿ ದೋಷವಿಲ್ಲ,ದೋಷವಿರುವುದು ಮನುಷ್ಯ ಬುದ್ಧಿಯಲ್ಲಿ.ಪರಮಾತ್ಮನು ಎಲ್ಲ ಜೀವಿಗಳಂತೆ ಮನುಷ್ಯರನ್ನು ಹುಟ್ಟಿಸಿದ್ದಾನೆಯೇ ಹೊರತು ಮನುಷ್ಯರಲ್ಲಿ ಕೆಲವರು ಮೇಲು,ಕೆಲವರು ಕೀಳು,ಕೆಲವರು ಶ್ರೀಮಂತರು,ಕೆಲವರು ಬಡವರು,ಕೆಲವರು ಸ್ಫುರದ್ರೂಪಿಗಳು,ಕೆಲವರು ಕುರೂಪಿಗಳು,ಕೆಲವರು ಸದೃಢಕಾಯರು ಮತ್ತು ಕೆಲವರು ನಿತ್ಯ ಹಾಸಿಗೆಯಲ್ಲಿ ಬಳಲಬೇಕಾದವರು ಎನ್ನುವ ತರತಮದೃಷ್ಟಿ ಪರಮಾತ್ಮನದಲ್ಲ.ಪರಮಾತ್ಮನು ಮನುಷ್ಯರಲ್ಲಿ ಭೇದವನ್ನೆಣಿಸಲಾರ.ನಮಗೆ ಕಾಣುತ್ತಿರುವ ಈ ಅಸಮಾನತೆ,ಈ ವೈರುಧ್ಯ ಮನುಷ್ಯರ ಸೃಷ್ಟಿಯೇ ಹೊರತು ಪರಮಾತ್ಮನ ಸೃಷ್ಟಿಯಲ್ಲ.ಒಂದು ವೇಳೆ ಪರಮಾತ್ಮನು ಬ್ರಾಹ್ಮಣರು ಶ್ರೇಷ್ಠರು ಶೂದ್ರರು ಕನಿಷ್ಟರು ಎಂದು ತರತಮವೆಣಿಸಿದ್ದರೆ ಬ್ರಾಹ್ಮಣರು ಸಶರೀರಿಗಳಾಗಿಯೇ ಸ್ವರ್ಗಕ್ಕೆ ಹೋಗುತ್ತಿದ್ದರು.ಆದರೆ ಹಾಗಿಲ್ಲವಲ್ಲ.ಬ್ರಾಹ್ಮಣರೂ ಸಾಯುತ್ತಾರೆ,ಶೂದ್ರರೂ ಸಾಯುತ್ತಾರೆ.ಬ್ರಾಹ್ಮಣರನ್ನು ಸುಟ್ಟರೆ ಶೂದ್ರರನ್ನು ಹೂಳುತ್ತಾರೆ.ಲಕ್ಷ,ಕೋಟಿಗಳ ಕಾಣಿಕೆ ಕೊಡುವ ಭಕ್ತಶ್ರೇಷ್ಠ,ಒಂದಾಣೆ ಕಾಣಿಕೆ ಕೊಡದ ಭಕ್ತ ಕನಿಷ್ಟ ಎಂದು ಪರಮಾತ್ಮನು ಬಗೆದಿದ್ದರೆ ಕೋಟ್ಯಾಧೀಶ ಸತ್ತಾಗ ದೇವದೂತರು ಪುಷ್ಪಕವಿಮಾನ ತಂದು ಆತನನ್ನು ನೇರವಾಗಿ ಸ್ವರ್ಗಕ್ಕೋ, ವೈಕುಂಠಕ್ಕೆ ಕರೆದುಕೊಂಡು ಹೋಗುತ್ತಿದ್ದರು.ಆದರೆ ಹಾಗಾಗುತ್ತಿಲ್ಲವಲ್ಲ.ಕೋಟ್ಯಾಧೀಶ,ಮಿಲಿಯನೇರ್,ಬಿಲಿಯನೇರ್ ಗಳು ಸತ್ತಾಗಲೂ ಅವರನ್ನು ಛಟ್ಟ,ವಿಮಾನ ಇಲ್ಲವೆ ಹೆಣದ ಪೆಟ್ಟಿಗೆಯಲ್ಲೇ ಹೊತ್ತುಕೊಂಡು ಹೋಗಿ ಅಂತ್ಯ ಸಂಸ್ಕಾರ ಮಾಡುತ್ತಾರೆ.ನಾವು ಸ್ವಾಮಿಗಳು,ಶರಣರು,ಸಂತರು,ಸಂನ್ಯಾಸಿಗಳು ಎಲ್ಲರಿಗಿಂತ ದೊಡ್ಡವರು ಎಂದು ಕೊಚ್ಚಿಕೊಳ್ಳುವವರೇನೂ ದೇಹಧಾರಿಗಳಾಗಿ ಕೈಲಾಸ ಇಲ್ಲವೆ ವೈಕುಂಠಗಳಿಗೆ ಹೋಗಿಲ್ಲ.ಅವರೂ ಎಲ್ಲ ಮನುಷ್ಯರಂತೆ ಹಸಿವು,ನೋವು,ರೋಗಗಳಿಂದ ಬಳಲಿದ್ದಾರೆ ಆಸ್ಪತ್ರೆಗಳಿಗೆ ಸೇರಿದ್ದಾರೆ.ಹೆಚ್ಚೆಂದರೆ ಆಸ್ಪತ್ರೆಗಳಲ್ಲಿ ಅವರಿಗೆ ವಿಶೇಷವಾರ್ಡ್ ಗಳ ವ್ಯವಸ್ಥೆ ಮಾಡಬಹುದಷ್ಟೇ.ಸಂನ್ಯಾಸಿಗಳೂ ಸಾಯುತ್ತಾರೆ ಸಂಸಾರಿಗಳಂತೆ.ವಿಶೇಷವೇನು ಹಾಗಾದರೆ ಸಂನ್ಯಾಸಿಗಳದ್ದು.ಏನೂ ವಿಶೇಷವಿಲ್ಲ.ಅವರೂ ನಮ್ಮಂತೆಯೇ ಮನುಷ್ಯ ಮಾತ್ರರಷ್ಟೆ.ಉಟ್ಟ ಬಟ್ಟೆಯಲ್ಲಿ ಮಾತ್ರ ವ್ಯತ್ಯಾಸವಷ್ಟೆ.ಮನುಷ್ಯರು ಅವರು ಯಾರೇ ಆಗಿರಲಿ ಹುಟ್ಟು,ಯೌವ್ವನ,ವಾರ್ಧಕ್ಯ,ಮುಪ್ಪು,ಮರಣಗಳಿಗೆ ಒಳಗಾಗುವವರೆ.ಮನುಷ್ಯರು ಹುಟ್ಟಿಸಿಕೊಂಡ ಶಾಸ್ತ್ರ,ಪುರಾಣ,ಸಂಹಿತೆ,ಕಟ್ಟುಪಾಡುಗಳಿಂದ ಕೆಲವರು ಮೇಲಿನವರು ಕೆಲವರು ಕೆಳಗಿನವರು ಆಗಿದ್ದಾರೆಯೇ ಹೊರತು ಪರಮಾತ್ಮನ ಸೃಷ್ಟಿ ಸೂತ್ರಗಳಲ್ಲಿ ಮೇಲು ಕೀಳುಗಳಿಲ್ಲ.

ಪುಟ್ಟ ಇಲಿಮರಿಯ ಮೇಲೆ ಬಲಿಷ್ಠಬೆಕ್ಕು ಎರಗಿ ಕೊಂದು ತಿನ್ನುವುದನ್ನು ಕಂಡಾಗ ಮನಸ್ಸು ಮರಗುತ್ತದೆ.ಜಿಂಕೆಯ ಮುದ್ದುಮರಿಯನ್ನು ಸಿಂಹವೋ ಹುಲಿಯೋ ನಿರ್ದಯಿಯಾಗಿ ಕೊಂದು ತಿಂದಾಗ ಸಂಕಟವಾಗುತ್ತದೆ.ಮುದ್ದು ಮೊಲವನ್ನು ನರಿಯೋ ತೋಳವೋ ಕಚ್ಚಿ ತಿಂದಾಗ ನೋವಾಗುತ್ತದೆ.ಆದರೆ ನಮ್ಮ ಮರಗುವಿಕೆ,ಸಂಕಟ,ನೋವುಗಳಿಗೆ ಸೃಷ್ಟಿಯಲ್ಲಿ ಅರ್ಥವಿಲ್ಲ.ನಾವು ಭಾವುಕರಾದುದರಿಂದ ಭಾವಾವೇಶದಿಂದ ವರ್ತಿಸುತ್ತೇವಷ್ಟೆ.ಸೃಷ್ಟಿಯಲ್ಲಿ ಒಂದು ಮತ್ತೊಂದಕ್ಕೆ ಪೂರಕ.ಹುಲಿ ಜಿಂಕೆಯನ್ನು ತಿಂದಾಗಲೇ ಜಿಂಕೆಗೆ ಮುಂದಿನ ಜನ್ಮದ ಅವಕಾಶದೊರೆಯುತ್ತದೆ,ಹುಲಿಗೆ ಬದುಕುವ ಚೈತನ್ಯ ದೊರೆಯುತ್ತದೆ.ಸೃಷ್ಟಿಯು ವಿಕಾಸಶೀಲವಾದುದು.ಸೃಷ್ಟಿಯಲ್ಲಿ ಇರುವೆ ಮೊದಲ್ಗೊಂಡು ಮನುಷ್ಯಕಡೆಯಾಗಿ ಎಂಬತ್ತ್ನಾಲ್ಕು ಲಕ್ಷ ಜೀವರಾಶಿಗಳಿವೆ.ಇರುವೆಯು ಮನುಷ್ಯನಾಗುವವರೆಗೆ ಬೆಳೆಯಬೇಕಾದರೆ ಸಾಯುತ್ತಲೇಹೋಗಬೇಕು.ಕೊನೆಗೆ ಮನುಷ್ಯರೂ ಮತ್ತೆ ಹುಟ್ಟು ಸಾವಿನ ಚಕ್ರಕ್ಕೆ ಸಿಲುಕಲೇಬೇಕು.ಇದು ಸೃಷ್ಟಿ ನಿಯಮ! ಸೃಷ್ಟಿಯು ತನ್ನ ನಿಯಮಕ್ಕೆ ಅನುಗುಣವಾಗಿ ಜೀವಿಗಳನ್ನು ಹುಟ್ಟಿಸುತ್ತದೆ,ಪೊರೆಯುತ್ತದೆ ಮತ್ತು ಕೊನೆಗೆ ಸಂಹರಿಸುತ್ತದೆ.ಬ್ರಹ್ಮ,ವಿಷ್ಣು ಮತ್ತು ರುದ್ರರೆಂಬ ಮೂರು ಮೂರ್ತಿಗಳ ಕಲ್ಪನೆಯ ಹಿಂದೆಯೂ ಸೃಷ್ಟಿಯ ಈ ಸೂತ್ರವೇ ಕಾರ್ಯಗೈದಿದೆ.

ನಾವು ಸೃಷ್ಟಿಯನ್ನು ಬದಲಿಸಲಾರೆವು.ಸೃಷ್ಟಿಯ ಬಗೆಗೆ ವಿಪರೀತಭಾವನೆಗಳನ್ನು ತಳೆಯುವ ಬದಲು ನಾವು ಸೃಷ್ಟಿಯ ತತ್ತ್ವವನ್ನು ಅರ್ಥಮಾಡಿಕೊಳ್ಳಬೇಕು,ಸೃಷ್ಟಿಯ ಸತ್ಯವನ್ನು ಮನಗಾಣಬೇಕು,ಸೃಷ್ಟಿಯ ಸೊಬಗನ್ನು ಆನಂದಿಸಬೇಕು.ಸೃಷ್ಟಿಯ ಸೌಂದರ್ಯವನ್ನು ಆನಂದಿಸಬೇಕು ಎಂದರೆ ನಾವು ನಮ್ಮ ದೃಷ್ಟಿಯನ್ನು ಬದಲಿಸಿಕೊಳ್ಳಬೇಕು.ನಮ್ಮ ದೃಷ್ಟಿ ನೆಟ್ಟಗಿದ್ದರೆ ಸೃಷ್ಟಿಯು ಸುಂದರವಾಗಿ ಕಾಣುತ್ತದೆ,ನಮ್ಮದೃಷ್ಟಿಯಲ್ಲಿ ದೋಷವಿದ್ದರೆ ಸೃಷ್ಟಿಯಲ್ಲಿಯೂ ದೋಷಕಾಣುತ್ತದೆ.ಪರಮಾತ್ಮನ ಸೃಷ್ಟಿಯ ಸೌಂದರ್ಯವನ್ನು ಆನಂದಿಸಲು ನಮ್ಮ ದೃಷ್ಟಿಯನ್ನು ಸುಂದರವಾಗಿಸಿಕೊಳ್ಳಬೇಕು.ಪರಮಾತ್ಮನ ಪೂರ್ಣಸೃಷ್ಟಿಯನ್ನು ಅರ್ಥಮಾಡಿಕೊಳ್ಳಲು ನಮ್ಮ ದೃಷ್ಟಿಯೂ ಪೂರ್ಣವಾಗಬೇಕು.ಪೂರ್ಣನಾದ ಪರಮಾತ್ಮನಿಂದ ಅಪೂರ್ಣ ಸೃಷ್ಟಿ ಇಲ್ಲವೆ ಪ್ರಪಂಚಹೊರಬರದು; ಪೂರ್ಣನಾದ ಪರಮಾತ್ಮನಿಂದ ಪೂರ್ಣವಾದ ಪ್ರಪಂಚವೇ ಹೊರಹೊಮ್ಮುತ್ತದೆ ಎನ್ನುವ ಆನಂದವನ್ನು ಅನುಭವಿಸಲು ನಾವು ಪೂರ್ಣದೃಷ್ಟಿಯವರಾಗಬೇಕು.ಪೂರ್ಣವು ಮಾತ್ರ ಪೂರ್ಣವನ್ನು ಗುರುತಿಸುತ್ತದೆ; ಅಪೂರ್ಣವು ಎಂದೂ ಪರಮಾತ್ಮನ ಪೂರ್ಣತೆಯನ್ನು ಅರಿಯದು,ಆನಂದಿಸದು.

ಮುಕ್ಕಣ್ಣ ಕರಿಗಾರ

27.05.2022