ಹೊರಗುತ್ತಿಗೆ ನೇಮಕಾತಿ– ಎಸ್ ಸಿ,ಎಸ್ ಟಿ ಅಭ್ಯರ್ಥಿಗಳಿಗೂ ಸಿಗಲಿ ಮೀಸಲಾತಿ – ಮುಕ್ಕಣ್ಣ ಕರಿಗಾರ

ವಿಚಾರ

ಹೊರಗುತ್ತಿಗೆ ನೇಮಕಾತಿ– ಎಸ್ ಸಿ,ಎಸ್ ಟಿ ಅಭ್ಯರ್ಥಿಗಳಿಗೂ ಸಿಗಲಿ ಮೀಸಲಾತಿ

ಮುಕ್ಕಣ್ಣ ಕರಿಗಾರ

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು,ಸ್ವಾಯತ್ತ ಸಂಸ್ಥೆಗಳು,ವಿಶ್ವವಿದ್ಯಾಲಯಗಳು,ಸ್ಥಳೀಯ ಸಂಸ್ಥೆಗಳು ಮತ್ತು ಸರ್ಕಾರದ ಅಂಗಸಂಸ್ಥೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ವಿವಿಧ ನೌಕರರುಗಳನ್ನು ನೇಮಿಸಿಕೊಳ್ಳುವ ಸಂದರ್ಭದಲ್ಲಿ ಮಹಿಳೆಯರಿಗೆ ಶೇಕಡಾ 33 ರಷ್ಟು ಮೀಸಲಾತಿಯನ್ನು ನೀಡುವಂತೆ ಮುಖ್ಯಕಾರ್ಯದರ್ಶಿ ಪಿ.ರವಿಕುಮಾರ್ ಅವರು ಆದೇಶ ಹೊರಡಿಸಿದ್ದಾರೆ.ಮುಖ್ಯ ಕಾರ್ಯದರ್ಶಿಯವರ ಈ ಆದೇಶ ಸ್ವಾಗತಾರ್ಹ ಮತ್ತು ಅಭಿನಂದನೀಯ.ಮಹಿಳೆಯರಿಗೆ ಸರಕಾರದ ವಿವಿಧ ಇಲಾಖೆಗಳಲ್ಲಿ ಹೊರಗುತ್ತಿಗೆ ಆಧಾರದ ಹುದ್ದೆಗಳನ್ನು ಪಡೆಯಲು ಈ ಆದೇಶವು ಅನುಕೂಲಕರವಾಗಿದ್ದು ತನ್ಮೂಲಕ ಮಹಿಳಾ ಸಶಕ್ತೀಕರಣ ಕ್ರಿಯೆಗೆ ಹೆಚ್ಚಿನ ಬಲನೀಡಿದಂತೆ ಆಗಿದೆ. ಇಲ್ಲಿಯವರೆಗೆ ಬಹಳಷ್ಟು ಕಡೆ ಕೇವಲ ಪುರುಷ ಅಭ್ಯರ್ಥಿಗಳಷ್ಟೇ ಹೊರಗುತ್ತಿಗೆ ನೌಕರಿಗಿಟ್ಟಿಸಿಕೊಳ್ಳುತ್ತಿದ್ದು ಅರ್ಹತೆ ಇದ್ದರೂ ಮಹಿಳಾ ಅಭ್ಯರ್ಥಿಗಳುಅವಕಾಶ ವಂಚಿತರಾಗುತ್ತಿದ್ದರು.ಇನ್ನು ಮುಂದೆ ಇಂತಹ ಲಿಂಗ ಅಸಮಾನತೆಯ ಪ್ರವೃತ್ತಿಗೆ ಬ್ರೇಕ್ ಬೀಳಲಿದೆ.

ಹೊರಗುತ್ತಿಗೆ ಉದ್ಯೋಗಾವಕಾಶಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಿದಂತೆಯೇ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟವರ್ಗಗಳ ಅಭ್ಯರ್ಥಿಗಳಿಗೂ ಮೀಸಲಾತಿ ನೀಡುವುದನ್ನು ಕಡ್ಡಾಯಗೊಳಿಸಿ ಆದೇಶಿಸಬೇಕು.( ಈಗಿರುವ ಸರಕಾರಿ ಆದೇಶದ ಪಾಲನೆ ಸರಿಯಾಗಿ ಆಗುತ್ತಿಲ್ಲ) ಖಾಸಗಿ ಏಜೆನ್ಸಿಗಳು ಹೊರಗುತ್ತಿಗೆಯ ಆಧಾರದಲ್ಲಿ ಸಿಬ್ಬಂದಿಯವರನ್ನು ಪೂರೈಸುತ್ತಿರುವುದರಿಂದ ಅವರು ಎಸ್ ಸಿ,ಎಸ್ ಟಿ ಅಭ್ಯರ್ಥಿಗಳನ್ನು ಆಯ್ಕೆ ಮಾಡದೆ ಹೆಚ್ಚಿನ ಸಂಖ್ಯೆಯಲ್ಲಿ ಸಾಮಾನ್ಯ ವರ್ಗಕ್ಕೆ ಸೇರಿದ,ಅಲ್ಪ ಪ್ರಮಾಣದಲ್ಲಿ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಿದ್ದಾರೆ.ಸರಕಾರಿ ಅಧಿಕಾರಿಗಳು ಮತ್ತು ಹೊರಗುತ್ತಿಗೆ ಏಜೆನ್ಸಿಗಳು ತಮಗೆ ಬೇಕಾದ ಅಭ್ಯರ್ಥಿಗಳನ್ನು ಹೊರಗುತ್ತಿಗೆ ಸಿಬ್ಬಂದಿಯವರನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.ಇದು ಎಸ್ ಸಿ,ಎಸ್ ಟಿ ಅಭ್ಯರ್ಥಿಗಳಿಗೆ ಮಾಡುವ ಅನ್ಯಾಯ ಮಾತ್ರವಲ್ಲ,ಸಂವಿಧಾನಕ್ಕೆ ಎಸಗುವ ಅಪಚಾರ ಕೂಡ.ಸರ್ವರಿಗೂ ಅವಕಾಶ ನೀಡುವುದು ಮತ್ತು ಸಾಮಾಜಿಕ ನ್ಯಾಯವನ್ನು ಪರಿಪಾಲಿಸುವುದನ್ನು ನಮ್ಮ ಸಂವಿಧಾನವು ಅಗತ್ಯಪಡಿಸಿದೆ.ಸರಕಾರಿ ಇಲಾಖೆಗಳು,ಸಂಸ್ಥೆಗಳು ಸಂವಿಧಾನದ ಆಶಯ,ವಿಧಿ- ನಿಯಮಗಳಂತೆ ನಡೆದುಕೊಳ್ಳಬೇಕು.ಹೊರಗುತ್ತಿಗೆ ಸಿಬ್ಬಂದಿಯವರಿಗೆ ನೀಡುತ್ತಿರುವ ಸಂಭಾವನೆಯೂ ಕೂಡ ಸಾರ್ವಜನಿಕರ ತೆರಿಗೆಯ ಹಣದಿಂದಲೇ ಅಲ್ಲವೆ ? ಸಾರ್ವಜನಿಕ ಸಂಪತ್ತಿನ ಸಮಾನ ಹಂಚಿಕೆ ಆಗಬೇಕು,ಸಾರ್ವಜನಿಕ ಸಂಪತ್ತಿನಲ್ಲಿ ಪರಿಶಿಷ್ಟಜಾತಿ,ಪರಿಶಿಷ್ಟ ವರ್ಗಗಳಿಗೆ ಸಿಗಬೇಕಾದ ಪಾಲು ಸಿಗಲೇಬೇಕು.

ಹೊರಗುತ್ತಿಗೆ ಸಿಬ್ಬಂದಿಗಳ ನೇಮಕಾತಿಯಲ್ಲಿ ಎಸ್ ಸಿ,ಎಸ್ ಟಿ ಅಭ್ಯರ್ಥಿಗಳ ಆಯ್ಕೆ ಅವರ ನಿಗದಿತ ಮೀಸಲಾತಿ ಪ್ರಮಾಣಕ್ಕೆ ಅನುಗುಣವಾಗಿ ಇರುವುದಿಲ್ಲ.ಕೆಲವೆಡೆ ಕಾಟಾಚಾರಕ್ಕೆಂದು ಡಿ ಗ್ರೂಪ್ ಹುದ್ದೆಯ ಸ್ವಚ್ಛತಾಗಾರರು,ಕಸಗುಡಿಸುವವರ ಹುದ್ದೆಗಳಿಗೆ ಮಾತ್ರ ಎಸ್ ಸಿ,ಎಸ್ ಟಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೆ.ಡಾಟಾ ಎಂಟ್ರಿ ಆಪರೇಟರ್,ಗುಮಾಸ್ತ ಶ್ರೇಣಿಯ ಹುದ್ದೆಗಳಲ್ಲಿ ಬಹುತೇಕವಾಗಿ ಮೇಲ್ವರ್ಗದ ಅಭ್ಯರ್ಥಿಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.ಇದು ಸಂವಿಧಾನ ವಿರೋಧಿನಡೆಯಷ್ಟೇ ಅಲ್ಲ ,ಗಂಭೀರ ಕರ್ತವ್ಯ ಲೋಪವೂ ಹೌದು.ಹೊರಗುತ್ತಿಗೆ ಸಿಬ್ಬಂದಿಯವರನ್ನು ಪೂರೈಸಲು ಆಯ್ಕೆಯಾದ ಏಜೆನ್ಸಿಗಳಿಗೆ ಎಸ್ ಸಿ,ಎಸ್ ಟಿ ಮೀಸಲಾತಿ ಪ್ರಮಾಣಕ್ಕನುಗುಣವಾಗಿ ಸಿಬ್ಬಂದಿಯವರನ್ನು ಒದಗಿಸುವುದನ್ನು ಕಡ್ಡಾಯಗೊಳಿಸಬೇಕು.ಹೊರಗುತ್ತಿಗೆ ಸಿಬ್ಬಂದಿಪೂರೈಕೆ ಸಂಸ್ಥೆಗಳ ಆಯ್ಕೆಯ ಟೆಂಡರಿನ ನಿಯಮಾವಳಿಗಳಲ್ಲೇ ಇದನ್ನು ಕಡ್ಡಾಯಗೊಳಿಸಬೇಕು.ಎಸ್ ಸಿ,ಎಸ್ ಟಿ ಅಭ್ಯರ್ಥಿಗಳನ್ನು ಆಯ್ಕೆ ಮಾಡದ ಏಜೆನ್ಸಿಯನ್ನು ರದ್ದುಪಡಿಸಬೇಕು,ಕಪ್ಪುಪಟ್ಟಿಗೆ ಸೇರಿಸಬೇಕು.ಹೊರಗುತ್ತಿಗೆ ಸಿಬ್ಬಂದಿಯವರನ್ನು ಪಡೆಯುವ ಸರಕಾರಿ ಇಲಾಖೆ,ಸಂಸ್ಥೆಗಳ ಮುಖ್ಯಸ್ಥರುಗಳಿಗೂ ಎಸ್ ಸಿ,ಎಸ್ ಟಿ ಮೀಸಲಾತಿ ಪ್ರವರ್ಗಕ್ಕೆ ಅನುಗುಣವಾಗಿ ಅಭ್ಯರ್ಥಿಗಳನ್ನು ನೀಡಿದ್ದಾರೆ ಎಂದು ಖಚಿತಪಡಿಸಿಕೊಳ್ಳುವುದನ್ನು ಅಗತ್ಯ ಎಂದು ಸೂಚಿಸಿ,ಆದೇಶಿಸಬೇಕು.

ಸರಕಾರದ ಸಮಾಜ ಕಲ್ಯಾಣ ಇಲಾಖೆಯು ಹೊರಗುತ್ತಿಗೆ ಸಿಬ್ಬಂದಿ ನೇಮಕಾತಿಯಲ್ಲಿ ಎಸ್ ಸಿ ,ಎಸ್ ಟಿ ಮೀಸಲಾತಿಯನ್ನು ಪಾಲಿಸಲಾಗುತ್ತಿದೆಯೆ ಎನ್ನುವುದನ್ನು ನಿಯತವಾಗಿ ಪರಿಶೀಲಿಸಬೇಕು.ಪಾಲಿಸುವಂತೆ ಅಗತ್ಯಪಡಿಸಬೇಕು,ಪಾಲಿಸದಿದ್ದ ಇಲಾಖೆ,ಸಂಸ್ಥೆಗಳ ಮೇಲೆ ಕ್ರಮಜರುಗಿಸಬೇಕು.ಸರಕಾರದ ವಿವಿಧ ಇಲಾಖೆ,ಸಂಸ್ಥೆಗಳಡಿ ಹೊರಗುತ್ತಿಗೆ ನೇಮಕದ ವಿವಿಧ ಹುದ್ದೆಗಳಲ್ಲಿ ಎಸ್ ಸಿ,ಎಸ್ ಟಿ ಅಭ್ಯರ್ಥಿಗಳಿಗೆ ನೀಡಬಹುದಾದ ಮೀಸಲಾತಿಯ ವಿವರಗಳನ್ನು ಸಮಾಜಕಲ್ಯಾಣ ಇಲಾಖೆಯೇ ನಿಗದಿಪಡಿಸಿ,ತಿಳಿಸಬೇಕು.ಸಮಾಜ ಕಲ್ಯಾಣ ಇಲಾಖೆಯು ಇಂತಹ ಕ್ರಮಗಳನ್ನು ತೆಗೆದುಕೊಂಡರೆ ಎಸ್ ಸಿ,ಎಸ್ ಟಿ ಜನಾಂಗಗಳಿಗೆ ಸೇರಿದ ಅರ್ಹ ಅಭ್ಯರ್ಥಿಗಳಿಗೆ ನೌಕರಿ,ಉದ್ಯೋಗ ಸಿಗುವವರೆಗೆ ತಾತ್ಕಾಲಿಕ ಪರಿಹಾರ ಕೊಟ್ಟಹಾಗೆ ಆಗುತ್ತದೆ.ಹೊರಗುತ್ತಿಗೆ ಉದ್ಯೋಗಗಳಲ್ಲಿ ಎಸ್ ಸಿ,ಎಸ್ ಟಿ ಅಭ್ಯರ್ಥಿಗಳಿಗೆ ಅವಕಾಶನೀಡುವುದರಿಂದ ತಾತ್ಕಾಲಿಕವಾಗಿ ಅವರ ಆರ್ಥಿಕ ಸಮಸ್ಯೆ ಬಗೆಹರಿಯುವುದರಿಂದ ಅವರು ಸ್ಪರ್ಧಾಪರೀಕ್ಷೆಗಳನ್ನು ಬರೆಯಲು,ಉನ್ನತ ಅವಕಾಶಗಳನ್ನು ಪಡೆಯಲು ಸಾಧ್ಯವಾಗುತ್ತದೆ.ಸರಕಾರವು ಹುದ್ದೆಗಳನ್ನು ಖಾಯಂ ಆಗಿ ತುಂಬುವವರೆಗೆ ಹೊರಗೆಗುತ್ತಿಗೆ ಸಿಬ್ಬಂದಿಗಳ ಅಗತ್ಯ ಇರುವುದರಿಂದ ಅಷ್ಟುಕಾಲ ಎಸ್ ಸಿ,ಎಸ್ ಟಿ ಅಭ್ಯರ್ಥಿಗಳು ತಾತ್ಕಾಲಿಕವಾಗಿಯಾದರೂ ಉದ್ಯೋಗ ಭದ್ರತೆಯನ್ನು ಅನುಭವಿಸಲು ಸಾಧ್ಯವಾಗುತ್ತದೆ.

ಮುಕ್ಕಣ್ಣ ಕರಿಗಾರ

21.05.2022