ಚಿಂತನೆ : ಆಶೀರ್ವಾದ ಮಾಡುವ ಸ್ಥಾನದಲ್ಲಿ ಇರುವುದೆಂದರೆ ‘ ದೊಡ್ಡ ಭಿಕ್ಷುಕರು’ ಎಂದರ್ಥ ! – ಮುಕ್ಕಣ್ಣ ಕರಿಗಾರ

ಚಿಂತನೆ

ಆಶೀರ್ವಾದ ಮಾಡುವ ಸ್ಥಾನದಲ್ಲಿ ಇರುವುದೆಂದರೆ ‘ ದೊಡ್ಡ ಭಿಕ್ಷುಕರು’ ಎಂದರ್ಥ !

ಮುಕ್ಕಣ್ಣ ಕರಿಗಾರ

ಮೇ 21 ರ ಇಂದು ನಾನು ನನ್ನ ವಿವಾಹ ವಾರ್ಷಿಕೋತ್ಸವದ ಹದಿನೆಂಟನೆಯ ವಾರ್ಷಿಕೋತ್ಸವವನ್ನು ಆಚರಿಸಿಕೊಂಡ ಸಂದರ್ಭದಲ್ಲಿ ಪತ್ನಿ,ಮಕ್ಕಳ ಸಮೇತನಾಗಿ ಮಹಾಶೈವ ಧರ್ಮಪೀಠದಲ್ಲಿ ಗುರುದೇವ ಮಹಾತಪಸ್ವಿ ಶ್ರೀ ಕುಮಾರಸ್ವಾಮಿಗಳವರ ಭಾವಚಿತ್ರಕ್ಕೆ ಹಾಗೂ ಶ್ರೀಕ್ಷೇತ್ರದ ಕೈಲಾಸದ ಅಧಿದೈವರುಗಳಾದ ವಿಶ್ವೇಶ್ವರ ಶಿವ ಮತ್ತು ವಿಶ್ವೇಶ್ವರಿ ದುರ್ಗಾದೇವಿಯರನ್ನು ಪೂಜಿಸಿ,ಆಶೀರ್ವಾದ ಪಡೆದು ಅದನ್ನು ವಾಟ್ಸಾಪ್ ಗುಂಪುಗಳಲ್ಲಿ ಮತ್ತು ನನ್ನ ಆತ್ಮೀಯರುಗಳಿಗೆ ವೈಯಕ್ತಿಕವಾಗಿ ಹಂಚಿಕೊಂಡಿದ್ದೆ.ವಿಷಯ ತಿಳಿದು ಶುಭ ಹಾರೈಸಿದ ಅಸಂಖ್ಯಾತರಲ್ಲೊಬ್ಬರಾದ ಡಾಕ್ಟರ್ ಮಹಾಂತೇಶ ಮಲ್ಲನಗೌಡರ ಅವರು ಒಂದು ವಿಶಿಷ್ಟ ಸಂದೇಶ ಕಳಿಸಿದ್ದರು.ಹಿರಿಯ ಕವಿಗಳು,ಸುಸಂಸ್ಕೃತ ಮನಸ್ಸಿನ ಹಿರಿಯರೂ ಕೊಪ್ಪಳದ ಸರಕಾರಿ ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರೂ ಆಗಿರುವ ಡಾಕ್ಟರ್ ಮಹಾಂತೇಶ ಮಲ್ಲನಗೌಡರ ಅವರು ನನ್ನೆಲ್ಲ ಸಾಹಿತ್ಯಕ- ಸಾಂಸ್ಕೃತಿಕ ಕಾರ್ಯಚಟುವಟಿಕೆಗಳನ್ನು ಮುಕ್ತಮನಸ್ಸಿನಿಂದ ಪ್ರೋತ್ಸಾಹಿಸುತ್ತಿರುವ ಹಿರಿಯರು.ಒಮ್ಮೊಮ್ಮೆ ನಯವಾದ ಟೀಕೆ,ಟಿಪ್ಪಣಿಗಳಿಂದ ತಿವಿಯುತ್ತಿರುತ್ತಾರೆ.ಇಂದು ಅವರು ಕಳಿಸಿದ ಮಾರುತ್ತರದ ಮೆಸೇಜ್ ವಿಶಿಷ್ಟವಾಗಿತ್ತು,ನನಗೆ ಆನಂದವನ್ನುಂಟು ಮಾಡಿತ್ತು ಎಂತಲೇ ಅದನ್ನೊಂದು ಚಿಂತನೆ ಲೇಖನ ರೂಪದಲ್ಲಿ ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

” ನೀವೇ ಆಶೀರ್ವಾದ ಮಾಡುವ ಸ್ಥಾನದಲ್ಲಿ ಇದ್ದೀರಿ.ನಿಮಗೂ ಆಶೀರ್ವಾದ ಒಂದು ಕೊಡುಗೆ.ದೇವರಿಗೆ ಮೀರಿದ ಮತ್ತೊಬ್ಬ ದೇವನಿದ್ದಾನೆ,ದೇವರ ದೇವ ಮಹಾದೇವ ”

ಇದು ಮಹಾಂತೇಶ ಮಲ್ಲನಗೌಡರ ಅವರ ಮೆಸೇಜ್.ಹೌದು ,ನಾನು ಮಹಾಶೈವ ಧರ್ಮಪೀಠದ ಪೀಠಾಧಿಪತಿಯಾಗಿದ್ದುದರಿಂದ ಆಶೀರ್ವಾದ ಮಾಡುವ ಸ್ಥಾನದಲ್ಲಿದ್ದೇನೆ.ಆದರೆ ನಾನೊಬ್ಬ ಭಿಕ್ಷುಕ! ಮಹಾಭಿಕ್ಷುಕ!. ನಿತ್ಯ ಆಶೀರ್ವಾದ ಮಾಡುವ ಸಾಮರ್ಥ್ಯವನ್ನು ಜಗನ್ಮಾತಾಪಿತರುಗಳಾದ ವಿಶ್ವೇಶ್ವರ ಶಿವ ಮತ್ತು ವಿಶ್ವೇಶ್ವರಿ ದುರ್ಗಾದೇವಿಯರಲ್ಲಿ ಬೇಡಿ,ಪಡೆಯುತ್ತೇನೆ.ಬಸವಣ್ಣನವರು ಎಲ್ಲ ಪುರಾತನರನ್ನು ಬೇಡಿ ತಮ್ಮ ಭಕ್ತಿಯ ಬಟ್ಟಲನ್ನು ತುಂಬಿಕೊಂಡಂತೆ ನಾನು ನಿತ್ಯವೂ ಗುರುದೇವ ಮಹಾತಪಸ್ವಿ ಶ್ರೀ ಕುಮಾರಸ್ವಾಮೀಜಿಯವರಲ್ಲಿ ಮತ್ತು ಮಹಾಶೈವ ಧರ್ಮಪೀಠದ ಕ್ಷೇತ್ರೇಶ್ವರ ಕ್ಷೇತ್ರೇಶ್ವರಿಯರಾದ ವಿಶ್ವೇಶ್ವರ ಶಿವ ಮತ್ತು ವಿಶ್ವೇಶ್ವರಿ ದುರ್ಗಾದೇವಿಯರಲ್ಲಿ ಶ್ರೀಕ್ಷೇತ್ರವನ್ನರಸಿ ಬರುವವರನ್ನು ಉದ್ಧರಿಸುವ ಸಾಮರ್ಥ್ಯ ನೀಡಲು ಬೇಡುತ್ತಿರುತ್ತೇನೆ.ಹಾಗಾಗಿ ನಾನೂ ಭಿಕ್ಷುಕನೆ! ನನ್ನಂತೆ ಆಶೀರ್ವದಿಸುವ ಸ್ಥಾನದಲ್ಲಿ ಇರುವವರೆಲ್ಲರೂ ಭಿಕ್ಷುಕರೆ! ಶಿವನ ಅನುಗ್ರಹ ಭಿಕ್ಷೆಯನ್ನು ನಿತ್ಯವೂ ಬೇಡಿಯೇ ದೊಡ್ಡವರಾದವರು ನಾವೆಲ್ಲ.

ಪರಮಾತ್ಮನೆದುರು ಬಾಗದೆ ಯೋಗಿಗಳಾಗಲು ಸಾಧ್ಯವಿಲ್ಲ.ಯೋಗಿಗಳಾಗದೆ ಲೋಕಾನುಗ್ರಹ ಸಾಮರ್ಥ್ಯ ಸಾಧ್ಯವಿಲ್ಲ.ಪರಮಾತ್ಮನೆಂಬ ನಿತ್ಯ ಹರಿಯುತ್ತಿರುವ ಹೊನಲಿನಿಂದ ನಮ್ಮ ನಮ್ಮ ಸಾಧನಾ ಸಾಮರ್ಥ್ಯವೆಂಬ ಮಡಕೆ,ಬಿಂದಿಗೆ,ತಂಬಿಗೆ,ಬಟ್ಟಲುಗಳೆನ್ನುವ ಪಾತ್ರೆಗಳಲ್ಲಿ ನೀರನ್ನು ತುಂಬಿಕೊಂಡು ಜನರಿಗೆ ತೀರ್ಥ- ಪ್ರಸಾದ ರೂಪದಲ್ಲಿ ಹಂಚಬೇಕಾದವರು.ನಾವೆಲ್ಲರೂ ಪರಮಾತ್ಮನಿಂದಲೇ ಅನುಗ್ರಹ ಸಾಮರ್ಥ್ಯ ಪಡೆಯುತ್ತೇವೆಯೇ ಹೊರತು ಅದರಲ್ಲಿ ನಮ್ಮ ಸ್ವಂತಿಕೆ,ವಿಶೇಷ ಏನೂ ಇರುವುದಿಲ್ಲ.ಯಾರು ಪರಮಾತ್ಮನ ಅನುಗ್ರಹವನ್ನು ಪಡೆಯಬಲ್ಲರೋ ಅವರೇ ಆಶೀರ್ವಾದವನ್ನು ಮಾಡಬಲ್ಲವರು.ಪರಮಾತ್ಮನು‌ಲೋಕಜನರ ಉದ್ಧಾರಕ್ಕಾಗಿಯೇ ಕೆಲವರಿಗೆ ವಿಶೇಷ ಶಕ್ತಿ ಸಾಮರ್ಥ್ಯಗಳನ್ನು ನೀಡಿ ಅವರ ಮೂಲಕ ತನ್ನಲೋಕೋದ್ಧಾರ ಲೀಲೆಯನ್ನಾಡುತ್ತಾನೆ.ಇಂಥವರೇ ನಿಗ್ರಹಾನುಗ್ರಹ ಸಮರ್ಥರಾದ,ಲೋಕೋದ್ಧಾರಕರುಗಳು,ಜನರ ಹಿತಚಿಂತಕರು.‌‌‌‌‌‌‌

ಭಕ್ತರು ,ಜನರನ್ನು ಉದ್ಧರಿಸಬೇಕು ಎನ್ನುವವರು ಆಧ್ಯಾತ್ಮಿಕ ಸಾಧನೆ ಮಾಡಬೇಕು.ಯೋಗಬಲದಿಂದ ಲೋಕೋದ್ಧಾರ ಸಾಮರ್ಥ್ಯ ಪಡೆಯಬೇಕು.ಬರಿಯ ಕೈಗಳನ್ನು ತೋರಿಸಿದರೆ ನಂಬಿದವರು ಉದ್ಧಾರವಾಗುವುದಿಲ್ಲ,ಸಂಸ್ಕೃತ ಸ್ವಸ್ತಿವಾಚನ ಮಾಡುವುದರಿಂದಾಗಲಿ ಇಲ್ಲವೆ ಸಂಸ್ಕೃತೋಕ್ತಿಗಳನ್ನು ಉದ್ಧರಿಸುವುದರಿಂದಾಗಲಿ ಭಕ್ತರು ಉದ್ಧಾರವಾಗುವುದಿಲ್ಲ.ಮಠ ಪೀಠ,ಗದ್ದುಗೆಗಳಲ್ಲಿ‌ ಕುಳಿತುಕೊಳ್ಳುವವರು ಭಕ್ತರನ್ನು ಉದ್ಧರಿಸುವ ಸಾಮರ್ಥ್ಯ ಪಡೆಯಬೇಕು.ಅದಕ್ಕೆ ಸಾಧನೆ ಮಾಡಲೇಬೇಕು.ಇಲ್ಲದಿದ್ದರೆ ಕೈ ತೋರಿಸುವುದು ಬರಿಕೈ ಕಸರತ್ತಷ್ಟೆ.ತುಂಬಿದ ಕೈಗಳಿದ್ದವರು ಇತರರನ್ನು ಉದ್ಧರಿಸಬಲ್ಲರೇ ಹೊರತು ಬರಿಕೈ ಬಡಪಾಯಿಗಳು ಯಾರನ್ನೂ ಉದ್ಧರಿಸಲಾರರು.ಆದರೆ ಜನರಲ್ಲಿ ಸತ್ಯಾಸತ್ಯದ ತಿಳಿವಳಿಕೆಯ ಕೊರತೆಯಿಂದ ಯಾರು ಯಾರೋ ಗುರುಗಳು,ಪೂಜ್ಯರು ಆಗುತ್ತಿದ್ದಾರೆ.ಜಾತಿ ಮನೆತನಗಳ ನಾಮದ ಬಲದಿಂದಲೂ ಕೆಲವರು ಗುರುಗಳು ಎಂದು ಬೀಗುತ್ತಾರೆ.ಆಧ್ಯಾತ್ಮಿಕ ಸಾಧನೆಯ ಬಲವಿಲ್ಲದ ಯಾರೂ ಗುರುಗಳಲ್ಲ,ಅಂಥವರಿಗೆ ಸಲ್ಲುವ ಗೌರವ,ವಂದನೆಗಳು ‘ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತೆ’.

ನಮ್ಮ ಬಳಿ ಬರುವವರನ್ನು ಉದ್ಧರಿಸಬೇಕು ಎನ್ನುವ ಪ್ರಾಮಾಣಿಕ ಬುದ್ಧಿ ಗುರುಗಳು,ಮಠ ಪೀಠಗಳ ಸ್ವಾಮಿಗಳಲ್ಲಿ ಇರಬೇಕು.ಕೇವಲ ಒಣಪ್ರತಿಷ್ಠೆಗಾಗಿ ಅಡ್ಡ ಉದ್ದ ಬೀಳಲಿ ಎಂದು ಬಯಸುವುದು,ತಮ್ಮ ಪಾದಗಳಿಗೆ ನಮಸ್ಕರಿಸದೆ ನಡೆಯುವವರನ್ನು ದುರುಗುಟ್ಟಿ ನೋಡುವುದು ಗುರುಗಳು ಆದವರ ಲಕ್ಷಣವಲ್ಲ.ಪಾದಗಳಿಗೆ ಬಿದ್ದರೇನು,ಬೀಳದಿದ್ದರೇನು,ಅದರಿಂದ ನಿಜವಾದ ಯೋಗಿ- ಸಾಧಕರಿಗೆ ಯಾವ ಲಾಭವೂ ಇಲ್ಲ,ನಷ್ಟವೂ ಇಲ್ಲ.ಯಾರಾದರೂ ನಮ್ಮ ಪಾದಗಳಿಗೆ ನಮಸ್ಕರಿಸುತ್ತಾರೆ ಎಂದರೆ ಅವರನ್ನು ಉದ್ಧರಿಸುವ,ಅವರ ಸಂಕಷ್ಟದಿಂದ ಅವರನ್ನು ಪಾರುಮಾಡುವ ಸಾಮರ್ಥ್ಯ ನಮ್ಮಲ್ಲಿ ಇರಬೇಕು.ಅನರ್ಹರು ಇತರರಿಂದ ತಮ್ಮ ಪಾದಗಳಿಗೆ ನಮಸ್ಕರಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ ಆಗುವಂತಹ ಕಾನೂನನ್ನು ರೂಪಿಸುವ ಅಗತ್ಯವಿದೆ.

ಪ್ರಜಾಪ್ರಭುತ್ವದಲ್ಲಿ ವ್ಯಕ್ತಿಗೌರವಕ್ಕೆ ಮಹತ್ವ ಇದೆ.ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನಿಂದ ಯಾವ ರೀತಿಯಲ್ಲೂ ಭಿನ್ನನಲ್ಲ.ಆದರೆ ಕೆಲವು ಜನ ತಮ್ಮ ಅಂತರ್ಗತ ಚೈತನ್ಯವನ್ನು ಅರಿತು,ಅದನ್ನು ಜಾಗೃತಗೊಳಿಸಿಕೊಂಡು ಪರಮಾತ್ಮನ ವಿಭೂತಿಗಳಾಗುತ್ತಾರೆ.ಅಂತಹ ಶರಣರು,ಸಂತರು- ಮಹಾಂತರುಗಳನ್ನು ಗೌರವಿಸುವುದು,ವಂದಿಸುವುದು ಫಲದಾಯಕವಾದ್ದರಿಂದ ಅದು ಸರಿ,ಅದನ್ನು ಸಮರ್ಥಿಸಬಹುದು.ಆದರೆ ಆಧ್ಯಾತ್ಮದ ಓನಾಮವನ್ನರಿಯದವರ ಪಾದಗಳಿಗೆ ಅಡ್ಡ ಉದ್ದ ಬೀಳುವುದು ಸಲ್ಲದು.ಅಲ್ಲದೆ ಸಮಾಜದ ಮೇಲ್ವರ್ಗದ ಕೆಲವು ಜಾತಿಗಳ ಜನರು ತಮ್ಮ ಜಾತಿ,ಮನೆತನದ ಬಲದಿಂದ ಇತರ ಜಾತಿಗಳ ಜನರು ತಮ್ಮ ಪಾದಗಳಿಗೆ ನಮಸ್ಕರಿಸಬೇಕು ಎಂದು ನಿರೀಕ್ಷಿಸುವುದು,ಅದಕ್ಕೆ ಒತ್ತಾಯಿಸುವುದು ನಮ್ಮ ಪ್ರಬುದ್ಧ ಸಂವಿಧಾನವು ಕೊಡಮಾಡಿದ ವ್ಯಕ್ತಿಸ್ವಾತಂತ್ರ್ಯದ ಮೇಲಿನ ಆಕ್ರಮಣ.ದುರ್ಬಲರು ಪ್ರಬಲರು,ಪಟ್ಟಭದ್ರರ ಪಾದಗಳಿಗೆ ನಮಸ್ಕರಿಸಬೇಕು ಎಂದು ನಿರೀಕ್ಷಿಸುವುದು ಅ‌ನಾಗರಿಕತೆ. ಪ್ರಜಾಪ್ರಭುತ್ವ ಯುಗದ ಕಾಲದಲ್ಲಿ ವ್ಯಕ್ತಿಪೂಜೆಯ ಇಂತಹ ಅನಿಷ್ಟಗಳಿಗೆ ತಡೆಯೊಡ್ಡಲೇಬೇಕು.

21.05.2022

‌‌‌