ವ್ಯಕ್ತಿತ್ವ ವಿಕಸನ : ಮರ ಮತ್ತು ಬಳ್ಳಿ – ಮುಕ್ಕಣ್ಣ ಕರಿಗಾರ

ವ್ಯಕ್ತಿತ್ವ ವಿಕಸನ

ಮರ ಮತ್ತು ಬಳ್ಳಿ

ಮುಕ್ಕಣ್ಣ ಕರಿಗಾರ

ಬೆಳೆಯಲು ಸ್ವಂತ ಸಾಮರ್ಥ್ಯ ಇಲ್ಲದವರು ಅವರಿವರ ನೆರವು ಬಯಸುತ್ತಾರೆ.ಅಂತಃಶಕ್ತಿ ಇಲ್ಲದವರಿಗೆ ಹೊರಗಿನ ಜನರ ಬೆಂಬಲ,ಪ್ರೋತ್ಸಾಹ ಅಗತ್ಯ.ಸ್ವಯಂ ಸಾಮರ್ಥ್ಯ ಇಲ್ಲದವರು ಮರದ ಆಸರೆಯಲ್ಲಿ ಬೆಳೆಯುವ ಬಳ್ಳಿಯಂತೆ.ಬಳ್ಳಿಗೆ ಬೆಳೆಯುವ ಆಸೆ ಆದರೆ ಸ್ವಯಂ ಸಾಮರ್ಥ್ಯವಿಲ್ಲ.ಹಾಗಾಗಿ ಮರದ ಆಸರೆ ಹುಡುಕುತ್ತದೆ.

ಆದರೆ ಮರ ಹಾಗಲ್ಲ.ಅದು ತಾನು ತನ್ನ ಅಂತರ್ಗತ ಸಾಮರ್ಥ್ಯದಿಂದ ಗಟ್ಟಿಯಾಗಿ ಬೆಳೆದು ನಿಂತಿರುವುದರಿಂದ ಅದು ಮತ್ತೊಬ್ಬರ ನೆರವಿಗಾಗಿ ಮೊರೆಯದು.ಮರ ತಾನು ಇತರರಿಗೆ ನೆರಳಾಗುತ್ತದೆ,ಹೂವು,ಕಾಯಿ,ಹಣ್ಣುಗಳನ್ನು ಕೊಡುತ್ತದೆ.ಪ್ರಾಣಿ ಪಕ್ಷಿಗಳಿಗೆ ಆಸರೆಯೂ ಆಗುತ್ತದೆ.ಆದರೆ ಮರದ ಆಸರೆಯಲ್ಲಿ ಬೆಳೆಯುವ ಬಳ್ಳಿ ತನ್ನ ನೆರವಿಗಾಗಿ ಅತ್ತ ಇತ್ತ ಕೈಚಾಚಿ ತನ್ನನ್ನು ತಾನು ಉದ್ಧರಿಸಿಕೊಳ್ಳಬಯಸುತ್ತದೆಯೇ ಹೊರತು ಇತರರನ್ನು ಉದ್ಧರಿಸದು.ಬಳ್ಳಿಗೆ ಮರದಿಂದ ಹರಿದುಬೀಳುವ ಭಯಬೇರೆ.ಹಾಗಾಗಿ ಮರದ ಕಾಂಡ,ಕೊಂಬೆ ರೆಂಬೆಗಳನ್ನು ಗಟ್ಟಿಯಾಗಿ ಆತುಕೊಂಡಿರುತ್ತದೆ.

ಮರವು ತನ್ನ ಬೇರುಗಳ ಸತ್ತ್ವದಲ್ಲಿ ಬೆಳೆದಿರುವುದರಿಂದ ದೀರ್ಘಕಾಲ ಬಾಳಿ ಆದರ್ಶವಾಗುತ್ತದೆ,ಆಸರೆಯಾಗುತ್ತದೆ.ಆದರೆ ಕೆಲವೇ ದಿನಗಳ ಆಯುಷ್ಯವನ್ನುಳ್ಳ ಬಳ್ಳಿ ತನ್ನ ಬೆಳವಣಿಗೆಗಾಗಿ ಏನೆಲ್ಲ ಸಾಹಸ,ಕಸರತ್ತು ಮಾಡಬೇಕಾಗುತ್ತದೆ.ಏನೇ ಮಾಡಿದರೂ ಬಳ್ಳಿ ಮರವಾಗದು ! ಆತ್ಮಬಲವಿಲ್ಲದವರು,ಸ್ವಂತ ಸಾಮರ್ಥ್ಯ ಇಲ್ಲದವರು ದೊಡ್ಡವರು ಎಂದು ಇತರರನ್ನು ಗುರುತಿಸಿ ಅವರ ನಾಮದ ಬಲವನ್ನು ಬೆಳೆಸಿಕೊಂಡು ತಾವು ಬೆಳೆಯಬಯಸುತ್ತಾರೆ.ತಾವೇ ಅವರಿವರ ಹೆಸರನ್ನು ಬಳಸಿಕೊಂಡು ಬೆಳೆಯಬಯಸುವವರು ಹೇಗೆ ದೊಡ್ಡವರು ಆಗುತ್ತಾರೆ? ಅವರನ್ನು ನಂಬಿದವರನ್ನು ಹೇಗೆ ಉದ್ಧರಿಸುತ್ತಾರೆ?ಮರದ ಆಸರೆಯಲ್ಲಿ ಬೆಳೆದ ಬಳ್ಳಿ ತನ್ನ ಕಾಯಿ ತುಸು ಭಾರವೆನ್ನಿಸೆ ಅದನ್ನು ಕಿತ್ತು ಬಿಸುಡುತ್ತದೆ.ತನ್ನ ಕಾಯಿಯನ್ನೇ ಕಾಯ್ದು ,ರಕ್ಷಿಸಿಕೊಳ್ಳಲಾಗದ ಬಳ್ಳಿ ಇತರರನ್ನು ಹೇಗೆ ರಕ್ಷಿಸುತ್ತದೆ?ಬೆಳೆಯಬೇಕು,ಉನ್ನತಿಯನ್ನು ಸಾಧಿಸಬೇಕು ಎನ್ನುವವರು ಸ್ವಂತ ಸಾಮರ್ಥ್ಯದ ಮೂಲಕ ಬೆಳೆಯಬೇಕೇ ಹೊರತು ಅವರಿವರ ನಾಮದ ಬಲದಲ್ಲಿ ಬೆಳೆಯಬಾರದು.ನಾವು ಮರವಾಗಿ ಬೆಳೆದು ನಿಲ್ಲಬೇಕೇ ಹೊರತು ಬಳ್ಳಿಗಳಾಗಿ ಬಳಲಬಾರದು.

ಮುಕ್ಕಣ್ಣ ಕರಿಗಾರ

20.05.2022