ಮಾನ್ವಿಯಲ್ಲಿ ಯುವ ಕಾಂಗ್ರೆಸ್ ಸಂಘಟನೆಗೆ ಆದ್ಯತೆ – ಯುವ ಕಾಂಗ್ರೆಸ್ ಅಧ್ಯಕ್ಷ ವಿಶಾಂತ್ ಈರಣ್ಣ

ವಿಶಾಂತ್ ಈರಣ್ಣ

ಆತ್ಮೀಯರೆ,

2023ರ ವಿಧಾನಸಭಾ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇದೆ. ಈ ಒಂದು ವರ್ಷ ಚುನಾವಣಾ ವರ್ಷ ಎಂದೇ ಕರೆಯುವುದುಂಟು. ಕಾರಣ ಎಲ್ಲಾ ರಾಜಕೀಯ ಪಕ್ಷಗಳು, ಸ್ಪರ್ಧಾಕಾಂಕ್ಷಿಗಳು, ಮುಖಂಡರ ಬೆಂಬಲಿಗರು ಹೆಚ್ಚು ಕ್ರಿಯಾಶೀಲರಾಗುವುದು ಸಹಜ. ಸಾರ್ವಜನಿಕ ವಲಯದಲ್ಲಿಯೂ ಕೂಡ ಈ ಬಗ್ಗೆ ಹೆಚ್ಚು ಚರ್ಚೆಗಳು ಸಾಮಾನ್ಯ. ಈ ನಿಟ್ಟಿನಲ್ಲಿ ‘ಬಿಬಿನ್ಯೂಸ್ ಗುರು ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರಿಗೆ ಐದು ಪ್ರಶ್ನೆಗಳನ್ನು ಕೇಳಿ, ಅವರ ಅಭಿಪ್ರಾಯಗಳನ್ನು ತೆರೆದಿಡುವ ಪ್ರಯತ್ನವನ್ನು ಮಾಡುವ ಮೂಲಕ ಸರಣಿ ಸಂದರ್ಶನಗಳನ್ನು ಪ್ರಕಟಿಸಲಿದೆ.
ಈಗ ಮೊದಲ ಬಾರಿಗೆ ಮಾನ್ವಿ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ವಿಶಾಂತ್ ಈರಣ್ಣ ನಮ್ಮ ಜೊತೆಗೆ ಮಾತನಾಡಿದ್ದಾರೆ.

*ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಜವಾಬ್ದಾರಿ ಹೇಗೆ ಪಡೆದಿರಿ?
ವಿಶಾಂತ್ : ನಾನು ಮೊದಲಿಗೆ 2010-2011 ರಲ್ಲಿ ವಿದ್ಯಾರ್ಥಿ ಕಾಂಗ್ರೆಸ್ ಸಂಘಟನೆಯಾದ ಎನ್.ಎಸ್.ಯು.ಐ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದೆ. ನಂತರ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣ ವಿಭಾಗದ ಜಿಲ್ಲಾ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದೆ. ಪಕ್ಷದಲ್ಲಿನ ನನ್ನ ನಿಷ್ಠೆ ಹಾಗೂ ಸೇವೆ ಗುರುತಿಸಿದ ಹಿರಿಯರು ನನ್ನನ್ನು ಮಾನ್ವಿ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಗೆ ಸ್ಪರ್ಧಿಸಲು ಅನುಮತಿ ನೀಡಿದರು. ಯುವ ಕಾಂಗ್ರೆಸ್ಸಿನ ಎಲ್ಲಾ ಮಿತ್ರರ ಸಹಾಯ ಮತ್ತು ಅವರ ಬೆಂಬಲದೊಂದಿಗೆ ಅಧ್ಯಕ್ಷನಾಗಿ ಆಯ್ಕೆಯಾದೆ.

* ಮಾನ್ವಿಯಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆಗೆ ಯುವ ಕಾರ್ಯಕರ್ತರಿಗೆ ಯಾವ ಜವಾಬ್ದಾರಿ ಇದೆ?

ವಿಶಾಂತ್: ಮುಂದಿನ ವರ್ಷ ಚುನಾವಣೆ ಇರುವದರಿಂದ ಸಹಜವಾಗಿ ಯುವ ಕಾಂಗ್ರೆಸ್ ಸಂಘಟನೆಗೆ ಹೆಚ್ವು ಒತ್ತು ನೀಡಲಾಗಿದೆ. ಹಿರಿಯರ ಮಾರ್ಗದರ್ಶನದಲ್ಲಿ ಯುವಕರನ್ನು ಕಾಂಗ್ರೆಸ್ ಪಕ್ಷದ ಕಡೆಗೆ ಸೆಳೆಯಲು ಪ್ರಯತ್ನಿಸುತ್ತಿದ್ದೇವೆ.

*ಮುಂಬರುವ ವಿಧಾನಸಭಾ ಚುನಾವಣೆಗೆ ಮಾನ್ವಿಯಲ್ಲಿ ಯುವ ಕಾಂಗ್ರೆಸ್ ಸಿದ್ಧತೆ ಹೇಗಿದೆ?

ವಿಶಾಂತ್: ಮಾನ್ವಿ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ವಿನ ಸಂಖ್ಯೆಯ ಯುವಕರು ಕಾಂಗ್ರೆಸ್ ಸೇರ್ಪಡೆಗೆ ಆಸಕ್ತಿ ತೋರುತ್ತಿದ್ದಾರೆ. ಪ್ರತಿ ಮಾನ್ವಿ ಪಟ್ಟಣ ಹಾಗೂ ಗ್ರಾಮೀಣ ಭಾಗದ ಬೂತ್ ಮಟ್ಟದಲ್ಲಿ ಯುವ ಕಾರ್ಯಕರ್ತರಿಗೆ ಸೂಕ್ತ ಸ್ಥಾನಮಾನ , ಜವಾಬ್ದಾರಿ ನೀಡಿ ಪಕ್ಷದ ಸಂಘಟನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳು, ಸಾಧನೆಗಳ ಕುರಿತು ಮತದಾರರಿಗೆ ಮನವರಿಕೆ ಮಾಡುವ ಯೋಜನೆ ರೂಪಿಸಲಾಗುತ್ತಿದೆ. ಇದು ಮುಂದಿನ ದಿನಗಳಲ್ಲಿ ಪಕ್ಷದ ಬಲವರ್ಧನೆ ಹಾಗೂ ಚುನಾವಣೆಗೆ ನೆರವಾಗಲಿದೆ.

* ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ನೀವು  ಯಾವ ಪ್ರಮುಖ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವಿರಿ ?

ವಿಶಾಂತ್: ಯುವ ಕಾರ್ಯಕರ್ತರ ನೇತೃತ್ವದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ತೈಲ ದರ ಏರಿಕೆ ಮತ್ತು ರೈತ ವಿರೋಧಿ ನೀತಿಗಳು, ಯುವಕರಿಗೆ ಉದ್ಯೋಗ ಸೃಷ್ಟಿ ಮಾಡುವಲ್ಲಿನ ವೈಫಲ್ಯಗಳ ವಿರುದ್ಧ ಹೋರಾಟ ಮಾಡಲಾಗಿದೆ. ಕೋವಿಡ್ ಸಂದರ್ಭದಲ್ಲಿ ಎಲ್ಲಾ ಸೋಂಕಿತರಿಗೆ ಉಚಿತಾ ಕೋವಿಡ್ ಕಿಟ್ ಗಳನ್ನು ಮನೆ ಮನೆಗೆ ತೆರಳಿ ವಿತರಿಸಿದ್ದೇವೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ತೆರಳಿ ಆಹಾರದ ಪೊಟ್ಟಣಗಳನ್ನು ನೀಡಿದ್ದೇವೆ. ಬೂತ್ ಮಟ್ಟದಿಂದ ತಾಲೂಕ ಮಟ್ಟದವರಿಗೂ ಯುವ ಕಾಂಗ್ರೆಸ್ ಸದೃಢಗೊಳಿಸಲಾಗಿದೆ.

* ಮುಂಬರುವ ವಿಧಾನಸಭಾ ಚುನಾವಣೆಗೆ ಮಾನ್ವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾರಾಗಬಹುದು?

ವಿಶಾಂತ್ : ಮಾನ್ವಿ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಹೈಕಮಾಂಡ್ ನಿರ್ಧಾರ ಮಾಡಲಿದೆ , ಯಾರೇ ಅಭ್ಯರ್ಥಿಯಾದರೂ ಪಕ್ಷದ ವರಿಷ್ಠರ ಆದೇಶದಂತೆ, ನಮ್ಮ ಹಿರಿಯ ನಾಯಕರಾದ ಎಐಸಿಸಿ ಕಾರ್ಯದರ್ಶಿಗಳು ಹಾಗೂ ಮಾಜಿ ಶಾಸಕರಾದ ಎನ್. ಎಸ್.ಬೋಸರಾಜು ಅವರ ಮಾರ್ಗದರ್ಶನದಲ್ಲಿ ಅಭ್ಯರ್ಥಿಯ ಗೆಲುವಿಗಾಗಿ ಶ್ರಮಿಸುವೆವು. ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾದ ಮಾನ್ವಿಯಲ್ಲಿ ಮತದಾರರು ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ಜಾರಿಯಾಗಿದ್ದ ಜನಪರ ಕಾರ್ಯಕ್ರಮಗಳನ್ನು ಈಗ ಸ್ಮರಿಸುತ್ತಿದ್ದಾರೆ. ಈ ಬಾರಿ ಮಾನ್ವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಶೇ100ರಷ್ಟು ನಿಶ್ಚಿತ.

ಇಂಧನ ದರ ಹೆಚ್ಚಳ ವಿರೋಧಿಸಿ ಮಾನ್ವಿಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ
ಕೋವಿಡ್ ಕಿಟ್ ಗಳ ವಿವಿತರಣೆ
ಕೋವಿಡ್ ಸೋಂಕಿರಿಗೆ ಆಹಾರದ ಪೊಟ್ಟಣಗಳ ವಿತರಣೆ
ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ ಜೊತೆ ಮಾನ್ವಿ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ವಿಶಾಂತ್ ಈರಣ್ಣ