ಮಹಾತಪಸ್ವಿಯವರ ಮಹೋಪದೇಶಗಳು ೦೧ : ” ಒಳ್ಳೆಯತನವೇ ದೇವತ್ವದ ಲಕ್ಷಣ” – ಮುಕ್ಕಣ್ಣ ಕರಿಗಾರ

ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳು

ನನ್ನ ಗುರುದೇವ ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳು ‘ ಒಳ್ಳೆಯತನವೇ ದೇವತ್ವದ ಲಕ್ಷಣ’ ಎನ್ನುತ್ತಿದ್ದರು.ಯಾರಾದರೂ ಅವರ ಬಳಿ ಬಂದು’ What are the characteristics of God?’ ಅಂದರೆ ದೇವರ ಲಕ್ಷಣಗಳೇನು ಎಂದು ಪ್ರಶ್ನಿಸಿದಾಗ ಗುರುಗಳು ಉತ್ತರಿಸುತ್ತಿದ್ದುದು ‘ God is the short form of Good’. ‘ಒಳ್ಳೆಯತನದ ಸಂಕ್ಷಿಪ್ತರೂಪವೇ ದೇವರು’.ಇದು ದೇವರ ಅತ್ಯಂತ ಸರಳ ಹಾಗೂ ಪರಿಪೂರ್ಣ ವ್ಯಾಖ್ಯಾನ.ಒಳ್ಳೆಯವರಾಗಿರುವುದು,ಒಳ್ಳೆಯದನ್ನು ಬಯಸುವುದನ್ನು ರೂಢಿಸಿಕೊಳ್ಳಬೇಕು ಎಂದು ಗುರುಗಳು ಭಕ್ತರಿಗೆ ಉಪದೇಶಿಸುತ್ತಿದ್ದರು.’Be good,Do good’ ಎನ್ನುವ ಮಾತನ್ನು ಅವರು ತಮ್ಮ ಸಾನ್ನಿಧ್ಯವನ್ನರಸಿ ಬರುವವರಿಗೆ ಉಪದೇಶಿಸುತ್ತಿದ್ದರು.’ ಒಳ್ಳೆಯವರಾಗಿರಿ,ಒಳ್ಳೆಯದನ್ನು ಮಾಡಿ’.ಇದಕ್ಕಿಂತ ಮಿಗಿಲು ಮಹೋಪದೇಶ ಇರಲು ಸಾಧ್ಯವೆ? ಸಂಘರ್ಷಮಯ ಆಧುನಿಕ ಜಗತ್ತಿಗೆ ಗುರುದೇವ ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳವರ ಈ ಮಹೋಪದೇಶವು ದಿವ್ಯೌಷಧಿ.ಈ ಉಪದೇಶಾಮೃತವನ್ನು ಜೀರ್ಣಿಸಿಕೊಳ್ಳುವುದರಿಂದ ಮನುಕುಲವು ತನ್ನನ್ನು ಕಾಡಿ,ಪೀಡಿಸುತ್ತಿರುವ ದ್ವೇಷಾಸೂಯೆ,ಈರ್ಷೆ,ಮದ- ಮತ್ಸರಗಳಿಂದುಂಟಾಗುವ ವಿಪರೀತಪರಿಣಾಮಗಳಿಂದ ಮುಕ್ತವಾಗುತ್ತದೆ.

‘ ಒಳ್ಳೆಯತನದ ಸಂಕ್ಷಿಪ್ತರೂಪವೇ ದೇವರು’ ಎನ್ನುವ ಉಪದೇಶವಾಕ್ಕನ್ನೊಂದಿಷ್ಟು ವಿಚಾರಿಸೋಣ.ದೇವರು ಅಥವಾ ಪರಮಾತ್ಮ ಜಗತ್ತಿನ ಸೃಷ್ಟಿಕರ್ತ,ಜಗನ್ನಿಯಾಮಕ.ದೇವರು ತಾನು ಹುಟ್ಟಿಸಿದ ಪ್ರಪಂಚದಲ್ಲಿ ಯಾರನ್ನೂ ದ್ವೇಷಿಸುವುದಿಲ್ಲ,ಯಾರಿಗೂ ಕೆಟ್ಟದ್ದನ್ನು ಬಯಸುವುದಿಲ್ಲ.ದೇವರು ಒಳ್ಳೆಯದನ್ನು ಮಾಡಲು ಮಾತ್ರಬಲ್ಲ,ಕೆಟ್ಟದ್ದನ್ನು ಮಾಡಲಾರ.ಕೆಟ್ಟದ್ದನ್ನು ಮಾಡುವುದು ದೇವರ ಸ್ವಭಾವವೂ ಅಲ್ಲ.Good ಎಂದರೆ ಒಳ್ಳೆಯದು.Good ಶಬ್ದದಲ್ಲಿ ಇರುವ ಎರಡು O ಗಳಲ್ಲಿ ಒಂದು O ತೆಗೆದರೆ ದೇವರು.ನಮ್ಮೊಳಗಿನ ಅವಗುಣಗಳನ್ನು ಕಳೆದುಕೊಂಡರೆ ನಾವೇ ದೇವರಾಗುತ್ತೇವೆ.Good ಶಬ್ದದಿಂದ ಒಂದು O ಹೊರತೆಗೆದು ದೇವರನ್ನು ಪಡೆಯುವಂತೆ ನಮ್ಮಲ್ಲಿ ಇರುವ ಗುಣ ಮತ್ತು ಅವಗುಣಗಳಲ್ಲಿ ಅವಗುಣವನ್ನು ತೆಗೆದುಹಾಕಿದರೆ ಸಾಕು ನಾವೇ ದೇವರಾಗುತ್ತೇವೆ.ಗುಣವು ಒಳ್ಳೆಯತನದ ಸಂಕೇತವಾದರೆ ಅವಗುಣವು ಕೆಟ್ಟತನದ ಸಂಕೇತ.ಗುಣವು ಒಳಿತನ್ನು ಬಯಸುವುದರಿಂದ ಅದನ್ನು ‘ ಸದ್ಗುಣ’ ಎನ್ನುತ್ತಾರೆ; ಅವಗುಣವು ಕೆಟ್ಟದ್ದನ್ನು ಬಯಸುವುದರಿಂದ ಅದನ್ನು ‘ ದುರ್ಗುಣ’ ಎನ್ನುತ್ತಾರೆ.ಸದ್ಗುಣ ಮತ್ತು ದುರ್ಗುಣಗಳೆರಡೂ ಮನುಷ್ಯರ ಸ್ವಭಾವಗಳೇ.ಯಾವುದಕ್ಕೆ ಒತ್ತುನೀಡುತ್ತೇವೆಯೋ ,ಯಾವುದನ್ನು ಪೋಷಿಸುತ್ತೇವೆಯೋ ಅಂತಹ ಗುಣಿಗಳಾದ ವ್ಯಕ್ತಿಗಳಾಗಿ ರೂಪಗೊಳ್ಳುತ್ತೇವೆ.ಒಳ್ಳೆಯ ವಿಚಾರಗಳನ್ನು ಬೆಳೆಸಿಕೊಂಡರೆ ಒಳ್ಳೆಯವರು ಆಗುತ್ತೇವೆ,ಕೆಟ್ಟವಿಚಾರಗಳನ್ನು ಬೆಳೆಸಿಕೊಂಡರೆ ಕೆಟ್ಟವರು ಆಗುತ್ತೇವೆ.ಸಂಸ್ಕಾರಬಲದಿಂದ ಶಿಷ್ಟವ್ಯಕ್ತಿಗಳು,ಸುಸಂಸ್ಕೃತರು ಆದರೆ ಸಂಸ್ಕಾರಹೀನರಾಗಿ ದುಷ್ಟರು,ದುರ್ಮಾರ್ಗಿಗಳು ಆಗುತ್ತಾರೆ‌.

ನಾವು ಒಳ್ಳೆಯವರಾಗಿರಬೇಕು ಮತ್ತು ಇತರರರಿಗೆ ಒಳ್ಳೆಯದನ್ನು ಬಯಸಬೇಕು.ನಮಗಷ್ಟೇ ಒಳಿತಾಗಲಿ ಇತರರಿಗೆ ಕೆಡುಕಾಗಲಿ ಎಂದು ಬಯಸಬಾರದು.ನಾನು ಉದ್ಧಾರವಾಗಬೇಕು,ಇತರರು ಅವನತಿ ಹೊಂದಬೇಕು ಎಂದು ಆಶಿಸಬಾರದು.ಜಗತ್ತನ್ನು ಹುಟ್ಟಿಸಿದ ದೇವರು ಎಲ್ಲರಿಗೂ ಉತ್ತಮಿಕೆಯ,ಉನ್ನತಿಯ ಅವಕಾಶವನ್ನು ನೀಡಿರುವುದರಿಂದ ನಾವು ಇನ್ನೊಬ್ಬರಿಗೆ ನೆರವು ಆಗುವುದು ಪರಮಾತ್ಮನ ಸೇವೆ ಎಂದು ತಿಳಿದುಕೊಳ್ಳಬೇಕು.ನಾವು ಒಳ್ಳೆಯವರು ಆಗುವುದರಿಂದ ಇತರರು ಒಳ್ಳೆಯವರು ಆಗುತ್ತಾರೆಯೇ ಎನ್ನುವ ಯೋಚನೆ ಬೇಡ.ನಮ್ಮಷ್ಟಕ್ಕೆ ಒಳ್ಳೆಯವರು ಆದರೆ ಸಾಕು,ಜಗತ್ತು ಒಳ್ಳೆಯವರಿಂದ ತುಂಬುತ್ತದೆ.ಒಬ್ಬರು ಮತ್ತೊಬ್ಬರನ್ನು ಅನುಸರಿಸುವುದು ಮನುಷ್ಯರ ಸ್ವಭಾವವಾದ್ದರಿಂದ ಒಳ್ಳೆಯವರಾಗುತ್ತಲೇ ಹೋಗುವುದರಿಂದ ಒಳ್ಳೆಯತನ ವಿಕಸಿಸಿ ಜಗತ್ತು ಒಳ್ಳೆಯತನದಿಂದ ಕೂಡುತ್ತದೆ.ಒಳ್ಳೆಯವರಾಗುವುದು,ಒಳ್ಳೆಯದನ್ನು ಬಯಸುವುದು ಪರಮಾತ್ಮನಿಗೆ ಹತ್ತಿರ ಆಗುವ ಸೂತ್ರ ಆದ್ದರಿಂದ ಒಳ್ಳೆಯವರು ಆಗೋಣ,ಒಳಿತನ್ನು ಬಯಸೋಣ,ಒಳ್ಳೆಯ ಪ್ರಪಂಚವನ್ನು ನಿರ್ಮಿಸೋಣ.

ಮುಕ್ಕಣ್ಣ ಕರಿಗಾರ

26.05.2022