ಅನುಭಾವ ಚಿಂತನೆ : ಮುಕ್ತ — ವಿರಕ್ತ : ಮುಕ್ಕಣ್ಣ ಕರಿಗಾರ

ಅನುಭಾವ ಚಿಂತನೆ

ಮುಕ್ತ — ವಿರಕ್ತ

ಮುಕ್ಕಣ್ಣ ಕರಿಗಾರ

‘ ತನ್ನ ತಾನರಿತವನೆ ಮುಕ್ತ,ತನ್ನ ತಾನರಿಯದೆ ಹ್ಯಾಗೆ ವಿರಕ್ತ?’ ಎಂದು ಹಾಡಿದ್ದಾರೆ ಅನುಭಾವಿಗಳು.ಈ ಮಾತಿನಲ್ಲಿ ಮುಕ್ತ ಮತ್ತು ವಿರಕ್ತರಿಬ್ಬರ ಲಕ್ಷಣಗಳನ್ನು ಹೇಳಲಾಗಿದೆ.ತನ್ನನ್ನು ತಾನು ಅರಿತವನೇ ಮುಕ್ತ ಎನ್ನುವುದು ಮುಕ್ತನ ಲಕ್ಷಣ ಎಂದು ಸಾರಿ ತನ್ನನ್ನು ತಾನು ಅರಿಯದವನು ವಿರಕ್ತನಲ್ಲ ಎಂದು ಘೋಷಿಸಿದ್ದಾರೆ.

ಭಾರತೀಯ ಶಾಸ್ತ್ರಗಳು ಭಾರತೀಯರಿಗೆ ಧರ್ಮ,ಅರ್ಥ,ಕಾಮ ಮತ್ತು ಮೋಕ್ಷಗಳೆಂಬ ನಾಲ್ಕು ಪುರುಷಾರ್ಥಗಳನ್ನು ವಿಧಿಸಿವೆ.ಈ ಪುರುಷಾರ್ಥಗಳಲ್ಲಿ ಮೊದಲ ಮೂರು ಪುರುಷಾರ್ಥಗಳು ಅತ್ಯಂತ ಸುಲಭವಾಗಿ ಪಡೆಯಬಹುದಾದ,ಎಲ್ಲರಿಗೂ ಎಟುಕಬಹುದಾದ ಪುರುಷಾರ್ಥಗಳು.ಆದರೆ ಕೊನೆಯ ಪುರುಷಾರ್ಥವಾದ ಮೋಕ್ಷವು ಎಲ್ಲರಿಗೂ ದೊರಕದ,ಸುಲಭಸಾಧ್ಯವಲ್ಲದ ಪುರುಷಾರ್ಥ.ಕೆಲವೇ ಜನ ಯೋಗೀಶ್ವರರಿಗೆ ಮಾತ್ರ ಲಭಿಸಬಹುದಾದ ಪರಮಸಿದ್ಧಿ,ಪರಮಾರ್ಥ ಮೋಕ್ಷ ಎನ್ನುವುದು.ನಾನು ಮುಕ್ತ,ನೀನು ಮುಕ್ತ ಎಂದುಕೊಂಡರೆ ಮುಕ್ತರಾಗುವುದಿಲ್ಲ.ನಾನು ದೊಡ್ಡವನು,ನನ್ನ ಹಿಂದೆ ಇಂಥ ಪೀಠ ಇದೆ,ಇಂಥ ಪರಂಪರೆ ಇದೆ ಎಂದು ಬೀಗುವವರಿಗೆಲ್ಲ ಮೋಕ್ಷ ಸಿಗುವುದಿಲ್ಲ.ಹಾಗೊಂದು ವೇಳೆ ಮೋಕ್ಷವು ಅಷ್ಟು ಸುಲಭವಾಗಿ ಎಲ್ಲರಿಗೂ ಸಿಗುವಂತಿದ್ದರೆ ಕೈಲಾಸದಲ್ಲಿ ಶಿವನಿಗೇ ಕುಳಿತುಕೊಳ್ಳಲು ಜಾಗ ಸಿಗುತ್ತಿರಲಿಲ್ಲ.ಮರುಳಶಂಕರನೆಂದು ಬಿರುದುಗೊಂಡರೂ ಶಿವನು ಬಹಳ ಬುದ್ಧಿವಂತ.ಎಲ್ಲರಲ್ಲೂ ಮೋಕ್ಷಾಪೇಕ್ಷೆ ಹುಟ್ಟದಂತೆ ಬಗೆಬಗೆಯ ಮಾಯೆ- ಮೋಹಗಳನ್ನುಂಟುಮಾಡಿ ನರರನ್ನು ಹುಟ್ಟು ಸಾವುಗಳ ಚಕ್ರದಲ್ಲಿಯೇ ಸುತ್ತುವಂತೆ ಮಾಡುತ್ತಾನೆ.ಎಲ್ಲರನ್ನೂ ತನ್ನಿಂದ ದೂರೀಕರಿಸಿದರೆ ಹೇಗೆ ಎಂದು ಶಿವನೇ ನಿಯಮಿಸಿದ್ದಾನೆ ‘ ಲಕ್ಷಕ್ಕೆ ಒಬ್ಬ ಭಕ್ತ,ಕೋಟಿಗೆ ಒಬ್ಬ ಮುಕ್ತ’ ಎನ್ನುವ ಶಿವಶಾಸನವನ್ನು.ಅಂದರೆ ಒಂದು ಲಕ್ಷ ಜನರಲ್ಲಿ ಒಬ್ಬರಲ್ಲಿ ಮಾತ್ರ ಶಿವನಲ್ಲಿ ಭಕ್ತಿ ಮೊಳೆಯುತ್ತದೆ,ಒಂದು ಕೋಟಿ ಜನರಲ್ಲಿ ಒಬ್ಬರಿಗೆ ಮಾತ್ರ ಮೋಕ್ಷ ಸಿದ್ಧಿಸುತ್ತದೆ.ನಮ್ಮ ದೇಶದ ಜನಸಂಖ್ಯೆ ಒಂದು ನೂರಾ ಮುವ್ವತ್ತು ಕೋಟಿ ಇದ್ದರೆ ಅದರಲ್ಲಿ ಒಂದು ನೂರಾ ಮುವ್ವತ್ತು ಜನರು ಮಾತ್ರ ಮೋಕ್ಷಕ್ಕೆ ಅರ್ಹರು! ಅಂದರೆ ಗೊತ್ತಾಗಿರಬೇಕಲ್ಲ ಮೋಕ್ಷ ಎನ್ನುವುದು ಎಷ್ಟು ಕಠಿಣ ಅಂತ.

ಮೋಕ್ಷ ಪಡೆಯಬೇಕಾದರೆ ವೇದ,ಉಪನಿಷತ್ತು,ಶಾಸ್ತ್ರ- ಪುರಾಣಗಳನ್ನು ಓದಬೇಕಿಲ್ಲ.ತರ್ಕ,ಸಿದ್ಧಾಂತಗಳ ಗೊಡವೆಯೂ ಬೇಕಿಲ್ಲ– ‘ ತನ್ನನ್ನು ತಾನು ಅರಿತುಕೊಳ್ಳಬೇಕು’.ಎಷ್ಟು ಸುಲಭದ ಮಾತು! ಕೇಳಲೇನೋ ಬಹಳ ಸುಲಭ ಅರ್ಥ ಮಾಡಿಕೊಳ್ಳಲು,ಆಚರಿಸಲು ಬಹಳ ಕಷ್ಟ.ತನ್ನನ್ನು ತಾನು ಅರಿಯುವುದು ಎಂದರೆ ತನ್ನ ನಿಜಸ್ವರೂಪವನ್ನು ಅರಿಯುವುದು.ಲೋಕದ ಮಾನವರೆಲ್ಲ ‘ ನೀನು ಯಾರು? ಎಂದರೆ ನಾನು ಇಂಥವನು,ಇಂಥ ಕುಲದಲ್ಲಿ,ಇಂಥ ಮನೆಯಲ್ಲಿ,ಇಂಥ ಊರಲ್ಲಿ ಹುಟ್ಟಿದ್ದೇನೆ,ಇಂಥ ವೃತ್ತಿ ಮಾಡುತ್ತೇನೆ,ಇಂಥವರನ್ನು ಮದುವೆಯಾಗಿದ್ದೇನೆ ಎಂದು ಹೇಳುತ್ತಾರೆಯೇ ಹೊರತು ನಿಜವಾದ ‘ ನಾನು ‘ ಯಾರು ಎಂದು ಅವರಿಗೆ ಗೊತ್ತಿರುವುದಿಲ್ಲ.ನಿಜವಾದ ‘ ನಾನು’ ದೇಹವಲ್ಲ,ಆಕಾರವಲ್ಲ,ಬಣ್ಣವಲ್ಲ,ಕುಲವಲ್ಲ- ಗೋತ್ರವಲ್ಲ,ಹೆಸರಿಲ್ಲ,ಊರಿಲ್ಲ,ಉಪಾಧಿ ಮೊದಲಿಲ್ಲ.ಹೇಗೆ ಅರ್ಥೈಸುವುದು ಇದನ್ನು ? ದೇಹವೇ ನಾನಲ್ಲ,ಅದು ಹುಟ್ಟುತ್ತದೆ,ಸಾಯುತ್ತದೆ.ಹೆಸರು ನಾನಲ್ಲ– ಅದು ನಮ್ಮನ್ನು ಗುರುತಿಸಲು ಇಟ್ಟಿದ್ದಾರೆ.ಬಣ್ಣ ನಾನಲ್ಲ- ಕರಗುತ್ತದೆ,ಮಿರುಗುತ್ತದೆ.ಹಾಗಾದರೆ ಯಾರು ನಾನು ? ನಾನು ಯಾರು? ಎಂದು ವಿಚಾರಿಸುತ್ತಾ ಹೋದಾಗ ಕೊನೆಗೆ ದೊರಕುವುದೇ ಆತ್ಮ ಎನ್ನುವುದು.’ನಾನು ಆತ್ಮ ‘ ಎನ್ನುವುದೇ ಸತ್ಯ,ಪರಮಾರ್ಥ.ನಾನು ಆತ್ಮ ಎಂದು ಅರಿತಾಗ ನನ್ನ ನಿಜಸ್ವರೂಪ ನನಗೆ ಅರಿವಾಗುತ್ತದೆ.ಆಗ ನಾನು ದೇಹವಲ್ಲ,ನಾನು ರೂಪವಲ್ಲ,ನಾನು ಮಗನಲ್ಲ,ನಾನು ತಂದೆಯೂ ಅಲ್ಲ,ನಾನು ಇಲ್ಲಿ ಹುಟ್ಟಲಿಲ್ಲ,ಅಲ್ಲಿಗೆ ಹೋಗಲಿಲ್ಲ.ನಾನು ಯಾವುದನ್ನೂ ಮಾಡಲಿಲ್ಲ,ಯಾವುದಕ್ಕೂ ಅಂಟಿಕೊಳ್ಳಲಿಲ್ಲ ಎಂದರ್ಥವಾಗುತ್ತದೆ.ನಮ್ಮ ಭಾವನೆ- ಬಂಧನ,ಬಂಧ- ಸಂಬಂಧಗಳು ದೇಹಕ್ಕೇ ಹೊರತು ಆತ್ಮನಿಗಲ್ಲ.ನಮ್ಮಲ್ಲಿ ದೇಹಭಾವ ಇರುವವರೆಗೆ ಪ್ರಪಂಚಭಾವ ಇರುತ್ತದೆ,ದೇಹಭಾವ ಅಳಿದೊಡನೆ ದೇವಭಾವ ಮೂಡುತ್ತದೆ.ಆಗ ತಾನೇ ತಾನಾಗುತ್ತಾನೆ,ಪ್ರಪಂಚಕ್ಕೆ ಅಂಟಿಕೊಳ್ಳುವುದಿಲ್ಲ,ಮುಕ್ತನಾಗುತ್ತಾನೆ ಪರವಸ್ತುವೇ ಆಗುತ್ತಾನೆ.ಸಂಖ್ಯೆಗಳಾಗುವುದು ಲೌಕಿಕರ ಲಕ್ಷಣವಾದರೆ ಶೂನ್ಯವಾಗುವುದು ಮುಕ್ತರ ಲಕ್ಷಣ.

ಇನ್ನು ‘ ವಿರಕ್ತ’ ರ ಮಾತು.ಕೆಲವರು ತಮನ್ನು ತಾವು ವಿರಕ್ತರು ಎಂದು ಕರೆದುಕೊಳ್ಳುತ್ತಾರೆ .ಕಾಷಾಯಧಾರಿಗಳಾದರೆ ಅಂದರೆ ಕಾವಿಯನ್ನು ಉಟ್ಟೊಡನೆ ವಿರಕ್ತರಾದೆವು ಎನ್ನುವ ಭ್ರಮೆ ಅವರದು.ವಿರಕ್ತಿ ಎನ್ನುವುದು ಉಟ್ಟ ಬಟ್ಟೆಯಿಂದ ಬರುವುದಲ್ಲ,ಆತ್ಮಭಾವದಲ್ಲಿ ಸ್ಥಿತನಾಗುವುದರಿಂದ ಸಿದ್ಧಿಸುತ್ತದೆ.ರಕ್ತ ಮತ್ತು ವಿರಕ್ತ ಎನ್ನುವ ಎರಡು ಶಬ್ದಗಳನ್ನು ಸ್ವಲ್ಪ ವಿವರಿಸಿದರೆ ವಿರಕ್ತನ ಲಕ್ಷಣ ಸುಲಭವಾಗಿ ಅರ್ಥವಾಗುತ್ತದೆ.ಮನುಷ್ಯರು ರಕ್ತ ಮಾಂಸಗಳ ದೇಹವನ್ನು ಹೊಂದಿದ್ದರಿಂದ ಮನುಷ್ಯರೆಲ್ಲರೂ ರಕ್ತಿಗಳು.ಈ ರಕ್ತ ಇದೆಯಲ್ಲ,ಇದು ಸಾಮಾನ್ಯವಾದುದಿಲ್ಲ.ರಕ್ತದಿಂದಲೇ ಮನುಷ್ಯ ಸಂಸಾರದಲ್ಲಿ ಆಸಕ್ತನಾಗಿ,ಅನುರಕ್ತನಾಗಿ ಪ್ರೀತಿ,ಪ್ರೇಮ,ಪ್ರಣಯಗಳಂತಹ ಭಾವನೆಗಳಿಂದ ಸಂಸಾರಿಗನಾಗುತ್ತಾನೆ.ರಕ್ತದಿಂದಲೇ ಸಂಬಂಧಗಳು ಹುಟ್ಟುತ್ತವೆ.ರಕ್ತದಿಂದಲೇ ರಾಗ- ದ್ವೇಷಗಳು ಹುಟ್ಟುತ್ತವೆ; ಬೇಕು- ಬೇಡ ಎನ್ನುವ ಉಭಯ ಭಾವಗಳು ಹುಟ್ಟುವುದು ರಕ್ತದಿಂದಾಗಿಯೇ.ಈ ರಕ್ತಗುಣವೇ ಮನುಷ್ಯರನ್ನು ಪ್ರಪಂಚಿಕರನ್ನಾಗಿ ಮಾಡುವುದು.ನಾನು,ನನ್ನವರು,ಹತ್ತಿದವರು- ಹೊಂದಿದವರು,ಬಂಧು- ಸಂಬಂಧಿಕರು,ಮಿತ್ರರು- ಶತ್ರುಗಳು ಆಗುವುದೆಲ್ಲ ರಕ್ತದಿಂದಾಗಿ.ಗಳಿಸಬೇಕು,ಕೂಡಿಡಬೇಕು,ಉನ್ನತಿಯನ್ನು ಹೊಂದಬೇಕು ಎನ್ನುವ ಆಸೆ- ಆಕಾಂಕ್ಷೆಗಳು ಹುಟ್ಟುವುದು ರಕ್ತದಿಂದ.ಈ ಗುಣ,ಲಕ್ಷಣಗಳು ‘ವಿರಕ್ತರು’ ಎಂದು ಕೊಚ್ಚಿಕೊಳ್ಳುತ್ತಿರುವ ಯಾರಲ್ಲಿ ಇಲ್ಲ ಹೇಳಿ? ಬಹುತೇಕ ಜನ ಕಾವಿಧಾರಿಗಳು ರಕ್ತಿಗಳೇ,ವಿರಕ್ತಿಗಳಲ್ಲ ತತ್ತ್ವಾರ್ಥದಲ್ಲಿ !

‘ ತನ್ನನ್ನು ತಾನು ಅರಿಯದೆ ಹ್ಯಾಗೆ ವಿರಕ್ತ?’ ಎಂದು ಪ್ರಶ್ನಿಸಿದ್ದು ಈ ಕಾರಣದಿಂದ.ತಾನು ದೇಹವಲ್ಲ ಎಂದು ತಿಳಿದವನಿಗೆ ಯಾವ ಭಾವನೆಗಳೂ ಇಲ್ಲ,ಬಂಧನವೂ ಇಲ್ಲ.ಆದರೆ ಬಹಳಷ್ಟು ಜನ ಕಾವಿಧಾರಿಗಳಿಗೆ ಸಂಸಾರಿಗಳಿಗಿಂತ ಹೆಚ್ಚಿನ ಮೋಹ- ಮಮಕಾರ,ಆಸೆ- ಆಕಾಂಕ್ಷೆಗಳಿವೆ.ಕೆಲವರಿಗೆ ತಮ್ಮ ಮಠ- ಪೀಠಗಳನ್ನು ಉನ್ನತಿಗೊಯ್ಯುವ ಬಯಕೆ,ಜಾತಿಸ್ವಾಮಿಗಳಾದವರಿಗೆ ತಮ್ಮ ಜಾತಿ ಜನಾಂಗದ ಉನ್ನತಿಯೇ ಪುರುಷಾರ್ಥ,ಅದಕ್ಕಾಗಿ ಏನನ್ನಾದರೂ ಮಾಡಲೂ ಸಿದ್ಧ ಎನ್ನುವುದು ಅಂಥವರ ಘೋಷಣೆ.ಮತ್ತೆ ಕೆಲವರಿಗೆ ಶಾಲೆ ಕಾಲೇಜು,ಆಸ್ಪತ್ರೆಗಳನ್ನು ಕಟ್ಟಿಸುವ ಆಸೆ.ಹೀಗೆ ಕಾವಿಧಾರಿಗಳಾದವರಿಗೆ ಒಂದಿಲ್ಲ ಒಂದು ವ್ಯಸನ ಕಾಡುತ್ತಿರುವುದರಿಂದ ಅವರು ವಿರಕ್ತರಲ್ಲ.ವಿರಕ್ತನಾದವನಿಗೆ ಮಠ ಪೀಠ,ಪ್ರಸಿದ್ಧಿ,ಜಾತಿ ಜನಾಂಗಗಳ ಹಿತ,ಶಾಲೆ ಕಾಲೇಜುಗಳ ಕಟ್ಟುವ ಬಯಕೆ ಏಕೆ ಇರುತ್ತದೆ ?ತಾನಾಯಿತು,ತನ್ನ ಸಾಧನೆ ಆಯಿತು ಎಂದು ಎಲ್ಲೋ ಒಂದು ಕಡೆ ನಿರುಮ್ಮಳನಾಗಿ ಕುಳಿತುಕೊಳ್ಳುತ್ತಾನೆ.ಅರಮನೆಯಂತಹ ಭವ್ಯಸೌಧಗಳಾಗಲಿ,ಎ ಸಿ ರೂಮುಗಳಾಗಲಿ,ವಿಲಾಸಿ ಕಾರುಗಳಾಗಲಿ ಬೇಕಿಲ್ಲ.ಗುಡ್ಡದ ಗುಹೆಯಾದರೂ ನಡೆದೀತು,ಹುಲ್ಲು ಕುಟೀರವಾದರೂ ಆದೀತು ವಿರಕ್ತನಿಗೆ.ಜನರು ಬರಬೇಕು,ಹಿಂದೆ ಮುಂದೆ ತಿರುಗಬೇಕು,ವಂದಿಸಬೇಕು- ಹೊತ್ತು ಮೆರೆಸಬೇಕು ಎನ್ನುವ ಬಯಕೆಗಳೂ ಇರುವುದಿಲ್ಲ ವಿರಕ್ತನಿಗೆ .ಯಾರು ಬಂದರೇನು,ಯಾರು ಬರದಿದ್ದರೇನು ತನ್ನ ಪಾಡಿಗೆ ತಾನಿರುತ್ತಾನೆ ಆತ್ಮ ಚಿಂತನೆಯಲ್ಲಿ.

ರಕ್ತಿಗೆ ವಿರುದ್ಧಗುಣ ಉಳ್ಳವನೇ ವಿರಕ್ತ.ಅಂದರೆ ಸಂಸಾರಿಯು ರಕ್ತಗುಣಗಳಿಂದಾಗಿ ಸಂಸಾರ ಬಂಧನಕ್ಕೆ ಸಿಲುಕಿದ್ದರೆ ರಕ್ತಗುಣಕ್ಕೆ ಸಿಲುಕದೆ ಪ್ರಪಂಚಕ್ಕೆ ಸಿಲುಕದವನೇ ವಿರಕ್ತ.ಯಾರಲ್ಲಿ ರಕ್ತದಗುಣಗಳಿಲ್ಲವೋ ಅವನೇ ವಿರಕ್ತ.ಅಂದರೆ ಯಾರು ಸಂಬಂಧಗಳ ಬಂಧನಕ್ಕೆ ಒಳಗಾಗಿಲ್ಲವೋ ಅವನೇ ವಿರಕ್ತ.ಯಾರು ನಾಮ,ರೂಪ,ಕ್ರಿಯೆಗಳಿಗೆ ಅಂಟಿಲ್ಲವೋ ಅವನೇ ವಿರಕ್ತ.ಆತ್ಮಭಾವದಲ್ಲಿ ಸ್ಥಿತನಾಗಿ,ಸದಾ ಆತ್ಮಾನಂದದಲ್ಲಿ ಲೋಲಾಡುವವನೇ ವಿರಕ್ತ.

ಮುಕ್ಕಣ್ಣ ಕರಿಗಾರ

24.05.2022